ಕಾಣದೂರಿನ ಕೊಟ್ಟೆ ಹಣ್ಣು...

Upayuktha
0

 


ನಾನು ಸಾಮಾನ್ಯವಾಗಿ ಎಲ್ಲಿಗೆ ಓಡಾಡುವುದಿದ್ದರೂ ಸಹ ಹೆಚ್ಚಿನ ಪ್ರಮಾಣದಲ್ಲಿ ಬಸ್ಸಿನಲ್ಲಿ ಅದರಲ್ಲೂ ಈಗ ಸಮಾಜ ಸೇವ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ವೇಳೆಗಂತು ಕೆಲವೊಂದು ಕಡೆ ಜಾಗೃತಿ ಕಾರ್ಯಕ್ರಮಕ್ಕೆ ಹೋಗೋದು ಬರೋದು ಇದ್ದೇ ಇರುತ್ತದೆ. ಹೀಗಿದ್ದಾಗ ಒಂದು ದಿನ ಬಸ್ಸಲ್ಲಿ ಕೂತಿದ್ದಾಗ ಅದರಲ್ಲೂ ಗೋಕರ್ಣ ಬಸ್ನಲ್ಲಿ ಕೂತಿದ್ದಾಗ ಒಂದೆರಡು ಮಕ್ಕಳು ಕೊಟ್ಟೆ ಹಣ್ಣು ಅಮ್ಮ ಕೊಟ್ಟೆ ಹಣ್ಣು ಎಂದರು. ನನ್ನದು ಕುತೂಹಲವೆಂಬದು ಕೆರಳಿ ಕೆಂಡಮಂಡಲವಾಯಿತು. ಯಾವುದೀ ಕೊಟ್ಟೆ ಹಣ್ಣು? ಹೇಗಿರುತ್ತದೆ ಅದು? ನಾನು ಸಾಮಾನ್ಯವಾಗಿ ಕಂಡ ಹಣ್ಣನ್ನೆಲ್ಲ ಮೌಲ್ಯ ಭರಿಸುವ ರೀತಿಯಲ್ಲೋ... ಇಲ್ಲ ಯಾರೋ ಕೊಟ್ಟಿದ್ದು ಹೀಗೆ ಏನಾದರೂ ಆಗಲಿ ಅದನ್ನು ತಿಂದಿದ್ದೀನಿ ಆದರೆ ಈ ಕೊಟ್ಟೆ ಹಣ್ಣು ಅಂದ್ರೆ ಏನು ಅನ್ನೋದೆ ಒಂದು ಕುತೂಹಲಕಾರಿ ಅಂಶವಾಗಿ ನನ್ನ ತಲೆಯೊಳಗೆ ಅದು ಬೆಳೆದು ಪಕ್ಕವಾಗಿ ನಿಂತಿತ್ತು.


