ಚಾತುರ್ಮಾಸ್ಯ ವಿಶೇಷ- ಭಂಡಾರಕೇರಿ ಮಠದಲ್ಲಿ ವಿದ್ವಾಂಸರಿಗೆ ಗೌರವಾರ್ಪಣೆ
ಬಾರ್ಕೂರು/ ಉಡುಪಿ: ಮಹಾಭಾರತ ತಿಳಿಸಿದ ಮೌಲ್ಯಗಳನ್ನು ಅರಿತುಕೊಂಡು ಬಾಳಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು. ಶ್ರೀವಿದ್ಯಾಮಾನ್ಯತೀರ್ಥರ ಪೀಠಾರೋಹಣ ಶತಮಾನೋತ್ಸವದ ಸಂಭ್ರಮಾಚರಣೆ ಮತ್ತು ಚಾತುರ್ಮಾಸ್ಯ ಸಂದರ್ಭ 18 ವಿದ್ವಾಂಸರಿಗೆ ‘ಜಯಶ್ರೀ ಕಂಬುಕಂಠ’ ಪ್ರಶಸ್ತಿ, ಸ್ಮರಣಿಕೆ, ಸಂಭಾವನೆಗಳನ್ನು ನೀಡುವ ಮೂಲಕ ಗೌರವ ಸಮರ್ಪಿಸಿ ಅನುಗ್ರಹ ಸಂದೇಶ ನೀಡಿದರು.
ವೇದಗಳಲ್ಲಿ ಹೇಳದ ಅನೇಕ ಸಂಗತಿಗಳನ್ನು ಮಹಾಭಾರತ ನಿರೂಪಿಸಿದೆ. ಪಂಚ ಪಾಂಡವರು ಮಾನವೀಯ ಮೌಲ್ಯಗಳ ಪ್ರತೀಕವಾಗಿದ್ದಾರೆ. ಕೃಷ್ಣನು ಸರಳಾತಿ ಸರಳವಾಗಿ ಬದುಕಿ ತೋರಿಸಿ ಸರ್ವೋತ್ತಮ ಎನಿಸಿದ್ದಾನೆ. ಅಸುರೀ ಶಕ್ತಿಗಳ ವಿರುದ್ಧ ದೈವೀ ಶಕ್ತಿ ವಿಜಯ ಸಾಧಿಸಿದ್ದಕ್ಕೆ ಮಹಾಭಾರತ ಅತಿ ದೊಡ್ಡ ಉದಾಹರಣೆಯಾಗಿದೆ. ಇದರಿಂತೆ ನಮ್ಮಲ್ಲಿ ಇರುವ ಅಸುರೀ ಶಕ್ತಿಗಳು ನಾಶವಾಗಬೇಕು. ಎಲ್ಲರೂ ದೈವಿಕ ಶಕ್ತಿಗಳ ಪ್ರತೀಕವಾಗಿ ಬದುಕಬೇಕು ಎಂದರೆ ಮಹಾಭಾರತ ಹೇಳಿದಂತೆ ಜೀವನ ನಡೆಸಬೇಕು ಎಂದರು. ಈ ಮಹಾನ್ ಗ್ರಂಥ ಅರ್ಥಗಳಿಂದ ಭರಿತವಾಗಿದೆ. ಇದಕ್ಕೆ ಆಚಾರ್ಯ ಮಧ್ವರು ಸಮರ್ಥವಾಗಿ ತಾತ್ಪರ್ಯ ನಿರ್ಣಯ ರಚನೆ ಮಾಡಿ ನಮ್ಮೆಲ್ಲರನ್ನು ಉದ್ಧರಿಸಿದ್ದಾರೆ. ನಾಡಿನ ವಿವಿಧ ಭಾಗದ 18 ಪಂಡಿತರು 9 ದಿನಗಳ ಕಾಲ ಮಠದಲ್ಲೇ ಇದ್ದು ಮಹಾ ಭಾರತ ತಾತ್ಪರ್ಯ ನಿರ್ಣಯ ಪಾರಾಯಣ ಮಾಡಿ ಇಂದು ಸಮರ್ಪಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಚಿಕ್ಕ ಗ್ರಾಮದಿಂದ ದೊಡ್ಡ ಸಂದೇಶ:
ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಕೆ.ಇ. ದೇವನಾಥನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ವಿದ್ಯೇಶ ತೀರ್ಥರು ಭಂಡಾರಕೇರಿಯಂಥ ಕುಗ್ರಾಮದಲ್ಲಿ ಚಾತುರ್ಮಾಸ್ಯ ಅಂಗವಾಗಿ ವಿಶೇಷವಾದ ಕಾರ್ಯಕ್ರಮ ರೂಪಿಸಿ ಪಾರಾಯಣ, ಪ್ರವಚನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ದೊಡ್ಡ ಸಂದೇಶವನ್ನೇ ನೀಡುತ್ತಿದ್ದಾರೆ. ಬದುಕು ಮೌಲಿಕವಾಗಬೇಕಾದರೆ ಇಂಥ ಗುರುಗಳನ್ನು ಅನುಸರಿಸುವುದು ಬಹಳ ಮುಖ್ಯ ಎಂದರು.
