ರಾಜ್ಯದ ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಸೇತುವೆ, ಜನರ ಸಮಸ್ಯೆಗಳನ್ನು ನಿವಾರಣೆ ಮಾಡುವುದಷ್ಟೇ ಅಲ್ಲ. ಬದಲಾಗಿ ಆಡಳಿತ ಯಂತ್ರವು ಜನಸಾಮಾನ್ಯರ ಕೆಲಸಗಳನ್ನು ಎಷ್ಟು ವೇಗವಾಗಿ ಮತ್ತು ಸ್ಪಷ್ಟವಾಗಿ ಮಾಡುತ್ತಿದೆ ಎಂಬುದು ಮುಖ್ಯವಾಗುತ್ತದೆ. ಇಂದು ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಎಂಬ ಫಲಕ ಕಾಣದಿದ್ದರೂ ಅಲ್ಲಿನ ಕೆಲಸದ ವಿಳಂಬ ನಮಗೆ ಗೋಚರಿಸುತ್ತಿದೆ. ಪ್ರತಿ ವರ್ಷ ಖಾಲಿಯಾಗುವ ಹುದ್ದೆಗಳನ್ನು ಆ ವರ್ಷವೇ ಭರ್ತಿ ಮಾಡದಿರುವುದು ಆಡಳಿತದ ಹಿನ್ನಡೆಗೆ ಮುಖ್ಯ ಕಾರಣವಾಗಿದೆ ಎಂದರೇನು ತಪ್ಪಾಗದು. ಯಾವುದೇ ಒಂದು ನಾಡಿನ ಅಭಿವೃದ್ಧಿಯ ಚಕ್ರ ಸುಸೂತ್ರವಾಗಿ ಉರುಳಬೇಕಾದರೆ ಅಲ್ಲಿನ ಆಡಳಿತ ಯಂತ್ರದಲ್ಲಿ ಸಾಕಷ್ಟು ಸಂಖ್ಯೆಯ ಸಿಬ್ಬಂದಿ ಇರುವುದು ಅನಿವಾರ್ಯ ಸಂಗತಿ. ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರತಿ ವರ್ಷ ಖಾಲಿ ಇರುವ ಹುದ್ದೆಗಳನ್ನು ದಶಕಗಳ ಕಾಲ ಭರ್ತಿ ಮಾಡದಿರುವುದು ವಿಷಾದಕರ.
ಹುದ್ದೆಗಳು ಖಾಲಿ ಇರುವುದರಿಂದ ಕೇವಲ ನಿರುದ್ಯೋಗ ಹೆಚ್ಚಾಗುವುದಲ್ಲದೆ, ಸೇವೆಯಲ್ಲಿರುವ ಸಿಬ್ಬಂದಿಯ ಮೇಲೆ ಕೆಲಸದ ಒತ್ತಡ ಹೆಚ್ಚಾಗಿ ಬೀರುತ್ತದೆ. ಇದು ಅಂತಿಮವಾಗಿ ಸಾರ್ವಜನಿಕರಿಗೆ ಸಿಗಬೇಕಾದ ಸೇವೆಯ ಗುಣಮಟ್ಟವನ್ನು ಕುಸಿಯುವಂತೆ ಮಾಡುವುದರಲ್ಲಿ ಅನುಮಾನವಿಲ್ಲ. ಪ್ರತಿ ವರ್ಷ ನಿವೃತ್ತಿಯಾಗುವ ನೌಕರರ ಸಂಖ್ಯೆಗೆ ಅನುಗುಣವಾಗಿ ಹೊಸಬರನ್ನು ನೇಮಕ ಮಾಡಿಕೊಂಡರೆ ಕೆಲಸ ಸರಾಗವಾಗಿರುತ್ತದೆ. ನಮ್ಮ ದೇಶದ ಅತಿ ದೊಡ್ಡ ಶಕ್ತಿಯೇ ಯುವಸಂಪತ್ತು. ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಪದವಿ ಮುಗಿಸಿ ಹೊರಬರುತ್ತಾರೆ. ಅವರಿಗೆ ಸರಿಯಾದ ಸಮಯಕ್ಕೆ ಉದ್ಯೋಗದ ಅವಕಾಶ ಸಿಗದಿರುವುದರಿಂದ ಹತಾಶೆಗೊಳಗಾಗುತ್ತಾರೆ. ಯುಪಿಎಸ್‌ಸಿ ಮಾದರಿಯಲ್ಲಿ ರಾಜ್ಯ ಮಟ್ಟದ ನೇಮಕಾತಿ ಸಂಸ್ಥೆಗಳೂ ಸಹ ಪ್ರತಿ ವರ್ಷ ನಿಗದಿತ ಸಮಯಕ್ಕೆ ಅಧಿಸೂಚನೆ ಹೊರಡಿಸಿ ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸುವ ಶಿಸ್ತು ರೂಢಿಸಿಕೊಳ್ಳಬೇಕು. ಇದರಿಂದ ಅಭ್ಯರ್ಥಿಗಳು ತಮ್ಮ ತಯಾರಿ ನಡೆಸಲು ಪೂರಕ ವಾತಾವರಣ ನಿರ್ಮಾಣವಾಗುತ್ತದೆ.
