ನವರಾತ್ರಿ ವಿಶೇಷ: ಅಗಸ್ತ್ಯ ಮುನಿ ಕೃತ ಸರಸ್ವತಿ ಸ್ತೋತ್ರ

Upayuktha
0


ಸರಸ್ವತೀ ಸ್ತೋತ್ರವನ್ನು ರಚಿಸಿದ ಅಗಸ್ತ್ಯ ಋಷಿಗಳು ಜ್ಞಾನ, ವಿವೇಕ ಮತ್ತು ಕಲೆಗಳ ದೇವತೆಯಾದ ಸರಸ್ವತೀ ದೇವಿಯನ್ನು ಸ್ತುತಿಸಿ ಜ್ಞಾನವನ್ನು ಬೇಡುತ್ತಾರೆ. ಒಟ್ಟು, 21 ಶ್ಲೋಕಗಳನ್ನು ಒಳಗೊಂಡ ಸಂಸ್ಕೃತ ಸ್ತೋತ್ರವಾಗಿದ್ದು 19 ಶ್ಲೋಕಗಳಲ್ಲಿ ತಾಯಿಯ ವರ್ಣನೆ ಮತ್ತು 2 ಶ್ಲೋಕಗಳಲ್ಲಿ ಸ್ತೋತ್ರ ಪಠಣದ ಫಲವನ್ನು ಹೇಳುತ್ತಾರೆ.


ದೇವಿಯ ವರ್ಣನೆಯಿಂದ ಆರಂಭವಾಗುವ ಈ ಸ್ತೋತ್ರದಲ್ಲಿ "ಯಾ ಕುಂದೇಂದು ತುಷಾರ ಹಾರ ಧವಳಾ" ಎಂದು ಚಂದ್ರ, ಹಿಮ ಮತ್ತು ಮುತ್ತಿನ ಹಾರದಂತೆ ಧವಳ ವರ್ಣವನ್ನು ಹೊಂದಿರುವ ದೇವಿ ಶುಭ್ರತೆ ಮತ್ತು ಸಾತ್ವಿಕತೆಯ ಪ್ರತೀಕವೆಂದು ಋಷಿಗಳು  ಪ್ರಾರ್ಥನೆ ಮಾಡುತ್ತಾರೆ. ಈ ನುಡಿಯು ಸರಸ್ವತಿ ದೇವಿಯ ಪ್ರಾರ್ಥನೆ ಮಾಡುವಲ್ಲಿ ಕಡ್ಡಾಯವಾಗಿ ಹೇಳಲಾಗುತ್ತದೆ.


ಸ್ತೋತ್ರದಲ್ಲಿ ದೇವಿಯ ಲಕ್ಷಣಗಳನ್ನು ವರ್ಣಿಸುತ್ತ ದೇವಿಯ ನಾಲ್ಕು ಕೈಗಳನ್ನು ಅಂದರೆ ಚತುರ್ಭುಜ ಹೊಂದಿರುವವಳು ಎಂದು ಕರೆಯುತ್ತಾರೆ. ಒಂದು ಕೈಯಲ್ಲಿ ಅಕ್ಷಮಾಲೆ, ಮತ್ತೊಂದರಲ್ಲಿ ಬಿಳಿ ಕಮಲ, ಮೂರನೇ ಕೈಯಲ್ಲಿ ಪುಸ್ತಕ ಹಾಗೂ ನಾಲ್ಕನೇ ಕೈಯಲ್ಲಿ ಗಿಳಿ ಅಥವಾ ವೀಣೆ ಹಿಡಿದಿರುವ ದೇವಿಯೇ ಎಂದು ವರ್ಣಿಸುತ್ತಾರೆ. ದೇವಿ ಬಿಳಿ ಕಮಲದ ಮೇಲೆ ಆಸೀನಳಾಗಿದ್ದು, ಬ್ರಹ್ಮ, ವಿಷ್ಣು ಮತ್ತು ಶಿವರಿಂದ ಪೂಜಿಸಲ್ಪಡುತ್ತಾಳೆ ಎಂದು ಅಗಸ್ತ್ಯ ಋಷಿಗಳು ಪ್ರಾರ್ಥನೆ ಮಾಡುತ್ತಾರೆ.


"ಸರಸ್ವತಿ ನಮಸ್ತುಭ್ಯಂ" ಎಂದು ದಿನ ನಿತ್ಯವೂ ಓದುವ ಮೊದಲು ಪ್ರಾರ್ಥನೆ ಮಾಡಿದಾಗ ವಿದ್ಯಾರ್ಥಿಗಳಿಗೆ ಸ್ಮರಣಶಕ್ತಿ ಹೆಚ್ಚಾಗಿ ಉತ್ತಮ ಫಲದೊರೆಯುತ್ತದೆ.


