ಮಂಗಳೂರಿನ ಸಚಿವ ಸಂಪುಟ ಸಭೆಯಲ್ಲಿ ಅಡಿಕೆ ಬೆಳೆಗಾರರ ಪರ ಮಹತ್ವದ ನಿರ್ಧಾರ ಕೈಗೊಳ್ಳಲಿ

Shreya Hegde
0

 ₹5 ಲಕ್ಷ ಬಡ್ಡಿರಹಿತ ಬೆಳೆ ಸಾಲ, ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು; ‘ಅಡಿಕೆ ಜೈವಿಕ ಆರ್ಥಿಕತೆ ಮಿಷನ್–2035’ ಘೋಷಣೆಗೆ ಆಗ್ರಹ‌



ಮಂಗಳೂರು : ಕರಾವಳಿ ಭಾಗದ ಜನರ ಕಷ್ಟ–ಸುಖಗಳನ್ನು ಹತ್ತಿರದಿಂದ ಅರಿತು, ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಉದ್ದೇಶದಿಂದ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 18ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಡಿಕೆ ಬೆಳೆಗಾರರು ಹಾಗೂ ಕೃಷಿಕರ ಹಿತದೃಷ್ಟಿಯಿಂದ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಆಗ್ರಹಿಸಿದೆ.


ಕರಾವಳಿ ಮತ್ತು ಮಲೆನಾಡು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಗ್ರಾಮೀಣ ಆರ್ಥಿಕತೆಯಲ್ಲಿ ಅಡಿಕೆ ಪ್ರಮುಖ ವಾಣಿಜ್ಯ ಬೆಳೆಯಾಗಿದೆ.ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಆರ್ಥಿಕ ಬೆಳೆಯೂ ಆಗಿದ್ದು, ರಾಜ್ಯದ  ಲಕ್ಷಾಂತರ ಕೃಷಿಕ ಕುಟುಂಬಗಳು ಅಡಿಕೆ ಕೃಷಿಯನ್ನು ಅವಲಂಬಿಸಿವೆ. ಆದರೆ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಚರ್ಚೆಗಳು, ಅಡಿಕೆ ತೋಟಗಳಲ್ಲಿ ಕಂಡುಬರುವ ವಿವಿಧ ರೋಗಗಳು, ವಿವಿಧ ರಾಜ್ಯಗಳಲ್ಲಿ ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳ ಮೇಲಿನ ನಿರ್ಬಂಧ, ಮಾರುಕಟ್ಟೆಯ ಅನಿಶ್ಚಿತತೆ, ಹೆಚ್ಚುತ್ತಿರುವ ಉತ್ಪಾದನಾ ಮತ್ತು ಕಾರ್ಮಿಕ ವೆಚ್ಚ ಸೇರಿದಂತೆ ಹಲವು ಸವಾಲುಗಳನ್ನು ಬೆಳೆಗಾರರು ಎದುರಿಸುತ್ತಿದ್ದಾರೆ. ದಶಕಗಳಿಂದ ಅಡಿಕೆ ಕೃಷಿಯನ್ನೇ ಅವಲಂಬಿಸಿರುವ ರೈತರು ತಕ್ಷಣವೇ ಬೇರೆ ಕೃಷಿಗೆ ಬದಲಾಗುವುದು ಸಾಧ್ಯವಿಲ್ಲ. ಆದ್ದರಿಂದ ಅಡಿಕೆ ಕೃಷಿಯ ರಕ್ಷಣೆಯ ಜೊತೆಗೆ ಅಡಿಕೆಯ ಪರ್ಯಾಯ ಬಳಕೆ, ಮೌಲ್ಯವರ್ಧನೆ, ವೈಜ್ಞಾನಿಕ ಸಂಶೋಧನೆ ಮತ್ತು ಕೈಗಾರಿಕಾ ಬಳಕೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದು ಅಗತ್ಯ ಎಂದು ಅಡಿಕೆ ಬೆಳೆಗಾರರ ಸಂಘ ಅಭಿಪ್ರಾಯಪಟ್ಟಿದೆ.


