ಹಾಸನ: ಪರಿಸರ ಸಂರಕ್ಷಣೆ, ಪರಿಸರ ಕಾಳಜಿ, ಪರಿಸರ ಪ್ರೀತಿ, ಸುಂದರ ಪರಿಸರ ನಿರ್ಮಾಣ ಮಾಡುವ ಕುರಿತು ಯಾವುದೇ ಕಾರ್ಯಕ್ರಮ ಗಳಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡುವ ಪರಿಸರ ಸ್ನೇಹಿ, ಅಕ್ಷರ ಸಂತ, ನಿವೃತ್ತ ಶಿಕ್ಷಣಾಧಿಕಾರಿ ಡಾ. ಜೆ. ಬಿ. ತಮ್ಮಣ್ಣಗೌಡ ಇವರಿಗೆ ಬೆಂಗಳೂರಿನ ಸುರ್ವೆ ಕಲ್ಚುರಲ್ ಅಕಾಡೆಮಿಯು ರಾಷ್ಟ್ರ ಮಟ್ಟದ ಪರಿಸರ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ರಂಗಮಂದಿರದಲ್ಲಿ ಸುರ್ವೆ ಕಲ್ಚರಲ್ ಅಕಾಡೆಮಿಯ ರಾಷ್ಟ್ರಮಟ್ಟದ 76 ನೇ ಸಾಂಸ್ಕೃತಿಕ ಕಲಾಪ್ರತಿಭೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಜಿಲ್ಲೆಯ ಕಂದಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇಪ್ಪತ್ತು ವರ್ಷಗಳ ಕಾಲ ಪ್ರಾಂಶುಪಾಲರಾಗಿದ್ದಾಗ ಸರಿಸುಮಾರು ಒಂದು ಸಾವಿರಕ್ಕು ಹೆಚ್ಚು ಮರಗಿಡಗಳನ್ನು ಬೆಳೆಸಿದ್ದು ಅವುಗಳಲ್ಲಿ ತೇಗ, ಹೊನ್ನೆ, ಬೀಟೆ, ಸೀಬೆ, ಪನ್ನೇರಳೆ, ಮಾವು, ಸಪೋಟ, ಪಪ್ಪಾಯ, ನೇರಳೆ, ಹಲಸು, ಬೇವು ಹಾಗೂ ವಿವಿಧ ಬಗೆಯ ಹೂಗಿಡಗಳನ್ನು ಬೆಳೆಸಿದ್ದು ಇಡೀ ಶಾಲೆಯು ಸುಂದರ ಪರಿಸರವನ್ನು ಹೊಂದಿದ್ದ ಹಿನ್ನೆಲೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಹಾಸನ ತಾಲ್ಲೂಕಿನ ಕಂದಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ನಮ್ಮ ಶಾಲೆ ಎಂಬ ಪರಿಕಲ್ಪನೆ ಹಾಗೂ ಚನ್ನರಾಯಪಟ್ಟಣ ತಾಲ್ಲೂಕಿನ ತನ್ನ ಹುಟ್ಟೂರಾದ ಜಿನ್ನೇನಹಳ್ಳಿ ಸರ್ಕಾರಿ ಶಾಲೆಗೆ ನಮ್ಮೂರ ಶಾಲೆ ಎಂಬ ಪರಿಕಲ್ಪನೆಗಳ ಮೂಲಕ ಪ್ರತೀ ವರ್ಷವೂ ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ವ್ಯಾಸಂಗಕ್ಕೆ ಅಳಿಲು ಸೇವೆಯನ್ನು ಸಲ್ಲಿಸುತ್ತಿ ರುವ ಡಾ. ಜೆ.ಬಿ. ತಮ್ಮಣ್ಣಗೌಡರು ಶಿಕ್ಷಣ, ಪರಿಸರ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಅಲ್ಲದೇ ತಮ್ಮಣ್ಣಗೌಡರು ಪಡೆದಿರುವ ಐದು ಮಾಸ್ಟರ್ ಡಿಗ್ರಿಗಳ ಪೈಕಿ ಪರಿಸರ ವಿಜ್ಞಾನ ಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿ ಪಡೆದಿರುವುದು ವಿಶೇಷವಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ರಮೇಶ್ ಸುರ್ವೆ ರವರು ಹೇಳಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಉಡುಪಿಯ ಶ್ರೀ ಶ್ರೀ ರಮಾನಂದ ಗುರೂಜಿ, ಚಿತ್ರದುರ್ಗದ ಚಲುವಾದಿ ಗುರುಪೀಠದ ಶ್ರೀ ಶ್ರೀ ಬಸವನಾಗಿದೇವ ಶರಣರು, ಸುರ್ವೆ ಕಲ್ಚರಲ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷರಾದ ರಮೇಶ್ ಸುರ್ವೆ, ಕನ್ನಡಪರ ಹೋರಾಟಗಾರರಾದ ಮಾಯಣ್ಣ, ಚಲನಚಿತ್ರ ಕಲಾವಿದರಾದ ಶಂಕರ ಭಟ್, ಮೀನಾ, ಹಾಸನದ ಸಾಹಿತಿಯಾದ ವಿಜಯಾ ಹಾಸನ್ ಮುಂತಾದವರು ಉಪಸ್ಥಿತರಿದ್ದರು.