20 ಮತ್ತು 21ನೇ ಶ್ಲೋಕಗಳ ಪ್ರಕಾರ, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಈ ಸ್ತೋತ್ರವನ್ನು ಪಠಿಸುವುದರಿಂದ ಅಜ್ಞಾನವು ದೂರವಾಗುತ್ತದೆ, ಪಾಪಗಳು ನಾಶವಾಗುತ್ತವೆ ಮತ್ತು ಆರು ತಿಂಗಳ ಅವಧಿಯಲ್ಲಿ ಜ್ಞಾನ ಹಾಗೂ ಆಧ್ಯಾತ್ಮಿಕ ಸಿದ್ಧಿಗಳು ಲಭಿಸುತ್ತವೆ ಎಂದು ತಿಳಿಸುತ್ತಾರೆ.



ಸರಸ್ವತಿ ಸ್ತೋತ್ರದ ಮಹತ್ವ:

ಸರಸ್ವತಿ ಸ್ತೋತ್ರ ಪಠಣದಿಂದ ಅಜ್ಞಾನ ನಿವಾರಣೆಯಾಗಿ ಜ್ಞಾನ ಪ್ರಾಪ್ತಿಯಾಗುತ್ತದೆ. ಸ್ತೋತ್ರದ ಆರಂಭಿಕ ಶ್ಲೋಕವು "ಯಾ ಕುಂದೇಂದು ತುಷಾರ ಹಾರ ಧವಳಾ..." ದೇವಿಯನ್ನು ಪ್ರಾರ್ಥಿಸುವ ಮೂಲಕ, 'ಜಾಡ್ಯ'ವನ್ನು ಮಾನಸಿಕ ಜಡತ್ವ, ನಿಷ್ಕ್ರಿಯತೆ ಮತ್ತು ಅಜ್ಞಾನ  ಸಂಪೂರ್ಣವಾಗಿ ಹೋಗಲಾಡಿಸಲು ಪ್ರಾರ್ಥಿಸಲಾಗಿದೆ.


ಸರಸ್ವತಿ ಸ್ತೋತ್ರದ ಪಾರಾಯಣ ನಮ್ಮಲ್ಲಿ ದೈವಿಕ ಸ್ಫೂರ್ತಿ ಮತ್ತು ವಾಕ್ಪಟುತ್ವ ನೀಡಿ ಸ್ಮರಣಶಕ್ತಿ, ತೀಕ್ಷ್ಣ ಬುದ್ಧಿಶಕ್ತಿ, ಸಂವಹನ ಕೌಶಲ್ಯ, ಕಲಾತ್ಮಕ ಪ್ರಾವೀಣ್ಯತೆ (ಸಂಗೀತ ಮತ್ತು ಸಾಹಿತ್ಯ) ಹಾಗೂ ಆಲೋಚನೆಗಳಲ್ಲಿ ಸ್ಪಷ್ಟತೆಯನ್ನು ಹೆಚ್ಚಿಸಿಕೊಳ್ಳಲು ನಿತ್ಯದಲ್ಲಿ ಪಠಿಸಲಾಗುತ್ತದೆ.

 ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ವೈದಿಕ ಸಂಪ್ರದಾಯದಲ್ಲಿ, ಸರಸ್ವತಿ ಪ್ರಾರ್ಥನೆಯು ಬುಧ ಗ್ರಹ (ಬುದ್ಧಿಶಕ್ತಿ ಮತ್ತು ವಾಕ್ ಶಕ್ತಿಗೆ ಕಾರಕ) ಹಾಗೂ ಗುರು ಗ್ರಹವನ್ನು (ಉನ್ನತ ಜ್ಞಾನ ಮತ್ತು ವಿವೇಕಕ್ಕೆ ಕಾರಕ) ಪ್ರಸನ್ನಗೊಳಿಸಲು ಸಹಾಯಕವೆಂದು ತಿಳಿಯಲಾಗುತ್ತದೆ. ಹೀಗಾಗಿ ಜ್ಞಾನ ಕಾರಕ ಗ್ರಹಗಳ ಪ್ರೀತಿಗಾಗಿ ಸರಸ್ವತಿ ಸ್ತೋತ್ರವನ್ನು ಪಠಿಸಲಾಗುತ್ತದೆ. 


