ಡಿಜಿಟಲ್ ಕೃಷಿ ಕ್ರಾಂತಿ: ಸಾಂಪ್ರದಾಯಿಕ ಮಣ್ಣಿಗೆ ಆಧುನಿಕ ವಿಜ್ಞಾನದ ಸ್ಪರ್ಶ

Upayuktha
0


ಕೈಯಲ್ಲೊಂದು ದೊಡ್ಡ ಕಂಪನಿಯ ಆಫರ್ ಲೆಟರ್ ಇಟ್ಟುಕೊಂಡು ಬೆಂಗಳೂರಿನ ಎಂ.ಜಿ. ರಸ್ತೆಯ ಟ್ರಾಫಿಕ್ ನಡುವೆ ನಿಂತಾಗ, ಮನಸ್ಸಿಗೆ ನೆಮ್ಮದಿ ಇರಲಿಲ್ಲ. ಎಸಿ ರೂಮಿನಲ್ಲಿ ಕುಳಿತು ಕಂಪ್ಯೂಟರ್ ಕೀಬೋರ್ಡ್ ತಟ್ಟುತ್ತಾ ಕಳೆಯುವ ಈ ಯಾಂತ್ರಿಕ ಜೀವನ ನನದಲ್ಲ ಅನಿಸಿಬಿಟ್ಟಿತ್ತು. ಬೆಂಗಳೂರಿನ ಐಷಾರಾಮಿ ಬದುಕನ್ನು ಬಿಟ್ಟು ಊರಿಗೆ ಮರಳಿದಾಗ, ಇಡೀ ಊರು ನನ್ನನ್ನು ಒಂತರ ವಿಚಿತ್ರವಾಗಿ ನೋಡಿತ್ತು. ಹೆತ್ತವರೂ ಕೂಡ "ಓದಿ ದೊಡ್ಡ ನೌಕರಿ ಬಿಟ್ಟು ಮಣ್ಣು ಕೆದಕಲು ಬಂದಿದ್ದಾನೆ" ಎಂದು ಬೇಸರ ಮಾಡಿಕೊಂಡಿದ್ದರು. ಆದರೆ ಇಂದು ನನ್ನ ಐದು ಎಕರೆ ಹಸಿರು ತೋಟದಲ್ಲಿ ನಿಂತು ನೋಡುವಾಗ ಸಿಗುವ ತೃಪ್ತಿ ಮತ್ತು ಯಶಸ್ಸು, ಸಿಟಿಯ ಕೋಟಿ ರೂಪಾಯಿ ಸಂಬಳದಲ್ಲೂ ಸಿಗುತ್ತಿರಲಿಲ್ಲ.


ನಮ್ಮ ತಂದೆ, ತಾತನ ಕಾಲದಲ್ಲಿ ಕೃಷಿ ಎಂದರೆ ಬರೀ ದೈಹಿಕ ಶ್ರಮ, ಮಳೆ ನಂಬಿದ ಜೂಜು ಮತ್ತು ಕೊನೆಯಲ್ಲಿ ಕೈಗೆ ಸಿಗದ ಲಾಭ. ತಲೆಮಾರುಗಳಿಂದ ನಡೆದುಬಂದ ಅದೇ ಹಳೆ ಪದ್ಧತಿಗಳು ಮತ್ತು ಇತ್ತೀಚಿನ ಕಾರ್ಮಿಕರ ಕೊರತೆಯಿಂದಾಗಿ ಕೃಷಿ ನಷ್ಟದ ಹಾದಿ ಹಿಡಿದಿತ್ತು. ಆದರೆ ತಾಂತ್ರಿಕ ಪದವೀಧರನಾದ ನನಗೆ ಕಂಡಿದ್ದು ಕೃಷಿಯಲ್ಲಿರುವ ಕಷ್ಟಗಳಲ್ಲ, ಬದಲಿಗೆ ಅಲ್ಲಿ ಅಡಗಿದ್ದ ಹೊಸ ಸಾಧ್ಯತೆಗಳು. ಕೃಷಿಯನ್ನು ನಾನು ಬರಿ ಬದುಕು ಎಂದು ನೋಡದೆ, ಒಂದು ವೃತ್ತಿಪರ ಬ್ಯುಸಿನೆಸ್ ಆಗಿ ನೋಡಲು ಶುರು ಮಾಡಿದೆ. ಸಾಂಪ್ರದಾಯಿಕ ಕೃಷಿಗೆ ಆಧುನಿಕ ತಂತ್ರಜ್ಞಾನದ ಸಪೋರ್ಟ್ ನೀಡಿದ್ದೇ ನನ್ನ ಈ ಯಶಸ್ಸಿನ ಸೀಕ್ರೆಟ್.


