ಕೇರಳದ ಉತ್ತರ ತುದಿಯ ಗಡಿ ಜಿಲ್ಲೆಯಾದ ಕಾಸರಗೋಡಿನಲ್ಲಿ ಜಿಲ್ಲಾಧಿಕಾರಿಗಳ ಪದೇಪದೇ ವರ್ಗಾವಣೆ ಹೊಸದೇನಲ್ಲವಾದರೂ, ಈ ಕ್ಷಿಪ್ರ ಬದಲಾವಣೆಗಳು ಜಿಲ್ಲೆಯ ಆಡಳಿತಾತ್ಮಕ ವೇಗ, ಜನಪರ ಯೋಜನೆಗಳು ಮತ್ತು ದೀರ್ಘಕಾಲೀನ ಅಭಿವೃದ್ಧಿಯ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಕಾಸರಗೋಡು ಕೇವಲ ಒಂದು ಸಾಮಾನ್ಯ ಕಂದಾಯ ಜಿಲ್ಲೆಯಲ್ಲ; ಇದು ಭಾಷಿಕ, ಭೌಗೋಳಿಕ ಮತ್ತು ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ಪ್ರದೇಶ. ಕನ್ನಡ, ಮಲಯಾಳಂ, ತುಳು ಸೇರಿದಂತೆ ಬಹುಭಾಷಿಕ ಸಂಸ್ಕೃತಿಯನ್ನು ಹೊಂದಿರುವ ಇಲ್ಲಿ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ, ಗಡಿನಾಡ ಶಾಲೆಗಳ ಸಬಲೀಕರಣ ಮತ್ತು ಅಂತಾರಾಜ್ಯ ಗಡಿ ಸಮನ್ವಯ ಅತ್ಯಂತ ಮಹತ್ವದ್ದು. ಇದರೊಂದಿಗೆ, ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ, ಆರೋಗ್ಯ ರಂಗದ ಮೂಲಸೌಕರ್ಯಗಳ ಕೊರತೆ, ಮಲೆನಾಡು ಮತ್ತು ಕರಾವಳಿಯ ರೈತರ ಸಮಸ್ಯೆಗಳು ಜಿಲ್ಲಾಡಳಿತದ ನಿರಂತರ ಗಮನವನ್ನು ಬೇಡುತ್ತವೆ. ಇಂತಹ ಕ್ಲಿಷ್ಟ ಸನ್ನಿವೇಶಗಳನ್ನು ಸಂಪೂರ್ಣವಾಗಿ ಗ್ರಹಿಸಿ, ಸೂಕ್ತ ಪರಿಹಾರ ಕಂಡುಕೊಳ್ಳಲು ಹೊಸದಾಗಿ ಬರುವ ಅಧಿಕಾರಿಗೆ ಕನಿಷ್ಠ ಆರು ತಿಂಗಳ ಕಾಲಾವಕಾಶವಾದರೂ ಬೇಕಾಗುತ್ತದೆ.
ಕೇರಳದ ಇತರ ಯಾವುದೇ ಜಿಲ್ಲೆಗಳಿಗೆ ಹೋಲಿಸಿದರೂ ಕಾಸರಗೋಡಿನ ಭೌಗೋಳಿಕ, ಸಾಂಸ್ಕೃತಿಕ, ಭಾಷಿಕ ಮತ್ತು ಸಾಮಾಜಿಕ ಸ್ವರೂಪ ಸಂಪೂರ್ಣ ವಿಶಿಷ್ಟ ಹಾಗೂ ಭಿನ್ನ. ದಕ್ಷಿಣ ಅಥವಾ ಮಧ್ಯ ಕೇರಳದ ಜಿಲ್ಲೆಗಳು ಹೆಚ್ಚಾಗಿ ಏಕಭಾಷಿಕ (ಮಲಯಾಳಂ) ಸಂಸ್ಕೃತಿಯನ್ನು ಹೊಂದಿದ್ದರೆ, ಕಾಸರಗೋಡು ಸಪ್ತಭಾಷಾ ಸಂಗಮ ಭೂಮಿಯಾಗಿದ್ದು ಕನ್ನಡ, ಮಲಯಾಳಂ, ತುಳು, ಹವ್ಯಕ, ಕೊಂಕಣಿ, ಬ್ಯಾರಿ ಮತ್ತು ಮರಾಠಿ ಭಾಷೆಗಳ ವಿಶಿಷ್ಟ ಸಾಮರಸ್ಯವನ್ನು ಹೊಂದಿದೆ. ಸಾಂಸ್ಕೃತಿಕವಾಗಿಯೂ ಇಲ್ಲಿ ಕೇರಳದ ತೆಯ್ಯಂ ಜತೆಗೆ ತುಳುನಾಡಿನ ಯಕ್ಷಗಾನ ಹಾಗೂ ಭೂತಾರಾಧನೆಯ ಪರಂಪರೆಗಳು