ಮಂಗಳೂರು: ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಪಿ.ಬಿ.ಹರೀಶ್ ರೈ ಅವರ ಧರ್ಮಪತ್ನಿ ಉಷಾಕುಮಾರಿ (56) ಅವರು ಅಸೌಖ್ಯದಿಂದ ಶನಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು, ಮಂಗಳೂರಿನ ಪ್ರತಿಷ್ಠಿತ ಉರ್ವ ಸೇಂಟ್ ಅಲೋಶಿಯಸ್ ಹೈಸ್ಕೂಲ್‌ನಲ್ಲಿ ಸುಮಾರು 26 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದರು. ಮಂಗಳೂರಿನ ಚಿನ್ಮಯ ಹೈಸ್ಕೂಲ್ ಹಾಗೂ ಉಳ್ಳಾಲದ ಭಾರತ್ ಹೈಸ್ಕೂಲ್‌ನಲ್ಲೂ ಸಹ ಅವರು ಕೆಲಕಾಲ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದರು.
ಮೃತರು ಪತಿ ಪಿ.ಬಿ.ಹರೀಶ್ ರೈ, ಒಬ್ಬ ಪುತ್ರಿ ಹಾಗೂ ಒಬ್ಬ ಪುತ್ರ ಸೇರಿದಂತೆ ಅಪಾರ ಬಂಧು-ಬಳಗವನ್ನು ಹಾಗೂ ಅಗಣಿತ ವಿದ್ಯಾರ್ಥಿಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ವಿವಿಧ ಸಂಘಟನೆಗಳು, ಪತ್ರಕರ್ತರು ಹಾಗೂ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.


