ಈಗಿನ ನಮ್ಮ ಎಂಜಿನಿಯರಿಂಗ್, ಈಗಿನ ನಮ್ಮ ವಿಜ್ಞಾನ, ಇದುವರೆಗಿನ ಮಲೆನಾಡೇತರ ಸ್ಥಳಗಳಲ್ಲಿ ಮಾಡಲ್ಪಟ್ಟ ಬೃಹತ್ ಯೋಜನೆಗಳ ಸಾಧನೆಗಳ ಯಶಸ್ಸು- ಇವು ಯಾವುದೂ ಮಲೆನಾಡಿನ ಮಳೆ, ನೀರು, ಗಾಳಿ, ಮಣ್ಣಿನ ಗುಣ, ಭೂಮಿಯ ಕಂಪನ, 'ಗುರು'ತ್ವಾಕರ್ಷಣೆಯ ಶಕ್ತಿಗಳನ್ನು ಅಧ್ಯಯನ, ಸಂಶೋಧನೆ ಮಾಡಿ, ಬೃಹತ್ ಯೋಜನೆಗಳ ಅನುಷ್ಠಾನ ಮಾಡುವುದಕ್ಕೆ ಸಾಕಾಗುತ್ತಿಲ್ಲ.
ಮನುಷ್ಯ ಬೆಳೆಸಿಕೊಂಡ ವಿಜ್ಞಾನ, ತಂತ್ರಜ್ಞಾನಗಳು ಸಾಕಾಗುತ್ತಿಲ್ಲ ಎಂದು ಇವತ್ತು ವೈನಾಡ್ ದುರಂತಗಳು ಮತ್ತೆ ಮತ್ತೆ ಕೂಗಿ ಹೇಳುತ್ತಿವೆ!
ಶೃಂಗೇರಿ ರೈಲು ಮಾರ್ಗ ಯೋಜನೆ ಅನುಷ್ಠಾನ ಮಾಡಲು 57 ಬೃಹತ್ ಸುರಂಗಗಳು ಆಗಬೇಕು. 250 ಸಾಮಾನ್ಯ, ದೊಡ್ಡ ಮತ್ತು ಬೃಹತ್ ಸೇತುವೆಗಳು ಆಗಬೇಕು ಅಂತ ಯೋಜನೆಯ ವರದಿಗಳು ಪ್ರಸಾರಗೊಂಡ ಸುದ್ಧಿಗಳಲ್ಲಿವೆ.
ಅಕಸ್ಮಾತ್ ಶೃಂಗೇರಿ ರೈಲು ಯೋಜನೆ ಅನುಷ್ಠಾನಕ್ಕೆ ಬರುವುದಾದರೆ, ತರುವುದಾದರೆ ಮನುಷ್ಯನ ಜ್ಞಾನ-ವಿಜ್ಞಾನದ ತಿಳುವಳಿಕೆಗೆ ಸವಾಲೊಡ್ಡಿ ಅಣಕಿಸುತ್ತಿರುವ ಮಲೆನಾಡಿನ ವೈನಾಡ್ ದುರಂತ ಮೊದಲ ಪಾಠವಾಗಲಿ.
ಶೃಂಗೇರಿ ರೈಲು ಮಾರ್ಗದ ಸಾಧ್ಯತೆ-ಬಾಧ್ಯತೆಗಳಿಗೆ ಅರ್ಧಕ್ಕೆ ನಿಂತ ಅಂಕೋಲ ರೈಲು ಮಾರ್ಗದ ಕಾರಣ, ವೈನಾಡ್‌ನಲ್ಲಿ ಮರುಕಳಿಸುತ್ತಿರುವ ಧರೆ ಕುಸಿತ, ಜನರ ಜೀವನವನ್ನೇ ಮುಳುಗಿಸಿದ ಕೊಡಗು ದುರಂತ- ಇವುಗಳು ಪಾಠಗಳಾಗಬೇಕು.
ಇಂತಹ ದುರಂತಗಳು 57 ಟನಲ್, 250 ಸೇತುವೆಗಳನ್ನು ಮಲೆನಾಡ ಕಣಿವೆಗಳಲ್ಲಿ ನಿರ್ಮಿಸುವಾಗ (ಮತ್ತು ನಿರ್ಮಿಸಿದ ಮೇಲೆ) ಸಂಭವಿಸದಂತೆ ಎಲ್ಲಾ ಭದ್ರತಾ ಕ್ರಮಗಳನ್ನು ಕೈಗೊಳ್ಳುವ ತಾಕತ್ತು, 100% ಗ್ಯಾರಂಟಿ, ಭರವಸೆಗಳನ್ನು, ಶೃಂಗೇರಿ ರೈಲು ಯೋಜನೆ ಅನುಷ್ಠಾನಕ್ಕೆ ತರುವ ನಿಯೋಗದಲ್ಲಿ ಇದೆಯೇ? ನಿಯೋಗದ ಫೆಸಿಲಿಟಿ & ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಲ್ಲಿ ಇದೆಯೇ? ನಿರ್ಮಾಣಗಳ ವಿನ್ಯಾಸವನ್ನು ಸಿದ್ಧಪಡಿಸುವ ಮತ್ತು ಅವುಗಳ ನಿರ್ಮಾಣದ ಯೋಜನೆಯನ್ನು ರೂಪಿಸುವ ವಾಸ್ತುಶಿಲ್ಪಿಗಳಲ್ಲಿ ಇವೆಯೇ? ಇದು ಕೇವಲ ಯಾರೋ ಮತ್ತೊಬ್ಬ ಮನುಷ್ಯ ಕೇಳುವ ಪ್ರಶ್ನೆಯಲ್ಲ, ವೈನಾಡ್‌ನಂತಹ ದುರಂತಗಳು ಕೇಳುತ್ತಿರುವ ಸವಾಲಿನ ಪ್ರಶ್ನೆ!!
ಶೃಂಗೇರಿ ರೈಲು ಮಾರ್ಗ ಯೋಜನೆಯ ಸಾಧಕ-ಭಾದಕಗಳ ಬಗ್ಗೆ ಅಧ್ಯಯನಕ್ಕೆ ವೈನಾಡಿನ ಈ ಪ್ರಶ್ನೆಯನ್ನು ಸೇರಿಸಿಕೊಂಡು ಉತ್ತರ ಕಂಡುಕೊಂಡು ಮುಂದುವರಿಯಬೇಕಾಗಿದೆ. ಅಲ್ವಾ?
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

