ಶ್ರೀ ಸರಸ್ವತಿ ವಿದ್ಯಾಲಯ ಕನ್ಯಾನದಲ್ಲಿ ‘ಮಕ್ಕಳ ಸಾಹಿತ್ಯ ಸ್ವರಚನಾ ಕಮ್ಮಟ’

Upayuktha
0

ಮಕ್ಕಳ ಸಾಹಿತ್ಯ ಪ್ರತಿಭೆಗೆ ಸೃಜನಶೀಲ ವೇದಿಕೆ




ಕನ್ಯಾನ: ಮಕ್ಕಳಲ್ಲಿ ಅಡಗಿರುವ ಸಾಹಿತ್ಯಿಕ ಪ್ರತಿಭೆಯನ್ನು ಗುರುತಿಸಿ, ಅವರ ಸೃಜನಶೀಲ ಚಿಂತನೆಗೆ ಸೂಕ್ತ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಗುರು ಎಜುಕೇಶನ್ ಟ್ರಸ್ಟ್ (ರಿ.) ಶ್ರೀ ಸರಸ್ವತಿ ವಿದ್ಯಾಲಯ, ಕನ್ಯಾನ ಹಾಗೂ ಮಕ್ಕಳ ಕಲಾ ಲೋಕ, ಬಂಟ್ವಾಳ ತಾಲೂಕು ಇವರ ಸಂಯುಕ್ತ ಆಶ್ರಯದಲ್ಲಿ ‘ಮಕ್ಕಳ ಸಾಹಿತ್ಯ ಸ್ವರಚನಾ ಕಮ್ಮಟವು' ಅ. 2ರಂದು ಶ್ರೀ ಸರಸ್ವತಿ ವಿದ್ಯಾಲಯ, ಕನ್ಯಾನದಲ್ಲಿ ಯಶಸ್ವಿಯಾಗಿ ನಡೆಯಿತು.


ಕಾರ್ಯಕ್ರಮವನ್ನು ಉದ್ಘಾಟಿಸಿದ ವಿ. ಬಿ. ಕುಳಮರ್ವ ಅವರು ಮಾತನಾಡಿ, ಮಕ್ಕಳು ತಮ್ಮಲ್ಲಿರುವ ಕಲ್ಪನೆ, ಅನುಭವ ಹಾಗೂ ಭಾವನೆಗಳನ್ನು ಬರಹದ ಮೂಲಕ ಅಭಿವ್ಯಕ್ತಪಡಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಓದು ಮತ್ತು ಬರವಣಿಗೆಯು ಮಕ್ಕಳ ಚಿಂತನಾ ಶಕ್ತಿಯನ್ನು ವಿಸ್ತರಿಸುವುದರೊಂದಿಗೆ ಅವರ ಸೃಜನಶೀಲತೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ತಿಳಿಸಿದರು.


ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯ ಅಂಗವಾಗಿ ಗಣ್ಯರು ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಮಾತನಾಡಿದ ಮಕ್ಕಳ ಕಲಾ ಲೋಕ, ಬಂಟ್ವಾಳ ತಾಲೂಕು ಇದರ ಅಧ್ಯಕ್ಷರಾದ ರಮೇಶ ಎಂ. ಬಾಯಾರು ಅವರು ಮಕ್ಕಳ ಸಾಹಿತ್ಯದ ಮಹತ್ವವನ್ನು ವಿವರಿಸಿ, ಸಾಹಿತ್ಯವು ಮಕ್ಕಳಲ್ಲಿ ಕಲ್ಪನಾಶಕ್ತಿ, ಸೂಕ್ಷ್ಮ ಸಂವೇದನೆ ಹಾಗೂ ಅಭಿವ್ಯಕ್ತಿ ಸಾಮರ್ಥ್ಯವನ್ನು ಬೆಳೆಸುವ ಪ್ರಮುಖ ಸಾಧನವಾಗಿದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಸರಸ್ವತಿ ವಿದ್ಯಾಲಯದ ಸಂಚಾಲಕರಾದ ಈಶ್ವರ ಪ್ರಸಾದ್ ಅವರು ಮಾತನಾಡಿ, ಬರವಣಿಗೆಯು ಮಕ್ಕಳ ಮನಸ್ಸಿನ ಭಾವನೆಗಳಿಗೆ ಸಕಾರಾತ್ಮಕ ಅಭಿವ್ಯಕ್ತಿಯನ್ನು ನೀಡುತ್ತದೆ. ಇದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುವುದರ ಜೊತೆಗೆ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.


