ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಡಾ. ಕೆ. ಕಸ್ತೂರಿ ರಂಗನ್ ಸಮಿತಿಯ ಶಿಫಾರಸುಗಳ ಅನುಷ್ಠಾನಕ್ಕೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಚುರುಕು ಮುಟ್ಟಿಸಿದೆ. ಜುಲೈ 27, 2026 ರಂದು ಕೇಂದ್ರ ಸರ್ಕಾರವು 7ನೇ ಕರಡು ಅಧಿಸೂಚನೆಯನ್ನು ಅಧಿಕೃತವಾಗಿ ಹೊರಡಿಸಿದ್ದು, ಇದು ಮಲೆನಾಡು ಹಾಗೂ ಕರಾವಳಿ ಭಾಗದ ಜನರಲ್ಲಿ ಮತ್ತೆ ತೀವ್ರ ಆತಂಕ ಮೂಡಿಸಿದೆ. ಸಾವಿರಾರು ಗ್ರಾಮಗಳ ಭವಿಷ್ಯ ಮತ್ತೆ ಅನಿಶ್ಚಿತತೆಯತ್ತ ಸಾಗಿದೆ.
ಆಕ್ಷೇಪಣೆ ಸಲ್ಲಿಕೆ: ಮುಳುಗುವವನಿಗೆ ಹುಲ್ಲುಕಡ್ಡಿಯ ಆಸರೆ!
ರೈತರು ಹಾಗೂ ಮಲೆನಾಡಿನ ನೆಲವಾಸಿಗಳಾದ ನಾವೀಗ ಏನು ಮಾಡಬೇಕು? ನಾವು ಬದುಕು ಕಂಡುಕೊಂಡ ಸ್ಥಳದ ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ಪ್ರದೇಶದಿಂದ (ESA) ಹೊರಗಿಡುವಂತೆ ಆಕ್ಷೇಪಣೆ ಸಲ್ಲಿಸುವುದು ಸದ್ಯಕ್ಕೆ ನಮ್ಮ ಮುಂದಿರುವ ಏಕೈಕ ದಾರಿ. ಇದು 'ಮುಳುಗುವವನಿಗೆ ಹುಲ್ಲುಕಡ್ಡಿಯ ಆಸರೆ' ಇದ್ದಂತೆ.
ಆದರೆ, ಕೇವಲ ಆಕ್ಷೇಪಣೆ ಸಲ್ಲಿಸಿದರೆ ಸಾಕೆ? ನಮ್ಮ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒಂದಾಗಿ, ಸಮರ್ಥ ವಕೀಲರನ್ನು ನೇಮಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ನಡೆಸಿ ನ್ಯಾಯ ದೊರಕಿಸಿಕೊಡಬೇಕಿದೆ. ಏಳು ಬಾರಿ ಕರಡು ಅಧಿಸೂಚನೆ ಹೊರಡಿಸಿದ ಮೇಲೆ, 8ನೇ ಅಥವಾ 9ನೇ ಅಧಿಸೂಚನೆ ಬರುತ್ತಲೇ ಇರುತ್ತದೆಯೇ? ಖಂಡಿತ ಇಲ್ಲ. ಎಲ್ಲೋ ಒಂದು ಕಡೆ ಇದು ನಿಲ್ಲಲೇಬೇಕು. ಸುಪ್ರೀಂ ಕೋರ್ಟ್ ಕೂಡ ಅಂತಿಮ ಅಧಿಸೂಚನೆಗೆ ಒತ್ತಾಯಿಸಬಹುದು. ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ಪರಿಷ್ಕರಿಸಿಯೋ ಅಥವಾ ಯಥಾಸ್ಥಿತಿಯಲ್ಲೋ ಅನುಷ್ಠಾನಗೊಳಿಸುವುದು ಬಹುತೇಕ ಖಚಿತ.
