ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಅಭಿನಂದನೆ
ಸುರತ್ಕಲ್: ಪ್ರಸಿದ್ಧ ತುಳು-ಕನ್ನಡ ಸಾಹಿತಿ, ಸಂಶೋಧಕಿ ಹಾಗೂ ಸುರತ್ಕಲ್ ನಿವಾಸಿ ಡಾ. ಇಂದಿರಾ ಹೆಗ್ಗಡೆ ಅವರು ಪ್ರತಿಷ್ಠಿತ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.
ಮೂಲತಃ ಕಿನ್ನಿಗೋಳಿಯ ಎಳತ್ತೂರು ಗುತ್ತಿನವರಾದ ಡಾ. ಇಂದಿರಾ ಹೆಗ್ಗಡೆ ಅವರು, ಪ್ರಸಿದ್ಧ ತುಳು-ಕನ್ನಡ ಸಾಹಿತಿ ಪೊಳಲಿ ಶೀನಪ್ಪ ಹೆಗ್ಗಡೆಯವರ ಪುತ್ರ ಚೇಳ್ಯಾರು ಗುತ್ತು ಸೀತಾರಾಮ ಹೆಗ್ಡೆ (ಎಸ್. ಆರ್. ಹೆಗ್ಡೆ) ಅವರ ಪತ್ನಿ. ತಮ್ಮ 33ನೇ ವಯಸ್ಸಿನಲ್ಲಿ ಸಣ್ಣಕಥೆ ಮತ್ತು ಕಾದಂಬರಿಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಇವರು, ನಾಲ್ಕು ಕಥಾ ಸಂಕಲನಗಳು, ನಾಲ್ಕು ಕಾದಂಬರಿಗಳು ಹಾಗೂ ಒಂದು ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಸೈನಿಕರಾಗಿದ್ದ ತಮ್ಮ ಪತಿಯವರೊಂದಿಗೆ ಸೇರಿ ಬರೆದ 'ಗುತ್ತಿನಿಂದ ಸೈನಿಕ ಜಗತ್ತಿಗೆ' ಎಂಬ ಅನುಭವ ಕಥನವು ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಗುರುತಿಸಿಕೊಂಡಿದೆ. ಪ್ರಸಿದ್ಧ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಅವರ ಪ್ರೇರಣೆಯಿಂದ ಸಂಶೋಧನಾ ಕ್ಷೇತ್ರಕ್ಕೆ ಧುಮುಕಿದ ಇವರ 'ಬಂಟರು: ಒಂದು ಸಮಾಜ ಸಾಂಸ್ಕೃತಿಕ ಅಧ್ಯಯನ' ಕೃತಿಯು ಇಂಗ್ಲಿಷ್‌ಗೂ ಅನುವಾದಗೊಂಡು ವ್ಯಾಪಕ ಜನಮೆಚ್ಚುಗೆ ಪಡೆದಿದೆ.
ಇದಲ್ಲದೆ, ತುಳುವರ 'ಮೂಲತಾನ ಆದಿ ಆಲಡೆ: ಪರಂಪರೆ ಮತ್ತು ಪರಿವರ್ತನೆ', 'ಸಿರಿ ಬಾರಿ ಲೋಕ - ತುಳುನಾಡು: ಒಂದು ಅಧ್ಯಯನ', 'ಕರಾವಳಿ ಸಂಸ್ಕೃತಿ ಸಮೀಕ್ಷೆ' ಸೇರಿದಂತೆ ಒಟ್ಟು 13 ಸಂಶೋಧನಾ ಕೃತಿಗಳು, 3 ಪ್ರವಾಸ ಕಥನಗಳು, 2 ಜೀವನ ಚರಿತ್ರೆಗಳು ಹಾಗೂ 2 ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. 'ಅಗೆದಷ್ಟು ಅಳ ಮೊಗೆದಷ್ಟು ನೀರು' ಮತ್ತು 'ಬಾರಗೆರೆ ಬರಂಬು ತುಳುವೆರೆ ಪುಂಚ' ಇವರ ಸಂಶೋಧನಾ ಅಧ್ಯಯನದ ಅನುಭವ ಕಥನಗಳಾಗಿದ್ದು, ಇತ್ತೀಚೆಗೆ ಇವರ ಸಾಹಿತ್ಯ ಅವಲೋಕನ ಕೃತಿ 'ಅತಿಕಾರೆ' ಪ್ರಕಟಗೊಂಡಿದೆ. ಇವರ ಸಾಹಿತ್ಯ ಮತ್ತು ಸಂಶೋಧನಾ ಸೇವೆಯನ್ನು ಗುರುತಿಸಿ ಕನ್ನಡ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿಗಳು ಲಭಿಸಿವೆ. ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನ ಹಾಗೂ ತುಳು ಸಂಶೋಧನ ಸಮಾವೇಶದ ಅಧ್ಯಕ್ಷತೆಯ ಗೌರವಕ್ಕೂ ಇವರು ಪಾತ್ರರಾಗಿದ್ದಾರೆ.
ಪ್ರಸ್ತುತ ಎಸ್. ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷೆಯಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು, ಟ್ರಸ್ಟ್ ಮೂಲಕ ತುಳು ಇತಿಹಾಸ ಸಂಶೋಧಕರಿಗೆ 'ಪೊಳಲಿ ಶೀನಪ್ಪ ಹೆಗ್ಗಡೆ' ಹಾಗೂ 'ಎಸ್. ಆರ್. ಹೆಗ್ಡೆ' ಪ್ರಶಸ್ತಿಗಳನ್ನು ನೀಡುತ್ತಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ. ಇಂದಿರಾ ಹೆಗ್ಗಡೆ ಅವರಿಗೆ ಎಸ್. ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ಪ್ರೊ. ಕೃಷ್ಣಮೂರ್ತಿ, ಕೋಶಾಧಿಕಾರಿ ಡಾ. ಜ್ಯೋತಿ ಚೇಲಾರ್, ಸದಸ್ಯರಾದ ಬೆನ್ನಟ್ ಅಮ್ಮನ್ನ, ಉದಯ, ಸುಜಾತ, ಸರಿತಾ ಹೆಗ್ಗಡೆ, ಶರತ್ ಹೆಗ್ಗಡೆ, ಸಂಪತ್ ಕುಮಾರ್ ಹಾಗೂ ಸತೀಶ್ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

