ಲೇಖಕರು: ಕೌಶಿಕ್ ಕೂಡುರಸ್ತೆ
ನಾನು ಪದವಿ ಓದುತ್ತಿದ್ದಾಗಲೇ ಪುಸ್ತಕದ ಗೀಳು ಬೆಳೆಸಿಕೊಂಡೆ. ಪುಸ್ತಕ ಓದುವುದರಿಂದ ನಾವು ನಾವಾಗಿರಬಹುದು. ಅಲ್ಲಿಂದ ಶುರುವಾದ ಓದುವ ಪಯಣ ಇವತ್ತು ಓದಿದ ಪುಸ್ತಕದ ತನಕ ಬಂದಿದೆ. ತುಂಬಾ ಪುಸ್ತಕ ಓದಿದ್ದೀನಿ, ಊಟ, ನಿದ್ದೆಗೆಡಿಸಿದ ಪುಸ್ತಕಗಳಿವೆ. ಆದರೆ ಈ ಪುಸ್ತಕ ಕೈಗೆತ್ತಿಕೊಂಡಾಗ ಮೊದಲಿಗೆನೇ ಪ್ರಶ್ನಾರ್ಥಕ ಭಾವ. ಯಾರಿರಬಹುದು ಅವಳನ್ನ ಕೊಂದಿದ್ದು, ಹೆಂಗೆ ಕೊಲೆ ಮಾಡಿದ್ರು, ಅರೆಸ್ಟ್ ಆದ್ರಾ? ಸಾವಿರಾರು ಪ್ರಶ್ನೆಗಳ ಸರಮಾಲೆ. ಓದೋಕೆ ಶುರುಮಾಡಿದೆ. ಅದೇ “ಹೂ ಕಿಲ್ಡ್ ನಿಹಾರಿಕಾ?”. ಈ ಶೀರ್ಷಿಕೆಯೇ ಓದುಗರಲ್ಲಿ ಕುತೂಹಲ ಮೂಡಿಸುವಂತದ್ದು .
ಕಾದಂಬರಿಯ ಪ್ರಮುಖ ಆಕರ್ಷಣೆ ಏನೆಂದರೆ ಪತ್ತೇದಾರಿ ಹಿಮವಂತನ ಪಾತ್ರ. ಈ ಹೆಸರನ್ನ ಎಲ್ಲೋ ಕೇಳಿದೀವಿ ಅಂತ ಯೋಚನೆ ಮಾಡ್ತಿದೀರಾ... ಹೌದು ಇತ್ತೀಚೆಗೆ ಟ್ರೆಂಡಿಂಗ್‌ನಲ್ಲಿದ್ದ ಅಕ್ಷರ ಬ್ರಹ್ಮ ಎಂದೇ ಪ್ರಸಿದ್ದರಾದ ರವಿ ಬೆಳಗೆರೆ ಅವರ "ಹೇಳಿ ಹೋಗು ಕಾರಣ" ಪುಸ್ತಕದಲ್ಲಿನ ರೂವಾರಿ ಅಂದರೆ ತಪ್ಪಾಗದು. ಈ ಕಥೆಯಲ್ಲಿ ಆರಂಭದಲ್ಲಿಯೇ ಅನುಮಾನಾಸ್ಪದ ಘಟನೆಗಳು ಎದುರಾಗುತ್ತವೆ. ಸುಹಾಸ್ ಎಂಬ ವ್ಯಕ್ತಿಯ ವರ್ತನೆ ಹಾಗೂ ಅವನ ಕಾರಿನಲ್ಲಿ ದೊರೆಯುವ ಪೆಟ್ರೋಲ್ ಮತ್ತು ಸ್ಲಿಪ್ಪರ್ ಪೊಲೀಸರ ಅನುಮಾನಕ್ಕೆ ಕಾರಣವಾಗುತ್ತವೆ.
ಅವನನ್ನೇ ಕೊಲೆಗಾರನೆಂದು ಶಂಕಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದರೆ ಕಥೆ ಅಲ್ಲಿಗೆ ನಿಲ್ಲುವುದಿಲ್ಲ. ಒಂದು ಕೊಲೆಯ ಸುತ್ತ ಆರಂಭವಾಗುವ ತನಿಖೆ ಕ್ರಮೇಣ ಸರಣಿ ಕೊಲೆಗಳ ಸಾಧ್ಯತೆಯತ್ತ ಹೇಗೆಲ್ಲಾ ತಿರುಗುತ್ತದೆ. ಇದು ವೈಯಕ್ತಿಕ ದ್ವೇಷವೇ? ಸರಣಿ ಹಂತಕನ ಕೃತ್ಯವೇ? ಅಥವಾ ಇದರ ಹಿಂದೆ ಮತ್ತೇನಾದರೂ ರಹಸ್ಯವಿದೆಯೇ? ಎಂಬ ಪ್ರಶ್ನೆಗಳನ್ನು ಲೇಖಕರು ನಿರಂತರವಾಗಿ ಓದುಗರ ಮುಂದೆ ಇಡುತ್ತಾರೆ.
