ಆಧುನಿಕತೆಯ ಭರಾಟೆಯಲ್ಲಿ ನಾವಿಂದು ನಮ್ಮದೇ ಆದ ಅಪರೂಪದ ಸಂಪ್ರದಾಯಗಳು ಹಾಗೂ ನೈಸರ್ಗಿಕ ಖುಷಿಯನ್ನು ಮರೆತು, ಯಾಂತ್ರಿಕ ಬದುಕಿಗೆ ಒಗ್ಗಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಇಂತಹ ಒತ್ತಡದ ಜೀವನ ಶೈಲಿಯಲ್ಲಿ ಹಿರಿಯರು ಮತ್ತು ಕಿರಿಯರು ತಮ್ಮ ಬಿಡುವಿನ ವೇಳೆಯಲ್ಲಿ ಸಾಂಪ್ರದಾಯಿಕ ಆಟಗಳನ್ನು ಆಡಿ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಲು ಧಾರವಾಡದ ಸನ್ಮತಿ ನಗರದ ಶ್ರೀಮತಿ ರೂಪಾ ವಸ್ತ್ರದ ಅವರು ವಿನೂತನ ಪ್ರಯೋಗ ಒಂದಕ್ಕೆ ಕೈಹಾಕಿದ್ದಾರೆ. ಈ ಕಾರ್ಯಕ್ಕೆ ಅವರ ಮಗ ಕೇದಾರ ಕೂಡ ಸಾಥ್ ನೀಡುತ್ತಿದ್ದಾನೆ.
ಬೆಂಗಳೂರಿನಲ್ಲಿ ನೆಲೆಸಿರುವ ತಮ್ಮ ಅಕ್ಕ ರಶ್ಮಿ ಅವರ ಪ್ರೇರಣೆಯಿಂದ ರೂಪಾ ಅವರು ಹಿಂದೆ ಪ್ರಚಲಿತದಲ್ಲಿದ್ದ ಆನೆಕಲ್ಲು, ಲಗೋರಿ, ಹಳಗುಣಿಮಣಿ (ಅಲಿಗುಳಿಮಣೆ), ಚೌಕಾಬಾರ, ನವಕಂಗಾರಿ, ಕುರಿ-ಹುಲಿ ಆಟ, ಟಾವರ್ ಆಫ್ ಬ್ರಹ್ಮ, ಕಪ್-ಬಾಲ್, ಯೋ-ಯೋ, ಡಾಮಿನೋಜ್, ಪಗಡೆ ಸೇರಿದಂತೆ ಸುಮಾರು 41 ಸಾಂಪ್ರದಾಯಿಕ ಆಟಗಳಿಗೆ ಬೇಕಾಗುವ ಸಾಮಗ್ರಿಗಳನ್ನು ಮರ, ರಟ್ಟು ಹಾಗೂ ಬಟ್ಟೆ ಬಳಸಿ ಸ್ವತಃ ತಯಾರಿಸಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಮನೆಯಲ್ಲಿಯೇ ಪ್ರತಿಯೊಬ್ಬರಿಗೂ ಈ ಆಟಗಳನ್ನು ಆಡಿಸುವ ಮೂಲಕ, ಎಲ್ಲರನ್ನೂ ಬಾಲ್ಯದ ಸವಿ ನೆನಪುಗಳ ಲೋಕಕ್ಕೆ ಕರೆದೊಯ್ಯುತ್ತಿದ್ದಾರೆ. ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ನೇರ ಆಟಗಳ ಮೂಲಕ ದೈಹಿಕ ಸದೃಢತೆ ಹಾಗೂ ಮಾನಸಿಕ ಶಾಂತಿ ತಂದುಕೊಡುವುದು ಮತ್ತು ಮರೆತುಹೋಗುತ್ತಿರುವ ಸಾಂಪ್ರದಾಯಿಕ ಆಟಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ರೂಪಾ ಅವರ ಮುಖ್ಯ ಸಾಮಾಜಿಕ ಕಳಕಳಿಯಾಗಿದೆ.