ನೈಜ ಪರಿಸರ ಪ್ರೇಮಿ ವರ್ಸಸ್ ನಗರದ 'ಡೋಂಗಿ' ಪರಿಸರವಾದಿಗಳು
ಮಲೆನಾಡಿನ ಜನರ ಬದುಕಿನ ಹೃದಯಮಿಡಿತ ಅರಿಯದ, ನಗರ ಕೇಂದ್ರಿತ 'ಡೋಂಗಿ' ಪರಿಸರವಾದಿಗಳು ಈ ವರದಿಯ ಯಥಾವತ್ ಅನುಷ್ಠಾನಕ್ಕೆ ಕಾದು ಕುಳಿತಿದ್ದಾರೆ. 'ಎಲ್ಲಿಂದಲೋ' ಹರಿದುಬರುವ ಹಣದ ಬಲವೂ ಅವರಿಗಿದೆ. ಮಲೆನಾಡಿಗರ ಕಷ್ಟ-ಸುಖ ಬಲ್ಲ ನೈಜ ಪರಿಸರವಾದಿಗಳು ನಮ್ಮೊಂದಿಗಿದ್ದರೂ, ಅವರ ಧ್ವನಿ ಈ ಧನಬಲವುಳ್ಳ ಸದ್ದುಗದ್ದಲದ ನಡುವೆ ಕ್ಷೀಣಿಸುತ್ತಿದೆ. ಪದೇ ಪದೇ ಅಧಿಸೂಚನೆ ಹೊರಡಿಸಿ ಕಾಲ ತಳ್ಳಲು ಈ ನಗರದ ಪರಿಸರವಾದಿಗಳು ಬಿಡುವುದಿಲ್ಲ. ಸರ್ಕಾರಕ್ಕೂ ಕಾನೂನು ಹಾಗೂ ಆಡಳಿತಾತ್ಮಕವಾಗಿ ಅಂತಿಮ ನಿರ್ಧಾರ ತಳೆಯುವುದು ಅನಿವಾರ್ಯವಾಗಲಿದೆ.
ಪರಿಸರ ಕಾಳಜಿ ಮತ್ತು ಸರ್ಕಾರದ ಕಾಮನ್ ಸೆನ್ಸ್!
ವ್ಯಂಗ್ಯವೆಂದರೆ, ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅಪಾಯಕಾರಿ ಅಕೇಶಿಯಾ ಅಥವಾ ನೀಲಗಿರಿ ಬೆಳೆಯಬಾರದು ಎನ್ನುವ 'ಕಾಮನ್ ಸೆನ್ಸ್' ನಮ್ಮ ಜನಪ್ರತಿನಿಧಿಗಳಿಗಾಗಲೀ, ಸರ್ಕಾರಕ್ಕಾಗಲೀ ಇಲ್ಲ. ಮೊದಲು ಸರ್ಕಾರವೇ ಬೆಳೆಸಿರುವ ಅಕೇಶಿಯಾ, ನೀಲಗಿರಿ ಮರಗಳನ್ನು ಬ್ಯಾನ್ ಮಾಡಿ, ಅವುಗಳನ್ನು ನಿರ್ವಂಶ ಮಾಡಿದರೆ ಸಹಜವಾಗಿಯೇ ಸರ್ಕಾರಿ ಕಾಡುಗಳು ಪರಿಸರ ಸೂಕ್ಷ್ಮ ಪ್ರದೇಶಗಳಾಗಿ ರೂಪುಗೊಳ್ಳುತ್ತವೆ. ಆದರೆ ಈ ಬೆಕ್ಕುಗಳಿಗೆ ಗಂಟೆ ಕಟ್ಟುವುದು ಯಾರು?
ಪರಿಸರ ಸೂಕ್ಷ್ಮ ಪ್ರದೇಶ ಮತ್ತು ಅದರ 'ಬಫರ್ ಜೋನ್' ವಿಚಾರದಲ್ಲಿ ಒಂದು ಶಾಶ್ವತ ಪರಿಹಾರಕ್ಕಾಗಿ ಪಕ್ಷಾತೀತ ಹೋರಾಟ ನಡೆಯಬೇಕಿದೆ. ಆದರೆ, ನಮಗೆ ಭವಿಷ್ಯದ ದೊಡ್ಡ ಸಮಸ್ಯೆಗಳಿಗಿಂತ ಇಂದಿನ ಪಕ್ಷ ನಿಷ್ಠೆ, ವ್ಯಕ್ತಿ ನಿಷ್ಠೆಗಳೇ ದೊಡ್ಡದಾಗಿ ಕಾಣಿಸುತ್ತಿರುವುದು ನಮ್ಮ ದುರಂತ.
ಉರಿಯುವ ಬೆಂಕಿಯಲ್ಲಿ ಸಾರಿನ ಬೇಳೆ ಬೇಯಿಸಿಕೊಳ್ಳುವ ರಾಜಕೀಯ!