ಕೊನೆಯದಾಗಿ, ಹುದ್ದೆಗಳ ಭರ್ತಿ ಎಂಬುದು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಲ್ಲ. ಅದು ಲಕ್ಷಾಂತರ ಕುಟುಂಬಗಳ ಬದುಕಿನ ಪ್ರಶ್ನೆ. ಸರ್ಕಾರಗಳು ಆರ್ಥಿಕ ಹೊರೆಯ ನೆಪವೊಡ್ಡದೆ ದಕ್ಷ ಆಡಳಿತಕ್ಕಾಗಿ ಮತ್ತು ಯುವಜನತೆಯ ಭವಿಷ್ಯಕ್ಕಾಗಿ ಪ್ರತಿ ವರ್ಷ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ದೃಢ ಸಂಕಲ್ಪ ಮಾಡಬೇಕಿದೆ. ಸರ್ಕಾರ ಯುವಜನತೆಯ ಭವಿಷ್ಯದೊಂದಿಗೆ ಚೆಲ್ಲಾಟವಾಡುವುದು ಬೇಡದಂತಾಗಿದೆ.
ಲಕ್ಷಾಂತರ ಯುವಕ-ಯುವತಿಯರು ಹಗಲಿರುಳು ಅಭ್ಯಾಸ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿದ್ದಾರೆ. ಆದರೆ ವರ್ಷಾನುಗಟ್ಟಲೆ ಅಧಿಸೂಚನೆ ಹೊರಬರದೆ ಇದ್ದಾಗ ಅಥವಾ ಪರೀಕ್ಷೆ ನಡೆದರೂ ನೇಮಕಾತಿ ಪ್ರಕ್ರಿಯೆ ವರ್ಷಗಟ್ಟಲೆ ಎಳೆದಾಗ ಅಭ್ಯರ್ಥಿಗಳ ಆತ್ಮವಿಶ್ವಾಸ ಕುಸಿಯುತ್ತದೆ. ಸರ್ಕಾರಗಳು ಉಳಿತಾಯದ ಹೆಸರಿನಲ್ಲಿ ಹುದ್ದೆಗಳನ್ನು ಕಡಿತಗೊಳಿಸುವುದು ಅಥವಾ ಭರ್ತಿ ಮಾಡುವುದನ್ನು ಮುಂದೂಡುವುದು ಸರಿಯಲ್ಲ. ಸರಿಯಾದ ಸಮಯಕ್ಕೆ ಹುದ್ದೆಗಳ ಭರ್ತಿಯಾದರೆ ಮಾತ್ರ ಆಡಳಿತಕ್ಕೆ ಚೈತನ್ಯ ಬರುತ್ತದೆ. ಯುವಜನತೆಗೆ ಉದ್ಯೋಗ ನೀಡುವುದು ಸರ್ಕಾರದ ಜವಾಬ್ದಾರಿಯಷ್ಟೇ ಅಲ್ಲ, ಅದು ಸುಭದ್ರ ಸಮಾಜದ ಅಡಿಪಾಯವೂ ಹೌದು.
- ಗಂಗಾ ಅಮಾತೆಪ್ಪನವರ್,
ಬಾಗಲಕೋಟೆ


