ಮಂಗಳೂರು: ಕಲಾಭಿ (ರಿ.), ಮಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಗಳೂರು ಜಿಲ್ಲಾ ಸಹಯೋಗದಲ್ಲಿ ಆಯೋಜಿಸಲಾದ ಕಲಾಭಿ ಥಿಯೇಟರ್‌ನ ನೂತನ ರಂಗಪ್ರಯೋಗ ‘ಮಾರಿಕಾಡು’ಗೆ ಕಲಾಗ್ರಾಮದಲ್ಲಿ ಯಶಸ್ವಿ ಚಾಲನೆ ದೊರೆಯಿತು.
ಕಾರ್ಯಕ್ರಮವನ್ನು ಶ್ರೀ ಅನಂತ ಭಟ್ ಸಿ.ಪಿ., ಚಾರ್ಟರ್ಡ್ ಅಕೌಂಟೆಂಟ್, ಮಂಗಳೂರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಮಾಲಿನಿ ಹೆಬ್ಬಾರ್, ಪ್ರಾಂಶುಪಾಲರು, ಸ್ವಸ್ತಿಕ್ ನ್ಯಾಷನಲ್ ಬಿಸಿನೆಸ್ ಸ್ಕೂಲ್, ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಜಾಯ್ ಡಿಂಪಲ್, ರಂಗಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತೆ, ಶ್ರೀ ಧನಪಾಲ್ ಎಚ್.ಎಸ್., ಲಲಿತ ಕಲಾ ಆರ್ಟ್, ಮಂಗಳೂರು ಹಾಗೂ ಶ್ರೀಮತಿ ಅಶ್ವಿನಿ ಕಾಮತ್, ಉದ್ಯಮ ನಿರ್ದೇಶಕರು, ಕಲಾಗ್ರಾಮ ಉಪಸ್ಥಿತರಿದ್ದು ಶುಭ ಹಾರೈಸಿದರು.
ವಿಲಿಯಂ ಶೇಕ್ಸ್‌ಪಿಯರ್ ಅವರ ‘ಮ್ಯಾಕ್‌ಬೆತ್’ ಕೃತಿಯಿಂದ ಪ್ರೇರಿತವಾಗಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರ ರೂಪಾಂತರವನ್ನು ಆಧರಿಸಿ ರೋಹಿತ್ ಎಸ್. ಬೈಕಾಡಿ ನಿರ್ದೇಶಿಸಿರುವ ‘ಮಾರಿಕಾಡು’ ನಾಟಕದ ಪ್ರಥಮ ಪ್ರದರ್ಶನ ಇದೇ ಸಂದರ್ಭದಲ್ಲಿ ನಡೆಯಿತು.
ಮಂಗಳೂರಿನ ರಂಗಭೂಮಿಯಲ್ಲಿ ಅಪರೂಪವಾಗಿ ಕಾಣಸಿಗುವ ಇಂಟಿಮೇಟ್ ಥಿಯೇಟರ್ ಮಾದರಿಯಲ್ಲಿ ಈ ನಾಟಕವನ್ನು ಪ್ರದರ್ಶಿಸಲಾಯಿತು. ಸಾಂಪ್ರದಾಯಿಕ ಸಭಾಂಗಣದ ಬದಲಾಗಿ ಸುಮಾರು 80 ಪ್ರೇಕ್ಷಕರಿಗೆ ಅವಕಾಶವಿರುವ ಬ್ಲ್ಯಾಕ್ ಬಾಕ್ಸ್ ರಂಗಸ್ಥಳದಲ್ಲಿ, ಕಲಾವಿದರು ಮತ್ತು ಪ್ರೇಕ್ಷಕರ ನಡುವಿನ ಅಂತರವನ್ನು ಕಡಿಮೆಗೊಳಿಸಿ ಅತ್ಯಂತ ಆತ್ಮೀಯ ರಂಗಾನುಭವವನ್ನು ಸೃಷ್ಟಿಸುವ ಪ್ರಯೋಗವನ್ನು ಯಶಸ್ವಿಯಾಗಿ ಪರಿಚಯಿಸಲಾಯಿತು. ಈ ವಿಶಿಷ್ಟ ನಿರೂಪಣಾ ಶೈಲಿಯು ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಪಡೆಯಿತು.
ಪ್ರಥಮ ಪ್ರದರ್ಶನವು ಪೂರ್ಣ ಭರ್ತಿಯಾದ (Full House) ಪ್ರೇಕ್ಷಕರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಯಿತು. ನಾಟಕದ ಅಭಿನಯ, ರಂಗವಿನ್ಯಾಸ, ಸಂಗೀತ, ಬೆಳಕು ಹಾಗೂ ಸಮಕಾಲೀನ ನಿರೂಪಣಾ ಶೈಲಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.
ಇದೇ ನಾಟಕದ ಮುಂದಿನ ಪ್ರದರ್ಶನ ಜುಲೈ 15ರಂದು ಸಂಜೆ 7.00 ಗಂಟೆಗೆ ಕಲಾಗ್ರಾಮದಲ್ಲಿ ನಡೆಯಲಿದ್ದು, ಟಿಕೆಟ್‌ಗಳಿಗೆ ಈಗಾಗಲೇ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಬಹುತೇಕ ಆಸನಗಳು ಮುಂಗಡವಾಗಿ ಬುಕ್ ಆಗಿವೆ ಎಂದು ಕಲಾಭಿ ಥಿಯೇಟರ್ ತಿಳಿಸಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