ಪ್ರತಿ ಅಧ್ಯಾಯದಲ್ಲೂ ಹೊಸ ತಿರುವುಗಳನ್ನು ನೀಡುವ ಮೂಲಕ ಓದುವ ಕುತೂಹಲವನ್ನು ಉಳಿಸಿಕೊಂಡಿದಾರೆ. ಕೌಶಿಕ್ ಕೂಡುರಸ್ತೆ ಅವರ ಬರವಣಿಗೆಯ ಪ್ರಮುಖ ಗುಣವೆಂದರೆ ವೇಗವಾದ ನಿರೂಪಣೆ. ನಾನು ಓದಿದ ಮೊದಲ ಪುಸ್ತಕ ಅವರದ್ದು. ಓದುಗರಿಗೆ “ಮುಂದೇನಾಗಬಹುದು?” ಎಂಬ ಕುತೂಹಲ ಮೂಡಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಇದರಲ್ಲಿ ಬರುವ ಪಾತ್ರಗಳು ಅದ್ಭುತ. ಸುಹಾಸ್, ನಿಹಾರಿಕಾ, ಕೋಕಿಲ, ಅನನ್ಯ, ವಿಶ್ವಾಸ ಇವರದ್ದು "ಫೈವ್ ಬೈಟ್ಸ್" ಗ್ರೂಪ್. ಇವರೇ ಹೈ ಲೈಟ್ ಇದರಲ್ಲಿ. ಆಮೇಲೆ ಜಯರಾಮ್, ಬಾಲಯ್ಯ, ಪ್ರಮೋದದೇವಿ, ಚಾಂದನಿ, ಶಶಿಧರ್, ವಿಖ್ಯಾತ ಇವರು ಬೇರೆ.
ಆದರೆ ಪುಸ್ತಕ ಓದಿದ ನಂತರ ಅರ್ಥವಾಗಿದ್ದು ಒಬ್ಬ ವ್ಯಕ್ತಿಯ ದೇಹ ಸೌಂದರ್ಯ ಅಥವಾ ಬಾಹ್ಯ ಸೌಂದರ್ಯ ಕುರಿತು ಹಂಗಿಸುವುದರ ಪರಿಣಾಮದಿಂದ ಮಾಡದ ತಪ್ಪಿಗೆ ಜೈಲುವಾಸ ಅನುಭವಿಸಿದವಳ ಕಥೆ. “ಹೂ ಕಿಲ್ಡ್ ನಿಹಾರಿಕಾ?” ರಹಸ್ಯ, ಕೊಲೆ, ತನಿಖೆ ಮತ್ತು ಅನಿರೀಕ್ಷಿತ ತಿರುವುಗಳನ್ನು ಇಷ್ಟಪಡುವ ಓದುಗರಿಗೆ ಇದು ಆಸಕ್ತಿದಾಯಕ ಅನುಭವ ನೀಡಬಹುದು. ಕಥೆ ಕೊನೆಗೂ ಅಪರಾಧಿಯ ಹುಡುಕಾಟದಲ್ಲಿಯೇ ಅಂತ್ಯವಾಯಿತು. ಈ ಪುಸ್ತಕವನ್ನು ಓದೋಕೆ ಕೊಟ್ಟಿದ್ದು ನನ್ನ ಅಕ್ಕ ಅವಳಿಗೊಂದು ಥ್ಯಾಂಕ್ಸ್. ಕೊನೆವರೆಗೂ ನಿಹಾರಿಕಾ ಕೊಂದಿದ್ದು ಯಾರು ಅಂತ ಗೊತ್ತಾಗಲಿಲ್ಲ. ನಿಮಗೇನಾದ್ರು ಗೊತ್ತಾಗುತ್ತಾ ಅಂತ ಒಂದ್ಸಲ ಓದಿ ನೋಡಿ.
- ಗಂಗಾ ಅಮಾತೆಪ್ಪನವರ, ಬಾಗಲಕೋಟೆ
