ಚಂದಿರನ ಬೆಳಕಂತೆ ಅಕ್ಕ....

Upayuktha
0

 


ಕ್ಕ ಎಂದರೆ ಕೇವಲ ಒಡಹುಟ್ಟಿದವಳಲ್ಲ. ಅವಳು ಅಮ್ಮನಾಗುತ್ತಾಳೆ, ಜೀವದ ಗೆಳತಿಯಾಗುತ್ತಾಳೆ, ದುಃಖದಲ್ಲಿ ಭಾಗಿಯಾಗಿ ಸಂತೈಸುವ ಅವಳು ಕೆಲವೊಮ್ಮೆ ಕೋಪಕ್ಕೆ ಕಾರಣವಾಗುವ ವೈರಿಯೂ ಆಗಿ ಮನೆಯಲ್ಲಿ ನಡೆಯುವ ಮೂರನೆ ಮಹಾಯುದ್ದಕ್ಕೆ ಕಾರಣಳಾಗುತ್ತಾಳೆ. ಆದರೂ ಅಪ್ಪನ ಎದುರು ಶಾಂತಿದೂತೆಯಾಗಿ ನಮ್ಮನ್ನೆ ಬೈಯಿಸಿ ಹುಬ್ಬು ಹಾರಿಸಿ ಮುಗುಳುನಗುತ್ತಾಳೆ. ಆದರೆ ಕೊನೆಗೆ ಅವಳು ನಮ್ಮ ಅಕ್ಕ. 


ಅಕ್ಕನ ಜೊತೆಗಿನ ಸಂಬಂಧವೇ ಒಂದು ವಿಚಿತ್ರ ಬಂಧ. ಅವಳು ಮುನಿಸಿಕೊಳ್ಳುತ್ತಾಳೆ, ಮಾತು ಬಿಡುತ್ತಾಳೆ, ರೇಗಿಸುತ್ತಾಳೆ, ಕೆಲವೊಮ್ಮೆ ಜಗಳ ಮಾಡುತ್ತಾಳೆ. ಆದರೆ ಅವಳ ಪ್ರೀತಿಯ ಗೋಪುರಕ್ಕೆ ಮಾತ್ರ ಎಂದಿಗೂ ಬರವಿಲ್ಲ. ಅಕ್ಕಂದಿರು ಸಾವಿರಕ್ಕೊಬ್ಬರು ಎನ್ನಿಸುವುದೇ ಇದಕ್ಕಾಗಿ. ತಂಗಿಯರ ಮೊದಲ ಮಾದರಿ ಎಂದರೆ ಅದುವೇ ಅಕ್ಕ.  ಅವಳನ್ನು  ನೋಡುತ್ತಾ, ಹಿಂಬಾಲಿಸುತ್ತಾ, ರೇಗಿಸುತ್ತಾ ತಂಗಿಯಾದವಳು ಬೆಳೆಯುತ್ತಾಳೆ. ಅದಕ್ಕೆ ಇರಬಹುದು ‘ಹಿರಿಯಕ್ಕನ ಚಾಳಿ ಮನೆ ಮಂದಿಗೆ’ ಎಂಬ ಗಾದೆ ಇದೆ.  ಅಕ್ಕನಂತೆ ಆಸೆ ಉಡುಗೆ-ತೊಡುಗೆ ಎಲ್ಲವೂ ತಂಗಿಯದ್ದು ಆಗಿರುತ್ತೆ. ಅವಳ ಪ್ರತಿ ಹೆಜ್ಜೆಯನ್ನು  ತಂಗಿ ಚಾಚು ತಪ್ಪದೆ ಪಾಲಿಸುತ್ತಾಳೆ. ಕಾರಣವಿಷ್ಟೆ ಅಕ್ಕರೆಯ ಅಕ್ಕ ಮಾಡಿದ್ದೆಲ್ಲವು ಸರಿ ಎನ್ನುವ ನಂಬುಗೆ ಮತ್ತು ಅವಳ ಮೇಲಿನ ಅತಿಯಾದ ಪ್ರೀತಿ.  


