
ಮಂಗಳೂರು: ಹೊಸ ತೆನೆಯು ಹೇಗೆ ನಮ್ಮಲ್ಲಿ ಹೊಸ ಭರವಸೆಯನ್ನು ಮೂಡಿಸುವುದೋ ಹಾಗೆಯೇ ಪ್ರಕೃತಿಯು ಹೊಸತನದಿಂದ ಕಂಗೊಳಿಸುವ ವೇಳೆಯಲ್ಲಿ ಬರುವ ಚೌತಿ ಹಬ್ಬ ನಮ್ಮಲ್ಲಿ ಹೊಸತನದ , ಹೊಸ ಚಿಂತನೆಯ ಮತ್ತು ಜೀವನದಲ್ಲಿ ಹೊಸ ಭರವಸೆಯನ್ನು ಮೂಡಿಸುವ ಹಬ್ಬವಾಗಿದೆ ಎಂದು ಕವಿ, ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ಘಟಕದ ಪದಾಧಿಕಾರಿ ಎನ್. ಸುಬ್ರಾಯ ಭಟ್ ಅಭಿಪ್ರಾಯಪಟ್ಟರು.
ನಗರದ ಗೌರಿಮಠ ರಸ್ತೆಯ ಶ್ರೀ ಮಹಾ ಮಾರಿಯಮ್ಮ ದೇವಸ್ಥಾನ- ಶ್ರೀ ಮಹಾ ಮಾರಿಯಮ್ಮ ಯುವಕ ವೃಂದ ಇವರ ವತಿಯಿಂದ ಜರುಗಿದ 35 ನೆಯ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ಧಾರ್ಮಿಕ ಹಾಗೂ ವಿವಿಧ ಆರಾಧನಾ ಕಾರ್ಯಕ್ರಮಗಳ ಸಂದರ್ಭದಲ್ಲಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ವಿದ್ಯಾಬುದ್ಧಿ ಸಮೃದ್ಧಿಗೆ ಹೆಸರಾಗಿರುವ ವಿನಾಯಕ ಸರ್ವರಿಗೂ ಸನ್ಮಂಗಲವನ್ನು ನೀಡಲಿ ಎಂದು ಹಾರೈಸಿದರು.
ಶ್ರೀನಿಧಿ ಕಂಪ್ಯೂಟರ್ಸ್ ಆಡಳಿತ ನಿರ್ದೇಶಕ ರಾಜೇಶ್ ಎಸ್ ರಾವ್, ರಾಮಕಾಂತಿ ಟಾಕೀಸ್ ಮಾಲಕ ಆರ್. ವಸಂತ ರಾವ್, ನ್ಯೂ ಪವನ್ ಮಾರ್ಕೆಟಿಂಗ್ ನ ಈಶ್ವರ ಸಿಂಗ್, ಇಂದರ್ ಸಿಂಗ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಆಡಳಿತ ಮೊಕ್ತೇಸರ ಪಿ.ಸಿ. ತಂಗವೇಲು, ರಾಜೇಶ್ ಎನ್ ಉಪಸ್ಥಿತರಿದ್ದರು.
ಅರ್ಚಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಕೃಷ್ಣ ಭಟ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು.
ವೇ.ಮೂ. ಗಣೇಶ ಬಾರಿತಾಯ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದವು. ಪಿ.ಸಿ. ಗುರು ಮತ್ತು ವಿದ್ಯಾ ದಿನೇಶ್ ನಿರೂಪಿಸಿದರು.