ಏನಾದರೂ ಆಗೇ ಬಿಡಲಿ ಮಕ್ಕಳ ಬಳಿ ಕೇಳಿಯೇ ಬಿಡಬೇಕು ಎಂದುಕೊಂಡು ಆ ಮಕ್ಕಳೆಡೆಗೆ ದೀರ್ಘವಾದ ನೋಟವನ್ನು ಬೀರಿದೆ. ಆ ಮಕ್ಕಳೋ ನನ್ನ ನೋಡಿದ ಕ್ಷಣಕ್ಕೆ ಯಾವುದೋ ಶ್ರೀಲಂಕಾಪುರದ ಲಂಕಿಣಿಯೇ ಬಂದಿರಬೇಕೆಂದುಕೊಂಡು ಪುಟ್ಟ ಕಣ್ಣುಗಳನ್ನು ಮೌನದಿಂದ ತಗ್ಗಿಸಿ ಅವರ ನೋಟವನ್ನು ಪುನಃ ಕಿಟಕಿ ಎಡೆಗೆ ಬೀರಿದರು. ಆದರೆ ನನ್ನ ಕುತೂಹಲಕ್ಕೆ ಪೂರ್ಣ ವಿರಾಮ ಅನ್ನೋದು ಬೇಕಲ್ಲ, ಏಕೆಂದರೆ ಒಂದೆರಡು ಮರಗಳನ್ನು ನೋಡಿ ಕೊಟ್ಟೆ ಹಣ್ಣು ಕೊಟ್ಟೆ ಹಣ್ಣು ಅಂದಿದ್ದರೆ ನಾ ಕಾಣದ ಯಾವುದೋ ನಿಗೂಢತೆ ಇರಬೇಕು ಎಂದು ಕೊಂಡು ಸುಮ್ಮನಾಗುತ್ತಿದ್ದೆ. ಆದರೆ ಅವರು ಹಾಗೆ ಮಾಡದೆ ಕಂಡ ಕಂಡಲ್ಲೆಲ್ಲ ಹೇಳುತ್ತಾ ಬರುತ್ತಿದ್ದರು ಮೂರು ಸೀಟಿನ ಬಸ್ಸಿನಲ್ಲಿ ಕಿಟಕಿ  ಸೀಟಿನಲ್ಲಿ ಕುಳಿತ ಮಕ್ಕಳು ನನಗೆ ಒಂದು ಕ್ಷಣ ಸರ್ವಜ್ಞನ ಪ್ರತಿರೂಪ ಎನ್ನಿಸಿ ಬಿಟ್ಟರು. ಆದದ್ದು ಆಗೇ ಹೋಗಲಿ ಎಂದು ಆ ಮಕ್ಕಳ ಅಮ್ಮನ ಬಳಿ ಕೇಳಿಯೇ ಬಿಡಬೇಕೆಂದುಕೊಂಡು ಅವರತ್ತ ತಿರುಗಿದೆ ಅವರು ನಾಲ್ಕಾಣೆ ನಗುವಿಲ್ಲದ 12 ವರ್ಷದ ಸೇಡನ್ನು ತುಂಬಿರುವ ಸರ್ಪದಂತೆ ನನ್ನನ್ನು ನೋಡಿದರು ಆಗ ನನಗನ್ನಿಸಿತು ಮಕ್ಕಳು ಎಷ್ಟೇ ಕೊಟ್ಟೆ ಹಣ್ಣು ಕೊಟ್ಟೆಯನ್ನು ಎಂದು ಬಾಯಿ ಬಡಿಕೊಂಡರು ಮೂರ್ತಿ ಪ್ರತಿಷ್ಠಾಪಿಸಿದಂತೆ ಕುಳಿತಿದ್ದದ್ದು ಏಕೆಂದು,ಅವರ ನೋಟ ಹಾಗಿತ್ತು ಆದರೆ ನನ್ನ ಪದ್ಧತಿ ಹಾಗಲ್ಲ ಮೂಕರಿಗೂ ಬಾಯಿ ಬರಬಹುದು ಎಂಬ ಅತಿಶಯೋಕ್ತಿಯಿಂದ ಅವರಿಗೂ ಮಾತನಾಡಿಸುವುದು ಅಂತದ್ರಲ್ಲಿ ಇವರಿಗೆ ಬಿಡುವುದು ಅಸಾಧ್ಯ ಮಾತನಾಡಿಸಲೇಬೇಕು ಎಂದುಕೊಂಡು ಅಕ್ಕ ಅಕ್ಕ ಕೊಟ್ಟೆ ಹಣ್ಣು ಅಂದ್ರೆ ಏನು ಎಂದು ಕೇಳಿಯೇ ಬಿಟ್ಟೆ.


