‘ನವ್ಯ ದಿಗಂತ’ ವಾರ್ಷಿಕ ಸಂಚಿಕೆ ಬಿಡುಗಡೆ
ವಿದ್ಯಾರ್ಥಿವಾಣಿ ಪ್ರಜಾಪ್ರಭುತ್ವದ ಮಹತ್ವದ ವೇದಿಕೆ : ಡಾ. ಎನ್.ವಿ. ದೇವಿಪ್ರಸಾದ್ ಶೆಟ್ಟಿ.
ಸುರತ್ಕಲ್, ಸೆ. 29: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸುರತ್ಕಲ್‌ನ ಗೋವಿಂದ ದಾಸ ಕಾಲೇಜಿನಲ್ಲಿ ‘ವಿದ್ಯಾರ್ಥಿವಾಣಿ’ ಭಿತ್ತಿ ಪತ್ರಿಕೆ ವೇದಿಕೆಯನ್ನು ಉದ್ಘಾಟಿಸಿ ವಾರ್ಷಿಕ ಸಂಚಿಕೆ ‘ನವ್ಯದಿಗಂತ’ವನ್ನು ಬಿಡುಗಡೆ ಮಾಡಲಾಯಿತು. ಹಿಂದು ವಿದ್ಯಾದಾಯಿನೀ ಸಂಘ (ರಿ) ಸುರತ್ಕಲ್‌ನ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜಿನ ದೃಶ್ಯಶ್ರಾವ್ಯ ಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಆಂತರಿಕ ಗುಣಮಟ್ಟ ಖಾತರಿ ಕೋಶ, ವಿದ್ಯಾರ್ಥಿವಾಣಿ ಸಂಪಾದಕ ಮಂಡಳಿ, ರಾಜ್ಯ ಶಾಸ್ತ್ರ ವಿಭಾಗ, ಕನ್ನಡ ವಿಭಾಗ ಮತ್ತು ಸಾಹಿತ್ಯ ಸಂಘದ ಸಹಯೋಗದಲ್ಲಿ ಅಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ, ಮುಖ್ಯ ಭಾಷಣ ಮಾಡಿದ ಬೆಂಗಳೂರಿನ ಶ್ರೀ ಸತ್ಯವಾಣಿ ವಿದ್ಯಾ ಪೀಠ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿ ಡಾ. ಎನ್.ವಿ. ದೇವಿಪ್ರಸಾದ್ ಶೆಟ್ಟಿ ಅವರು ‘ನವ್ಯದಿಂಗತ’ ವಾರ್ಷಿಕ ಸಂಚಿಕೆಯನ್ನು ಬಿಡುಗಡೆ ಮಾಡಿದರು. ವಿದ್ಯಾರ್ಥಿಗಳ ಅಭಿವ್ಯಕ್ತಿಗೆ ಸಮರ್ಪಿತ ವೇದಿಕೆಯನ್ನು ರೂಪಿಸಿರುವ ಕಾಲೇಜಿನ ಪ್ರಯತ್ನವನ್ನು ಶ್ಲಾಘಿಸಿದ ಅವರು ‘ವಿದ್ಯಾರ್ಥಿವಾಣಿ’ಯನ್ನು ‘ಪ್ರಜಾಪ್ರಭುತ್ವದ ವೇದಿಕೆ’ ಎಂದು ಬಣ್ಣಿಸಿದರು.