₹5 ಲಕ್ಷ ಬಡ್ಡಿರಹಿತ ಬೆಳೆ ಸಾಲ ವಾಸ್ತವದಲ್ಲಿ ಸಿಗಲಿ :  ರಾಜ್ಯ ಸರ್ಕಾರವು ಕೃಷಿಕರಿಗೆ ₹5 ಲಕ್ಷದವರೆಗೆ ಬಡ್ಡಿರಹಿತ ಬೆಳೆ ಸಾಲ ನೀಡುವುದಾಗಿ ಘೋಷಿಸಿದ್ದರೂ, ಹಲವು ಸಹಕಾರಿ ಸಂಘಗಳಲ್ಲಿ ಇನ್ನೂ ₹3 ಲಕ್ಷಕ್ಕಿಂತ ಹೆಚ್ಚಿನ ಬೆಳೆ ಸಾಲ ದೊರೆಯುತ್ತಿಲ್ಲ. ಹೀಗಾಗಿ ಸರ್ಕಾರದ ಘೋಷಣೆಯಂತೆ ಅಡಿಕೆ ಸೇರಿದಂತೆ ಎಲ್ಲ ಅರ್ಹ ಕೃಷಿಕರಿಗೆ ₹5 ಲಕ್ಷದವರೆಗೆ ಬಡ್ಡಿರಹಿತ ಬೆಳೆ ಸಾಲ ದೊರೆಯುವಂತೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಂಘ ಒತ್ತಾಯಿಸಿದೆ.


ಅಡಿಕೆ ಕೃಷಿಯಲ್ಲಿ ಎಲೆಚುಕ್ಕಿ ರೋಗ ಹಾಗೂ ಸಂಪಾಜೆ ಸೇರಿದಂತೆ ಸುಮಾರು 10 ಗ್ರಾಮಗಳಲ್ಲಿ ಹಳದಿ ಎಲೆರೋಗ ಬಾಧಿಸಿ, ಕೃಷಿಕರು ಕಂಗಾಲಾಗಿದ್ದಾರೆ. ಹೀಗಾಗಿ ತೀವ್ರ ಬೆಳೆಕುಸಿತವಾಗಿದ್ದು ಇದರಿಂದ ರೈತ ಪಾರಾಗಲು ರಾಜ್ಯ ಮತ್ತು ಕೇಂದ್ರ ಸರಕಾರ ಜಂಟಿಯಾಗಿ ಒಂದು ಬಾರಿ ರೈತರ ಬೆಳೆಸಾಲ ಮನ್ನಾ ಮಾಡಬೇಕು. ರಾಜ್ಯ ಸರಕಾರ 3% ಬಡ್ಡಿದರದಲ್ಲಿ ನೀಡಿದ ದೀರ್ಘಾವಧಿ ಕೃಷಿ ಸಾಲದ ಬಡ್ಡಿ ಮನ್ನಾ ಮಾಡಬೇಕು. ಅಡಿಕೆ ಹಾಗೂ ತೆಂಗು ಬೆಳೆಯಲ್ಲಿ ಈಚೆಗೆ ಕಾಡುಪ್ರಾಣಿಗಳು ಹಾವಳಿ ಹೆಚ್ಚಾಗಿದೆ. ಬೆಳೆ ರಕ್ಷಣೆಗೆ ಇಂದು ಕೋವಿ ಅನಿವಾರ್ಯವಾಗಿದೆ. ಆದರೆ ಇಂದು ಕೋವಿ ಲೈಸನ್ಸ್‌ ರಿನ್ಯೂವಲ್‌ ಸಮಸ್ಯೆಯಾಗಿದೆ. ಈ ಬಗ್ಗೆ ತಕ್ಷಣದ ಪರಿಹಾರ ಮಾರ್ಗಗಳು ಬೇಕಾಗಿದೆ. ಮಲೆನಾಡು ತಪ್ಪಲು ಭಾಗದಲ್ಲಿ ಈಗ ಕಸ್ತೂರಿ ರಂಗನ್‌ ವರದಿಯ ಆತಂಕ ಬಹುತೇಕ ಕೃಷಿಕರಲ್ಲಿದೆ. ಹೀಗಾಗಿ ಈ ಆತಂಕ ನಿವಾರಣೆಗೆ ತಕ್ಷಣ ಪರಿಹಾರ ಮಾರ್ಗ, ನಿರ್ಧಾರಗಳನ್ನು ಸರ್ಕಾರ ಪ್ರಕಟ ಮಾಡಬೇಕಿದೆ. ಇದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು.