ಪ್ರಶಸ್ತಿ ಪ್ರದಾನ:
ಕಾರ್ಯಕ್ರಮದಲ್ಲಿ ಪಂಡಿತರಾದ ಬಿ. ಗೋಪಾಲಾಚಾರ್ಯ, ನರಹರಿ ಆಚಾರ್ಯ(ಉಡುಪಿ), ಗುರುಪವನಾಚಾರ್ಯ, ಅಜಿತಾಚಾರ್ಯ ಉಡುಪಿ, ಗುರುರಾಜಾಚಾರ್ಯ ಕುಲಕರ್ಣಿ, ಸುಧೀಂದ್ರಾಚಾರ್ಯ, ಸಂಜೀವಾಚಾರ್ಯ, ಗುರು ರಾಜಾಚಾರ್ಯ ಕಲ್ಕೂರ, ಸುಶೀಲೇಂದ್ರಾಚಾರ್ಯ ಗೊಗ್ಗಿ, ಫಣಿರಾಜಾಚಾರ್ಯ, ಗುರುಮೂರ್ತಿ ಆಚಾರ್ಯ(ಬೆಂಗಳೂರು), ಅನಂತಾಚಾರ್ಯ ದಿದ್ದಿಗಿ ಹೈದರಾಬಾದ್, ಬಿ.ಆರ್. ವೆಂಕಟೇಶಾಚಾರ್ಯ ಧಾರವಾಡ, ಭೀಮಸೇನಾಚಾರ್ಯ, ವೇದವ್ಯಾಸಾಚಾರ್ಯ ಜೋಷಿ (ಮಂತ್ರಾಲಯ), ರಾಘವೇಂದ್ರಾಚಾರ್ಯ(ಚೆನ್ನೈ), ನರಸಿಂಹಾಚಾರ್ಯ ಗೋಠೆ ಕೊಯಂಬತ್ತೂರು, ಅನಿಲಾಚಾರ್ಯ ದೇಸಾಯಿ ರಾಯಚೂರು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗ್ರಾಮೀಣ ಭಾಗದ ಕೆಲವು ಪ್ರದೇಶದಲ್ಲಿ ನಡೆಯುವ ಶಿಬಿರದಲ್ಲಿ ಭಾಗವಹಿಸಿದರೆ ಆರೋಗ್ಯ ಸುಧಾರಿಸಬಹುದು. ಆದರೆ ಮನಸ್ಸು ಶುದ್ಧವಾಗುವುದು ಬಲು ಕಷ್ಟ. ಭಂಡಾರಿಕೇರಿ ಮಠಾಧೀಶರ ಸಂಕಲ್ಪದಂತೆ ನಡೆಯುತ್ತಿರುವ ಈ ಪಾರಾಯಣ ಯಜ್ಞವು ದೇಹ ಮತ್ತು ಮನಸ್ಸುಗಳನ್ನು ಏಕ ಕಾಲಕ್ಕೆ ಶುದ್ಧೀಕರಣ ಮಾಡುತಿದೆ. ಇದರಲ್ಲಿ ನಾವೆಲ್ಲರೂ 9 ದಿನ ಭಾಗವಹಿಸಿದ್ದೇ ಒಂದು ಪುಣ್ಯ.
- ಪಂಡಿತ ಬಿ. ಗೋಪಾಲಾಚಾರ್ಯ
ಹಿರಿಯ ವಿದ್ವಾಂಸ, ಉಡುಪಿ
ಶ್ರೀ ವಿದ್ಯೇಶ ತೀರ್ಥರ 47ನೇ ಚಾತುರ್ಮಾಸ್ಯವು ಒಂದು ವಿಭಿನ್ನ ಅನುಭವದ ಗಣಿಯಾಗಿದೆ. ಭಂಡಾರಕೇರಿ ಮಠದಲ್ಲಿ ನಡೆಯುತ್ತಿರುವ ತಾತ್ಪರ್ಯ ನಿರ್ಣಯ ಪಾರಾಯಣ, ಉಪನ್ಯಾಸ, ಸಂಗೀತ, ಊಟೋಪಚಾರಗಳು ನಾಡಿನ ಪಂಡಿತರಿಗೆ, ವಿದ್ವಾಂಸರಿಗೆ ಕಲಾವಿದರಿಗೆ ಮನ್ನಣೆ ನೀಡಿ ತವರು ಮನೆಯ ಪ್ರೀತಿ ತೋರುತ್ತಿವೆ. ತಾತ್ಪರ್ಯ ನಿರ್ಣಯ ಗ್ರಂಥ ಪಾರಾಯಣ ಮಾಡುವ ಸದವಕಾಶ ನನಗೂ ದೊರೆತದ್ದು ಒಂದು ಯೋಗವೇ ಆಗಿದೆ.
-ಬಿ. ಆರ್. ವೆಂಕಟೇಶಾಚಾರ್ಯ ಧಾರವಾಡ,
ಪಾರಾಯಣ ಯಜ್ಞದಲ್ಲಿ ಭಾಗವಹಿಸಿದ್ದ ಪಂಡಿತ