ವಿದ್ಯಾರ್ಥಿಗಳು ಓದು, ಬರವಣಿಗೆ ಮತ್ತು ಸಂವಾದವನ್ನು ನಾಗರೀಕ ಜಾಗೃತಿಯ ಪ್ರಮುಖ ಸಾಧನಗಳಾಗಿ ಬಳಸಬೇಕು. ತಮ್ಮ ಅಭಿಪ್ರಾಯಗಳನ್ನು ಜವಾಬ್ದಾರಿಯುತವಾಗಿ ವ್ಯಕ್ತಪಡಿಸುವುದರ ಜೊತೆಗೆ, ಸಾರ್ವಜನಿಕ ವಿಚಾರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಯುವಜನರು ನೈತಿಕ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸಬೇಕು ಎಂ ಡಾ. ಎನ್.ವಿ. ದೇವಿಪ್ರಸಾದ್ ಶೆಟ್ಟಿ ಕರೆಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಹರೀಶ ಆಚಾರ್ಯ ಪಿ. ಅವರು ಶೈಕ್ಷಣಿಕ ಉತ್ಕೃಷ್ಟತೆ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಪಠ್ಯೇತರ ವೇದಿಕೆಗಳಿಗೆ ಕಾಲೇಜು ಸದಾ ಬದ್ಧವಾಗಿದೆ ಎಂದು ತಿಳಿಸಿದರು.
ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ವಿದ್ಯಾರ್ಥಿವಾಣಿ ಸಂಪಾದಕ ಮಂಡಳಿಯ ಸಂಯೋಜಕಿ ಡಾ. ಆಶಾಲತಾ ಪಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳ ಅಭಿವ್ಯಕ್ತಿ, ವಿಮರ್ಶಾತ್ಮಕ ಚಿಂತನೆ ಹಾಗೂ ಪ್ರಾದೇಶಿಕ ಸಾಹಿತ್ಯದ ಪ್ರೋತ್ಸಾಹಕ್ಕೆ ‘ವಿದ್ಯಾರ್ಥಿವಾಣಿ’ ವೇದಿಕೆ ಕಾರ್ಯನಿರ್ವಹಿಸಲಿದೆ ಎಂದು ವಿವರಿಸಿದರು. ಹಿಂದಿ ಭಾಷಾ ಉಪನ್ಯಾಸಕಿ ರಮಿತಾ ಸ್ವಾಗತಿಸಿ ಆಂಗ್ಲ ಭಾಷಾ ಉಪನ್ಯಾಸಕಿ ಶರ್ಮಿತಾ ಯು. ವಂದಿಸಿದರು. ಸಂಪಾದಕ ಮಂಡಳಿಯ ಡಾ. ವಿಜಯಲಕ್ಮ್ಷೀ ಅತಿಥಿ ಪರಿಚಯ ನೀಡಿದರು. ಕನ್ನಡ ಭಾಷಾ ಉಪನ್ಯಾಸಕಿ ಅಕ್ಷತಾ ವಿ. ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಮೇಜರ್ ಡಾ. ಸುಧಾ ಯು, ವಿದ್ಯಾರ್ಥಿವಾಣಿ ಸಂಪಾದಕೀಯ ಮಂಡಳಿಯ ಸದಸ್ಯೆ ಡಾ. ಆಶಾ, ಡಾ. ವಿಜಯಲಕ್ಮ್ಷೀ ಮತ್ತು ಉಪನ್ಯಾಸಕರಾದ ಕುಮಾರ್ ಮಾದರ್, ಗ್ರಂಥಪಾಲಕಿ ಡಾ. ಸುಜಾತ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರಶಾಂತ್ ಎಂ.ಡಿ. ಡಾ. ಕಾರ್ತಿಕ್ ಜೆ.ಎಸ್., ದಯಾ ಸುವರ್ಣ ಮತ್ತು ಪೂರ್ಣಿಮಾ ಗೋಖಲೆ, ಕಛೇರಿ ಅಧೀಕ್ಷಕ ವೆಂಕಪ್ಪ ಮೂಲ್ಯ ಎಂ., ಸಂಪಾದಕ ಮಂಡಳಿಯ ವಿದ್ಯಾರ್ಥಿ ಪ್ರತಿನಿಧಿಗಳಾದ ನಾಗರತ್ನ, ಅಭಿನವಿ, ಭುವನ್, ತೇಜಸ್ವಿ ಮತ್ತು ಅನನ್ಯ, ಚರಣ್ ಉಪಸ್ಥಿತರಿದ್ದರು.