ಜನಪ್ರತಿನಿಧಿಗಳಿಗೆ ಮಲೆನಾಡಿನ ಯಾವ ಸಮಸ್ಯೆಯೂ ಶಾಶ್ವತವಾಗಿ ಮುಕ್ತಾಯವಾಗುವುದು ಬೇಕಿಲ್ಲ. ಸಮಸ್ಯೆಯ ಬೆಂಕಿ ಸದಾ ಉರಿಯುತ್ತಿರಬೇಕು, ಅದರಲ್ಲಿ ತಮ್ಮ 'ಸಾರಿನ ತೊಗರಿಬೇಳೆ' ಬೇಯುತ್ತಿರಬೇಕು!
ವರ್ಷಾನುಗಟ್ಟಲೆಯಿಂದ ಕಾಡುತ್ತಿರುವ ಮಳೆ ಮಾಪನ ಯಂತ್ರಗಳ ಸಮಸ್ಯೆಗೆ ಇನ್ನೂ ಪರಿಹಾರ ದೊರೆತಿಲ್ಲ.
ದೀರ್ಘಾವಧಿ ಬೆಳೆಗಳಿಗೆ ಪ್ರತೀವರ್ಷ ಕಿರುಕುಳ ನೀಡುವ ಬೆಳೆ ಸರ್ವೆ ಯಾಕೆ? ಅದಕ್ಕೊಂದು ಶಾಶ್ವತ ಪರಿಹಾರವಿಲ್ಲವೇ?
ಗಡಿಯಲ್ಲಿ ಪ್ರತಿದಿನ ಅಕ್ರಮ ಅಡಿಕೆ ಆಮದು ನಡೆಯುತ್ತಿದ್ದರೂ ಅದನ್ನು ತಡೆಯಲಾಗುತ್ತಿಲ್ಲ. ಕಮಿಷನ್ ಆಸೆಯೋ? ಮಾಫಿಯಾದ ಭಯವೋ? ಅಥವಾ ದೇಶದ ಭದ್ರತೆಗೆ ಸಂಬಂಧಿಸಿದ ಈ ವಿಷಯದಲ್ಲೂ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ದಾರಿಯೋ?
ರೈತರ ಜೊತೆ, ನೆಲವಾಸಿಗಳ ಜೊತೆ ವರ್ಷಕ್ಕೆ ಅರ್ಧ ದಿನ ಕುಳಿತು ಆರೋಗ್ಯಕರ ಸಂವಾದ ನಡೆಸಲು ಸಮಯವಿಲ್ಲದಷ್ಟು ನಮ್ಮ MP, MLA, MLC ಹಾಗೂ ಸಚಿವರುಗಳು ಬ್ಯುಸಿಯಾಗಿದ್ದಾರೆ.
ಬ್ಯಾನರ್ ಜಾಗೃತಿ ಮತ್ತು ಕಸದ ರಾಜಕೀಯ
ಕೊಪ್ಪದಂತಹ ತಾಲೂಕು ಕೇಂದ್ರಗಳಲ್ಲಿ ವರ್ಷಕ್ಕೆ ಕನಿಷ್ಠ 10-12 'ಪಕ್ಷ ಕೃಪಾಪೋಷಿತ' ಜನಜಾಗೃತಿ ಕಾರ್ಯಕ್ರಮಗಳು ಬ್ಯಾನರ್‌ಗಳಲ್ಲಿ ಮೆರೆಯುತ್ತವೆ. ಬಿಳಿ ಬಟ್ಟೆ ಧರಿಸಿದ ಅಧ್ಯಕ್ಷರು, ಕಪ್ಪು-ಕೇಸರಿ-ನೀಲಿ-ಹಸಿರು ಬಣ್ಣಗಳ ಉದ್ವೇಗದ ಮಾತುಗಳು, ಮರುದಿನ ಪತ್ರಿಕೆಯಲ್ಲಿ ಬ್ರೇಕಿಂಗ್ ನ್ಯೂಸ್! ಇಷ್ಟೇ ಇವರ ಜಾಗೃತಿ!
