ಬೆಳದಿಂಗಳು - ಇದು "ಪೌರ್ಣಿಮೆಯ ಪರ್ವ"

Upayuktha
0



ಬೆಳದಿಂಗಳಂದ್ರೆ ಯಾರಿಗಿಷ್ಟ ಇಲ್ಲ ಹೇಳಿ? ಬೆಳದಿಂಗಳಲ್ಲಿ ನಮ್ಮೆಲ್ಲರ ಬಾಲ್ಯ ಅಡಗಿದೆ, 

ಹಾ.... ಈಗ ಸ್ವಲ್ಪ ಬದಲಾಗಿದೆ, ನನಗೆ ನೆನಪಿರೋ ಹಾಗೆ ನನ್ನಮ್ಮ ತನ್ನ ಕಂಕುಳಲ್ಲಿ ಕೂಡಿಸಿಕೊಂಡು " ನೀನ್ ತಿಂದಿಲ್ಲ ಅಂದ್ರೆ ಚಂದ್ರ ಈ ತುತ್ತು ಕಿತ್ಕೋತಾನೆ" ಅಂತ ಬೆಳದಿಂಗಳ ರಾತ್ರಿಯಲ್ಲಿ ಪೂರ್ಣ ಚಂದ್ರನ ತೋರಿಸುತ್ತಾ , "ಅಲ್ಲಿ ಚುಕ್ಕಿ ಬಿತ್ತು ನೋಡು, ಇಲ್ಲಿ ನಾಯಿ ಬಂತು ನೋಡು" ಅಂತ ಏನೇನೋ ಕಸರತ್ತು ಮಾಡಿ ತುಪ್ಪ-ಚಟ್ನಿ ಕಲಿಸಿದ ಅನ್ನವನ್ನ ತುತ್ತು ಮಾಡಿ ತಿನ್ನುಸ್ತಿದ್ಲು.


ಬೆಳದಿಂಗಳು ಬರಿ ಚಂದದ ರಾತ್ರಿಯಲ್ಲ! "ಇವತ್ತು ಹುಣ್ಣಿಮೆ ಬೇರೆ! ಬೇಗ ಮಲಗದಿದ್ರೆ ಗಾಡಿ ಮೇಲೆ ಆಚೆ ಕರ್ಕೊಂಡು ಹೋಗಿ ದೂರ ಕತ್ತಲಲ್ಲಿ ಬಿಟ್ಟು ಬರ್ತೀನಿ" ಅಂತ ಅಪ್ಪ ಹೆದರಿಸುತ್ತಿದ್ದಿದ್ದು ಈಗಲೂ ನನಗೆ ನೆನಪಿದೆ, ಆದರೆ ಈಗ ಜಮಾನಾ ಸ್ವಲ್ಪ ಬದಲಾಗಿದೆ, ಇನ್ಫೋಬೆಲ್ಸ್ - ಕಾರ್ಟೂನ್ ತೋರ್ಸ್ತಾ ಊಟ ಮಾಡಿಸೋ ಈಗಿನ ಅಮ್ಮಂದಿರಿಗೆ ಬಹುಶಃ ಬೆಳದಿಂಗಳು ಮರೆತು ಹೋಗಿದೆ ಮತ್ತು ಯೂಟ್ಯೂಬ್ ನೋಡ್ತಾ ತುತ್ತು ಬಾಯಿಗೆ ಇಡುವ ಮಕ್ಕಳಿಗೆ ಪ್ರಾಯಶಃ ಬೆಳದಿಂಗಳ ಭವ್ಯ ಸೊಬಗಿನ ಅರಿವೇ ಇಲ್ಲ ಅನ್ನೋದು ನನ್ನ ಅನಿಸಿಕೆ.


