350ಕ್ಕೂ ಹೆಚ್ಚು ಕಂಪನಿಗಳು ಭಾಗಿ, 24,000ಕ್ಕೂ ಅಧಿಕ ಉದ್ಯೋಗಾವಕಾಶ
ಅಭ್ಯರ್ಥಿಗಳಿಗೆ ಎಐ ಆಧಾರಿತ ಚಾಟ್‌ಬಾಟ್ ಶಿಫಾರಸು ಹಾಗೂ ಉಚಿತ ವಸತಿ ಸೌಲಭ್ಯ
ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ 16ನೇ ಆವೃತ್ತಿಯ ‘ಆಳ್ವಾಸ್ ಪ್ರಗತಿ–2026’ ಬೃಹತ್ ಉದ್ಯೋಗ ಮೇಳವು ಆಗಸ್ಟ್ 7 ಮತ್ತು 8ರಂದು ವಿದ್ಯಾಗಿರಿ ಆವರಣದಲ್ಲಿ ನಡೆಯಲಿದೆ. ದೇಶದ ಅತಿದೊಡ್ಡ ಉದ್ಯೋಗ ಮೇಳಗಳಲ್ಲಿ ಒಂದಾಗಿ ಬೆಳೆದುಬಂದಿರುವ ಈ ಅಭಿಯಾನದಲ್ಲಿ ಈ ಬಾರಿ 350ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿದ್ದು, ವಿವಿಧ ಕ್ಷೇತ್ರಗಳಲ್ಲಿ 24,298ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿರಲಿವೆ.
ಸಂಸ್ಥೆಯ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (CSR) ಯೋಜನೆಯಡಿ ಆಯೋಜಿಸಲಾಗುತ್ತಿರುವ ಈ ಮೇಳವು ಅಭ್ಯರ್ಥಿಗಳು ಹಾಗೂ ಉದ್ಯೋಗದಾತರಿಗೆ ಸಂಪೂರ್ಣ ಉಚಿತವಾಗಿದೆ.
ವಿಶೇಷವಾಗಿ ಗ್ರಾಮೀಣ ಹಾಗೂ ಅವಕಾಶವಂಚಿತ ಪ್ರತಿಭಾವಂತ ಯುವಜನತೆಗೆ ನೇರ ಉದ್ಯೋಗ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಉದ್ಯೋಗ ಮೇಳದ ಕುರಿತು ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಶ್ರೀ ವಿವೇಕ ಆಳ್ವ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ ಶೆಟ್ಟಿ ಹಾಗೂ ಪ್ಲೇಸ್‌ಮೆಂಟ್ ವಿಭಾಗದ ಮುಖ್ಯಸ್ಥೆ ಕುಮಾರಿ ರಂಜಿತಾ ಆಚಾರ್ಯ ಈ ಮಾಹಿತಿಯನ್ನು ನೀಡಿದರು.
ಪ್ರಮುಖ ಆಕರ್ಷಣೆಗಳು ಹಾಗೂ ಸೌಲಭ್ಯಗಳು:
ಆನ್‌ಲೈನ್ ನೋಂದಣಿ ಕಡ್ಡಾಯ: ನೇಮಕಾತಿ ಪ್ರಕ್ರಿಯೆಯನ್ನು ಸುಗಮ ಹಾಗೂ ಡಿಜಿಟಲ್ ರೂಪದಲ್ಲಿ ನಡೆಸುವ ಉದ್ದೇಶದಿಂದ ಅಭ್ಯರ್ಥಿಗಳಿಗೆ ಉಚಿತ ಆನ್‌ಲೈನ್ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ. ಆಸಕ್ತರು alvaspragati.com/candidateregistration ವೆಬ್‌ಸೈಟ್ ಮೂಲಕ ನೋಂದಾಯಿಸಿಕೊಳ್ಳಬಹುದು.
