ರಂಗದ ಹಂಬಲ ಮತ್ತು ಅಕ್ಷರ ಯಾನ: ರಮೇಶ್ ಸುರ್ವೆ ಅವರ ಬದುಕು-ಸಾಧನೆ

Shreya Hegde
0


ನೂರು ಸಿನಿಮಾಗಳ ಕನಸು ಹೊತ್ತು ಬೆಂಗಳೂರಿಗೆ ಬಂದಿದ್ದೆ. ಆದರೆ, ನನಸಾಗಿದ್ದು ಒಂದೇ ಸಿನಿಮಾ — ಅದು 'ಮಂದಾಕಿನಿ'. ಕಥೆ, ಸಾಹಿತ್ಯ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಎಲ್ಲವೂ ನನ್ನದೇ ಆಗಿತ್ತು. ಸಿನಿಮಾ ನೋಡಿದವರು ಸುಮಾರು ಒಂದು ಸಾವಿರ ಜನ. ಚಿತ್ರದಲ್ಲಿ ಉತ್ತಮ ಮನರಂಜನೆ ಇತ್ತಾದರೂ ಅದೃಷ್ಟ ಕೈಕೊಟ್ಟಿತು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದವರು ಬಹಳಷ್ಟು ಜನ ಇರಬಹುದು. ನಾನು ಬರೆದ 'ಬಾನಿಗೆ ಭಾಸ್ಕರ ಚೆಂದ...' ಗೀತೆಗೆ 2008ರಲ್ಲಿ ನಂದಿತಾ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯನ ಪ್ರಶಸ್ತಿ ಬಂದಾಗ ಮನಸ್ಸಿಗೆ ಸಮಾಧಾನವಾಯಿತು ಎಂದು ರಮೇಶ್ ಸುರ್ವೆ ತಿಳಿಸುತ್ತಾರೆ. ಇವರು ನನಗೆ ಹಲವು ವರ್ಷಗಳಿಂದ ಸುಪರಿಚಿತರು. 'ಸುರ್ವೆ ಪತ್ರಿಕೆ' ಮತ್ತು 'ಇಂಜಿನಿಯರ್ ಡೈರಿ' ಎಂಬ ಎರಡು ಪತ್ರಿಕೆಗಳ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರನ್ನು ಸಿನಿಮಾ ರಂಗ ಕೈಹಿಡಿಯದಿದ್ದರೂ, ಬರವಣಿಗೆಯ ಕೈಯನ್ನು ಇವರು ಎಂದಿಗೂ ಬಿಡಲಿಲ್ಲ.


ರಮೇಶ್ ಸುರ್ವೆ ಅವರು ಮೇ 5, 1958 ರಂದು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಐತಿಹಾಸಿಕ ಮಹಾದೇವ ದೇವಾಲಯಕ್ಕೆ ಹೆಸರಾದ ಇಟಗಿ ಗ್ರಾಮದಲ್ಲಿ ಜನಿಸಿದರು. ಇವರ ಪಿಯುಸಿವರೆಗೆ ವಿದ್ಯಾಭ್ಯಾಸ ನಡೆದಿದ್ದು, ಕಲಾ ಪ್ರೇಮಕ್ಕೆ ಕುಟುಂಬದ ವಾತಾವರಣವೇ ಮುಖ್ಯ ಪ್ರೇರಣೆಯಾಗಿದೆ. ತಂದೆ ಮಾರುತಿರಾವ್ ಸುರ್ವೆ ಜೂನಿಯರ್ ಕಾಲೇಜು ಉಪನ್ಯಾಸಕರಾಗಿದ್ದರು. ಅಜ್ಜ ಗೋವಿಂದರಾವ್ ಸುರ್ವೆ ಕರಣಿಕರಾಗಿ ಕರಾರು ಹಾಗೂ ಆಸ್ತಿ ಪತ್ರ ಬರೆಯುವಲ್ಲಿ ಪರಿಣಿತರಾಗಿದ್ದರು. ಚಿಕ್ಕಪ್ಪ ಕೇಶವರಾವ್ ಭಜನಾ ಕಲಾವಿದರಾದರೆ, ಮಾವ ವಾಸುದೇವರಾವ್ ಬಯಲಾಟದಲ್ಲಿ ಆಂಜನೇಯನ ಪಾತ್ರ ಮಾಡುತ್ತಿದ್ದರು. ಪ್ರಾಚಾರ್ಯ ಸೂರ್ಯನಾರಾಯಣರಾವ್ ಅವರ ಪ್ರೋತ್ಸಾಹದಿಂದ ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಕಾಲಿಟ್ಟ ಸುರ್ವೆ ಅವರು, 'ಮೊರಾರ್ಜಿ ಸ್ವಾಗತ ಗೀತೆ' ಬರೆದು ವಾಚಿಸುವ ಮೂಲಕ ತಮ್ಮ ಸಾಹಿತ್ಯ ಯಾನ ಆರಂಭಿಸಿದರು. ದಿನಕರ ದೇಸಾಯಿ ಅವರ ಚುಟುಕುಗಳು ಇವರಿಗೆ ಅತ್ಯಂತ ಪ್ರಿಯವಾಗಿದ್ದು, ಆರಂಭದಲ್ಲಿ ಇವರ ಕವಿತೆಗಳು ದುಡಿಮೆ, ವಾಸವಿ, ವಿಶ್ವ ಪರ್ಯಟನೆ ಮತ್ತು ವಿನೋದವಾಣಿ ಪತ್ರಿಕೆಗಳಲ್ಲಿ ಪ್ರಕಟಗೊಂಡವು.


