ನವರಾತ್ರಿ ವಿಶೇಷ: ದುರ್ಗಾ ಸಪ್ತಶತಿ ಪಾರಾಯಣ

Upayuktha
0


ನವರಾತ್ರಿ ಪರ್ವದಲ್ಲಿ ಹೆಚ್ಚಾಗಿ ಪಾರಾಯಣ ಮಾಡುವ ಸ್ತೋತ್ರ ದುರ್ಗಾ ಸಪ್ತಶತಿ. ದುರ್ಗಾಸಪ್ತಶತಿ ಸ್ತೋತ್ರವನ್ನು ದೇವಿ ಮಹಾತ್ಮೆ ಅಥವಾ  ಚಂಡೀ ಪಾಠ ಎಂದು ಕರೆಯಲಾಗುತ್ತದೆ. ನವರಾತ್ರಿಯ ಪರ್ವದಲ್ಲಿ, ವಿಶೇಷವಾಗಿ ದುರ್ಗಾಷ್ಟಮಿ ಸಮಯದಲ್ಲಿ ಹೆಚ್ಚಾಗಿ ಪಾರಾಯಣ ಮಾಡುತ್ತಾರೆ. ಅಲ್ಲದೇ ಮಂಗಳವಾರ ಶುಕ್ರವಾರಗಳಂದು ಕೂಡ ದುರ್ಗಾಸಪ್ತಶತಿ ಪಾರಾಯಣ ಮಾಡಲಾಗುತ್ತದೆ. ದುರ್ಗಾದೇವಿಯ ಅನುಗ್ರಹಕ್ಕೆ ಪಾತ್ರರಾಗಲು ಬಹಳಷ್ಟು ಜನ ಸಪ್ತಶತಿಯನ್ನೇ ಪಾರಾಯಣ ಮಾಡುತ್ತಾರೆ.


ದುರ್ಗಾಸಪ್ತಶತಿಯು ಮಾರ್ಕಾಂಡೇಯ ಪುರಾಣದಲ್ಲಿ ಉಲ್ಲೇಖಿತವಾಗಿರುವ ದೇವಿಯ ಬಗೆಗೆ ನಮಗೆ ತಿಳಿಸುವ 700 ಶ್ಲೋಕಗಳಿರುವ ಕಾರಣ ಸಪ್ತಶತಿ ಎಂದು ಕರೆಯಲಾಗಿದೆ. ಸಪ್ತಶತಿಯಲ್ಲಿ ಒಟ್ಟು 13 ಅಧ್ಯಾಯಗಳಿವೆ. ಈ ಸ್ತೋತ್ರದಲ್ಲಿ ದೇವಿಯ ಮೂರು ರೂಪಗಳನ್ನು ಸ್ತುತಿ ಮಾಡಲಾಗುತ್ತದೆ ಮಹಾಕಾಳಿ, ಲಕ್ಷ್ಮೀ ಮತ್ತು ಸರಸ್ವತಿಯ ರೂಫಗಳ ವರ್ಣನೆಯನ್ನು ಮಾಡುತ್ತಾರೆ. 3 ಚರಿತ್ರೆಗಳಲ್ಲಿ ಇವನ್ನು ವಿಂಗಡಿಸಲಾಗಿದೆ. ಪ್ರಥಮ ಚರಿತ್ರೆಯಲ್ಲಿ ಮಹಾಕಾಳಿಯ ಮಹಿಮೆ ಮತ್ತು ಅವಳ ಸ್ತುತಿಯನ್ನು ಮಧು ಕೈಟಭರ ವಧೆಯ ಕುರಿತಾಗಿ  ಬ್ರಹ್ಮದೇವರು ಸ್ತುತಿ ಮಾಡುತ್ತಾರೆ.  ಮಧ್ಯಮ ಚರಿತ್ರೆಯಲ್ಲಿ ಮಹಾಲಕ್ಷ್ಮಿದೇವಿ ಮಹಿಮೆ ಅವಳ ಸ್ತುತಿಯನ್ನು ಮತ್ತು ಮಹಿಷಾಸುರ ವಧೆಯನ್ನು ವರ್ಣಿಸುತ್ತಾರೆ. ಉತ್ತರ ಚರಿತ್ರೆಯಲ್ಲಿ ಮಹಾಸರಸ್ವತಿಯ ಮಹಿಮೆ ಮತ್ತು ಶುಂಭ ನಿಶುಂಭ ಮೊದಲಾದ ಅನೇಕ ರಾಕ್ಷಸರ ವಧೆಯ ವರ್ಣನೆ ಬರುತ್ತದೆ.