ಎಐ (AI) ತಂತ್ರಜ್ಞಾನದ ಬೆಂಬಲ: ಈ ಬಾರಿ ವಿಶೇಷವಾಗಿ ಎಐ ಆಧಾರಿತ ಚಾಟ್‌ಬಾಟ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಅಭ್ಯರ್ಥಿಗಳು ಬಯೋಡೇಟಾ ಅಪ್‌ಲೋಡ್ ಮಾಡಿದ ತಕ್ಷಣವೇ ಅವರ ಅರ್ಹತೆಗೆ ತಕ್ಕಂತೆ ಸೂಕ್ತ ಕಂಪನಿಗಳು ಮತ್ತು ಹುದ್ದೆಗಳನ್ನು ವ್ಯವಸ್ಥೆಯು ಸ್ವಯಂಚಾಲಿತವಾಗಿ ಶಿಫಾರಸು ಮಾಡಲಿದೆ.
ಪ್ರೀ-ಓರಿಯಂಟೇಶನ್ ತರಬೇತಿ: ಸಂದರ್ಶನಕ್ಕೆ ಸಿದ್ಧತೆ ನಡೆಸಲು ಬಂಟ್ವಾಳ, ಪುತ್ತೂರು, ಕುಂದಾಪುರ, ಸುಬ್ರಹ್ಮಣ್ಯ, ಮೂಡುಬಿದಿರೆ, ಮಂಗಳೂರು, ಕಾಪು ಮತ್ತು ಉಪ್ಪಳ ಕೇಂದ್ರಗಳಲ್ಲಿ ಆಳ್ವಾಸ್‌ನ ತಜ್ಞರ ತಂಡದಿಂದ ಉಚಿತ ಪೂರ್ವ ಸಿದ್ಧತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಉಚಿತ ವಸತಿ ಮತ್ತು ಸಾರಿಗೆ: ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬರುವ ಅಭ್ಯರ್ಥಿಗಳಿಗೆ ಆಗಸ್ಟ್ 6ರಿಂದಲೇ ಉಚಿತ ವಸತಿ ವ್ಯವಸ್ಥೆ ಮಾಡಲಾಗುವುದು. ಜೊತೆಗೆ ಐಟಿಐ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ ಒದಗಿಸಲಾಗಿದೆ.
ವಿವಿಧ ವಲಯಗಳಲ್ಲಿ ಲಭ್ಯವಿರುವ ಉದ್ಯೋಗಗಳು
ಈ ಮೇಳದಲ್ಲಿ ಐಟಿ, ಉತ್ಪಾದನೆ, ಬ್ಯಾಂಕಿಂಗ್, ಆರೋಗ್ಯ, ಆತಿಥ್ಯ, ಮಾಧ್ಯಮ, ನಿರ್ಮಾಣ ಸೇರಿದಂತೆ ಬಹುತೇಕ ಎಲ್ಲಾ ಪ್ರಮುಖ ವಲಯಗಳ ಸಂಸ್ಥೆಗಳು ಭಾಗವಹಿಸುತ್ತಿವೆ:
ಉತ್ಪಾದನಾ (Manufacturing) ವಲಯ: ಟೊಯೋಟಾ, TVS, ಸನ್ಸೆರಾ ಸೇರಿದಂತೆ 74 ಕಂಪನಿಗಳಿಂದ 5,877ಕ್ಕೂ ಹೆಚ್ಚು ಹುದ್ದೆಗಳು ಲಭ್ಯ. ಟಾಟಾ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ (ಕೋಲಾರ) ವತಿಯಿಂದ ಮಹಿಳಾ ಅಭ್ಯರ್ಥಿಗಳಿಗೆ ವಿಶೇಷ ನೇಮಕಾತಿ ಅಭಿಯಾನ ನಡೆಯಲಿದೆ.
ಐಟಿ ಮತ್ತು ಐಟಿಇಎಸ್ (IT/ITeS): ಇನ್ಫೋಸಿಸ್ BPO, ಟೆಕ್ ಮಹೀಂದ್ರ ಸೇರಿದಂತೆ 40 ಕಂಪನಿಗಳಿಂದ 200ಕ್ಕೂ ಹೆಚ್ಚು ಕೋರ್ ಐಟಿ ಹಾಗೂ 3,500ಕ್ಕೂ ಹೆಚ್ಚು ನಾನ್-ಐಟಿ ಹುದ್ದೆಗಳು ಲಭ್ಯವಿವೆ.
