ಪುತ್ತೂರು: ವಿದ್ಯಾರ್ಥಿಗಳಿಗೆ ಎಳವೆಯಲ್ಲಿಯೇ ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಅಭಿವೃದ್ದಿಪಡಿಸಿಕೊಳ್ಳಲು ಮತ್ತು ಇತರರೊಡನೆ ಹಂಚಿಕೊಳ್ಳಲು ಸೂಕ್ತ ಅವಕಾಶಗಳು ಅಗತ್ಯ ಈ ನಿಟ್ಟಿನಲ್ಲಿ ಇಲ್ಲಿ ರೊಬೊಟಿಕ್ ಸೆಂಟರ್‌ನ ಸ್ತಾಪನೆಯಾಗಿದೆ ಎಂದು ಬೆಂಗಳೂರಿನ ಅಲ್‌ಟೆರಿಕ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಇದರ ಸಾಫ್ಟ್ವೇರ್ ಇಂಜಿನಿಯರಿಂಗ್- ಇಂಡಿಯಾ ಸೈಟ್ ಹೆಡ್, ನಿರ್ದೇಶಕ ಪೌಲ್ಸನ್ ವಿನ್ಸೆಂಟ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಮತ್ತು ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ಇದರ ಸಹಯೋಗದಲ್ಲಿ ಬೆಂಗಳೂರಿನ ಅಲ್‌ಟೆರಿಕ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಇದರ ಸಹಕಾರದೊಂದಿಗೆ ಕಾಲೇಜಿನ ಕೃಷ್ಣ ಚೇತನಾ ಕಟ್ಟಡದ ಕೆಳ ಅಂತಸ್ತಿನಲ್ಲಿ ಪ್ರಾರಂಭಗೊಂಡ ರೊಬೊಟಿಕ್ ಸೆಂಟರನ್ನು ಉದ್ಘಾಟಿಸಿ ಮಾತಾಡಿದರು. ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ರೊಬೊಟಿಕ್ ತಂತ್ರಜ್ಞಾನದ ತಿಳುವಳಿಕೆಯನ್ನು ನೀಡುವುದು, ವಿದ್ಯಾರ್ಥಿಗಳಲ್ಲಿರುವ ಹೊಸತನದ ಯೋಚನೆಗಳಿಗೆ ಮೂರ್ತರೂಪ ಕೊಡುವ ಉದ್ದೇಶ ಇದರದ್ದು ಎಂದರು. ಇಂಜಿನಿಯರಿಂಗ್ ವಿದ್ಯಾರ್ಥಿಗಳೂ ಕೂಡಾ ಇಲ್ಲಿನ ಸಾಧನಗಳನ್ನು ಬಳಸಿಕೊಂಡು ಹೊಸ ಹೊಸ ಮಾದರಿಗಳನ್ನು ರಚಿಸಿಕೊಳ್ಳಬಹುದು. ಇಲ್ಲಿ ಕಲ್ಪನೆಯು ಕಾರ್ಯರೂಪಕ್ಕೆ ಬರುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ ಕೆ ಮಾತನಾಡಿ ನಾವು ವಿದ್ಯಾರ್ಥಿಗಳಾಗಿರುವಾಗ ಕೇವಲ 50% ವಿಷಯಗಳನ್ನು ಮಾತ್ರ ಕಲಿಯಬಹುದು. ಆದರೆ ಇನ್ನೊಬ್ಬರಿಗೆ ಹೇಳುವಾಗ ಶೇ.100 ವಿಷಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಈ ರೊಬೊಟಿಕ್ ಸೆಂಟರಿನಲ್ಲಿ ಕಲಿಸುವ ಸ್ವಯಂಸೇವಕರು ಕೂಡಾ ವಿದ್ಯಾರ್ಥಿಗಳೇ ಆಗಿರುವುದರಿಂದ ಪೂರ್ಣ ಪ್ರಮಾಣದ ತಿಳುವಳಿಕೆಯನ್ನು ಹೊಂದುವುದಕ್ಕೆ ಸಾಧ್ಯವಿದೆ. ಇದರ ಹಿಂದೆ ಸಹಕರಿಸಿದ ಎಲ್ಲರೂ ಅಭಿನಂದನಾರ್ಹರು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ ಮಾತನಾಡಿ ನೂತನ ತಂತ್ರಜ್ಞಾನವನ್ನು ಹೊಂದಿರುವ ಈ ರೊಬೋಟಿಕ್ ಸೆಂಟರ್ ನಾಳೆಯ ತಂತ್ರಜ್ಞರನ್ನು ರೂಪಿಸುವ ತಾಣವಾಗಿ, ಯುವ ಮನಸ್ಸುಗಳನ್ನು ಸಬಲೀಕರಿಸುವ, ಹೊಸತನವನ್ನು ಹುಟ್ಟುಹಾಕುವ ಕ್ಷೇತ್ರವಾಗಿ ವಿಜ್ರಂಬಿಸಲಿ ಎಂದರು. ಇದನ್ನು ನಿರ್ಮಿಸುವುದಕ್ಕೆ ಕೈಜೋಡಿಸಿದ ಅಲ್‌ಟೆರಿಕ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಬೆಂಗಳೂರು ಮತ್ತು ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇದರ ಸಹಕಾರವನ್ನು ಸ್ಮರಿಸಿದರು.
ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕಲ್ಪನಾ ಚಾವ್ಲಾ ಪ್ರಶಸ್ತಿ ಪಡೆದ ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನ ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್ಗಳ ಪ್ರದರ್ಶನ ಮಾಡಿ ರೊಬೊಟಿಕ್ ತಂತ್ರಜ್ಞಾನದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು. ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ನ ಶ್ರೀಮತಿ ಲತಾ ಶೆಟ್ಟಿ ಅವರು ಬರೆದಿರುವ ವಿಶಿಷ್ಟ ವಿನ್ಯಾಸದಲ್ಲಿ ಮುದ್ರಿಸಿದ ಮಕ್ಕಳ ಕಥೆ ಪುಸ್ತಕದ ಅನಾವರಣವು ಈ ಸಂದರ್ಭದಲ್ಲಿ ನಡೆಯಿತು.
ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಮುರಳೀಧರ ಭಟ್, ನಿರ್ದೇಶಕರಾದ ರವಿಕೃಷ್ಣ ಡಿ.ಕಲ್ಲಾಜೆ, ಸತ್ಯನಾರಾಯಣ ಭಟ್, ಶ್ರೀಮತಿ ವಿದ್ಯಾ ಆರ್.ಗೌರಿ, ಅಲ್‌ಟೆರಿಕ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನ ಹರ್ಷಿತಾ ನಾಗರಾಜ್, ಅಭಿಷೇಕ್ ಟೈನ್‌ವಾಲಾ, ಮಂಜುಶ್ರೀ.ಎ, ಸನ್ನಿತ್ ಶೆಟ್ಟಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ನ ಮುಖ್ಯಸ್ಥ ಡಾ.ಶ್ರೀಶ ಭಟ್ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯಕ್ರಮ ಸಂಯೋಜಕ ಹೇಮಂತ್ ವಂದಿಸಿದರು. ಸ್ವಯಂಸೇವಕಿ ಅನುಶ್ರೀ ಮಯ್ಯ ಕಾರ್ಯಕ್ರಮ ನಿರ್ವಹಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


