ಹಾಸನ: ಮಾನವನ ಜೀವನದಲ್ಲಿ ಹುಟ್ಟಿನಿಂದ ಸಾವಿನವರೆಗೂ ಸಾಹಿತ್ಯವು ಅವಿಭಾಜ್ಯವಾಗಿದೆ. ಹಾಗೆಯೇ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ತುಂಬಿರಬೇಕು. ಅಂತಹ ಮೌಲ್ಯಗಳನ್ನು ಜಗತ್ತಿಗೆ ಸಾರುವ ಕೆಲಸವನ್ನು ಸಾಹಿತ್ಯದ ಮೂಲಕ ನೀಡಿರುವ ಶಿಕ್ಷಕರು ಮತ್ತು ಸಾಹಿತಿಗಳಾದ ಕೆ.ಎನ್. ಚಿದಾನಂದರವರ ಸಾಹಿತ್ಯ ಕೃತಿ ಸತ್ಯದ ಸಿರಿವಂತಿಕೆ ಹೊಂದಿದೆ ಎಂದು ಡಾ. ಸಿ. ಸೋಮಶೇಖರ್ ಹೇಳಿದರು.
ಆಂಧ್ರಪ್ರದೇಶದ ಅನಂತಪುರದಲ್ಲಿ ತ್ರಿವರ್ಣ ಪ್ರತಿಷ್ಠಾನ ವತಿಯಿಂದ ಸಾಯಿಕೃಷ್ಣ ಫಂಕ್ಷನ್ ಹಾಲ್ ನಲ್ಲಿ ಏರ್ಪಡಿಸಿದ ಅಂತರ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡುತ್ತಾ ಸತ್ಯದ ಸಿರಿವಂತಿಕೆ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ತ್ರಿವರ್ಣ ಪುತಿಷ್ಠಾನದ ಅಧ್ಯಕ್ಷರಾದ ಪೊಟ್ಲೂರಿ ಹರಿಕೃಷ್ಣ ರವರು ಮಾತನಾಡುತ್ತಾ ಕನ್ನಡ ಮತ್ತು ತೆಲುಗು ಭಾಷೆಗಳು ಸೋದರ ಭಾಷೆಗಳಾಗಿದ್ದು ಇವುಗಳನ್ನು ಬಳಸುವ ಮೂಲಕ ಉಳಿಸಬೇಕು. ಈ ನಿಟ್ಟಿನಲ್ಲಿ ಸಾಹಿತ್ಯದ ಮೂಲಕ ಭಾಷಾ ಉಳಿವಿನ ಕೆಲಸ ಮಾಡಬೇಕಿದೆ. ಇಂದು ಹತ್ತು ಪುಸ್ತಕಗಳು ಒಂದೇ ವೇದಿಕೆಯಲ್ಲಿ ಬಿಡುಗಡೆಯಾಗುತ್ತಿದ್ದು ಸಾಹಿತಿಗಳಾದ ಕೆ.ಎನ್. ಚಿದಾನಂದ ರವರ ಸತ್ಯವ ಸಿರಿವಂತಿಕೆ ಕೃತಿಯು ಬಹಳಷ್ಟು ಸಿರಿನುಡಿಗಳ ಗುಚ್ಛವಾಗಿದ್ದು, ಒಂದೊಂದು ಲೇಖನವೂ ಬಹಳಷ್ಟು ಗಂಭೀರ ಅರ್ಥವನ್ನು ಹೊಂದಿದೆ. ಇಂದಿನ ಶತಮಾನಕ್ಕೆ ಇಂತಹ ಮಾನವೀಯ ಮೌಲ್ಯಗಳುಳ್ಳು ಕೃತಿ ಅತ್ಯಾವಶ್ಯಕವಾಗಿದೆ ಎಂದರು.
ಕೃತಿಯ ಲೇಖಕರಾದ ಕೆ.ಎನ್. ಚಿದಾನಂದರವರು ಮಾತನಾಡುತ್ತಾ ಅಂತರ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೃತಿ ಬಿಡುಗಡೆಯಾಗುತ್ತಿರುವುದು ಸಂತಸ ತಂದಿದೆ. ಈ ಸಂದರ್ಭವು ಬದುಕಿನಲ್ಲಿ ಒಂದು ಸವಿನೆನಾಪಾಗಿ ಉಳಿಯಲಿದೆ ಎನ್ನುತ್ತಾ ಪೊಟ್ಲೂರಿ ಹರಿಕೃಷ್ಣ ಮತ್ತು ಅವರ ತ್ರಿವರ್ಣ ಪ್ರತಿಷ್ಠಾನಕ್ಕೆ ವಂದಿಸಿದರು. ದಾವಣಗೆರೆ ಜಿಲ್ಲಾ ಕನ್ನಡ ಪರಿಷತ್ ಅಧ್ಯಕ್ಷರಾದ ವಾಮದೇವಪ್ಪ ತೊಗಲೇರಿರವರು ಮಾತನಾಡಿ ಪುಸ್ತಕವು ನಿವೃತ್ತ ಶಿಕ್ಷಣಾಧಿಕಾರಿಗಳಾದ ಡಾ. ಜೆ. ಬಿ. ತಮ್ಮಣ್ಣಗೌಡರ ಮುನ್ನುಡಿ ಮತ್ತು ಹಿರಿಯ ಪತ್ರಕರ್ತರಾದ ಪುಟ್ಟಣ್ಣ ಗೋಕಾಕ್ ರವರ ಬೆನ್ನುಡಿ ಹೊಂದಿದ್ದು ಉತ್ತಮ ಆದರ್ಶ ಮೌಲ್ಯಗಳುಳ್ಳ ಕೃತಿಯಾಗಿದೆ ಎಂದರು. ಕವಿಗೋಷ್ಠಿಯಲ್ಲಿ ಮೈಸೂರಿನ ಕೆ.ಆರ್.ನಗರದಿಂದ ಆಗಮಿಸಿದ್ದ ಶಿಕ್ಷಕ ಸಾಹಿತಿ ಡಾ. ಅಶೋಕ್ ಕುಮಾರ್ ಎಂ.ಜೆ. ರವರು ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಷ್ಟ್ರೀಯ ಕವಿಗೋಷ್ಠಿಯಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ವಿವಿಧ ಮೂಲೆಗಳಿಂದ ಕವಿಗಳು ಆಗಮಿಸಿ ಕವನ ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೆಂಗಳೂರು ಗ್ರಾಮಾಂತರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎನ್. ಕೃಷ್ಣಪ್ಪ, ಬಳ್ಳಾರಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ನಿಷ್ಠ ರುದ್ರಪ್ಪ ಮುಂತಾದ ಸಾಹಿತಿಗಳು, ಕವಿಗಳು, ಲೇಖಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