ಅವರು ನಿಧಾನಗತಿಯಲ್ಲಿ ತಿರುಗಿ ನನ್ನನ್ನು ನೋಡಿರುವ ಪರಿ ಅಯ್ಯೋ , ಸತ್ತೆ ನಾನು ಅವರ ಮನದಲ್ಲಿ ಏನೀ ಹುಡುಗಿ ದೇಹ ಬೆಳೆಸಿದ್ದಾಳೆ . ಬುದ್ದಿ ಕವಡೆ ಕಾಸಿನಷ್ಟು ಇಲ್ಲವಲ್ಲ ಎಂದು ಅನಿಸಿತೋ ಏನೋ ಎಂದು ಸಣ್ಣ ಹುಸಿ ನಗು ಬೀರಿದೆ ಆದರೂ ಮನದಲ್ಲಿ ನನ್ನ ಮೇಲೆ ನನಗೆ ಅಸಹ್ಯಕರ ಭಾವನೆ ಅದೇನೆಂದರೆ , ಅವರ ಮಕ್ಕಳಷ್ಟು ಬುದ್ಧಿ ನನ್ನಲ್ಲಿಲ್ಲ ಬಾಯಿ ನೋವು ಮಕ್ಕಳಷ್ಟು ಬುದ್ಧಿ ನನ್ನಲಿಲ್ಲವಾ ಎನ್ನುವುದು. ಆಗ ಮಕ್ಕಳ ಅಮ್ಮನ ನನ್ನ ಬಳಿಗೆ ಹೇಳಿದ ಕೊಟ್ಟೆ ಹಣ್ಣಿನ ಕಥೆ ಕೇಳಿ ನಗುವಿನ ಜೊತೆಗೆ ನನ್ನ ಮೇಲೆ ನನಗೆ ಜಿಗುಪ್ಸೆ ಬಂದಂತಾಯಿತು.


ಹಾಗಾದರೆ ಕೊಟ್ಟೆ ಹಣ್ಣು ಅನ್ನೋದು ಯಾವುದೇ ಅಮೆಜಾನ್ ಕಾಡಿನಲ್ಲಿ ಸಿಗುವ ಕಾಣದೂರಿನ ಹಣ್ಣಲ್ಲ. ಅದು ನಮ್ಮ ಕಡೆ ಆಗುವ ಯುಗಾದಿಯನ್ನು ಸ್ವಾಗತಿಸುವ ಎಲ್ಲರ ಅಚ್ಚುಮೆಚ್ಚಿನ ಪ್ರೀತಿಯ ಹಣ್ಣು.. ಅದು ಯಾವ ಹಣ್ಣು ಎಂದು ಹೇಳುತ್ತೇನೆ.


ನಮ್ಮದು ಕರಾವಳಿ ಜೊತೆಗೆ ಒಂದಿಷ್ಟು ಕಾಡು ಮಿಶ್ರಿತ ಇರೋ ಜಿಲ್ಲೆ ಸಾಮಾನ್ಯವಾಗಿ ನಮ್ಮ ಜಿಲ್ಲೆಗೆ ಬಹಳಷ್ಟು ಇತಿಹಾಸವಿದೆ ಅದರ ಜೊತೆಗೆ ಈ ಕೊಟ್ಟೆ ಹಣ್ಣಿಗೂ ಇತಿಹಾಸವಿದೆ ನಮ್ಮ ಹಳ್ಳಿ ಜನರ ಬದುಕು ಮಣ್ಣಿನ  ಅವಲಂಬನೆ ಪಾಪ ಎಲ್ಲರೂ ಕೂಡ ಬೆಳೆಗಳನ್ನು ನಂಬಿಯೇ ಬದುಕಬೇಕು ಕಾಡಿನ ಪ್ರಮಾಣ ಜಾಸ್ತಿ ಇರುವುದರಿಂದ ಮಂಗನ ಪ್ರಮಾಣವು ಕೂಡ ಜಾಸ್ತಿಯಾಗಿಯೇ ಇದೆ ಅದಕ್ಕೋ ಕಾಡಿನಲ್ಲಿ ಸಿಗುವ ಸೊಪ್ಪು ನಮಗೆ ತಂಬಳಿ ಉಂಡಂತೆ ಕಾಣುತ್ತದೆ, ಅದಕ್ಕೆ ಊರ ಬದಿಯಲ್ಲಿ ಬೆಳೆಯುವ ಬೆಳೆಗಳನ್ನು ಫೈವ್ ಸ್ಟಾರ್ ಹೋಟೆಲ್ನಲ್ಲಿ ಸಿಗುವ ಆಹಾರದಂತೆ ಬಂದು ತಿನ್ನುತ್ತದೆ ಅದರ ಕಾಟಕ್ಕೆ ನಾಯಿಯೂ ಸಹ ಪರರ ವಿಷಯ ನಮಗೆ ಯಾಕೆ ಎಂದು ಅದಕ್ಕೆ ಬೆನ್ನು ತೋರಿಸಿ ಮಲಗುತ್ತದೆ.ನಾವಾದರೂ ನಾಯಿಗೆ ಅದನ್ನು ತೋರಿಸಿ ಕೊಡುವುದು ಒಂದು ಸಂಸ್ಕೃತಿ ಪದ್ಧತಿ ಎಂದಷ್ಟೇ ಕಲ್ಪಿಸಿಕೊಂಡು ಅದನ್ನು ಕರೆದೇ ಕರೆಯುವುದು ಮಂಗಗಳಿಗೆ ಗೊತ್ತಿದೆ ಈ ಮನುಷ್ಯರು ನಾಯಿಯನ್ನು ಕರೆಯುವುದು ಬಿಡುವುದಿಲ್ಲ ಅವು ಬರುವುದಿಲ್ಲ ಎಂದು ತನ್ನ ಕುಟುಂಬ ಪರಿವಾರಕ್ಕೆ ಹೇಳಿ ಆರಾಮಾಗಿ ತಿನ್ನಿ ಎಂದು ಬಣ್ಣಿಸಿ ಮಕ್ಕಳಿಗೆಲ್ಲ ತಿನ್ನಲು ಕೊಡುತ್ತದೆ. 