ಅಕ್ಕ ಚೂಡಿ ಹಾಕುವಷ್ಟು ದೊಡ್ಡವಳಾಗಿದ್ದಾಳೆಂದು ಅಪ್ಪ ಚೂಡಿ ತಂದು ಕೊಟ್ಟರೆ, ತನಗೆ ಚೂಡಿ ಹಾಕಲು ಬಾರದಿದ್ದರೂ ಚಿಂತೆಯಿಲ್ಲ , ತಂಗಿಗೆ ಅದುವೇ ಬೇಕು.  ತಂಗಿಯ ಇಂತಹ ಹಠಗಳಿಂದ ಪಾಪ ಅಕ್ಕ ಎಷ್ಟೆಲ್ಲಾ ತ್ಯಾಗಮಯಿ ಆಗಬೇಕಲ್ಲವೆ. ಇದಕ್ಕೆ ನೀನು ದೊಡ್ಡವಳಿದ್ದೀಯಾ ಹೊಂದಿಕೊಂಡು ಹೋಗು ಎಂಬ ಹಿರಿಯರ ಉಪದೇಶ ಬೇರೆ. ಮಾಡದ ತಪ್ಪಿಗಾಗಿ ಅದೆಷ್ಟು ಸಾರಿ ಬೈಸಿಕೊಳ್ಳುತ್ತಾಳೋ. ಆ ತಪ್ಪು ನನ್ನ‌ ಒಡಹುಟ್ಟಿದವಳದೆಂದು ಸಹಿಸಿಕೊಂಡು ಬಿಡುತ್ತಾಳೆ. 


ತಂಗಿಯರ ಪ್ರಾಥಮಿಕ ಶಿಕ್ಷಣದಿಂದ‌ ಪ್ರೌಡಶಾಲೆಗೆ ಬರುವ ತನಕ  ಅಕ್ಕಂದಿರು ತಮ್ಮ ಜತೆಗೆ ಸೇರಿಸಿಕೊಳ್ಳುವುದಿಲ್ಲ. ಆಗೆಲ್ಲ ಅಕ್ಕ ವೈರಿಯಂತೆ ಕಾಣುತ್ತಾಳೆ. ನೀ ಸಣ್ಣವಳು ನೀ ಬೇಡ ಅಂತ. ಅಮ್ಮಂದಿರು ಅವಳನ್ನೂ ಕರೆದುಕೊಂಡು ಹೋಗು ಅಂದರೂ ಕೂಡಾ ‘ಹೋಗಮ್ಮ ಅವಳು ನನ್ನ ಜತೆ ಬರುವುದು ಬೇಡ’ ಅಂತ ಹೇಳಿ ಹೊರಟು ಬಿಡುತ್ತಾರೆ. ಅಕ್ಕನ ಬಗ್ಗೆ ಚಾಡಿ ಹೇಳಿ ಅಕ್ಕನಿಗೆ ಬೈಸುವುದೆಂದರೆ ಒಂಥರಾ ಖುಷಿ. ಈಗಲೂ ಅದನ್ನು ಮರೆತಿಲ್ಲಾ ಬಿಡಿ. ಆ ಎಳೆಯ ವಯಸ್ಸಲ್ಲಿ ಅಕ್ಕ ತಂಗಿಯರ ನಡುವೆ ನಡೆಯುವ ವಾಕ್ ಸಮರಗಳು  ಸಾಮಾನ್ಯ. ಕೆಲವೊಮ್ಮೆ ಕೈ-ಕೈ ಮಿಸಲಾಯಿಸಿದ್ದು ಇದೆ. ಅಕ್ಕನಿಗೆ ಸಣ್ಣದಾಗಿದ್ದೋ ಅಥವಾ ಅವಳು ಕಾಲೇಜಿಗೆ ಹಾಕದ ಡ್ರೆಸ್‌ಗಳನ್ನೂ ನೀನು ಹಾಕಿಕೊ ಅಂತ ಅಮ್ಮ ಕೊಟ್ಟರೆ ತಂಗಿಯೆದೆಯಲ್ಲಿ ಸಣ್ಣ ಅಸಮಾಧಾನ. ಅಕ್ಕನಿಗೆ ಒಂದು ಹೊಸ ಡ್ರೆಸ್ ತಂದುಕೊಟ್ಟರೂ ಅಕ್ಕನ ಬಗ್ಗೆ ಒಂಚೂರು ಅಸೂಯೆ.