ಸರಸ್ವತಿ ಸ್ತೋತ್ರ ಹೇಳುವುದರಿಂದ ಆಧ್ಯಾತ್ಮಿಕ ಶುದ್ಧೀಕರಣವಾಗುತ್ತದೆ. ಸ್ತೋತ್ರದ ಕೊನೆಯ ನುಡಿಗಳಲ್ಲಿ 'ಸರ್ವಸಿದ್ಧಿಕರಂ' (ಎಲ್ಲಾ ಸಿದ್ಧಿಗಳನ್ನು ಅಥವಾ ಸಾಧನೆಗಳನ್ನು ಕರುಣಿಸುವುದು) ಮತ್ತು 'ಸರ್ವಪಾಪಪ್ರಣಾಶನಂ' (ಎಲ್ಲಾ ಪಾಪಗಳನ್ನು ನಾಶಪಡಿಸುವುದು) ಎಂದು ಹೇಳಲಾಗಿರುವುದರಿಂದ ನಮ್ಮ ಎಲ್ಲ ಪಾಪ ಕಳೆಯುವ ಹಾಗೂ ಇಷ್ಟಾರ್ಥಗಳನ್ನು ಪಡೆಯುವ ಸಲುವಾಗಿ ಪಾರಾಯಣ ಮಾಡಬೇಕು.


ಪಠಿಸುವ ಕ್ರಮ: 

ವೈದಿಕ ಮಂತ್ರಗಳಿಗೆ ಕಠಿಣವಾದ ಸ್ವರಬದ್ಧ ನಿಯಮಗಳಿದ್ದರೆ, ಸ್ತೋತ್ರಗಳು ಭಕ್ತಿಪೂರ್ವಕವಾದ ಪದ್ಯರೂಪದ ರಚನೆಗಳಾಗಿವೆ (ಸ್ಮೃತಿ). ಇವುಗಳ ನಿಯಮಗಳು ಹೆಚ್ಚು ಸರಳ ಮತ್ತು ನಮ್ಯವಾಗಿರುವುದರಿಂದ, ಸರಿಯಾದ ಉಚ್ಚಾರಣೆಯನ್ನು ತಿಳಿದಿರುವ ಯಾರಾದರೂ ಇವುಗಳನ್ನು ಪಠಿಸಬಹುದಾಗಿದೆ. ಅಧ್ಯಾತ್ಮಿಕ ಮತ್ತು ಮಾನಸಿಕವಾಗಿ ಗರಿಷ್ಠ ಪ್ರಯೋಜನವನ್ನು ಪಡೆಯಲು, ಸರಸ್ವತಿ ಸ್ತೋತ್ರವನ್ನು ಪಠಿಸಬೇಕು.


ಹೆಚ್ಚಾಗಿ ವಸಂತ ಪಂಚಮಿ ಅಂದರೆ ಸರಸ್ವತೀ ದೇವಿಗೆ ಮೀಸಲಾದ ದಿನದಂದು ದೇವಿಯ ಹುಟ್ಟು ಹಬ್ಬವೆಂದು ವಿಶೇಷ ಭಕ್ತಿಯಿಂದ ಪಠಿಸಲಾಗುತ್ತದೆ.


ಸರಸ್ವತಿ ಸ್ತೋತ್ರ ಅಥವಾ ಅಗಸ್ತ್ಯ ಕೃತ ಸರಸ್ವತಿ ಕವಚ  ಪಾರಾಯಣಕ್ಕೆ ಮೊದಲು ಸ್ನಾನ ಮಾಡಿ, ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ. ಆಸನದ ಮೇಲೆ  ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು. ಬಿಳಿಯ ಅಥವಾ ಹಳದಿ ಬಣ್ಣದ ವಸ್ತ್ರಗಳನ್ನು ಧರಿಸುವುದರಿಂದ  ದೀಕ್ಷೆ ದೊರೆಯುತ್ತದೆ ಎಂಬ ನಂಬಿಕೆ ಇದೆ; ಏಕೆಂದರೆ ಬಿಳಿ ಬಣ್ಣವು ಶುದ್ಧತೆಯನ್ನು ಸೂಚಿಸಿದರೆ, ಹಳದಿ ಬಣ್ಣವು ಜ್ಞಾನ ಅಥವಾ ವಿವೇಕದ ಪ್ರತೀಕ ಹಾಗೂ ದೇವಿಯ ಪ್ರಿಯ ಬಣ್ಣಗಳಾಗಿವೆ.