ತದನಂತರ ಸಂಪನ್ಮೂಲ ವ್ಯಕ್ತಿಗಳಾದ ವಿ. ಬಿ. ಕುಳಮರ್ವ, ರಮೇಶ ಎಂ. ಬಾಯಾರು, ಸುರೇಶ ನೆಗಳಗುಳಿ, ಶೇಖರ ಶೆಟ್ಟಿ ಬಾಯಾರು ಹಾಗೂ ಪ್ರಶಾಂತರಾಜ ವಿ. ತಂತ್ರಿ ಅವರು ಕ್ರಮವಾಗಿ ಕವನ, ಕಥೆ, ಚುಟುಕು, ನಾಟಕ ಹಾಗೂ ಚಿತ್ರಕಲೆ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.

ಮಕ್ಕಳು ಕೇವಲ ಕೇಳುಗರಾಗಿ ಉಳಿಯದೆ, ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮದೇ ಆದ ಕವನ, ಕಥೆ, ಚುಟುಕು, ನಾಟಕ ಹಾಗೂ ಚಿತ್ರಗಳ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಕಮ್ಮಟವು ಮಕ್ಕಳಿಗೆ ಸಾಹಿತ್ಯವನ್ನು ಕಲಿಯುವುದರ ಜೊತೆಗೆ ಅದನ್ನು ಸ್ವತಃ ಸೃಷ್ಟಿಸುವ ಅಪೂರ್ವ ಅನುಭವವನ್ನು ನೀಡಿತು.


ಸಮಾರೋಪ ಸಮಾರಂಭದಲ್ಲಿ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಶ್ರೀ ಸುರೇಶ ನೆಗಳಗುಳಿ ಅವರು ವಿದ್ಯಾರ್ಥಿಗಳಲ್ಲಿರುವ ಸಾಹಿತ್ಯಿಕ ಪ್ರತಿಭೆಯನ್ನು ಶ್ಲಾಘಿಸಿ, ಅವರ ಸೃಜನಶೀಲ ಪ್ರಯತ್ನಗಳಿಗೆ ಶುಭಹಾರೈಸಿದರು. ಮಕ್ಕಳ ಪ್ರತಿಭೆ ಬೆಳೆಯಲು ನಿರಂತರ ಓದು, ಬರವಣಿಗೆ ಮತ್ತು ಅಭಿವ್ಯಕ್ತಿಯ ಅಭ್ಯಾಸ ಅಗತ್ಯ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಮಕ್ಕಳ ಕಲಾ ಲೋಕದ ಉಪಾಧ್ಯಕ್ಷ ಎಂ. ಕೆ. ನಾಯ್ಕ್, ಕಾರ್ಯದರ್ಶಿ ಶ್ರೀಮತಿ ಪುಷ್ಪ, ಸದಸ್ಯರಾದ ಶಿವರಾಮ ಭಟ್ ನಿಡ್ಲೆ, ಶ್ರೀ ಸರಸ್ವತಿ ವಿದ್ಯಾಲಯದ ಆಡಳಿತಾಧಿಕಾರಿ ಹಾಗೂ ಪ್ರೌಢಶಾಲಾ ಮುಖ್ಯಸ್ಥೆಯಾದ ಶ್ರೀಮತಿ ಮಧುರಾ ಈಶ್ವರ ಪ್ರಸಾದ್ ಹಾಗೂ ಪ್ರಾಥಮಿಕ ವಿಭಾಗದ ಮುಖ್ಯಸ್ಥೆಯಾದ ಶ್ರೀಮತಿ ಸರಸ್ವತಿ ಅವರು ಉಪಸ್ಥಿತರಿದ್ದರು.


ಶಾಲಾ ನಾಯಕಿಯಾದ ಕುಮಾರಿ ಪದ್ಮಾ ಚಿನ್ಮಯಿ ಹಾಗೂ ಶಾಲಾ ಕನ್ನಡ ಸಂಘದ ಅಧ್ಯಕ್ಷರಾದ ಕುಮಾರ ಸಂತೃಪ್ತ ಭಟ್ ಐ. ಕೆ. ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಕುಮಾರಿ ದುರ್ಗಾಶ್ರೀ ಅವರು ಸ್ವಾಗತಿಸಿದರು. ಕುಮಾರಿ ಪ್ರಣಮ್ಯ ಭಟ್ ಹಾಗೂ ಕುಮಾರಿ ಕೃತಿ ಕೆ. ಅವರು ವಂದನಾರ್ಪಣೆ ಸಲ್ಲಿಸಿದರು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top