ತೆಂಕನಿಡಿಯೂರು: ಹಳೆಗನ್ನಡ ಸಾಹಿತ್ಯಕ್ಕೆ ವಿಶಾಲವಾದ ವ್ಯಾಪ್ತಿಯಿದೆ. ಕೇವಲ ಪಠ್ಯವನ್ನು ಹಿಡಿದು ಕಂಠಪಾಠ ಮಾಡುವುದರಿಂದ ಹಳೆಗನ್ನಡದ ಓದು ಪೂರ್ಣವಾಗುವುದಿಲ್ಲ. ಅದರಲ್ಲಿರುವ ಅರ್ಥವನ್ನು ಮೀರಿ ಅಧ್ಯಯನಶೀಲವಾಗಿ ಓದುವ ಅಗತ್ಯವಿದೆ. ಕವಿಯ ಕೃತಿಯಲ್ಲಿ ನೇರವಾಗಿ ಕಾಣಿಸದಿರುವ ಅಂಶಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಹಳೆಗನ್ನಡವನ್ನು ಅರಿವಿನ ಓದಾಗಿಸಬೇಕು ಎಂದು ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ರವಿರಾಜ ಶೆಟ್ಟಿ ಅಭಿಪ್ರಾಯಪಟ್ಟರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ತೆಂಕನಿಡಿಯೂರು ಇಲ್ಲಿ ಕನ್ನಡ ವಿಭಾಗ ಹಾಗೂ IQAC ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಕಬ್ಬದುಳುಮೆ ಹಳೆಗನ್ನಡ ಕಾವ್ಯದ ಓದು ಕಮ್ಮಟ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾಹಿತ್ಯವನ್ನು ವರ್ತಮಾನದೊಂದಿಗೆ ಮುಖಾಮುಖಿಯಾಗಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಪುರಾಣದ ಕಥೆಗಳಲ್ಲಿರುವ ಪಾತ್ರಗಳನ್ನು ವರ್ತಮಾನದ ಮನುಷ್ಯರೊಂದಿಗೆ ಹೋಲಿಸಿ, ಅವುಗಳ ಆಶಯಗಳನ್ನು ಇಂದಿನ ಬದುಕಿನ ಸಂದರ್ಭದಲ್ಲಿ ಅರ್ಥೈಸಿಕೊಳ್ಳುವ ಬಗೆಯನ್ನು ಅರಿಯಬೇಕು.ನಮ್ಮೊಳಗಿನ ‘ಅರಿವಿನ ಕಣ್ಣು’ ತೆರೆದಾಗ ಮಾತ್ರ ಇಂತಹ ಓದು ಸಾಧ್ಯ ಪಂಪನು ಜೈನ ಧರ್ಮದ ಕವಚವನ್ನು ಬದಿಗೆ ಸರಿಸಿ ಕಾವ್ಯವನ್ನು ರಚಿಸಿದ ಕವಿ. ಕನ್ನಡ ಸಾಹಿತ್ಯ ಲೋಕಕ್ಕೆ ಕವಿರಾಜಮಾರ್ಗ ಉದಾತ್ತವಾದ ಕೊಡುಗೆಯನ್ನು ನೀಡಿದೆ ಎಂದರು. ಪ್ರಸ್ತಾವಿಕ ನುಡಿಗಳನ್ನಾಡಿದ ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ರತ್ನಮಾಲ ಅವರು ‘ಕಬ್ಬದುಳುಮೆ’ ಕಮ್ಮಟದ ಉದ್ದೇಶ ಮತ್ತು ಆಶಯಗಳನ್ನು ವಿವರಿಸಿದರು. ಹಳೆಗನ್ನಡ ಕಾವ್ಯವನ್ನು ಸರಳವಾಗಿ ಓದಿ ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು, ಮತ್ತು ಅವರಲ್ಲಿ ಆತ್ಮ ವಿಶ್ವಾಸವನ್ನು ತುಂಬುವುದು ಕಮ್ಮಟದ ಪ್ರಮುಖ ಆಶಯವಾಗಿದೆ ಎಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ನಿತ್ಯಾನಂದ ವಿ ಗಾಂವಕರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ನಾತಕೋತ್ತರ ವಿಭಾಗದ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಶ್ರೀಧರ್ ಭಟ್ ಹಾಗೂ ಕನ್ನಡ ವಿಭಾಗದ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಮಾರುತಿ ಅವರು ಸ್ವಾಗತಿಸಿದರು. ಉಪನ್ಯಾಸಕಿ ಅರ್ಚನಾ ಅವರು ವಂದಿಸಿದರು. ಉಪನ್ಯಾಸಕಿ ಶರಿತಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.


