ಉಜಿರೆ: ಕನ್ನಡ ಸಾಹಿತ್ಯ ಮತ್ತು ಸಂಶೋಧನೆ, ಶಿಲಾಶಾಸನ ತಜ್ಞ ಹಾಗೂ ಉಜಿರೆಯ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕ ಡಾ. ಎಸ್.ಡಿ. ಶೆಟ್ಟಿ (೮೦) ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ಮೈಸೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರು ಇದ್ದಾರೆ.
ಅವರ ಅಂತ್ಯಸಂಸ್ಕಾರವನ್ನು ಉಜಿರೆಯಲ್ಲಿ ಗುರುವಾರ ನಡೆಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಮೂಲತಃ ಹೊನ್ನಾವರ ಹಳದೀಪುರದ ಸಾಲೆಕೇರಿ ನಿವಾಸಿಯಾದ ಅವರು ಕರ್ನಾಟಕ ವಿ.ವಿ. ಯಿಂದ ೧೯೭೧ ರಲ್ಲಿ ಕನ್ನಡ ಎಂ.ಎ. ಪದವಿ ಪಡೆದರು.
ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ೩೫ ವರ್ಷಗಳಲ್ಲಿ ಕನ್ನಡ ಉಪನ್ಯಾಸಕರಾಗಿ, ವಿಭಾಗದ ರೀಡರ್, ಪ್ರೊಫೆಸರ್ ಹಾಗೂ ಮುಖ್ಯಸ್ಥರಾಗಿ ನಿವೃತ್ತರಾದರು.
ಉಜಿರೆಯಲ್ಲಿರುವ ಡಾ. ಹಾ.ಮಾ.ನಾ ಸಂಶೋಧನ ಕೇಂದ್ರದ ನಿರ್ದೇಶಕರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.
ಎಸ್.ಡಿ.ಎಂ. ಪ್ರಕಾಶನಮಾಲೆ, ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನ ಮತ್ತು ಮಂಜೂಷಾ ವಸ್ತುಸಂಗ್ರಹಾಲಯದ ನಿರ್ದೇಶಕರಾಗಿಯೂ ಅವರು ಕರ್ತವ್ಯ ನಿರ್ವಹಿಸಿದ್ದಾರೆ.
ಜೈನಧರ್ಮ, ಶಾಸನಗಳು ಹಾಗೂ ಸಂಶೋಧನೆ ಬಗ್ಯೆ ಅನೇಕ ಕೃತಿಗಳನ್ನು ರಚಿಸಿರುವ ಅವರು ಉತ್ತಮ ವಾಗ್ಮಿಯೂ, ಲೇಖಕರೂ ಆಗಿ ಚಿರಪರಿಚಿತರಾಗಿದ್ದರು.
ಹಿತ-ಮಿತ ಮಾತುಗಳೊಂದಿಗೆ ಶಿಸ್ತಿನ ಸಿಪಾಯಿಯಾಗಿ ಅವರು ಸರಳ ಜೀವನ ನಡೆಸುತ್ತಿದ್ದರು.
ಅನೇಕ ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಅವರು ಭಾಗವಹಿಸಿರುತ್ತಾರೆ.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸಂತಾಪ :
ಜೈನಧರ್ಮ, ಕಲೆ, ಸಾಹಿತ್ಯ ಸಂಶೋಧನೆ, ಶಾಸನಗಳು ಇತ್ಯಾದಿಗಳ ಬಗ್ಯೆ ಆಳವಾದ ಅಧ್ಯಯನ ನಡೆಸಿದ ಘನ ವಿದ್ವಾಂಶರಾಗಿದ್ದ ಡಾ. ಎಸ್.ಡಿ. ಶೆಟ್ಟಿ ಅವರು ನಮ್ಮ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಮಂಜೂಷಾ ವಸ್ತುಸಂಗ್ರಹಾಲಯದ ನಿರ್ದೇಶಕರಾಗಿ, ಶ್ರೀ ಮಂಜುನಾಥೇಶ್ವರ ಪುಸ್ತಕ ಪ್ರಕಾಶನ ಮಾಲೆಯ ವ್ಯವಸ್ಥಾಪಕರಾಗಿ, ಡಾ.ಹಾ.ಮಾ.ನಾ ಸಂಶೋಧನ ಕೇಂದ್ರದ ನಿರ್ದೇಶಕರಾಗಿ ಉತ್ತಮ ಸೇವೆ ನೀಡಿದ್ದಾರೆ.
ನಮ್ಮ ಗ್ರಂಥಾಲಯಕ್ಕೆ ಅಪೂರ್ವ ತಾಡಪ್ರತಿಗಳ ಸಂಗ್ರಹ ಹಾಗೂ ಮಂಜೂಷಾ ವಸ್ತುಸಂಗ್ರಹಾಲಯದ ನಿರ್ದೇಶಕರಾಗಿ ದೂರದ ಊರುಗಳಿಂದ ಐತಿಹಾಸಿಕ ಮಹತ್ವವಿರುವ ವಸ್ತುಗಳ ಸಂಗ್ರಹದಲ್ಲಿ ಅವರು ವಿಶೇಷ ಸೇವೆ ಮಾಡಿದ್ದಾರೆ.
ಅವರ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟವೇ ಆಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಅವರ ಅಗಲುವಿಕೆಯಿಂದ ಕುಟುಂಬದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸಿ ಹೆಗ್ಗಡೆಯವರು ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