ಬೆರೆತುಕೊಂಡಿವೆ. ಭೌಗೋಳಿಕವಾಗಿ ಅರಬ್ಬಿ ಸಮುದ್ರದ ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ಮಲೆನಾಡನ್ನು ಬೆಸೆಯುವ ಅಡಿಕೆ, ತೆಂಗು, ರಬ್ಬರ್ ಕೃಷಿಯ ವಿಶಿಷ್ಟ ಭೂಪ್ರದೇಶವಿದು. ಆದರೆ, ಆರೋಗ್ಯ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ಇಂದಿಗೂ ನೆರೆಯ ಮಂಗಳೂರನ್ನು ಅವಲಂಬಿಸಬೇಕಾದ ಅನಿವಾರ್ಯತೆ, ಎಂಡೋಸಲ್ಫಾನ್ ದುರಂತದಂತಹ ಅಸಹಾಯಕ ಆರೋಗ್ಯ ಸವಾಲುಗಳು ಹಾಗೂ ಗಡಿನಾಡ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ—ಇವೆಲ್ಲವೂ ಕೇರಳದ ಇತರ ೧೩ ಜಿಲ್ಲೆಗಳಿಗಿಂತ ಕಾಸರಗೋಡನ್ನು ತೀರಾ ಭಿನ್ನ ಹಾಗೂ ಆಡಳಿತಾತ್ಮಕವಾಗಿ ಅತ್ಯಂತ ಜಟಿಲ ಕ್ಷೇತ್ರವನ್ನಾಗಿ ರೂಪಿಸಿವೆ.
ಕಳೆದ ಒಂದು ದಶಕದ ಇತಿಹಾಸವನ್ನು ಗಮನಿಸಿದರೆ, ಜಿಲ್ಲೆಯಲ್ಲಿ ಕೇವಲ ಒಂದರಿಂದ ಒಂದೂವರೆ ವರ್ಷಗಳ ಅಲ್ಪಾವಧಿಯಲ್ಲೇ ಅಧಿಕಾರಿಗಳು ಬದಲಾದ ನಿದರ್ಶನಗಳು ಧಾರಾಳವಾಗಿ ಕಂಡುಬರುತ್ತವೆ. ಕೋವಿಡ್-19 ಸಾಂಕ್ರಾಮಿಕದ ಮೊದಲ ಅಲೆಯ ಸಂದರ್ಭದಲ್ಲಿ ಗಡಿ ನಿಯಂತ್ರಣ ಹಾಗೂ ಕಠಿಣ ಕ್ರಮಗಳ ಮೂಲಕ ಸಾರ್ವಜನಿಕ ಗಮನ ಸೆಳೆದಿದ್ದ ಡಾ. ಡಿ. ಸಜಿತ್ ಬಾಬು ಅವರ ವರ್ಗಾವಣೆ ಬಿಕ್ಕಟ್ಟಿನ ನಿರ್ಣಾಯಕ ಹಂತದಲ್ಲೇ ನಡೆಯಿತು. ನಂತರ ಬಂದ ಸ್ವಾಗತ್ ಆರ್. ಭಂಡಾರಿ ಅವರು ಕಂದಾಯ ಅದಾಲತ್ಗಳು ಮತ್ತು ನಾಗರಿಕರ ಕಡತ ವಿಲೇವಾರಿಗೆ ಹೊಸ ವೇಗ ನೀಡಿದರೂ, ಅವರ ಅಧಿಕಾರಾವಧಿಯೂ ನಿರೀಕ್ಷೆಗಿಂತ ಮುಂಚಿತವಾಗಿಯೇ ಮುಕ್ತಾಯ ಕಂಡಿತು. ಅದೇ ರೀತಿ, ಕೆ. ಇಂಬಶೇಖರ್ ಅವರು ಎಂಡೋಸಲ್ಫಾನ್ ಸಂತ್ರಸ್ತರ ಅಧ್ಯಯನ, ಭೂದಾಖಲೆಗಳ ಡಿಜಿಟಲೀಕರಣ ಹಾಗೂ ಮೂಲಸೌಕರ್ಯ ಯೋಜನೆಗಳಿಗೆ ಚುರುಕು ಮುಟ್ಟಿಸುವ ಹೊತ್ತಿಗೆ ಆಡಳಿತಾತ್ಮಕ ಪುನಾರಚನೆಯ ನೆಪದಲ್ಲಿ ಬದಲಾವಣೆಯಾಯಿತು. ಪಿ.ಎಸ್. ಮೊಹಮ್ಮದ್ ಸಗೀರ್ ಸೇರಿದಂತೆ ಹಲವು ಅಧಿಕಾರಿಗಳು ತಮ್ಮ ಯೋಜನೆಗಳು ಪೂರ್ಣಗೊಳ್ಳುವ ಮೊದಲೇ ರಾಜಧಾನಿಯ ಆದೇಶಕ್ಕೆ ತಲೆಬಾಗಿ ನಿರ್ಗಮಿಸಬೇಕಾಗಿ ಬಂದದ್ದು ಇಲ್ಲಿನ ವಾಡಿಕೆಯಾಗಿದೆ.
