ಅಧ್ಯಾಯ 2 – ನಗುವಿನ ಹಿಂದೆ ಅಡಗಿದ್ದ ನೋವು
"ಕೆಲವರ ನಗುವು ಅವರ ಸಂತೋಷದ ಗುರುತಲ್ಲ... ಅವರು ತಮ್ಮ ಕಣ್ಣೀರನ್ನು ಯಾರೂ ನೋಡಬಾರದೆಂದು ಧರಿಸುವ ಮುಖವಾಡ."
ಕಾಲ ಯಾರಿಗಾಗಿ ನಿಲ್ಲುವುದಿಲ್ಲ. ನೋಡುತ್ತಾ ನೋಡುತ್ತಾ ಶಾಲೆಯ ದಿನಗಳು ಮುಗಿದವು. ಕಾಲೇಜಿನ ಮೊದಲ ದಿನ ನನ್ನ ಬದುಕಿನ ಹೊಸ ಅಧ್ಯಾಯವಾಗಬೇಕಿತ್ತು. ಆದರೆ ಅದು ಹೊಸ ಕನಸುಗಳ ಜೊತೆಗೆ ಹೊಸ ಹೋರಾಟಗಳನ್ನೂ ಹೊತ್ತು ತಂದಿತು.
ಕಾಲೇಜಿನ ಮೊದಲ ದಿನ ಎಲ್ಲರೂ ಹೊಸ ಬಟ್ಟೆ, ಹೊಸ ಬ್ಯಾಗ್, ಹೊಸ ಮೊಬೈಲ್ ಹಿಡಿದು ಬಂದಿದ್ದರು. ನಾನು ಮಾತ್ರ ಕಳೆದ ಮೂರು ವರ್ಷಗಳಿಂದ ಬಳಸುತ್ತಿದ್ದ ಬ್ಯಾಗನ್ನೇ ಹೆಗಲ ಮೇಲೆ ಹಾಕಿಕೊಂಡು, ಅಪ್ಪ ಕೊಟ್ಟ ಐನೂರು ರೂಪಾಯಿಯನ್ನು ಜೇಬಿನಲ್ಲಿ ಬಿಗಿಯಾಗಿ ಹಿಡಿದು ಕಾಲೇಜಿನ ಮೆಟ್ಟಿಲು ಹತ್ತುತ್ತಿದ್ದೆ.
ಆ ಐನೂರು ರೂಪಾಯಿಯಲ್ಲಿ ಒಂದು ತಿಂಗಳು ಕಳೆಯಬೇಕಿತ್ತು. ಕ್ಯಾಂಟೀನ್‌ನಲ್ಲಿ ಸ್ನೇಹಿತರು,"ಬಾ... ಟೀ ಕುಡಿಯೋಣ." ಎಂದರೆ, "ಇವಾಗ ಬೇಡ... ಮನೆಯಿಂದ ಕುಡಿದು ಬಂದಿದ್ದೇನೆ." ಎಂದು ನಗುತ್ತಾ ತಪ್ಪಿಸಿಕೊಳ್ಳುತ್ತಿದ್ದೆ. ಅವರಿಗೆ ನನ್ನ ಬಳಿ ಹಣ ಇಲ್ಲ ಎಂದು ತಿಳಿಯಬಾರದು ಎಂಬುದೇ ನನ್ನ ಆಸೆ. ಒಂದು ದಿನ ನನ್ನ ಸ್ನೇಹಿತ ರಾಹುಲ್ ಕೇಳಿದ. "ಹೃದಯ್... ನೀನು ಯಾವಾಗಲೂ ನಮ್ಮ ಜೊತೆ ಕ್ಯಾಂಟೀನ್‌ಗೆ ಬರಲ್ಲ. ಯಾಕೆ?" ನಾನು ನಗುತ್ತಾ ಹೇಳಿದೆ. "ನನಗೆ ಕ್ಯಾಂಟೀನ್ ಊಟ ಇಷ್ಟ ಇಲ್ಲ." ಅದು ನನ್ನ ಜೀವನದ ಮತ್ತೊಂದು ಸುಳ್ಳು. ಬಡತನ ಮನುಷ್ಯನಿಗೆ ಮೊದಲಿಗೆ ಕಲಿಸುವುದು ಸುಳ್ಳು ಹೇಳುವುದನ್ನು. ಯಾರಿಗೂ ನೋವಾಗದಂತೆ ತನ್ನ ಗೌರವ ಉಳಿಸಿಕೊಳ್ಳಲು ಹೇಳುವ ಸುಳ್ಳು.