ಆದಕಾರಣದಿಂದ ನಮ್ಮ ರೈತರು ಊರ ಬದಿಗೆ ಇರುವ ಹಣ್ಣಿನ ಮರಗಳಲ್ಲಿ ಮಾಗಿರುವ ಹಣ್ಣುಗಳಿಗೆ ಪ್ಲಾಸ್ಟಿಕ್ ಕೊಟ್ಟೆಯನ್ನು ಕಟ್ಟಿ, ಮಂಗಗಳ ಕಣ್ಣುಗಳಿಗೆ ಮರೆಮಾಚಿಸುವಂತೆ ಮಾಡಿ ನಾವು ಮಂಗನಿಗಿಂತ ಜಾಣರು ಎಂಬುದನ್ನು ತೋರಿಸಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ನಾನು ಗೋಕರ್ಣದಿಂದ ಬರುವಾಗ ಕೈಗೆ ಸಿಗುವಷ್ಟು ಮಾವಿನಹಣ್ಣಿಗೆ ಕೊಟ್ಟೆ ಎಂಬ ಬಟ್ಟೆಯನ್ನು ಧರಿಸಿ ಇಟ್ಟಿರುವುದು ಇದೇ ಕಾರಣಕ್ಕೆ ಆ ಮಕ್ಕಳು ಅಮ್ಮ ಕೊಟ್ಟೆ ಹಣ್ಣು ಕೊಟ್ಟೆ ಹಣ್ಣು ಎಂದು ಕೂಗಾಡಿದ್ದು ಆ ಮಕ್ಕಳ ಗೇಲಿ ಮಂಗನಿಗೋ ಇಲ್ಲ ನಮ್ಮ ರೈತರಿಗೋ ಗೊತ್ತಿಲ್ಲ ಆದರೆ ಕೊಟ್ಟೆ ಹಣ್ಣು ಎಂದರೆ ಮಾವಿನಹಣ್ಣಿನ ತದ್ಭವ ರೂಪವಿದ್ದಿರಬೇಕೆಂದುಕೊಂಡು ನನ್ನ ಬುದ್ಧಿಗೆ ನಾನೇ ಹೇಳಿಕೊಂಡು ಸುಮ್ಮನಾದೆ ನಮ್ಮ ಮನೆಯಲ್ಲೂ ಆಗಿರುವ ನಾಲ್ಕಾರು ಮಾವಿನಹಣ್ಣಿಗೆ ಕೊಟ್ಟೆಯನ್ನು ಕಟ್ಟಿ ಕೊಟ್ಟೆ ಹಣ್ಣು ಎಂದು ಮರುನಾಮಕರಣ ಮಾಡಬೇಕಾಗಿದೆ.


-ದಿವ್ಯಾ ಮಂಜುನಾಥ್ ನಾಯ್ಕ 

ಹೊರಮಸಗಿ, ಹೆಬೈಲ್


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top