ವಂದೇ ಮಾತರಂ ದೇಶಾರಾಧನೆಯ ಪವಿತ್ರ ಮಂತ್ರ: ಆದರ್ಶ ಗೋಖಲೆ
ಪುತ್ತೂರು: ವಂದೇ ಮಾತರಂ ಎನ್ನುವುದು ಕೇವಲ ಒಂದು ಗೀತೆ ಅಥವ ಘೋಷಣೆಯಲ್ಲ; ಅದು ಭಾರತ ಮಾತೆಯನ್ನು ಆರಾಧಿಸುವ ಪವಿತ್ರ ಮಂತ್ರವಾಗಿದೆ. ಈ ಮಂತ್ರವು ಪ್ರತಿಯೊಬ್ಬ ಭಾರತೀಯನಲ್ಲೂ ರಾಷ್ಟ್ರಭಕ್ತಿ, ದೇಶಾಭಿಮಾನ ಮತ್ತು ಸಂಸ್ಕೃತಿಯ ಮೇಲಿನ ಗೌರವವನ್ನು ಜಾಗೃತಗೊಳಿಸುತ್ತದೆ. ವಂದೇ ಮಾತರಂ ಗೀತೆಯ ಮಹತ್ವವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಶನಿವಾರ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ವಂದೇ ಮಾತರಂ ಗೀತೆಯ ಮಹತ್ವದ ಬಗೆಗೆ ಮಾತನಾಡಿದರು.
ವಂದೇ ಮಾತರಂ ಗೀತೆಯು ಬ್ರಿಟಿಷರ ವಿರುದ್ಧ ನಡೆದ ವಂಗ-ಭಂಗ ಚಳವಳಿಯ ಸಂದರ್ಭದಲ್ಲಿ ರಾಷ್ಟ್ರಭಕ್ತಿಯ ಜಾಗೃತಿಗೆ ಪ್ರಬಲ ಪ್ರೇರಣೆಯಾಗಿತ್ತು. ಈ ಗೀತೆ ಸ್ವಾತಂತ್ರ‍್ಯ ಹೋರಾಟಗಾರರಲ್ಲಿ ದೇಶಪ್ರೇಮ, ಆತ್ಮವಿಶ್ವಾಸ ಹಾಗೂ ತ್ಯಾಗದ ಮನೋಭಾವವನ್ನು ಬಲಪಡಿಸಿತು. ಭಾರತ ಮಾತೆಯ ಮೇಲಿನ ಪ್ರೀತಿ, ತ್ಯಾಗ, ಸೇವಾ ಮನೋಭಾವ ಹಾಗೂ ರಾಷ್ಟ್ರೀಯ ಏಕತೆಯ ಸಂದೇಶವನ್ನು ವಂದೇ ಮಾತರಂ ಸಾರುತ್ತದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಈ ಗೀತೆ ದೇಶಾದ್ಯಂತ ಜನರಲ್ಲಿ ಹೊಸ ಉತ್ಸಾಹ ಮೂಡಿಸಿ, ಬ್ರಿಟಿಷರ ವಿರುದ್ಧ ಹೋರಾಡಲು ಶಕ್ತಿ ತುಂಬಿದೆ. ವಿದ್ಯಾರ್ಥಿಗಳು ದೇಶದ ಸಂವಿಧಾನ, ರಾಷ್ಟçಧ್ವಜ, ರಾಷ್ಟ್ರಗೀತೆ ಹಾಗೂ ರಾಷ್ಟ್ರೀಯ ಚಿಹ್ನೆಗಳ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು. ಉತ್ತಮ ನಾಗರಿಕರಾಗಿ ರಾಷ್ಟ್ರ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡಬೇಕು ಎಂದು ತಿಳಿಸಿದರು.
ಬಪ್ಪಳಿಗೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲ ಗಣೇಶ್ ಪ್ರಸಾದ್ ಡಿ ಎಸ್, ಉಪಪ್ರಾಂಶುಪಾಲ ಪ್ರದೀಪ್ ಕೆ. ವೈ ಉಪಸ್ಥಿತರಿದ್ದರು. ರಸಾಯನಶಾಸ್ತ್ರ ಉಪನ್ಯಾಸಕಿ ಅಪರ್ಣ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