ದುರ್ಗಾಸಪ್ತಶತಿಯ ಸಾರ:

ಪ್ರಥಮ ಚರಿತ್ರೆಯಲ್ಲಿ ರಾಜನಾದ ಸುಪಥನು ಮತ್ತು ವೈಶ್ಯನು ಇಬ್ಬರೂ ತಮ್ಮ ರಾಜ್ಯ ಮತ್ತು ಸಂಪತ್ತನ್ನು ಕಳೆದುಕೊಂಡು ಮೇಧನ ಋಷಿಗಳ ಆಶ್ರಮಕ್ಕೆ ಬರುತ್ತಾರೆ ಅವರಿಬ್ಬರ ದುಃಖ ಕಷ್ಟಗಳನ್ನು ಕಂಡ ಋಷಿಗಳು ಅವರಿಬ್ಬರಿಗೂ ದೇವಿ ಮಹಾತ್ಮೆಯನ್ನು ವಿವರಿಸುತ್ತಾರೆ. ಮಾಯೆಯ ಸ್ವರೂಪ ವಿವರಿಸಿ ವಿಷ್ಣುವಿನ ಕಿವಿಯಿಂದ ಜನಿಸಿದ ಮಧು ಮತ್ತು ಕೈಟಭರ ಉಪದ್ರವ ತಾಳಲಾರದೇ ಬ್ರಹ್ಮದೇವರು ದೇವಿಯ ಸ್ತುತಿ ಮಾಡಿ ಅವಳನ್ನು ಈ ದೈತ್ಯರ ಸಂಹಾರ ಮಾಡಲು ಬೇಡುವ ಸ್ತುತಿ  ಮೊದಲ ಅಧ್ಯಾಯದಲ್ಲಿ ಉಲ್ಲೇಖಿತವಾಗಿದೆ.


ಮಧ್ಯಮ ಚರಿತ್ರೆಯು 2ರಿಂದ 4ನೇ ಅಧ್ಯಾಯದಲ್ಲಿ ದೇವಿಯ ಶಕ್ತಿ ಮತ್ತು ಅವಳ ಪ್ರಾಬಲ್ಯವನ್ನು ಸಾರುತ್ತದೆ ಈ ಅಧ್ಯಾಯಗಳಲ್ಲಿ ದೇವಿಯು ಮಹಿಷಾಸುರ ಮತ್ತವನ ಸೈನ್ಯವನ್ನು ಸಂಹರಿಸಿದ ಕತೆಯನ್ನು ವಿವರವಾಗಿ ವರ್ಣಿಸಲಾಗಿದೆ. ಮಹಿಷಾಸುರನು ವಿವಿಧ ರೂಪ ತಾಳಿ ದೇವಿಯೊಂದಿಗೆ ಯುದ್ಧಕ್ಕೆ ಆಹ್ವಾನಿಸಿದಾಗ ಎಲ್ಲ ರೂಪಗಳಲ್ಲೂ ಅವನನ್ನನು ಸೋಲಿಸಿ ಅವನನ್ನು ವಧಿಸುವ ದೇವಿಯ ದುಷ್ಟ ಶಿಕ್ಷಣದ ಮಹಿಮೆಯನ್ನು ತೋರಿಸುತ್ತದೆ. ದೇವಿಯ ಈ ರೂಪಕ್ಕೆ ಇಂದ್ರ ಮೊದಲಾದಿ ದೇವತೆಗಳು ಸ್ತುತಿಸಿ ಅವಳಿಗೆ ಶರಣು ಹೋಗುತ್ತಾರೆ.