ಸ್ತೋತ್ರ ಸಿದ್ಧಿಗಾಗಿ 'ಬ್ರಾಹ್ಮೀ ಮುಹೂರ್ತ' ಅಂದರೆ ಸೂರ್ಯೋದಯಕ್ಕೆ ಸುಮಾರು 96 ನಿಮಿಷಗಳ ಮೊದಲು ಅತ್ಯಂತ ಪ್ರಶಸ್ತವಾಗಿರುತ್ತದೆ.  ಅಷ್ಟು ಬೇಗ ಆಗದೇ ಹೋದರೂ  ಬೆಳಗಿನ ಶಾಂತ ಸಮಯದಲ್ಲಿ ಅಥವಾ ಅಧ್ಯಯನ ಅಥವಾ ಕಲಾತ್ಮಕ ಚಟುವಟಿಕೆಗಳನ್ನು ಪ್ರಾರಂಭಿಸುವ ಮೊದಲು ಪಠಿಸಬಹುದಾಗಿದೆ.


ಸರಸ್ವತಿ ದೇವಿಯ ಪಟ ಅಥವಾ ವಿಗ್ರಹವನ್ನು ಸ್ವಚ್ಛವಾದ ಸ್ಥಳದಲ್ಲಿ ಸ್ಥಾಪಿಸಿ ಜೊತೆಗೆ ಪುಸ್ತಕಗಳು, ಲೇಖನಿಗಳು, ನೋಟ್‌ಬುಕ್‌ಗಳು ಅಥವಾ ಸಂಗೀತ ವಾದ್ಯಗಳನ್ನು ಕೂಡ ದೇವಿಯ ಮುಂದಿಟ್ಟು ಪೂಜಿಸಿ ಪ್ರಾರ್ಥನೆಯೊಂದಿಗೆ ಆರಂಭಿಸಬೇಕು. ಪರಿಸರವನ್ನು ಶುದ್ಧೀಕರಿಸಲು ಮತ್ತು ಸಕಾರಾತ್ಮಕ ಶಕ್ತಿಯನ್ನು ಆಹ್ವಾನಿಸಲು ದೀಪವನ್ನು ತುಪ್ಪ ಅಥವಾ ಎಣ್ಣೆಯ ದೀಪ ಇಲ್ಲದೇ ಹೋದರೆ  ಧೂಪವನ್ನು ಬೆಳಗಿಸಬೇಕು. ನಿರ್ವಿಘ್ನವಾಗಿ ಸ್ತೋತ್ರ ಪಾರಾಯಣ ಮಾಡಲು ವಿನಾಯಕನನ್ನು ಸ್ತುತಿಸಿ  ನಂತರ ಸರಸ್ವತಿ ಸ್ತೋತ್ರ ಪಠಿಸಬೇಕು.


ಸಂಸ್ಕೃತ ಶಬ್ದಗಳನ್ನು ಸ್ಪಷ್ಟವಾಗಿ ಉಚ್ಚರಿಸಬೇಕು. ಪದಗಳ ಅರ್ಥ ಬದಲಾಗದಂತೆ, ಸಂಯುಕ್ತ ಪದಗಳನ್ನು ಸರಿಯಾಗಿ ವಿಭಜಿಸಿ ಹೇಳಬೇಕು. ಏಕಾಗ್ರತಾ ಪೂರ್ವಕ ಸ್ತೋತ್ರ ಪಠಣ ಮಾಡ ಬೇಕು. ಸ್ತೋತ್ರ ಪಠಿಸುವ ಮೊದಲು ಅಥವಾ ನಂತರ, ಇತರರ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು, ವೃಥಾ ಹರಟೆ ಹೊಡೆಯುವುದನ್ನು ಮಾಡಬಾರದು.


ಸರಸ್ವತಿ ಸ್ತೋತ್ರದ ನಿತ್ಯ ಪಠನೆಯಿಂದ  ವಿದ್ಯಾರ್ಥಿಗಳಿಗೆ ಏಕಾಗ್ರತೆ ಮತ್ತು ದೈವಿಕ ಅನುಗ್ರಹ ದೊರೆಯುತ್ತದೆ. ಉತ್ತಮ ವಿದ್ಯೆ ಕಲಿಯಲು ಬಯಸುವ ವಿದ್ಯಾರ್ಥಿಗಳು, ಸಾಧನೆ ಮಾಡುವ ವಿದ್ವಾಂಸರು,  ಮಕ್ಕಳಿಗೆ ಬೋಧನೆ ಮಾಡುವ ಶಿಕ್ಷಕರು ಮತ್ತು ಕಲಾರಾಧನೆಯನ್ನು ಮಾಡುವ ಕಲಾವಿದರು ಈ ಸ್ತೋತ್ರವನ್ನು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪ್ರಾರ್ಥನೆಯ ಸಮಯದಲ್ಲಿ ಪಠಿಸುತ್ತಾರೆ.


- ಮಾಧುರಿ ದೇಶಪಾಂಡೆ, ಬೆಂಗಳೂರು

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top