ಸುರತ್ಕಲ್: ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಪಾತ್ರವು ಮಹತ್ವದ್ದಾಗಿದೆ. ಗೋವಿಂದ ದಾಸ ಕಾಲೇಜಿನ ಹಳೆ ವಿದ್ಯಾರ್ಥಿಗಳು ಗೋವಿಂದ ದಾಸ ಕಾಲೇಜು ಅಲ್ಯುಮ್ನಿ ಅಸೋಸಿಯೇಷನ್(ರಿ).ಯ ಮೂಲಕ ಕಾಲೇಜಿನೊಂದಿಗೆ ಬಾಂಧವ್ಯವನ್ನು ಮುಂದುವರೆಸಿಕೊಂಡು ವಿವಿಧ ರೀತಿಯ ಸಹಕಾರವನ್ನು ನೀಡುತ್ತಾ ಸಂಸ್ಥೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಪ್ರತಿ ವರ್ಷ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಕೊಡುಗೆ ನೀಡುತ್ತಾ ವಿದ್ಯಾವಂತ ಸಮಾಜವನ್ನು ನಿರ್ಮಿಸುವಲ್ಲಿ ಸಹಕರಿಸುತ್ತಿದ್ದಾರೆ ಎಂದು ಹಿಂದು ವಿದ್ಯಾದಾಯಿನೀ ಸಂಘ (ರಿ)., ಸುರತ್ಕಲ್ ಇದರ ಅಧ್ಯಕ್ಷ ಜಯಚಂದ್ರ ಎಸ್. ಹತ್ವಾರ್ ನುಡಿದರು.
ಅವರು ಹಿಂದೂ ವಿದ್ಯಾದಾಯಿನೀ ಸಂಘದ ಆಡಳಿತಕ್ಕೊಳಪಟ್ಟ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಗೋವಿಂದ ದಾಸ ಕಾಲೇಜು ಅಲ್ಯಮ್ನಿ ಅಸೋಸಿಯೇಷನ್‌ನ ವಾರ್ಷಿಕ ವಿದ್ಯಾರ್ಥಿ ವೇತನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಇನ್ನೊರ್ವ ಮುಖ್ಯ ಅತಿಥಿ ಕಾಲೇಜಿನ ಹಳೆ ವಿದ್ಯಾರ್ಥಿನಿ, ಉದ್ಯಮಿ ಡಾ. ಸರಳ ರಮೇಶ್ ಮಾತನಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಈ ವಿದ್ಯಾರ್ಥಿವೇತನವು ಪ್ರೇರಣೆಯಾಗಲಿ ಎಂದು ಹಾರೈಸಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ಹರೀಶ ಆಚಾರ್ಯ ಪಿ. ಮಾತನಾಡಿ ಗೋವಿಂದ ದಾಸ ಕಾಲೇಜು ಹಿಂದಿನಿಂದಲೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಿದ್ದು ಅನೇಕ ಹಳೆ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳನ್ನು ಹೊಂದಿದ್ದು ಗೋವಿಂದ ದಾಸ ಕಾಲೇಜು ಅಲ್ಯಮ್ನಿ ಅಸೋಸಿಯೇಷನ್ ಮೂಲಕ ಕಾಲೇಜಿನ ಎಲ್ಲಾ ಚಟುವಟಿಕೆಗಳಲ್ಲಿ ಸದಾ ಸಹಕಾರವನ್ನು ನೀಡುತ್ತಿದ್ದಾರೆ ಎಂದು ಹೇಳಿದರು.
ಕಾಲೇಜಿನ ಮಾಜಿ ಪ್ರಾಂಶುಪಾಲ ಮತ್ತು ಗೋವಿಂದ ದಾಸ ಕಾಲೇಜು ಅಲ್ಯುಮ್ನಿ ಅಸೋಸಿಯೇಷನ್‌ನ ಸಲಹೆಗಾರ ಡಾ. ಕೆ. ರಾಜ್ ಮೋಹನ್ ರಾವ್ ಮಾತನಾಡಿ ಗೋವಿಂದ ದಾಸ ಕಾಲೇಜಿನ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯೊಂದಿಗೆ ಉತ್ತಮ ಮಾನವೀಯ ಮೌಲ್ಯಗಳನ್ನು ಹೊಂದಿದ್ದು ರಕ್ತದಾನದಂತಹ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.
ಉಪ ಪ್ರಾಚಾರ್ಯ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಪ್ರೊ. ನೀಲಪ್ಪ ವಿ., ಕಾಲೇಜಿನ ಉಪನ್ಯಾಸಕ ವರ್ಗ ಮತ್ತು ಗೋವಿಂದ ದಾಸ ಕಾಲೇಜು ಅಲ್ಯುಮ್ನಿ ಅಸೋಸಿಯೇಷನ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗೋವಿಂದ ದಾಸ ಕಾಲೇಜು ಅಲ್ನುಮ್ನಿ ಅಸೋಸಿಯೇಷನ್ ಅಧ್ಯಕ್ಷ ಯೋಗೀಶ್ ಕುಳಾಯಿ ಸ್ವಾಗತಿಸಿ, ಗೋವಿಂದ ದಾಸ ಕಾಲೇಜು ಅಲ್ನುಮ್ನಿ ಅಸೋಸಿಯೇಷನ್ ಕಾರ್ಯದರ್ಶಿ ಶಿರೀಶ್ ಕುಮಾರ್ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಜೊತೆ ಕಾರ್ಯದರ್ಶಿ ಗಂಗಾಧರ್ ಕೆ. ವಂದಿಸಿದರು. ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಸಂತೋಷ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


