ವಿದ್ಯಾಗಿರಿ: ಇಪ್ಪತ್ತಮೂರು ಸಾವಿರದ ಆರು ನೂರಕ್ಕೂ ಹೆಚ್ಚಿನ ಉದ್ಯೋಗಾವಕಾಶ, 350 ಕ್ಕೂ ಹೆಚ್ಚು ಪ್ರಸಿದ್ಧ ಬಹುರಾಷ್ಟ್ರೀಯ ಹಾಗೂ ಸ್ಥಳೀಯ ಸೇರಿದಂತೆ ವಿವಿಧ ವಲಯಗಳ ಕಂಪೆನಿಗಳ ಸಮಾಗಮದ ಬೃಹತ್ ಉದ್ಯೋಗ ಮೇಳವಾದ ‘ಆಳ್ವಾಸ್ ಪ್ರಗತಿ -2026’ 16ನೇ ಆವೃತಿಗೆ ವಿದ್ಯಾಗಿರಿಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಸಜ್ಜಾಗಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು 2026ರ ಆಗಸ್ಟ್ 7 ಮತ್ತು 8ರಂದು ಮೂಡುಬಿದಿರೆಯ ಆಳ್ವಾಸ್ ವಿದ್ಯಾಗಿರಿ ಆವರಣದಲ್ಲಿ ‘ಆಳ್ವಾಸ್ ಪ್ರಗತಿ-2026’ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದೆ.
ಆಳ್ವಾಸ್ ಪದವಿಪೂರ್ವ ಕಾಲೇಜಿನ ಆವರಣ ಹಾಗೂ ಒಲ್ಡ್ ಪಿಜಿ ಬ್ಲಾಕ್, ನುಡಿಸಿರಿ ವೇದಿಕೆ ಹಾಗೂ ಪದವಿ ಕಾಲೇಜಿನ ಬ್ಲಾಕ್‌ನಲ್ಲಿ ಉದ್ಯೋಗ ಮೇಳದ ಸಂದರ್ಶನ, ಪರೀಕ್ಷೆ ಇತ್ಯಾದಿಗಳಿಗೆ ವ್ಯವಸ್ಥೆ ಮಾಡಲಿದ್ದು, ಉದ್ಘಾಟನೆಯು ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಆಗಸ್ಟ್ 7ರಂದು ಬೆಳಿಗ್ಗೆ 9.30ಕ್ಕೆ ನಡೆಯಲಿದೆ.
ವೈದ್ಯಕೀಯ, ಅರೆ ವೈದ್ಯಕೀಯ, ಎಂಜಿನಿಯರಿಂಗ್, ಕಲಾ, ವಾಣಿಜ್ಯ ಮತ್ತು ಆಡಳಿತ ನಿರ್ವಹಣೆ, ಮೂಲ ವಿಜ್ಞಾನ, ನರ್ಸಿಂಗ್, ಐಟಿಐ, ಡಿಪ್ಲೊಮಾ ಹಾಗೂ ಕೌಶಲ ಹೊಂದಿದ ಪಿಯುಸಿ ಮತ್ತು ಎಸ್‌ಎಸ್‌ಎಲ್ಸಿ ಅರ್ಹತೆ ಹೊಂದಿದವರು ಸೇರಿದಂತೆ ಎಲ್ಲ ಪದವಿ ಹಾಗೂ ಸ್ನಾತಕ ಪದವೀಧರರಿಗೆ ‘ಆಳ್ವಾಸ್ ಪ್ರಗತಿ -2026’ ಯು ಅತ್ಯುತ್ತಮ ಉದ್ಯೋಗಳ ಬೃಹತ್ ಅವಕಾಶವನ್ನು ಕಲ್ಪಿಸಿದೆ.