ಬರೀ ಇಷ್ಟೇ ಅಲ್ಲ ಬೇಸಿಗೆ ರಜೆ ಬಿಟ್ಟರೆ ಸಾಕು ನಾವೆಲ್ಲ ನಮ್ಮ ಅಜ್ಜಿಯಂದಿರ ಮನೆಗೆ ಹೋಗ್ತಿದ್ವಿ, ಅಲ್ಲಿ ಅಜ್ಜಿ ಎಲ್ಲಾ ಮಕ್ಕಳನ್ನು ಒಟ್ಟಿಗೆ ಮನೆಯ ಅಂಗಳದ ಮುಂದೆ ಬೆಳದಿಂಗಳ ಕೆಳಗೆ ಕೂರಿಸಿಕೊಂಡು, ನಮ್ಮೆಲ್ಲರಿಗೂ ಮಂಗ-ಮೊಸಳೆ, ಪುಣ್ಯಕೋಟಿಗಳ ಕಥೆಯನ್ನ ಹೇಳಿ ಎಲ್ಲ ಮಕ್ಕಳಿಗೂ ಪ್ರೀತಿ ಬೆರೆಸಿದ ಕೈ ತುತ್ತು ನೀಡುತ್ತಿದ್ದಳು, ಅವಳ ಕೈ ತುತ್ತಿನಲ್ಲಿ ಇರುತ್ತಿದ್ದ ರುಚಿ ಈಗಿನ ಪಿಜ್ಜಾ- ಬರ್ಗರನಲ್ಲಿ ಇಲ್ಲ ಹಾಗೂ ಬೆಳದಿಂಗಳ ಕೆಳಗೆ ಕೂತು ಕಥೆ ಕೇಳುವ ಸಂಯಮವನ್ನು ನಾವಿಂದು ಕಳೆದುಕೊಂಡಿದ್ದೇವೆ.


ಬೆಳದಿಂಗಳು ಬರೀ ಬಾಲ್ಯಕ್ಕೆ ಅಷ್ಟೇ ಸೀಮಿತ ಅಲ್ಲ, ಹದಿಹರೆಯದ ಮನಸ್ಸುಗಳಿಗೂ ಅದು ಅಚ್ಚುಮೆಚ್ಚು. ಪ್ರೀತಿಸುವ ಹುಡುಗನೊಬ್ಬ "ಕಾರ್ಗತ್ತಲು ತುಂಬಿದ ನನ್ನ ಬದುಕಿಗೆ ನೀ ಬೆಳದಿಂಗಳಂತೆ ಬಂದೆ, ಹೇಳು ಗೆಳತಿ ನೀನು ಬೆಳದಿಂಗಳ ಬಾಲೆಯೆ?" ಎಂದು ತನ್ನ ಪ್ರೇಯಸಿಗಾಗಿ ಗೀಚಿದರೆ, "ನೀನೇ ನನ್ನ ಪಾಲಿನ ಚಂದ್ರ" ಎಂದು ಹುಡುಗಿ ಮನಸಲ್ಲೇ ಮುಗುಳ್ನಗುತ್ತಾಳೆ.


ಇನ್ನೂ ಕವಿಗಳಿಗೆ, ನದಿ-ಸಮುದ್ರ,ಮರ-ಬಳ್ಳಿ ಪ್ರಕೃತಿ-ಪರಿಸರ, ಪ್ರೀತಿ-ಸಮಾಜಗಳ ಬಗ್ಗೆ ಬರೆಯಲು ಆಗಾಗ ಪ್ರೇರಣೆ ನೀಡುವುದು ಮನೆಯ ಮೇಲ್ಚಾವಣಿಯಿಂದ ಇಣಕುವ ಈ ಬೆಳದಿಂಗಳೆ. ವರಕವಿ ದ.ರಾ.ಬೇಂದ್ರೆಯವರು ತಮ್ಮ  "ಬೆಳುದಿಂಗಳ ನೋಡ" ಕವನದಲ್ಲೂ ರಾತ್ರಿಯ ಜೀವಂತಿಕೆ ಅಂದ್ರೆ ಬೆಳದಿಂಗಳ ಬಗ್ಗೆ ಬರಿಯುತ್ತಾರೆ-  ಎಲ್ಲೆಡೆ ಮೌನವಿದ್ದರೂ ಆ ಮೌನದೊಳಗೆ ಪ್ರಕೃತಿಯದೇ ಆದ ಒಂದು ಸಂಗೀತವಿದೆ ಎಂಬುದು ಅವರ ಭಾವನೆಯಾಗಿತ್ತು. ಬೆಳದಿಂಗಳ ಸೊಬಗಿನ ಬಗ್ಗೆ ಬರೀ ಓದಿದರೆ - ಬರೆದರೆ ಸಾಲದು, ಒಮ್ಮೆ ಅನುಭವಿಸಿ ನೋಡಿ.




-ಹರ್ಷ‌ ಮಹಾಂತೇಶ್ ಧಾರವಾಡ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top