ಉತ್ತರ ಚರಿತ್ರೆಯಲ್ಲಿ 5ನೇ ಅಧ್ಯಾಯದಿಂದ 13ನೇ ಅಧ್ಯಾಯದವರೆಗೆ ಶುಂಭ, ನಿಶುಂಭ, ಚಂಡ ಮುಂಡ ಸಂಹಾರ ಚಾಮುಂಡಿ ಅವತಾರ ರಕ್ತಬೀಜಾಸುರನ ಸಂಹಾರ ಇನ್ನು ಅನೇಕ ರಾಕ್ಷಸರ ವಧೆಯನ್ನು ಸವಿವರವಾಗಿ ಹೇಳಿ ಎಲ್ಲ ರಾಕ್ಷಸರನ್ನು ದೇವಿ ವಧಿಸಿದ ನಂತರದಲ್ಲಿ ಶಾಂತಿಯನ್ನು ದೇವಿಯು ಸ್ತಾಪಿಸಿದಳೆಂದೂ, ದೇವಿಯು ತನ್ನೆಲ್ಲ ಭಕ್ತರಿಗೆ ಬೇಡಿದ ಇಷ್ಟಾರ್ಥಗಳನ್ನು ನೀಡಿ ಅನುಗ್ರಹಿಸುತ್ತಾಳೆ.  ದುರ್ಗಾಸಪ್ತಶತಿಯ ಶ್ಲೋಕಗಳು ನಾರಾಯಣಿ ನಮೋಸ್ತುತೇ ಎಂದು ಕೊನೆಗೊಳ್ಳುತ್ತವೆ.


ಪಾರಾಯಣ ಕ್ರಮ ಮತ್ತು ಫಲ:

ದುರ್ಗಾ ಸಪ್ತಶತಿಯ ಪಠಣ ಅಥವಾ ಪಾರಾಯಣ ಮಾಡುವಾಗ ಸಾಮಾನ್ಯವಾಗಿ ಈ ರೀತಿಯಾಗಿ ಮೊದಲಿಗೆ ದೇವೀ ಕವಚವನ್ನು ನಂತರದಲ್ಲಿ ಅರ್ಗಲಾ ಸ್ತೋತ್ರವನ್ನು ಆಮೇಲೆ ಕೀಲಕ ಸ್ತೋತ್ರವನ್ನು ಮತ್ತು ರಾತ್ರಿ ಸೂಕ್ತವನ್ನು ಜೊತೆಗೆ ಸಿದ್ಧಕುಂಜಿಕಾ ಸ್ತೋತ್ರವನ್ನು ಪಠಿಸುತ್ತಾರೆ.


ವಿಧಾನ ಮತ್ತು ನಿಯಮಗಳು:

ಶುದ್ಧವಾದ ಸ್ಥಳದಲ್ಲಿ, ಸ್ನಾನ ಮಾಡಿ ಶುದ್ಧ ಬಟ್ಟೆ ಧರಿಸಿ, ಮೊದಲಿಗೆ ದೇವಿಯ ಪಟ ಅಥವಾ ಮೂರ್ತಿಯನ್ನು ಸ್ಥಾಪಿಸಿ ಅದರ ಮುಂದೆ  ದೀಪ-ಧೂಪ ಹಚ್ಚಿ ಪ್ರಥಮ ಪೂಜಿತ ವಿನಾಯಕನ ಪೂಜೆಯೊಂದಿಗೆ ಆರಂಭಿಸಬೇಕು. ಪೂರ್ವಮುಖವಾಗಿ ಕುಳಿತು ಹಣೆಗೆ ಶ್ರೀಗಂಧ ಅಥವಾ ಕುಂಕುಮ ತಿಲಕ ಧರಿಸಿ ನಂತರ ದೇವಿಗೆ ಅರಿಶಿನ ಕುಂಕುಮ ಹೂವುಗಂಧಗಳಿಂದ ಷೋಡಶ ಪೂಜಾದಿಗಳನ್ನು ನೆರವೇರಿಸಿ ಪದ್ಮಾಸನದಲ್ಲಿ ಕುಳಿತು, ಮೇಲೆ ಮೇಲೆ ಹೇಳಿದ ಕ್ರಮದಲ್ಲಿ ಸ್ತೋತ್ರವನ್ನು ಪಠಿಸಬೇಕು.