ಔದ್ಯೋಗಿಕ ಉನ್ನತೀಕರಣ ಕೇಂದ್ರವನ್ನು ಸ್ಥಾಪಿಸಲಾಗಿದ್ದು, 120 ಮಂದಿ ಕಾರ್ಯ ನಿರ್ವಹಿಸಲಿದ್ದಾರೆ. ಅವರಿಗೆ ಎಂಟು ದಿನಗಳ ಕಾಲ ಕಾರ್ಪೊರೇಟ್ ತರಬೇತಿ ನೀಡಲಾಗಿದೆ. 500 ಮಂದಿ ಸಿಬ್ಬಂದಿ ಸೇರಿದಂತೆ 1000 ಮಂದಿ ಸ್ವಯಂ ಸೇವಕರಾಗಿ ಸಹಕರಿಸಲಿದ್ದಾರೆ.
ಕಲರ್ ಕೋಡಿಂಗ್ ವ್ಯವಸ್ಥೆ
ವಿದ್ಯಾರ್ಥಿಗಳ ಅರ್ಹತೆಗೆ ಅನುಗುಣವಾಗಿ ‘ಸಪ್ತವರ್ಣ’ ವಿನ್ಯಾಸ ಮಾಡಲಾಗಿದೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಗೆ ‘ಕೆಂಪು’, ಐಟಿಐಗೆ ‘ಕಿತ್ತಳೆ, ಡಿಪ್ಲೊಮಾಗೆ ‘ಪಿಂಕ್’, ಪದವೀಧರರಿಗೆ ‘ಹಸಿರು’, ಎಂಜಿನಿಯರಿಂಗ್‌ಗೆ ‘ನೀಲಿ’, ನರ್ಸಿಂಗ್ ಮತ್ತು ಅರೆವೈದ್ಯಕೀಯಕ್ಕೆ ‘ಬಿಳಿ’, ಸ್ನಾತಕೋತ್ತರ ಪದವೀಧರರಿಗೆ ‘ಹಳದಿ’ ಬಣ್ಣವನ್ನು ನೀಡಲಾಗಿದೆ. ಈ ಬಣ್ಣದ ವ್ಯವಸ್ಥೆಯು ನಿರ್ದಿಷ್ಟ ಅರ್ಹತೆಯ ಹುದ್ದೆಗಳಿಗೆ ಆಯ್ಕೆ ಮಾಡಲು ಸಹಕಾರಿಯಾಗಲಿದೆ.
ಉದ್ಯೋಗ ಮಾಹಿತಿ ಕೈಪಿಡಿ
ಔದ್ಯೋಗಿಕ ವಲಯ ಆಧಾರದಲ್ಲಿ ಕೈಪಿಡಿಯನ್ನು ಮುದ್ರಿಸಲಾಗಿದ್ದು, ಈ ಪುಸ್ತಕದಲ್ಲಿ ಕಂಪೆನಿಯ ಹೆಸರು, ಹುದ್ದೆಯ ಹೆಸರು, ಖಾಲಿ ಇರುವ ಹುದ್ದೆಗಳು, ಅರ್ಹತೆ, ಕೋರ್ಸ್, ವೇತನದ ವಿವರ, ಅನುಭವ, ಉದ್ಯೋಗದ ಸ್ಥಳ ಹಾಗೂ ಸಂದರ್ಶನ ನಡೆಯುವ ಕೊಠಡಿಯ ಸಂಖ್ಯೆಯನ್ನು ನೀಡಲಾಗಿದೆ. ಈ ಕೈಪಿಡಿಯು ಆಕಾಂಕ್ಷಿಗಳಿಗೆ ನೆರವಾಗಲಿದೆ.