ತಂತ್ರಜ್ಞಾನದ ಬಳಕೆ ಕೃಷಿ ಕೆಲಸವನ್ನು ಹೇಗೆ ಸುಲಭ ಮತ್ತು ಲಾಭದಾಯಕವಾಗಿಸುತ್ತದೆ ಎಂಬುದಕ್ಕೆ ನನ್ನ ತೋಟವೇ ದೊಡ್ಡ ಉದಾಹರಣೆ. ಹಿಂದೆಲ್ಲಾ ಐದು ಎಕರೆಗೆ ಔಷಧಿ ಹೊಡೆಯಬೇಕಾದರೆ ಇಬ್ಬರು ಆಳುಗಳು ಬೇಕಿತ್ತು, ಇಡೀ ದಿನ ಹಿಡಿಯುತ್ತಿತ್ತು. ಆದರೆ ಇಂದು ನಾನು ಗರುಡ ಏರೋಸ್ಪೇಸ್ (Garuda Aerospace) ಕಂಪನಿಯ ಕೃಷಿ ಡ್ರೋನ್ ಬಳಸುತ್ತಿದ್ದೇನೆ. ಕೇವಲ 20 ನಿಮಿಷಗಳಲ್ಲಿ ಇಡೀ ತೋಟಕ್ಕೆ ಔಷಧಿ ಸಿಂಪಡಣೆಯಾಗುತ್ತದೆ. ಇನ್ನು ತೋಟಕ್ಕೆ ನೀರು ಹರಿಸಲು ರಾತ್ರಿ ಇಡೀ ಕರೆಂಟ್‌ಗಾಗಿ ಕಾಯುವ ಕಾಲ ಮುಗಿದಿದೆ. ಜೈನ್ ಇರಿಗೇಶನ್ (Jain Irrigation) ತಂತ್ರಜ್ಞಾನದ 'ಸಾಯಿಲ್ ಸೆನ್ಸರ್‌ಗಳು' ಮಣ್ಣಿನಲ್ಲಿ ತೇವಾಂಶ ಎಷ್ಟಿದೆ ಎಂಬುದನ್ನು ಮೊಬೈಲ್‌ಗೆ ತಿಳಿಸುತ್ತವೆ. ನಾನು ಮನೆಯಲ್ಲೇ ಕುಳಿತುಕೊಂಡು ಮೊಬೈಲ್ ಆಪ್ ಮೂಲಕ ಹನಿ ನೀರಾವರಿ ಸ್ವಿಚ್ ಆನ್ ಮಾಡುತ್ತೇನೆ. ಗಿಡಕ್ಕೆ ಎಷ್ಟು ಬೇಕೋ ಅಷ್ಟೇ ನೀರು ಪೂರೈಕೆಯಾಗುತ್ತದೆ.


ಹಿಂದೆಲ್ಲಾ ಬೆಳೆಗೆ ರೋಗ ಬಂದರೆ ಅನುಭವಸ್ಥರನ್ನೋ ಅಥವಾ ರಸಗೊಬ್ಬರ ಅಂಗಡಿಯವರನ್ನೋ ಕೇಳಬೇಕಿತ್ತು. ಆದರೆ ಇಂದು ಕೃತಕ ಬುದ್ಧಿಮತ್ತೆಯ ಪ್ಲಾಂಟಿಕ್ಸ್ (Plantix) ನಂತಹ ಆಪ್‌ಗಳು ನಮ್ಮ ಜೇಬಿನಲ್ಲೇ ಇವೆ. ರೋಗ ಬಂದ ಎಲೆಯ ಒಂದು ಫೋಟೋ ತೆಗೆದು ಅಪ್‌ಲೋಡ್ ಮಾಡಿದರೆ ಸಾಕು, ಅದು ಯಾವ ರೋಗ ಮತ್ತು ಅದಕ್ಕೆ ಯಾವ ಔಷಧಿ ಸೂಕ್ತ ಎಂಬುದನ್ನು ಸೆಕೆಂಡುಗಳಲ್ಲಿ ನಿಖರವಾಗಿ ಹೇಳಿಬಿಡುತ್ತದೆ. ಇದರ ಜೊತೆಗೆ ಕ್ರಾಪ್‌ಇನ್ (Cropin) ನಂತಹ ಬೆಂಗಳೂರು ಮೂಲದ ಕಂಪನಿಗಳ ಸ್ಯಾಟಲೈಟ್ ದತ್ತಾಂಶಗಳು ಹವಾಮಾನದ ಮುನ್ಸೂಚನೆ ನೀಡಿ, ಬಿತ್ತನೆ ಮತ್ತು ಕೊಯ್ಲಿನ ಸಮಯವನ್ನು ಪ್ಲಾನ್ ಮಾಡಲು ನೆರವಾಗುತ್ತಿವೆ.