ಈ ರೀತಿಯ ನಿರಂತರ ಬದಲಾವಣೆಗಳ ಹಿಂದೆ ವ್ಯವಸ್ಥಿತವಾದ ಆಡಳಿತಾತ್ಮಕ ಕಾರಣಗಳಿವೆ. ರಾಜ್ಯ ಸರ್ಕಾರವು ಹೊಸದಾಗಿ ಐಎಎಸ್ ಪೂರೈಸಿದ ಅಥವಾ ಮೊದಲ ಬಾರಿಗೆ ಜಿಲ್ಲಾಧಿಕಾರಿಯಾಗುವ ಕಿರಿಯ ಅಧಿಕಾರಿಗಳನ್ನೇ ಹೆಚ್ಚಾಗಿ ಕಾಸರಗೋಡಿಗೆ ನಿಯೋಜಿಸುತ್ತದೆ. ಇಲ್ಲಿ ಆರಂಭಿಕ ಆಡಳಿತ ಅನುಭವ ಪಡೆದ ಬಳಿಕ, ಅವರನ್ನು ತಿರುವನಂತಪುರಂನ ಸಚಿವಾಲಯದ ಪ್ರಮುಖ ಹುದ್ದೆಗಳಿಗೆ ಅಥವಾ ದಕ್ಷಿಣ ಕೇರಳದ ದೊಡ್ಡ ಜಿಲ್ಲೆಗಳಿಗೆ ಬಡ್ತಿ ನೀಡಿ ವರ್ಗಾಯಿಸಲಾಗುತ್ತದೆ. ಜೊತೆಗೆ, ರಾಜಧಾನಿಯಿಂದ ತೀರಾ ದೂರದಲ್ಲಿರುವ ಕಾರಣ, ಅಧಿಕಾರಿಗಳ ವೈಯಕ್ತಿಕ ಬದುಕು, ಕುಟುಂಬ ಮತ್ತು ಸಚಿವಾಲಯ ಮಟ್ಟದ ಹುದ್ದೆಗಳ ಆಕಾಂಕ್ಷೆಯಿಂದ ಹಲವು ಅಧಿಕಾರಿಗಳು ಸ್ವತಃ ವರ್ಗಾವಣೆಗೆ ಆಸಕ್ತಿ ತೋರುತ್ತಾರೆ. ಇನ್ನೊಂದೆಡೆ, ಗಡಿ ಜಿಲ್ಲೆಯ ಮರಳು ಮಾಫಿಯಾ, ಅಕ್ರಮ ಗಣಿಗಾರಿಕೆ, ಭೂ ಒತ್ತುವರಿ ಹಾಗೂ ಕಂದಾಯ ವಿವಾದಗಳ ವಿರುದ್ಧ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಾಗ ಸ್ಥಳೀಯ ರಾಜಕೀಯ ವಲಯದಿಂದ ಅಸಮಾಧಾನ ಮತ್ತು ವರ್ಗಾವಣೆ ಒತ್ತಡಗಳು ಸೃಷ್ಟಿಯಾಗುತ್ತವೆ. ಉತ್ತರ ಕೇರಳದ ಗಡಿಭಾಗವನ್ನು ಆಡಳಿತಾತ್ಮಕವಾಗಿ ಒಂದು "ಶಿಕ್ಷಾರ್ಹ ಹುದ್ದೆ" ಅಥವಾ ಕೇವಲ ಪ್ರಾಯೋಗಿಕ ಕೇಂದ್ರದಂತೆ ನೋಡುವ ಸರ್ಕಾರದ ಧೋರಣೆಯೂ ಇದಕ್ಕೆ ಮುಖ್ಯ ಕಾರಣವಾಗಿದೆ.