ಸುರಕ್ಷತೆ ಹಾಗೂ ನಿರ್ವಹಣೆಗಾಗಿ ಕೇಂದ್ರೀಕೃತ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದ್ದು, ಪ್ರಗತಿ ನಡೆಯುವ ಆವರಣದ ಎಲ್ಲೆಡೆ ಸಿಸಿಟಿವಿ ಕ್ಯಾಮೆರಾ ಹಾಕಲಾಗಿದೆ. 523ಕ್ಕೂ ಅಧಿಕ ಕೊಠಡಿಗಳನ್ನು ನೀಡಲಾಗಿದೆ. ಮಾಹಿತಿಗಾಗಿ ಬೃಹತ್ ಎಲ್‌ಇಡಿ ಪರದೆ ಅಳವಡಿಸಲಾಗಿದೆ. ಸಂದರ್ಶನ ಹಾಗೂ ಪರೀಕ್ಷೆ ನಡೆಸುವ ವಿವಿಧ ಕಂಪೆನಿಗಳ 800ಕ್ಕೂ ಅಧಿಕ ಮಾನವ ಸಂಪನ್ಮೂಲ ಅಧಿಕಾರಿಗಳು ಪಾಲ್ಗೊಳ್ಳುತ್ತಿದ್ದು, ಪ್ರಯಾಣ ಹಾಗೂ ವಾಸ್ತವ್ಯದ ವ್ಯವಸ್ಥೆಯನ್ನು ಮಾಡಲಾಗಿದೆ.
ಮಳೆ ಬಂದರೂ ಆತಂಕ ಬೇಡ – ಎಲ್ಲಾ ರೀತಿಯ ಮುನ್ನೆಚ್ಚರಿಕಾ ಸಿದ್ಧತೆಗಳು ಪೂರ್ಣ
ಆಳ್ವಾಸ್ ಪ್ರಗತಿ–2026 ಉದ್ಯೋಗ ಮೇಳಕ್ಕೆ ಆಗಮಿಸುವ ಉದ್ಯೋಗಾಕಾಂಕ್ಷಿಗಳು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಮಳೆಗಾಲವನ್ನು ಗಮನದಲ್ಲಿಟ್ಟುಕೊಂಡು ಆವರಣದಾದ್ಯಂತ ಸಮಗ್ರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಮುಖ ಸಂಚಾರ ಮಾರ್ಗಗಳು, ನೋಂದಣಿ ಕೇಂದ್ರಗಳು, ಸಂದರ್ಶನ ನಡೆಯುವ ಕಟ್ಟಡಗಳ ಪ್ರವೇಶ ದ್ವಾರಗಳು ಹಾಗೂ ವಿವಿಧ ವಿಭಾಗಗಳನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ಮಳೆನಿರೋಧಕ ಶೀಟ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ಮಳೆ ಬಂದರೂ ಅಭ್ಯರ್ಥಿಗಳು ಸುಲಭವಾಗಿ ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ಸಂಚರಿಸಬಹುದಾಗಿದೆ.
ಎಐ ಚಾಟ್‌ಬಾಟ್ ಮೂಲಕ ಸೂಕ್ತ ಉದ್ಯೋಗಗಳ ಶಿಫಾರಸು
‘ಆಳ್ವಾಸ್ ಪ್ರಗತಿ–2026’ರಲ್ಲಿ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಬಾಟ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಉದ್ಯೋಗಾಕಾಂಕ್ಷಿಗಳು ತಮ್ಮ ರೆಸ್ಯೂಮ್‌ಯನ್ನು ಅಪ್‌ಲೋಡ್ ಮಾಡಬಹುದು ಅಥವಾ ವಿದ್ಯಾರ್ಹತೆ, ಕೋರ್ಸ್, ಅಂಕಗಳು/ಶೇಕಡಾವಾರು ಅಥವಾ ಸಿಜಿಪಿಎ ಮಾಹಿತಿಯನ್ನು ನಮೂದಿಸಿ ಉದ್ಯೋಗಗಳನ್ನು ಹುಡುಕಬಹುದಾಗಿದೆ. ಈ ಮಾಹಿತಿಯ ಆಧಾರದ ಮೇಲೆ ಎಐ ಚಾಟ್‌ಬಾಟ್ ಅಭ್ಯರ್ಥಿಯ ಅರ್ಹತೆಗೆ ಹೊಂದುವ ಐದು ಅತ್ಯುತ್ತಮ ಕಂಪೆನಿಗಳನ್ನು ಶಿಫಾರಸು ಮಾಡುತ್ತದೆ. ಈ ಎಐ ಚಾಟ್‌ಬಾಟ್ ಸೇವೆಯನ್ನು ಬಳಸಲು ಆವರಣದ ವಿವಿಧ ಸ್ಥಳಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗಿದ್ದು, ಅಭ್ಯರ್ಥಿಗಳು ತಮ್ಮ ಮೊಬೈಲ್ ಮೂಲಕ ಅದನ್ನು ಸ್ಕ್ಯಾನ್ ಮಾಡಿ ತಕ್ಷಣವೇ ಸೇವೆಯನ್ನು ಪಡೆಯಬಹುದಾಗಿದೆ.