ಅಡಿಕೆಯ ಪರ್ಯಾಯ ಬಳಕೆಗೆ ಸರ್ಕಾರದ ಅಧ್ಯಯನ ಅಗತ್ಯ :  ಅಡಿಕೆಯ ಬಳಕೆಯ ಕುರಿತು ನಡೆಯುತ್ತಿರುವ ಆರೋಗ್ಯ ಸಂಬಂಧಿತ ಚರ್ಚೆಗಳು ಮತ್ತು ವಿವಿಧ ರಾಜ್ಯಗಳಲ್ಲಿನ ನಿರ್ಬಂಧಗಳಿಂದಾಗಿ ಬೆಳೆಗಾರರಲ್ಲಿ ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅಡಿಕೆಯ ಆಹಾರೇತರ, ಕೈಗಾರಿಕಾ, ಜೈವಿಕ ಹಾಗೂ ಇತರ ಮೌಲ್ಯವರ್ಧಿತ ಬಳಕೆಗಳ ಕುರಿತು ಸರ್ಕಾರದ ವತಿಯಿಂದ ಸಮಗ್ರ ವೈಜ್ಞಾನಿಕ ಅಧ್ಯಯನ ನಡೆಸಬೇಕು ಎಂದು ಸಂಘ ಆಗ್ರಹಿಸಿದೆ.


ಅಡಿಕೆ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಕುರಿತು ಸರ್ಕಾರದ ವತಿಯಿಂದ ನಡೆದಿರುವ ಅಧ್ಯಯನಗಳ ಸಂಪೂರ್ಣ ವಿವರಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು. ವಿಧಾನಮಂಡಲದ ಚರ್ಚೆಗಳಲ್ಲಿ ಉಲ್ಲೇಖವಾಗಿರುವ ಅಧ್ಯಯನದ ಸಂಪೂರ್ಣ ವೈಜ್ಞಾನಿಕ ವಿವರ, ಅಧ್ಯಯನ ವಿಧಾನ, ಫಲಿತಾಂಶ ಮತ್ತು ನಿರ್ಣಯಗಳನ್ನು ಬಹಿರಂಗಪಡಿಸಬೇಕು ಎಂದು ಸಂಘ ಮನವಿ ಮಾಡಿದೆ.