ಯಾವುದೇ ಸ್ತೋತ್ರವನ್ನು ಹೇಳುವಾಗ ಅದರ ಪಾರಾಯಣದ ಫಲಗಳನ್ನು ಸ್ತೋತ್ರದ ಕೊನೆಯಲ್ಲಿಯೇ ಹೇಳಲಾಗಿರುತ್ತದೆ. ಯಾವುದೇ ಸ್ತೋತ್ರದ ಫಲ ಇಹದ ಸಮಸ್ಯೆಗಳನ್ನು ನಂತರ ಜೀವನ್ಮುಕ್ತಿಯನ್ನು ಪಡೆಯುವುದು ಆಗಿರುತ್ತದೆ. 


ದುರ್ಗಾ ಸಪ್ತಶತಿಯನ್ನು ನಿಯಮಿತವಾಗಿ ಅಥವಾ ಶ್ರದ್ಧಾಭಕ್ತಿಯಿಂದ ಪಠಿಸುವುದರಿಂದ ಆಧ್ಯಾತ್ಮಿಕ ಮತ್ತು ಲೌಕಿಕ ಎರಡೂ ಫಲಗಳು  ದೊರೆಯುತ್ತವೆ.


ಜೀವನದಲ್ಲಿರುವ ದೊಡ್ಡ ಪ್ರಮಾಣದ ಸಮಸ್ಯೆಗಳು, ನಕಾರಾತ್ಮಕ ಶಕ್ತಿಗಳು ಮತ್ತು ಅನಿರೀಕ್ಷಿತ ಅಪಾಯಗಳನ್ನು ಎದುರಿಸಿ ಹೊರಾಡಿ ಧೈರ್ಯವಾಗಿ ನಿಲ್ಲಲು ಶಕ್ತಿಯನ್ನು ಈ ಪಾರಾಯಣವು ನೀಡುತ್ತದೆ.


ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿಯರ ಅನುಗ್ರಹವನ್ನು ಪಡೆಯುವ ಮೂಲಕ ಮನೆಯಲ್ಲಿ ಸಾಮರಸ್ಯ, ಆರೋಗ್ಯ, ಐಶ್ವರ್ಯ ಮತ್ತು ನೆಮ್ಮದಿ ಹಾಗೂ ಸಮೃದ್ಧಿಯನ್ನು ತರುತ್ತದೆ. ದೈಹಿಕ ಆರೋಗ್ಯ, ಎಲ್ಲ ರೀತಿಯ ಭಯಗಳಿಂದ ರಕ್ಷಣೆ ಮಾಡಿ ನಮ್ಮನ್ನು ಸದೃಢ ಮನಸ್ಕರನ್ನಾಗಿ ಮಾಡುತ್ತದೆ.


ಸಪ್ತಶತಿ ಪಾರಾಯಣ ಮಾಡುವುದರಿಂದ ದೈವಿಕ ಮಾತೃಸ್ವರೂಪಿಗೆ ಶರಣಾಗುವ ಭಕ್ತರ ಯೋಗ್ಯವಾದ ಆಸೆಗಳನ್ನು ನೇರವೇರಿಸಿ ದೇವಿಯು ಅನುಗ್ರಹಿಸುತ್ತಾಳೆ. ಈ ಸ್ತೋತ್ರದಲ್ಲಿ ಬರುವ ರಾಜ ಸುರಥ ಮತ್ತು ವೈಶ್ಯನಿಗೆ ದೊರೆತ ವರಗಳಂತೆಯೇ ಸದ್ಭಕ್ತರಿಗೆಲ್ಲರಿಗೂ ಉತ್ತಮ ಫಲ ದೊರೆಯುತ್ತವೆ. ಮುಖ್ಯವಾಗಿ ದುಷ್ಟ ಪ್ರಭಾವಗಳು, ದುಷ್ಟ ಶಕ್ತಿಗಳು ಮತ್ತು ಆಂತರಿಕ ದೌರ್ಬಲ್ಯಗಳ ವಿರುದ್ಧ ಇದು ಪ್ರಬಲ ರಕ್ಷಾಕವಚದಂತೆ ಕಾಪಾಡುತ್ತದೆ.


- ಮಾಧುರಿ ದೇಶಪಾಂಡೆ, ಬೆಂಗಳೂರು 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top