ಕೃಷಿಯ ಅತಿ ದೊಡ್ಡ ಸವಾಲು ಇರುವುದು ಮಾರುಕಟ್ಟೆಯಲ್ಲಿ ಬೆಳೆ ಮಾರಾಟ ಮಾಡುವುದು. ಕಷ್ಟಪಟ್ಟು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರು ಕಣ್ಣೀರು ಹಾಕಲು ಮಧ್ಯವರ್ತಿಗಳ ಕಾಟವೇ ಮುಖ್ಯ ಕಾರಣ. ಇದನ್ನು ತಪ್ಪಿಸಲು ನಾನು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಮತ್ತು ಸರ್ಕಾರದ ಇ-ನ್ಯಾಮ್ (e-NAM) ಆನ್‌ಲೈನ್ ಮಾರುಕಟ್ಟೆಯನ್ನು ಬಳಸಿಕೊಂಡೆ. ಇದರ ಜೊತೆಗೆ ನಿಂಜಾಕಾರ್ಟ್ (NinjaCart) ಮತ್ತು ಡಿಹಾಟ್ (DeHaat) ನಂತಹ ಹೊಸ ಸಪ್ಲೈ ಚೈನ್ ನೆಟ್‌ವರ್ಕ್‌ಗಳು ತೋಟದ ಬೆಳೆಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲು ಹೆಲ್ಪ್ ಮಾಡಿದವು. ಇದರಿಂದ ದಲ್ಲಾಳಿಗಳ ಕಾಟ ತಪ್ಪಿ, ಕಷ್ಟಕ್ಕೆ ತಕ್ಕ ಲಾಭ ನೇರವಾಗಿ ನನ್ನ ಬ್ಯಾಂಕ್ ಖಾತೆಗೆ ಬರುತ್ತಿದೆ.


ಇಂದು ಭಾರತದ ಹಳ್ಳಿಗಳಲ್ಲಿ ಒಂದು ಮೌನ ಕ್ರಾಂತಿ ನಡೆಯುತ್ತಿದೆ. ನನ್ನಂತೆ ದೇಶದ ಸಾವಿರಾರು ಸುಶಿಕ್ಷಿತ ಯುವಕರು ಸಾಫ್ಟ್‌ವೇರ್ ಕೆಲಸ ಬಿಟ್ಟು ಹಳ್ಳಿಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಅಗ್ರಿ-ಟೆಕ್ ಸ್ಟಾರ್ಟ್‌ಅಪ್‌ಗಳು ಗ್ರಾಮೀಣ ಭಾಗದ ಚಿತ್ರಣವನ್ನೇ ಬದಲಿಸುತ್ತಿವೆ. ಕೃಷಿ ಎಂದರೆ ಕೇವಲ ಕೆಸರಲ್ಲ, ಅದಕ್ಕೆ ಸರಿಯಾದ ತಂತ್ರಜ್ಞಾನ ಮತ್ತು ಆಧುನಿಕ ಯೋಚನೆ ಇದ್ದರೆ ಕೋಟಿ ನೀಡುವ ಚಿನ್ನದ ಗಣಿ. ಮಣ್ಣಿನ ನಂಟಿಗೆ ತಂತ್ರಜ್ಞಾನದ ಆಸರೆ ಸಿಕ್ಕರೆ, ಕೃಷಿ ಖಂಡಿತವಾಗಿಯೂ ನಷ್ಟದ ಹಾದಿಯಲ್ಲ, ದೇಶದ ಅತ್ಯಂತ ಲಾಭದಾಯಕ ಉದ್ಯಮವಾಗಬಲ್ಲದು ಎಂಬುದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿ.



- ದರ್ಶನ್ ಬಿ ಎನ್, ತುಮಕೂರು

ಎಸ್ ಡಿ ಎಂ ಕಾಲೇಜು ಉಜಿರೆ



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top