ತಂಗಿ ಕಾಲೇಜ್ ಹೋಗುವಷ್ಟು ದೊಡ್ಡವಳಾದ ತಕ್ಷಣ ಅಕ್ಕ ಗೆಳತಿಯಾಗಿ ಬಿಡುತ್ತಾಳೆ. ಬಹುಶಃ ಆವಾಗೊಂದು ಸಣ್ಣ ಮೆಚ್ಯುರಿಟಿ ಬಂದಿರುತ್ತದೆ ಎಂಬ ಕಾರಣಕ್ಕಿರಬೇಕು. ಅಕ್ಕಂದಿರು ಮೆಚ್ಯೂರ್ಡ್ ಆಗಿರುತ್ತಾರಲ್ಲ. ಈ ತಂಗಿಯರೂ ಅಷ್ಟೇ ಅಲ್ಲಿವರೆಗೂ ಅಕ್ಕನ ಮಾತುಗಳ ವಿರುದ್ಧವೇ ಹೋಗುತ್ತಾ, ಅಕ್ಕ ಹೇಳಿದ್ದನ್ನು ಕೇಳದೆ ಇದ್ದವರು ಅಕ್ಕನ ಮಾತಿಗೆ ಬೆಲೆ ಕೊಡತೊಡಗುತ್ತಾರೆ. ಅಕ್ಕ ಫಸ್ಟ್ ಅಂಡ್ ಬೆಸ್ಟ್ ಫ್ರೆಂಡ್ ಆಗಿಬಿಡುತ್ತಾಳೆ. ಅಕ್ಕಂದಿರಿಗೂ ತಂಗಿಯರು ಗೆಳತಿಯರಾಗುತ್ತಾರೆ. ಗುಟ್ಟಿನ ವಿಷಯಗಳಿಗೆಲ್ಲ ಕಿವಿಯಾಗುತ್ತಾರೆ. ಅಪ್ಪ ಅಮ್ಮಂದಿರೆದುರು ಒಬ್ಬರಿಗೊಬ್ಬರು ಸಪೋರ್ಟ್ ಮಾಡಿಕೊಳ್ಳುವಂತಾಗುತ್ತಾರೆ. ಎಗ್ಸಾಮ್ ಟೈಮ್ ನಲ್ಲಿ ಅವಳೇ ಗುರು. ಎಷ್ಟೋ ಪಾಬ್ಲಮ್‌ಗಳಿಗೆಲ್ಲ ಸೊಲ್ಯುಷನ್ ಅವಳು. ಕಾಲೇಜಿನಲ್ಲಿನ ಎಲ್ಲ ವಿಷಯಗಳನ್ನು ಅವಳ ಕಿವಿಗೆ ಹಾಕಲೇಬೇಕು. ಕೆಲವೊಂದು ವಿಷಯಗಳನ್ನು ಹಗುರವಾಗಿ ತೆಗೆದುಕೊಂಡು ನಕ್ಕು ಬಿಡುವ ಅಕ್ಕಂದಿರು, ಕೆಲವೊಮ್ಮೆ ಥೇಟ್ ಅಮ್ಮನ ಚಾರ್ಜ್ ತೆಗೆದುಕೊಂಡು ಬೈಯ್ಯುತ್ತಾಳೆ. ಕಾರಣ ಇಷ್ಟೇ... ತಂಗಿ ಆಗಷ್ಟೇ ಕಣ್ಣು ಬಿಡುತ್ತಿರುವ ವಯಸ್ಸನ್ನು ಅವರು ದಾಟಿ ಬಂದಿರುತ್ತಾರೆ. ಅನುಭವದ ಆಧಾರದಲ್ಲಿ ಬುದ್ದಿ ಹೇಳುತಾರೆ. ಎಷ್ಟೋ ಸಲ ನನಗಾದಂತೆ ತಂಗಿಗೆ ಆಗಬಾರದು ಎಂಬ ಕಳಕಳಿ ಇರುತ್ತದೆ. ಅದಕ್ಕೆಲ್ಲವೆ ಅಕ್ಕ ಅಮ್ಮನ ಪ್ರತಿರೂಪ ಎಂದಿದ್ದು.



- ಸ್ವಾತಿ  ಶಿವಲಿಂಗಪ್ಪ ಬುಳ್ಳಾ 

ಪತ್ರಿಕೋದ್ಯಮ ವಿಭಾಗ, ಬಸವೇಶ್ವರ ಕಲಾ‌ ಮಹಾವಿದ್ಯಾಲಯ,

ಬಾಗಲಕೋಟೆ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top