ಬ್ಯಾಂಕಿಂಗ್ ಹಾಗೂ ಹಣಕಾಸು (BFSI): ANZ, HDFC, ಆಕ್ಸಿಸ್ ಬ್ಯಾಂಕ್ ಸೇರಿದಂತೆ 30ಕ್ಕೂ ಹೆಚ್ಚು ಸಂಸ್ಥೆಗಳಿಂದ 2,450ಕ್ಕೂ ಅಧಿಕ ಹುದ್ದೆಗಳು.
ಚಿಲ್ಲರೆ ವ್ಯಾಪಾರ (Retail & Sales): 67 ಕಂಪನಿಗಳಿಂದ 4,500ಕ್ಕೂ ಹೆಚ್ಚು ಹುದ್ದೆಗಳು ಲಭ್ಯವಿದ್ದು, ವಾರ್ಷಿಕ ₹3 ಲಕ್ಷದಿಂದ ₹16 ಲಕ್ಷದವರೆಗೆ ವೇತನ ಪ್ಯಾಕೇಜ್‌ಗಳಿವೆ.
ಆರೋಗ್ಯ ವಲಯ: ಅಪೋಲೋ, ವೊಕಾರ್ಟ್, ಸಕ್ರಾ ವರ್ಲ್ಡ್ ಆಸ್ಪತ್ರೆಗಳಿಂದ 750ಕ್ಕೂ ಹೆಚ್ಚು ಸ್ಟಾಫ್ ನರ್ಸ್‌ಗಳು ಸೇರಿದಂತೆ ಒಟ್ಟು 1,700ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ವಿದೇಶಿ ಉದ್ಯೋಗ ಹಾಗೂ ಇತರೆ: ‘ಎಕ್ಸ್‌ಪರ್ಟೈಸ್’ ಸಂಸ್ಥೆಯು ಐಟಿಐ ಮತ್ತು ಡಿಪ್ಲೊಮಾ ಅಭ್ಯರ್ಥಿಗಳಿಗೆ ಗಲ್ಫ್ ದೇಶಗಳಲ್ಲಿ ಉದ್ಯೋಗಾವಕಾಶ ಒದಗಿಸುತ್ತಿದೆ. ಜತೆಗೆ ಮಾಧ್ಯಮ, ಫಾರ್ಮಾ, ಎಲೆಕ್ಟ್ರಾನಿಕ್ಸ್ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲೂ ನೂರಾರು ಉದ್ಯೋಗಾವಕಾಶಗಳಿವೆ.
ಅರ್ಹತೆ ಹಾಗೂ ಭಾಗವಹಿಸುವಿಕೆ:
SSLC, PUC, ITI, ಡಿಪ್ಲೊಮಾ, ಬಿ.ಎ, ಬಿ.ಕಾಮ್, ಬಿ.ಎಸ್ಸಿ, ಬಿಸಿಎ, ಬಿಇ/ಬಿ.ಟೆಕ್, ನರ್ಸಿಂಗ್, ವೈದ್ಯಕೀಯ, ಎಂ.ಬಿ.ಎ, ಎಂ.ಕಾಮ್ ಸೇರಿದಂತೆ ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದವರು ಹಾಗೂ 2026ರಲ್ಲಿ ಅಂತಿಮ ವರ್ಷದ ವ್ಯಾಸಂಗ ಮುಗಿಸಿರುವ ಅಭ್ಯರ್ಥಿಗಳು ಭಾಗವಹಿಸಬಹುದು. ಅನುಭವಸ್ಥ ಅಭ್ಯರ್ಥಿಗಳಿಗೂ ಅನುಕೂಲಕರ ಹುದ್ದೆಗಳು ಲಭ್ಯವಿವೆ.
ಸಂಪರ್ಕ ಹಾಗೂ ಹೆಚ್ಚಿನ ಮಾಹಿತಿಗೆ:
ಅಭ್ಯರ್ಥಿಗಳು ಭಾಗವಹಿಸುವ ಕಂಪನಿಗಳ ಮಾಹಿತಿ ಹಾಗೂ ಹೆಚ್ಚಿನ ವಿವರಗಳಿಗಾಗಿ www.alvaspragati.com ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಸಹಾಯಕ್ಕಾಗಿ 9611750531, 9741440490, 9008907716, 7975223865 ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