ಈ ಸಾಂಪ್ರದಾಯಿಕ ಆಟಗಳಿಂದ ಪ್ರೇರಿತರಾದ ಶ್ರೀಮತಿ ಸಂಯುಕ್ತಾ ಮಿಶ್ರಿಕೋಟಿ ಅವರು ಮಾತನಾಡಿ, "ಈ ಆಟಗಳು ನಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಿ, ಮನಸ್ಸಿಗೆ ಸಮಾಧಾನ ನೀಡುತ್ತವೆ. ಟಿವಿ ಮತ್ತು ಮೊಬೈಲ್‌ಗಳಿಂದ ದೂರವಿರಲು ಇದು ಉತ್ತಮ ಮಾರ್ಗ. ವಯಸ್ಸಾದ ನಂತರ ಮನೆಯಿಂದ ಹೊರಗೆ ಹೋಗಲಾಗದ ಸಂದರ್ಭದಲ್ಲಿ, ನಾವು ಕೂಡ ಇಲ್ಲೇ ಮಕ್ಕಳಂತೆ ಮಕ್ಕಳಾಗಿ ಎಲ್ಲರೊಡನೆ ಬೆರೆತು ಆಟ ಆಡುತ್ತೇವೆ. ಇದರಿಂದ ಬಾಲ್ಯದ ಸಂತೋಷ ಮರಳಿ ಸಿಕ್ಕಂತಾಗುತ್ತದೆ. ನಮ್ಮ ತಲೆಮಾರಿಗೆ ಈ ಆಟಗಳು ನಿಲ್ಲಬಾರದು, ಮುಂದಿನ ಪೀಳಿಗೆಗೂ ತಲುಪಬೇಕು. ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಸಹೋದರಿ ರೂಪಾ ಅವರಿಗೆ ಅಭಿನಂದನೆಗಳು" ಎಂದು ತಮ್ಮ ಆಶಯ ವ್ಯಕ್ತಪಡಿಸಿದರು. ಅಲ್ಲದೆ, ತಾವು ತಮ್ಮ ಮಹಿಳಾ ಮಂಡಳದ ಹತ್ತು ಸದಸ್ಯರೊಂದಿಗೆ ಪ್ರತಿದಿನ ಇಲ್ಲಿಗೆ ಬಂದು ಆಟವಾಡಿ ದಿನದ ಬೇಸರವನ್ನು ಮರೆಯುತ್ತಿರುವುದಾಗಿ ತಿಳಿಸಿದರು.
ಈ ಪ್ರತಿಯೊಂದು ಸಾಂಪ್ರದಾಯಿಕ ಆಟವೂ ವಿಭಿನ್ನವಾಗಿದ್ದು, ಮಕ್ಕಳ ಜ್ಞಾಪಕಶಕ್ತಿ, ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗಿವೆ. ವೈಜ್ಞಾನಿಕ ತಳಹದಿಯ ಮೇಲೆ ರೂಪುಗೊಂಡಿರುವ ಈ ಆಟಗಳಿಂದ ಕೈ, ಕಣ್ಣು, ಕಾಲು ಹಾಗೂ ಮನಸ್ಸು ಕ್ರಿಯಾಶೀಲವಾಗಿರುತ್ತವೆ. ಆರೋಗ್ಯಕರ ಬೆಳವಣಿಗೆಗೆ ಈ ‘ಸಾಂಪ್ರದಾಯಿಕ ಆಟಗಳ ಮನೆ’ ನೆಮ್ಮದಿಯ ತಾಣವಾಗಿದೆ. ಈಗಾಗಲೇ ಅನೇಕ ಮಕ್ಕಳು ಮತ್ತು ಹಿರಿಯರು ಇಲ್ಲಿಗೆ ಬಂದು ಆಟಗಳನ್ನು ಕಲಿತು ಸಂತಸ ಪಟ್ಟಿದ್ದಾರೆ.
ನಮ್ಮ ದೇಶದ ಸಾಂಪ್ರದಾಯಿಕ ಆಟಗಳು ಉಳಿಯಬೇಕು ಎಂಬ ಉದ್ದೇಶದಿಂದ ರಶ್ಮಿ ಮತ್ತು ರೂಪಾ ಸಹೋದರಿಯರು ಮಾಡುತ್ತಿರುವ ಈ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಲು, ನಾನು ಸ್ವಯಂಪ್ರೇರಿತನಾಗಿ ಅವರ ಮನೆಗೆ ಭೇಟಿ ನೀಡಿ ಈ ಲೇಖನವನ್ನು ಬರೆಯುತ್ತಿದ್ದೇನೆ. ಹಿರಿಯರು ಮತ್ತು ಕಿರಿಯರೊಂದಿಗೆ ರೂಪಾ ಅವರು ಮನೆಯವರಂತೆ ಬೆರೆತು ಆಟ ಆಡಿಸುವುದನ್ನು ನೋಡಿ ನನಗೂ ಅಪಾರ ಸಂತೋಷವಾಯಿತು. ನೀವು ಒಮ್ಮೆ ಈ ಸಾಂಪ್ರದಾಯಿಕ ಆಟಗಳ ನೆಮ್ಮದಿಯ ತಾಣಕ್ಕೆ ಭೇಟಿ ನೀಡಿ, ಬಾಲ್ಯದ ಆನಂದವನ್ನು ಮರಳಿ ಪಡೆಯಿರಿ ಎಂಬುದೇ ನಮ್ಮ ಆಶಯ.
- ಚಿದಂಬರ ಪಿ. ನಿಂಬರಗಿ
ಶಿರೋಳ-ಧಾರವಾಡ