ಇಂತಹ ಅನಿರೀಕ್ಷಿತ ವರ್ಗಾವಣೆಗಳಿಂದಾಗಿ ಆಡಳಿತ ಯಂತ್ರದಲ್ಲಿ ದೊಡ್ಡ ಕಂದಕ ಸೃಷ್ಟಿಯಾಗುತ್ತದೆ. ಒಬ್ಬ ಅಧಿಕಾರಿಯು ಆಸಕ್ತಿಯಿಂದ ರೂಪಿಸಿದ ಯೋಜನೆಗಳು ಮುಂದಿನ ಅಧಿಕಾರಿಯ ಆದ್ಯತೆಯಾಗದೆ ಕಡತಗಳಲ್ಲೇ ಉಳಿದುಬಿಡುತ್ತವೆ; ಎಂಡೋಸಲ್ಫಾನ್ ಸಂತ್ರಸ್ತರ ಪರಿಹಾರ, ವಿಶೇಷ ಶಾಲೆಗಳು ಮತ್ತು ಆಸ್ಪತ್ರೆಗಳ ಕಾಮಗಾರಿಗಳು ವರ್ಷಗಟ್ಟಲೆ ವಿಳಂಬವಾಗುತ್ತವೆ. ಗಡಿಭಾಗದ ಭಾಷಾ ಸಂವೇದನೆ ಹಾಗೂ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ಮುನ್ನವೇ ಅಧಿಕಾರಿಗಳು ನಿರ್ಗಮಿಸುವುದರಿಂದ ಜನಸಾಮಾನ್ಯರ ಧ್ವನಿಗೆ ಬೆಲೆ ಸಿಗದಂತಾಗುತ್ತದೆ. ಕಾಸರಗೋಡಿನ ಸರ್ವತೋಮುಖ ಅಭಿವೃದ್ಧಿಗೆ ಆಡಳಿತಾತ್ಮಕ ಸ್ಥಿರತೆಯೇ ಅಡಿಪಾಯವಾಗಿದ್ದು, ಇಲ್ಲಿಗೆ ನಿಯೋಜನೆಗೊಳ್ಳುವ ಜಿಲ್ಲಾಧಿಕಾರಿಗಳಿಗೆ ಕನಿಷ್ಠ 2 ರಿಂದ 3 ವರ್ಷಗಳ ಕಾಲ ನಿಗದಿತ ಅಧಿಕಾರಾವಧಿಯನ್ನು ಖಾತರಿಪಡಿಸುವ ಸ್ಪಷ್ಟ ನೀತಿಯನ್ನು ಸರ್ಕಾರ ರೂಪಿಸಬೇಕಿದೆ. ಕಾಸರಗೋಡನ್ನು ಕೇವಲ ಆಡಳಿತ ಕಲಿಯುವ ತಾಣವನ್ನಾಗಿ ನೋಡದೆ, ಇಲ್ಲಿನ ಜನರ ಕಷ್ಟ-ಸುಖಗಳಿಗೆ ಸ್ಪಂದಿಸುವ ದೃಢ ಹಾಗೂ ನಿರಂತರ ಆಡಳಿತವನ್ನು ಒದಗಿಸುವುದು ಇಂದಿನ ತುರ್ತು ಅಗತ್ಯ.
ಜಿಲ್ಲೆಯ ವಿಶಿಷ್ಟ ಭೌಗೋಳಿಕ-ಭಾಷಿಕ ಸೂಕ್ಷ್ಮತೆ ಹಾಗೂ ಹಿಂದುಳಿದಿರುವಿಕೆಯನ್ನು ಸರ್ಕಾರದ ಮುಂದಿಟ್ಟು, ನಿರಂತರ ವರ್ಗಾವಣೆಗಳಿಗೆ ತೆರೆ ಎಳೆಯುವ ದೃಢ ನಿಲುವನ್ನು ನಮ್ಮ ಶಾಸಕರು ಪ್ರದರ್ಶಿಸಬೇಕಿದೆ. ಜನಪ್ರಿಯ ಶಾಸಕರೂ ಕನ್ನಡಾಭಿಮಾನಿಯೂ ಆಗಿರುವ ಇವರು ಆಡಳಿತಾರೂಢ ಪಕ್ಷದ ಭಾಗವೇ ಆಗಿರುವುದರಿಂದ, ಸರ್ಕಾರದ ಮನವೊಲಿಸಿ ಇಂತಹದೊಂದು ಸ್ಥಿರ ಆಡಳಿತ ನೀತಿಯನ್ನು ಜಾರಿಗೆ ತರುವುದು ಅವರಿಗೆ ಕಿಂಚಿತ್ತೂ ಕಷ್ಟದ ಕೆಲಸವೇನಲ್ಲ.
- ಎಸ್. ಎನ್. ಭಟ್, ಸೈಪಂಗಲ್ಲು