ನಾನು ಮನೆಗೆ ಬಂದಾಗ ಅಮ್ಮ ಯಾವಾಗಲೂ ಬಾಗಿಲಲ್ಲೇ ಕಾಯುತ್ತಿದ್ದರು. "ಊಟ ಮಾಡಿದಿಯಾ?"ಎಂಬ ಪ್ರಶ್ನೆ ಅವರ ಮೊದಲ ಮಾತು. ನಾನು ಪ್ರತಿದಿನ, "ಹೌದು." ಎಂದು ಹೇಳುತ್ತಿದ್ದೆ. ಆದರೆ ಸತ್ಯ ಏನೆಂದರೆ, ಬಹಳ ದಿನಗಳು ಮಧ್ಯಾಹ್ನ ನೀರನ್ನೇ ಕುಡಿದು ಕಳೆದಿದ್ದೆ. ಅಮ್ಮಗೆ ಅದು ಗೊತ್ತಾಗಬಾರದು. ಯಾಕೆಂದರೆ ಅವರಿಗೆ ಗೊತ್ತಾದರೆ, ತಮ್ಮ ಪಾಲಿನ ಊಟವನ್ನೂ ನನಗೆ ಕೊಡುತ್ತಿದ್ದರು.
ಒಂದು ಸಂಜೆ ಮನೆಗೆ ಬಂದಾಗ ಅಪ್ಪ ಮನೆಯ ಹೊರಗೆ ಮೌನವಾಗಿ ಕುಳಿತಿದ್ದರು. ಅವರ ಕೈಯಲ್ಲಿ ಒಂದು ಹಳೆಯ ಲೆಕ್ಕದ ಪುಸ್ತಕ. ನಾನು ಹತ್ತಿರ ಹೋಗುತ್ತಿದ್ದಂತೆ ಅದನ್ನು ಬೇಗ ಮುಚ್ಚಿಬಿಟ್ಟರು. "ಏನು ಅಪ್ಪಾ? ಏನಿಲ್ಲ... " ಆದರೆ ಅವರ ಕಣ್ಣಲ್ಲಿ ಸಾವಿರ ಲೆಕ್ಕಗಳಿದ್ದವು. ಮನೆಯ ಸಾಲ, ನನ್ನ ಕಾಲೇಜಿನ ಫೀಸ್, ವಿದ್ಯುತ್ ಬಿಲ್, ಅಜ್ಜನ ಔಷಧಿ, ಅಮ್ಮನ ಆರೋಗ್ಯ ಅವರ ಜೀವನವೇ ಒಂದು ಲೆಕ್ಕದ ಪುಸ್ತಕವಾಗಿತ್ತು. ಆ ರಾತ್ರಿ ನನಗೆ ನಿದ್ರೆ ಬರಲಿಲ್ಲ. ಮೊದಲ ಬಾರಿಗೆ ನನಗೆ ಅನಿಸಿತು... "ನಾನು ಬೇಗ ಕೆಲಸಕ್ಕೆ ಸೇರಬೇಕು." ಕನಸುಗಳನ್ನು ನೋಡುವ ವಯಸ್ಸಿನಲ್ಲಿ ಜವಾಬ್ದಾರಿಗಳನ್ನು ಹೊರುವ ಯೋಚನೆ ಶುರುವಾಯಿತು.
ನಮ್ಮ ಮನೆಯಲ್ಲಿದ್ದ ಅತ್ಯಂತ ಮೌನದ ವ್ಯಕ್ತಿ ಅಜ್ಜ. ಅವರು ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೆ ಪ್ರತಿದಿನ ಸಂಜೆ ಮನೆಯ ಮುಂದೆ ಕುಳಿತು ರಸ್ತೆಯನ್ನು ನೋಡುತ್ತಿರುತ್ತಿದ್ದರು. ಒಂದು ದಿನ ಕೇಳಿದೆ.
"ಅಜ್ಜಾ... ಏನು ನೋಡ್ತಾ ಇದ್ದೀರಾ?" ಅವರು ನಗುತ್ತಾ ಹೇಳಿದರು.
"ಬದುಕು." ಆಗ ಅರ್ಥವಾಗಲಿಲ್ಲ, ಈಗ ಗೊತ್ತಾಗಿದೆ.
ಹಿರಿಯರು ರಸ್ತೆಯನ್ನು ನೋಡುವುದಿಲ್ಲ, ಜೀವನದ ಉಳಿದ ದಾರಿಯನ್ನು ನೋಡುತ್ತಿರುತ್ತಾರೆ.