ಅಡಿಕೆಯ ಪ್ರತಿಯೊಂದು ವಿಭಾಗಕ್ಕೂ ವೈಜ್ಞಾನಿಕ ಮೌಲ್ಯ ಸೃಷ್ಟಿಸಬೇಕು :  ಅಡಿಕೆಯನ್ನು ಕೇವಲ ಕಚ್ಚಾ ಕೃಷಿ ಉತ್ಪನ್ನವಾಗಿ ನೋಡುವ ಬದಲು, ಅಡಿಕೆ, ಸಿಪ್ಪೆ, ಹಾಳೆ, ಸೋಗೆ ಹಾಗೂ ಇತರ ಜೈವಿಕ ಉಳಿಕೆಗಳನ್ನು ನವೀಕರಿಸಬಹುದಾದ ಜೈವಿಕ ಸಂಪನ್ಮೂಲವಾಗಿ ಪರಿಗಣಿಸಿ, ಅವುಗಳಿಗೆ ಹೊಸ ವೈಜ್ಞಾನಿಕ ಮತ್ತು ಕೈಗಾರಿಕಾ ಮೌಲ್ಯ ಸೃಷ್ಟಿಸುವ ನೀತಿ ರೂಪಿಸಬೇಕು ಎಂದು ಸಂಘ ಹೇಳಿದೆ. ಈ ಉದ್ದೇಶಕ್ಕಾಗಿ “ಕರ್ನಾಟಕ ಅಡಿಕೆ ಜೈವಿಕ ಆರ್ಥಿಕತೆ, ಮೌಲ್ಯವರ್ಧನೆ ಮತ್ತು ಪರ್ಯಾಯ ಬಳಕೆ ಮಿಷನ್–2035” ಸ್ಥಾಪಿಸಬೇಕು. ಮಂಗಳೂರಿನಲ್ಲಿ ಅಡಿಕೆ ಜೈವಿಕ ಆರ್ಥಿಕತೆ, ಅಡಿಕೆಯ ನ್ಯಾನೋ ತಂತ್ರಜ್ಞಾನ ಮತ್ತು ಸುಧಾರಿತ ವಸ್ತುಗಳ ಕುರಿತು ರಾಷ್ಟ್ರೀಯ ಮಟ್ಟದ ವಿಶೇಷ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಎಂದು ಆಗ್ರಹಿಸಿದೆ.


ಅಡಿಕೆಯ ಜೈವಿಕ ಉಳಿಕೆಗಳಿಂದ ಸುಧಾರಿತ ಇಂಗಾಲ ಆಧಾರಿತ ವಸ್ತುಗಳು, ನ್ಯಾನೋ ಸೆಲ್ಯುಲೋಸ್, ಜೈವಿಕ ಇಂಧನ, ಜೈವಿಕ ಇದ್ದಿಲು, ಜೈವಿಕ ಇಂಧನ ಹಾಗೂ ಜೈವಿಕವಾಗಿ ಕರಗುವ ಉತ್ಪನ್ನಗಳ ಅಭಿವೃದ್ಧಿಗೆ ಸಂಶೋಧನೆ ನಡೆಸಬೇಕು. ಪ್ರಯೋಗಾಲಯದಲ್ಲಿ ಯಶಸ್ವಿಯಾಗುವ ತಂತ್ರಜ್ಞಾನಗಳನ್ನು ಕೈಗಾರಿಕಾ ಉತ್ಪಾದನೆಯ ಹಂತಕ್ಕೆ ಕೊಂಡೊಯ್ಯಲು ಅಡಿಕೆ ನವೋದ್ಯಮ ಮತ್ತು ತಂತ್ರಜ್ಞಾನ ವರ್ಗಾವಣೆ ನಿಧಿ ಸ್ಥಾಪಿಸಬೇಕು ಎಂದು ಅಡಿಕೆ ಬೆಳೆಗಾರರ ಸಂಘವು ಒತ್ತಾಯಿಸಿದೆ.