ರಂಗಭೂಮಿಯ ಕಡೆಗೆ ಒಲವು ತೋರಿದ ಇವರು 10 ನಿಮಿಷದ 'ಭೀಮ'ನ ಏಕಪಾತ್ರಾಭಿನಯದಲ್ಲಿ ಗದೆ ಎತ್ತಿ ಆರ್ಭಟಿಸಿದ್ದು, ಆ ಅಭಿನಯವು ಸುಮಾರು 85 ಪ್ರದರ್ಶನಗಳನ್ನು ಕಂಡಿತು. ತಮ್ಮ 18ನೇ ವಯಸ್ಸಿನಲ್ಲಿ ಸೇತು ಮಾಧವರಾವ್ ಹಂಜಕ್ಕಿ ಅವರ ಮಾರ್ಗದರ್ಶನದಲ್ಲಿ 'ಕುರುಕ್ಷೇತ್ರ' ನಾಟಕದಲ್ಲಿ ದ್ರೋಣಾಚಾರ್ಯನ ಪಾತ್ರ ನಿರ್ವಹಿಸಿದರು. ಆರಂಭದಲ್ಲಿ ಪ್ರಸಿದ್ಧ ಗುಬ್ಬಿ ಕಂಪನಿಯ ಜೊತೆ ಇವರ ಒಡನಾಟವಿತ್ತು. ನಟಿ ಶೃತಿ ಅವರ ತಾಯಿ ರಾಧಾ ರುಕ್ಮಿಣಿ ಅವರು ಆಗ 'ಲವಕುಶ' ಪಾತ್ರ ಮಾಡುತ್ತಿದ್ದರು. ಇವರ ರಂಗಾಸಕ್ತಿಯನ್ನು ಗಮನಿಸಿದ ಗುಬ್ಬಿ ವೀರಣ್ಣನವರು, ತಮ್ಮ ಕ್ಯಾಂಟಿನ್‌ನಲ್ಲಿ ಊಟ-ತಿಂಡಿ ನೀಡಿ ನಾಟಕ ನೋಡಲು ಪ್ರೋತ್ಸಾಹಿಸಿದರು. ಅಲ್ಲದೆ, ಕುಕನೂರಿನ ರಹಮಾನ್ ಕಂಪನಿ, ಮಹಾಂತೇಶ ಶಾಸ್ತ್ರಿಗಳ ಕಂಪನಿ, ಹಾರಾಪೂರ ರಾಮರಾವ್ ದೇಸಾಯಿ ಕಂಪನಿ, ಬನಶಂಕರಿ ನಾಟ್ಯ ಸಂಘ ಹಾಗೂ ಹುಮ್ನಾಬಾದ್ ಕಂಪನಿಗಳಲ್ಲಿ ಏಕದೃಶ್ಯ ಪಾತ್ರಗಳನ್ನು ನಿರ್ವಹಿಸಿದರು.


