ಶಿಕ್ಷಣದ ಜೊತೆಗೆ ರಾಜಕೀಯ ಜ್ಞಾನ ಬೆಳೆಸಿಕೊಳ್ಳಿ: ಪ್ರೊ. ಪಿ. ಎಲ್. ಧರ್ಮ

Shreya Hegde
0



ಮಂಗಳೂರು: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಾಮಾಜಿಕವಾಗಿಯೂ ತೊಡಗಿಸಿಕೊಂಡು ರಾಜಕೀಯ ಜ್ಞಾನವನ್ನೂ ಹೆಚ್ಚಿಸಿಕೊಳ್ಳಬೇಕಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಎಲ್. ಧರ್ಮ ಹೇಳಿದರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 2027ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಪರಿಷತ್ತನ್ನು ಉದ್ಘಾಟಿಸಿ ಮಾತನಾಡಿದರು.


ನಾಯಕನಾದವನು ಯಾವಾಗಲೂ ಇಡೀ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಬೇಕೇ ಹೊರತು, ವಿಭಜನೆ ಮಾಡಬಾರದು. ಹಾಗೆ ಮಾಡದರೆ ಆತ ನಾಯಕನಾಗುವ ಅರ್ಹತೆಯನ್ನು ಕಳೆದಕೊಳ್ಳುತ್ತಾನೆ. ಸಮಾಜದಲ್ಲಿ ಮನುಷ್ಯ ಮನುಷ್ಯನ ನಡುವೆ ಯಾವುದೇ ಘರ್ಷಣೆಗೆ ಎಡೆ ಮಾಡಿಕೊಡಬಾರದು. ಬದುಕಿನಲ್ಲಿ ದೊಡ ಕನಸನ್ನು ಕಂಡು ಅದನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಪರಿಶ್ರಮ ಪಡಬೇಕು. ವಿದ್ಯಾರ್ಥಿಗಳು ತಮ್ಮ ಆಲೋಚನೆಯಲ್ಲಿ ವೈವಿಧ್ಯತೆಯನ್ನು ಬೆಳಸಿಕೊಳ್ಳುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಶಿಕ್ಷಣ ನೆರವಾಗಬೇಕಿದೆ. ಸರ್ಕಾರದ ಯೋಜನೆಗಳನ್ನು ದುರುಪಯೋಗ ಪಡಿಸಿಕೊಳ್ಳದೇ ಸನ್ಮಾರ್ಗದಲ್ಲಿ ನಡೆಯುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ದಕ್ಷಿಣ ಕನ್ನಡ ಶಾಖೆಯ ಅಧ್ಯಕ್ಷ ಸಿ. ಎ. ಶಾಂತಾರಾಮ ಶೆಟ್ಟಿ, ವಿದ್ಯಾರ್ಥಿ ಪರಿಷತ್ ಬದುಕಿಗೆ ಉತ್ತಮ ಬುನಾದಿ ಹಾಕಿಕೊಡುತ್ತದೆ. ಭವಿಷ್ಯದಲ್ಲಿ ವಿದ್ಯಾರ್ಥಿಗಳು ಸಂಪತ್ತಿನಲ್ಲಿ ಸರಳತೆ, ಅಧಿಕಾರದಲ್ಲಿ ಸೌಮ್ಯತೆ ಹಾಗೂ ಕೋಪದಲ್ಲಿ ಮೌನವನ್ನು ಅಳವಡಿಸಿಕೊಳ್ಳಬೇಕಿದೆ. ಸರಳ ಸ್ವಭಾವವೇ ನಿಜವಾದ ನಾಯಕತ್ವದ ಗುಣ. ಮನುಷ್ಯನ ಪ್ರವೃತ್ತಿ ಆತನಿಗೆ ಮರ್ಯಾದೆ ತಂದುಕೊಡುವಂತಾಗಬೇಕು. ನಾಯಕತ್ವದ ಜೊತೆಗೆ ಶಿಕ್ಷಣ ಹಾಗೂ ಉತ್ತಮ ಆರೋಗ್ಯದ ಕಡೆಗೂ ಗಮನ ನೀಡಬೇಕಿದೆ. ಬದುಕಿನಲ್ಲಿ ಪರಿಶ್ರಮವಿಲ್ಲದೇ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದರು. 


ಮನವೀಯತೆ ಯಾವುದೇ ಜಾತಿ, ಧರ್ಮ, ಮತವೆಂದು ಭೇದ ಮಾಡುವುದಿಲ್ಲ. ಎಲ್ಲಾ ಅನುಭವಗಳ ಕಣಜವೇ ಸರ್ಕಾರಿ ಕಾಲೇಜುಗಳಾಗಿರುವುದರಿಂದ ವ್ಯಕ್ತಿಯ ನಿಜವಾದ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ ನಾಯಕ್, ಹಿರಿಯ ಸಾಧಕ ವಿದ್ಯಾರ್ಥಿಗಳು ಇಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಅವರನ್ನು ಅನುಸರಿಸುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಿದೆ. ನಿಮ್ಮದೇ ಆಸಕ್ತಿಗಳನ್ನು ಬೆನ್ನಟ್ಟಿಕೊಂಡು ಪರಿಶ್ರಮದಿಂದ ಸಮಾಜಕ್ಕೆ ಮಾದರಿಯಾಗಬೇಕಿದೆ. ಬದುಕಿನ ಎಲ್ಲಾ ಏಳು-ಬೀಳುಗಳಲ್ಲೂ ಸಮಚಿತ್ತದಿಂದ ಮುಂದೆ ಸಾಗಬೇಕು. ಆ ಮೂಲಕ ಕಾಲೇಜಿನ ಪ್ರತಿಷ್ಠೆ, ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕಿದೆ ಎಂದರು.


ಇದೇ ವೇಳೆ, ವಿದ್ಯಾರ್ಥಿ ಪರಿಷತ್ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲಾ ಪ್ರತಿನಿಧಿಗಳಿಗೆ ಪ್ರಾಂಶುಪಾಲರು ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು ಸೇರಿದಂತೆ ನಾನಾ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top