ಮಂಗಳೂರಿನಲ್ಲಿ ‘ಪಶುಪಾಲನಾ ಭವನ’ ನೂತನ ಕಟ್ಟಡ ಉದ್ಘಾಟನೆ

Upayuktha
0

ಮಂಗಳೂರು: ನಗರದ ಜೈಲ್ ರಸ್ತೆ, ಕೊಡಿಯಾಲ್ಬೈಲ್‌ನಲ್ಲಿ ನೂತನವಾಗಿ ನಿರ್ಮಿಸಲಾದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು (ಆಡಳಿತ) ಅವರ ಕಚೇರಿ ‘ಪಶುಪಾಲನಾ ಭವನ’ ನೂತನ ಕಟ್ಟಡವನ್ನು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಸಿ. ಪುಟ್ಟರಂಗ ಶೆಟ್ಟಿ ಅವರು ಸೆ.17ರಂದು ಉದ್ಘಾಟಿಸಿದರು.


ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಜ್ ಮತ್ತು ವಕ್ಫ್ ಸಚಿವರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಫರೀದ್, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹೀದ್ ತೆಕ್ಕಿಲ್, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಲವೀನಾ ಪಿಂಟೋ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ರವಿರಾಜ ಶೆಟ್ಟಿ ಸೇರಿದಂತೆ ಇಲಾಖೆಯ ಉನ್ನತ ಅಧಿಕಾರಿಗಳು, ರೈತರು, ಪಶುಸಖಿಯರು, ಪಶುವೈದ್ಯರು, ಇಲಾಖೆಯ ಅಧಿಕಾರಿ–ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಮಾತನಾಡಿದ ಯು.ಟಿ. ಖಾದರ್ ಫರೀದ್, ಮಾನವರಂತೆ ಪ್ರಾಣಿಗಳಿಗೂ ಈ ನೆಲದಲ್ಲಿ ಬದುಕುವ ಸಂಪೂರ್ಣ ಹಕ್ಕು ಇದೆ. ಅವುಗಳ ಆರೈಕೆ ಮತ್ತು ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಇಲಾಖೆಯಿಂದ ರೈತರಿಗೆ ಉತ್ತಮ ಸೇವೆ ದೊರೆಯಲಿ ಎಂದು ಆಶಿಸಿದರು.


ಅತ್ಯಗತ್ಯವಾಗಿದ್ದ ಸುಸಜ್ಜಿತ ಕಚೇರಿ ಕಟ್ಟಡದ ನಿರ್ಮಾಣಕ್ಕೆ ಕಾರಣರಾದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ (ಆಡಳಿತ) ಡಾ. ಅರುಣ್‌ಕುಮಾರ್ ಶೆಟ್ಟಿ ಎನ್. ಅವರನ್ನು ಶ್ಲಾಘಿಸಿದ ಅವರು, ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಅಭಿನಂದನೆ ಸಲ್ಲಿಸಿದರು.


ಸಚಿವ ಸಿ. ಪುಟ್ಟರಂಗ ಶೆಟ್ಟಿ ಮಾತನಾಡಿ, ಸರ್ಕಾರದ ವತಿಯಿಂದ ಸಂಚಾರಿ ಪಶುಚಿಕಿತ್ಸಾ ಘಟಕಗಳ ಮೂಲಕ ರೈತರ ಮನೆ ಬಾಗಿಲಿಗೆ ಪಶುವೈದ್ಯಕೀಯ ಸೇವೆ ಒದಗಿಸಲಾಗುತ್ತಿದೆ. ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ₹5ರಂತೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಜಾನುವಾರುಗಳನ್ನು ವಿವಿಧ ರೋಗಗಳಿಂದ ರಕ್ಷಿಸಲು ನಿಯಮಿತವಾಗಿ ಲಸಿಕಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.


ಅಗತ್ಯವಿರುವ ಕಡೆಗಳಲ್ಲಿ ನೂತನ ಪಶುವೈದ್ಯಕೀಯ ಸಂಸ್ಥೆಗಳನ್ನು ಸ್ಥಾಪಿಸುವುದರ ಜೊತೆಗೆ ಹೊಸ ಕಟ್ಟಡಗಳ ನಿರ್ಮಾಣಕ್ಕೂ ಆದ್ಯತೆ ನೀಡಲಾಗುತ್ತಿದೆ. ಜಾನುವಾರುಗಳ ಆಕಸ್ಮಿಕ ಮರಣದಿಂದ ರೈತರಿಗೆ ಉಂಟಾಗುವ ಆರ್ಥಿಕ ನಷ್ಟವನ್ನು ಪರಿಹರಿಸಲು ‘ಅನುಗ್ರಹ’ ಯೋಜನೆಯಡಿ ಪರಿಹಾರಧನ ಪಾವತಿಸಲಾಗುತ್ತಿದೆ. ಜಾನುವಾರುಗಳ ಮೇವಿನ ಬೇಡಿಕೆ ಪೂರೈಸಲು ಮೇವಿನ ಮಿನಿಕಿಟ್‌ಗಳನ್ನು ವಿತರಿಸಲಾಗುತ್ತಿದೆ ಎಂದರು.


ಜಾನುವಾರು ರೋಗಗಳ ಶೀಘ್ರ ಪತ್ತೆಗಾಗಿ ವಿವಿಧೆಡೆ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದ್ದು, ಗೋವುಗಳ ರಕ್ಷಣೆಗಾಗಿ ಸರ್ಕಾರಿ ಗೋಶಾಲೆಗಳಲ್ಲಿ ನಿರ್ಗತಿಕ, ರೋಗಪೀಡಿತ, ವಯಸ್ಸಾದ ಹಾಗೂ ಅನುತ್ಪಾದಕ ಗೋವುಗಳ ಸಾಕಣೆ ಮಾಡಲಾಗುತ್ತಿದೆ. ಖಾಸಗಿ ಗೋಶಾಲೆಗಳಿಗೂ ಆರ್ಥಿಕ ನೆರವು ನೀಡಲಾಗುತ್ತಿದೆ. ಹೊಸ ಪಶುವೈದ್ಯಕೀಯ ಕಾಲೇಜುಗಳನ್ನು ತೆರೆಯುವ ಕಾರ್ಯವೂ ನಡೆಯುತ್ತಿದೆ. ರೈತರಿಗೆ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಸಚಿವರು ಹೇಳಿದರು.


ಕಾರ್ಯಕ್ರಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ (ಆಡಳಿತ) ಡಾ. ಅರುಣ್‌ಕುಮಾರ್ ಶೆಟ್ಟಿ ಎನ್. ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ರಹ್ಮಾವರ ತಾಲೂಕಿನ ಮುಖ್ಯ ಪಶುವೈದ್ಯ ಅಧಿಕಾರಿ (ಆಡಳಿತ) ಡಾ. ಉದಯಕುಮಾರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top