1977ರಲ್ಲಿ ಬೆಂಗಳೂರಿಗೆ ಆಗಮಿಸಿದ ಇವರು ಆದರ್ಶ ಫಿಲಂ ಇನ್‌ಸ್ಟಿಟ್ಯೂಟ್ ಸೇರಿದರು. ಆಗ ಬಿ.ವಿ. ಕಾರಂತರು ಮತ್ತು ಗಿರೀಶ್ ಕಾಸರವಳ್ಳಿ ಅವರು ಪ್ರಾಚಾರ್ಯರಾಗಿದ್ದರು. ಇಲ್ಲಿ ಇವರಿಗೆ ಗಿರೀಶ್ ಕಾರ್ನಾಡ್, ಪಿ. ಲಂಕೇಶ್, ಟಿ.ಎಸ್. ನಾಗಾಭರಣ, ಟಿ.ಎಸ್. ರಂಗ, ಜಿ.ವಿ. ಅಯ್ಯರ್, ಸುಂದರರಾಜ್, ಆರ್.ಟಿ. ರಮಾ ಮತ್ತು ರಾಜನ್-ನಾಗೇಂದ್ರ ಅವರಂತಹ ಚಿತ್ರರಂಗ ಹಾಗೂ ರಂಗಭೂಮಿಯ ದಿಗ್ಗಜರ ಪಾಠ ಹಾಗೂ ಒಡನಾಟ ದೊರೆಯಿತು.


ರಮೇಶ್ ಸುರ್ವೆ ಅವರು ಹಲವು ಯಶಸ್ವಿ ಹಾಸ್ಯ ನಾಟಕಗಳನ್ನು ರಚಿಸಿ ಅಭಿನಯಿಸಿದ್ದಾರೆ. 1978ರಲ್ಲಿ ಬೆಂಗಾಲಿ ನಾಟಕವನ್ನು ಕನ್ನಡಕ್ಕೆ ರೂಪಾಂತರಿಸಿ ಬರೆದ 'ಪರಮೇಶಿ ಪಂಗನಾಮ' ನಾಟಕ ರವೀಂದ್ರ ಕಲಾಕ್ಷೇತ್ರದಲ್ಲಿ 20 ಪ್ರದರ್ಶನಗಳನ್ನು ಕಂಡಿತು. ಇದರಲ್ಲಿ ಪ್ರಸಿದ್ಧ ಹಾಸ್ಯನಟ ವೈಜನಾಥ ಬಿರಾದಾರ್ ಜೊತೆಯಾಗಿ ನಟಿಸಿದ್ದರು. ಮೈಸೂರು ರಮಾನಂದ್, ವೈಜನಾಥ ಬಿರಾದಾರ್ ಮತ್ತು ಜಯಶ್ರೀ ಅವರೊಂದಿಗೆ ಅಭಿನಯಿಸಿದ 'ಕುಟುಂಬದಲ್ಲಿ ಕುರುಕ್ಷೇತ್ರ' ಹಾಗೂ 'ಜಲೀಲನ ಜಟಕಾ', 'ಕಿತಾಪತಿ ಕೃಷ್ಣಯ್ಯ' ಇವರ ಇತರ ಪ್ರಮುಖ ನಾಟಕಗಳು. ಹಾಸ್ಯವನ್ನೇ ಜೀವಳವಾಗಿಸಿಕೊಂಡು ರಚಿಸಿದ ಇವು ಜನಮನ್ನಣೆಗಳಿಸಿದವು. ಇದಲ್ಲದೆ, 30 ನಿಮಿಷಗಳ ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಏಕಪಾತ್ರಾಭಿನಯಗಳ ಸ್ಕ್ರಿಪ್ಟ್ ಬರೆದು ಅಭಿನಯಿಸಿದ್ದಾರೆ. ಛತ್ರಪತಿ ಶಿವಾಜಿ, ಕೆಂಪೇಗೌಡ ಮುಂತಾದ ವಿವಿಧ ಐತಿಹಾಸಿಕ ಪಾತ್ರಗಳನ್ನು ಧರಿಸಿ ಇವರು ನೀಡಿದ ಕಾರ್ಯಕ್ರಮಗಳ ಛಾಯಾಚಿತ್ರಗಳು ಇವರ ಆಲ್ಬಂನಲ್ಲಿ ಜೀವಂತವಾಗಿವೆ. ಇದು ರಮೇಶ್ ಸುರ್ವೆ ಅವರ ನಾಟಕ ಹಾಗೂ ಸಿನಿಮಾ ರಂಗದ ಕಿರುನೋಟ ಮಾತ್ರ. ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಇವರು ಮಾಡಿದ ಸಾಧನೆ ಇನ್ನೂ ಅಪಾರವಾಗಿದೆ.


-  ಗೊರೂರು ಅನಂತರಾಜು, ಹಾಸನ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top