ನನ್ನ ಜೀವನದಲ್ಲಿ ಒಂದು ಅಭ್ಯಾಸ ಬೆಳೆದಿತ್ತು. ಯಾರಾದರೂ ತಮ್ಮ ನೋವನ್ನು ಹೇಳಿದರೆ ಗಂಟೆಗಟ್ಟಲೆ ಕೇಳುತ್ತಿದ್ದೆ. ಯಾರಿಗಾದರೂ ಹಣ ಬೇಕಿದ್ದರೆ ನನ್ನ ಬಳಿ ಇದ್ದದ್ದನ್ನೇ ಕೊಡುತ್ತಿದ್ದೆ. ಯಾರಿಗಾದರೂ ಟಿಪ್ಪಣಿಗಳು ಬೇಕಾದರೆ ರಾತ್ರಿ ಜಾಗರಣೆ ಮಾಡಿ ಬರೆದು ಕೊಡುತ್ತಿದ್ದೆ. ಆದರೆ... ನನ್ನ ಬಳಿ ಯಾರೂ ಒಂದು ಪ್ರಶ್ನೆ ಕೇಳಲಿಲ್ಲ."ಹೃದಯ್... ನೀನು ಹೇಗಿದ್ದೀಯ?" ಆ ಪ್ರಶ್ನೆ ಕೇಳುವವರಿಗಾಗಿ ನಾನು ಅನೇಕ ವರ್ಷ ಕಾಯುತ್ತಿದ್ದೆ.
ಕಾಲೇಜಿನ ವಾರ್ಷಿಕೋತ್ಸವ ನಡೆಯುತ್ತಿತ್ತು. ಎಲ್ಲರೂ ನೃತ್ಯ, ಹಾಡು, ನಗು, ಫೋಟೋ. ನಾನು ಮಾತ್ರ ಕಾಲೇಜಿನ ಕಟ್ಟಡದ ಮೇಲ್ಛಾವಣಿಯಲ್ಲಿ ನಿಂತು ಕೆಳಗೆ ನೋಡುತ್ತಿದ್ದೆ. ಅಷ್ಟರಲ್ಲಿ ನನ್ನ ತರಗತಿಯ ಉಪನ್ಯಾಸಕರು ನನ್ನ ಹತ್ತಿರ ಬಂದು ಕೇಳಿದರು. "ನೀನು ಎಲ್ಲರ ಜೊತೆ ಇದ್ದರೂ... ಯಾವಾಗಲೂ ಒಬ್ಬನೇ ಇರುವಂತೆ ಕಾಣುತ್ತೀಯ. ಯಾಕೆ?" ನಾನು ನಕ್ಕೆ, "ಒಬ್ಬಂಟಿಯಾಗಿರುವುದು ನನಗೆ ಅಭ್ಯಾಸ ಸರ್." ಅವರು ನನ್ನ ಭುಜದ ಮೇಲೆ ಕೈ ಇಟ್ಟು ಒಂದೇ ಮಾತು ಹೇಳಿದರು. "ಒಂಟಿತನವನ್ನು ಪ್ರೀತಿಸು... ಆದರೆ ಅದು ನಿನ್ನನ್ನು ನುಂಗಲು ಬಿಡಬೇಡ." ಆ ಮಾತು ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಿತು.
ಆ ರಾತ್ರಿ ಮನೆಗೆ ಬಂದಾಗ ವಿದ್ಯುತ್ ಹೋಗಿತ್ತು. ನಾನು ಮನೆಯ ಮುಂದೆ ನಿಂತಿದ್ದೆ. ಚಂದ್ರನ ಬೆಳಕಿನಲ್ಲಿ ನನ್ನ ನೆರಳು ಉದ್ದವಾಗಿ ಬಿದ್ದಿತ್ತು. ನಾನು ನಿಧಾನವಾಗಿ ಕೇಳಿದೆ. "ಎಲ್ಲರೂ ನನ್ನನ್ನು ಬಿಟ್ಟು ಹೋದರೂ... ನೀನು ಇರ್ತೀಯಾ ಅಲ್ವಾ?" ನೆರಳು ಏನೂ ಮಾತನಾಡಲಿಲ್ಲ. ಆದರೆ...ಅದು ನನ್ನ ಜೊತೆಯಲ್ಲೇ ನಿಂತಿತ್ತು. ನನಗೆ ತಿಳಿಯದೆ...ನನ್ನ ಬದುಕಿನಲ್ಲಿ ಬಿರುಗಾಳಿ ಹತ್ತಿರವಾಗುತ್ತಿತ್ತು.
ಇನ್ನೇನು ಕೆಲವೇ ದಿನಗಳಲ್ಲಿ, ನಾನು ಅತ್ಯಂತ ಪ್ರೀತಿಸುವ ಒಬ್ಬ ವ್ಯಕ್ತಿ ನನ್ನ ಜೀವನದಿಂದ ದೂರವಾಗಲಿದ್ದ. ಆ ದಿನ...ನನ್ನ ನೆರಳಿನ ಅರ್ಥವೇ ಬದಲಾಗಲಿತ್ತು.
(ಮುಂದುವರಿಯುವುದು...)
- ಈಶಕೃಷ್ಣ
ಡೇಟಾ ಸೈನ್ಸ್ ವಿಭಾಗ
ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