ಹೊರ ಜಿಲ್ಲೆಗಳ ಆಕಾಂಕ್ಷಿಗಳಿಗೆ ಉಚಿತ ವಸತಿ ವ್ಯವಸ್ಥೆ
ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳ ವಸತಿಗಾಗಿ 1500 ಕೊಠಡಿಗಳನ್ನು ಮೀಸಲು ಇರಿಸಲಾಗಿದೆ. ಬೈಂದೂರು, ಬ್ರಹ್ಮಾವರ, ಪುತ್ತೂರು, ಬೆಳ್ತಂಗಡಿ, ಹಾಗೂ ಉಡುಪಿಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ವಿದ್ಯಾಗಿರಿಯ ಆವರಣದ ಕೆಫೆಟೇರಿಯದಲ್ಲಿ ರಿಯಾಯಿತಿ ದರದಲ್ಲಿ ಆಹಾರದ ವ್ಯವಸ್ಥೆ ಕಲ್ಪಿಸಲಾಗಿದೆ.
30ಕ್ಕೂ ಅಧಿಕ ಯುವ ನಾಯಕರುಗಳ ತಂಡದಿಂದ ಸೇವೆ
‘ಆಳ್ವಾಸ್ ಪ್ರಗತಿ–2026’ಯ ಅಧಿಕೃತ ಸಹಭಾಗಿಗಳಾಗಿರುವ 30ಕ್ಕೂ ಹೆಚ್ಚು ಯುವ ನಾಯಕರು ಉದ್ಯೋಗ ಮೇಳದ ಎರಡು ದಿನಗಳ ಅವಧಿಯಲ್ಲಿ ಸೇವೆ ಸಲ್ಲಿಸಲಿದ್ದಾರೆ. ಈ ತಂಡವು ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡುವುದು, ನೋಂದಣಿ ಪ್ರಕ್ರಿಯೆಗೆ ನೆರವಾಗುವುದು ಹಾಗೂ ಯಾವುದೇ ಸಂದೇಹಗಳಿಗೆ ತಕ್ಷಣ ಸ್ಪಂದಿಸಲಿದೆ.
‘ಆಳ್ವಾಸ್ ಪ್ರಗತಿ 2026’ರಲ್ಲಿ ಪಾಲ್ಗೊಳ್ಳಲು ಹಾಗೂ ಸಿದ್ಧತಾ ಪರಿಕರಗಳನ್ನು ಪಡೆದುಕೊಳ್ಳಲು ಆನ್‌ಲೈನ್ ನೋಂದಣಿಕಡ್ಡಾಯವಾಗಿದೆ. ಪ್ರವೇಶದ ದ್ವಾರದ ಸಮೀಪವೇ ವಿದ್ಯಾರ್ಥಿಗಳಿಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
ಉದ್ಯೋಗಾಕಾಂಕ್ಷಿಗಳು http://alvaspragati.com/CandidateRegistrationPage ನಲ್ಲಿ ಉಚಿತ ನೋಂದಣಿ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9611750531 /9741440490 / 9008907716 / 7975223865
ಸೂಚನೆ: ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ನೋಂದಾವಣೆ ಮಾಡಿಕೊಳ್ಳಬೇಕು.