ಆದರೆ ನಿಜವಾದ ಸಮಸ್ಯೆಗಳಾದ: ಪರಿಸರ ಸೂಕ್ಷ್ಮ ಪ್ರದೇಶ, ಮರಳು ದಂದೆ ಮತ್ತು ಅಕ್ರಮ ಅಡಿಕೆ ಆಮದು, ಅಕೇಶಿಯಾ ನಿರ್ಮೂಲನೆ & ಕೃಷಿ ಸಮಸ್ಯೆಗಳು, ಹಕ್ಕುಪತ್ರ ವಿತರಣೆ ಮತ್ತು ಜೀವನಾಧಾರ ಒತ್ತುವರಿ ಸಕ್ರಮ, ಆನೆ ತಡೆಯುವ ರೈಲ್ವೇ ಬ್ಯಾರಿಕೇಡ್ ಯೋಜನೆಗಳ ಅನುಷ್ಠಾನ, 'ಜಲ ಜೀವನ' ಯೋಜನೆಯಲ್ಲಿ ಬಾರದ ನೀರು & ಸರ್ವಋತು ರಸ್ತೆ ನಿರ್ಮಾಣ – ಇವು ಯಾವುದೂ ಈ ರಾಜಕಾರಣಿಗಳ ಮೈಕ್‌ನಲ್ಲಿ ಕೇಳಿಸುವುದೇ ಇಲ್ಲ!
ಕಾರ್ಯಕ್ರಮ ಮುಗಿದ ಮೇಲೆ ಊರು ತುಂಬಾ ಬ್ಯಾನರ್, ಫ್ಲೆಕ್ಸ್, ಬಂಟಿಂಗ್ಸ್‌ಗಳ ಕಸ. ರಸ್ತೆ ಬದಿ ಬಿದ್ದ ಪಕ್ಷದ ಧ್ವಜಗಳ ಮೇಲೆ, ನಾಯಕರ ಮುಖಗಳ ಮೇಲೆ ನಾಯಿಗಳು ಓಡಾಡುತ್ತಿದ್ದರೂ ಯಾರೂ ಕ್ಯಾರೇ ಎನ್ನುವುದಿಲ್ಲ. ಏಕೆಂದರೆ, ಮತ್ತೊಂದು ಕಡೆ ಇನ್ನೊಂದು ಜಾಗೃತಿಗೆ ಬ್ಯಾನರ್ ಪ್ರಿಂಟ್ ಆಗುತ್ತಿರುತ್ತದೆ!
ಅಂತಿಮವಾಗಿ ನಮಗೇನು ಉಳಿಯುತ್ತದೆ?
ಈ ಕೆಟ್ಟ ಮತ್ತು ನಿಷ್ಪ್ರಯೋಜಕ ರಾಜಕೀಯ 'ಸಿಂಬಳ'ದಲ್ಲಿ ನೊಣದಂತೆ ಸಿಕ್ಕಿಹಾಕಿಕೊಂಡು ಬದುಕುವುದು ನಮಗೆ ಅನಿವಾರ್ಯವೇ? ಸಣ್ಣ ಪರಿವರ್ತನೆಯೂ ಸಾಧ್ಯವಿಲ್ಲವೇ?
ಸದ್ಯಕ್ಕಂತೂ ಅಸಂಬದ್ಧವಾಗಿ ಪ್ರತೀವರ್ಷ ಮಾಡುವ ಅಡಿಕೆ-ಮೆಣಸು ಬೆಳೆ ಸರ್ವೆ ಮುಗಿಸಿ. ತದನಂತರ, ಪರಿಸರ ಸೂಕ್ಷ್ಮ ಪ್ರದೇಶದ ಈ 7ನೇ ಕರಡು ಅಧಿಸೂಚನೆಗೆ ಒಂದು ಆಕ್ಷೇಪಣೆ ಸಲ್ಲಿಸಿ, ಅದನ್ನು ರಿಜಿಸ್ಟರ್ ಪೋಸ್ಟ್‌ನಲ್ಲಿ ಕಳುಹಿಸಿ ಅದರೊಂದು ಕಾಪಿ ಎತ್ತಿಟ್ಟುಕೊಳ್ಳಿ! ಬಹುಶಃ ಆಗಸ್ಟ್ 2028 ಕ್ಕೆ ಮತ್ತೆ ಸಲ್ಲಿಸಬೇಕಾಗುವ 8ನೇ ಅಧಿಸೂಚನೆಗೆ ಆ ಕಾಪಿ ನಮಗೆ ಅನುಕೂಲಕ್ಕೆ ಬರಬಹುದು!
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