ಕರಾವಳಿಯಲ್ಲಿ ಅಡಿಕೆ ಆಧಾರಿತ ಕೈಗಾರಿಕಾ ಕ್ಲಸ್ಟರ್‌ಗಳಿಗೆ ಆದ್ಯತೆ :  ಅಡಿಕೆ ಹಾಳೆಯಿಂದ ತಟ್ಟೆ, ಬಟ್ಟಲು, ಪ್ಯಾಕೇಜಿಂಗ್ ಸೇರಿದಂತೆ ಪರಿಸರ ಸ್ನೇಹಿ ಉತ್ಪನ್ನಗಳ ತಯಾರಿಕೆ, ಅಡಿಕೆ ಮರದ ಸಲಾಕೆಯಿಂದ ಪೀಠೋಪಕರಣಗಳ ತಯಾರಿಕೆ ಹಾಗೂ ಇತರ ಮೌಲ್ಯವರ್ಧಿತ ಉತ್ಪನ್ನಗಳ ಕೈಗಾರಿಕೆಗಳಿಗೆ ವಿಶೇಷ ಪ್ರೋತ್ಸಾಹ ನೀಡಬೇಕು. ಸ್ವಸಹಾಯ ಗುಂಪುಗಳು, ರೈತ ಉತ್ಪಾದಕ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು ಮತ್ತು ಗ್ರಾಮೀಣ ಯುವ ಉದ್ಯಮಿಗಳ ಮೂಲಕ ಅಡಿಕೆ ಹಾಳೆ ಆಧಾರಿತ ಗ್ರಾಮೀಣ ಕೈಗಾರಿಕಾ ಸಮೂಹಗಳನ್ನು ಅಭಿವೃದ್ಧಿಪಡಿಸಬೇಕು. ಪ್ರಮುಖ ಅಡಿಕೆ ಪ್ರದೇಶಗಳಲ್ಲಿ ಜೈವಿಕ ಉಳಿಕೆಗಳ ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸಿ, ಅವುಗಳಿಂದ ರೈತರಿಗೆ ನೇರ ಆದಾಯ ದೊರೆಯುವ ವ್ಯವಸ್ಥೆ ರೂಪಿಸಬೇಕು ಎಂದು ಸಂಘ ತಿಳಿಸಿದೆ.


ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರಕ್ಕೆ ಆಗ್ರಹ :  ಅಡಿಕೆ ಬೆಳೆಗಾರರ ಭವಿಷ್ಯವನ್ನು ಕೇವಲ ಕಚ್ಚಾ ಅಡಿಕೆಯ ಮಾರುಕಟ್ಟೆ ಬೆಲೆ ಮತ್ತು ಬೇಡಿಕೆಯ ಮೇಲೆ ಅವಲಂಬಿಸದೆ, ಅಡಿಕೆಯ ಪ್ರತಿಯೊಂದು ವಿಭಾಗಕ್ಕೂ ವೈಜ್ಞಾನಿಕ ಹಾಗೂ ಕೈಗಾರಿಕಾ ಮೌಲ್ಯ ಸೃಷ್ಟಿಸುವ ದೀರ್ಘಕಾಲೀನ ನೀತಿ ಅಗತ್ಯವಿದೆ.  ಅಡಿಕೆಗೆ ಬೆಲೆ  ಮಾತ್ರವಲ್ಲ; ಅಡಿಕೆಯ ಪ್ರತಿಯೊಂದು ಭಾಗಕ್ಕೂ ವೈಜ್ಞಾನಿಕ ಮೌಲ್ಯ ಸೃಷ್ಟಿಸುವ ನೀತಿ ಬೇಕು” ಎಂಬ ಆಶಯದೊಂದಿಗೆ ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಮೇಲ್ಕಂಡ ಬೇಡಿಕೆಗಳನ್ನು ಪರಿಗಣಿಸಿ, ‘ಕರ್ನಾಟಕ ಅಡಿಕೆ ಜೈವಿಕ ಆರ್ಥಿಕತೆ, ಮೌಲ್ಯವರ್ಧನೆ ಮತ್ತು ಪರ್ಯಾಯ ಬಳಕೆ ಮಿಷನ್–2035’ ಘೋಷಣೆ, ಸಂಶೋಧನಾ ಕೇಂದ್ರ ಸ್ಥಾಪನೆ, ನವೋದ್ಯಮ ಮತ್ತು ತಂತ್ರಜ್ಞಾನ ವರ್ಗಾವಣೆ ನಿಧಿ ಹಾಗೂ ಮೊದಲ ಹಂತದ ಪ್ರಾಯೋಗಿಕ ಯೋಜನೆಗಳಿಗೆ ಅನುದಾನ ಸೇರಿದಂತೆ ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಒತ್ತಾಯಿಸಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top