ಎಸ್.ಡಿ.ಎಂ ಪಪೂ ಕಾಲೇಜು ಉಜಿರೆ: 15 ಕ್ಕೂ ಹೆಚ್ಚಿನ ವಿಭಾಗಗಳ ಭಿತ್ತಿ ಪತ್ರಿಕೆ ಅನಾವರಣ

Upayuktha
0

 ಪ್ರತಿಯೊಬ್ಬನ ಒಳಗೂ ಅದ್ಬುತ ಕಲಾವಿದನಿರುತ್ತಾನೆ: ಡಾ. ಭಾಸ್ಕರ್ ಹೆಗ್ಡೆ



ಉಜಿರೆ: ಭಿತ್ತಿ ಪತ್ರಿಕೆ ಜ್ಞಾನ ಮತ್ತು ಕೌಶಲ್ಯಗಳ ಅನಾವರಣಕ್ಕಿರುವ ವೇದಿಕೆ. ಇದು ವಿದ್ಯಾರ್ಥಿಗಳ ಪ್ರತಿಭಾ ಕೈಗನ್ನಡಿ. ಸ್ಪರ್ಧಾತ್ಮಕ ಯುಗದ ಸಾಗರದಲ್ಲಿ ಈಜಿ ನಾವು ಯಶಸ್ಸನ್ನು ತಲುಪಲು ಇಂದಿನಿಂದಲೇ  ಪ್ರಯತ್ನಶೀಲರಾಗಬೇಕು. ಇಂತಹ ಸಣ್ಣ ಸಣ್ಣ ಶೈಕ್ಷಣಿಕ ಕಾರ್ಯಾ ಚಟುವಟಿಕೆಗಳಲ್ಲಿ ಶ್ರದ್ಧೆ ಮತ್ತು ಕೂತುಹಲದಿಂದ ಸಕ್ರೀಯವಾಗಿ ತೊಡಗಿಸಿಕೊಂಡಾಗ ನಾವು ಬಹು ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ. ಉನ್ನತ ಶ್ರೇಣಿಯ ಕನಸು ಕಾಣುವ ಜೊತೆಗೆ ಅದನ್ನು ಗಳಿಸಿಕೊಳ್ಳುವ ಅರ್ಹತೆಯನ್ನು ನಾವು ಬೆಳಿಸಿಕೊಳ್ಳಬೇಕು ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ಭಾಸ್ಕರ್ ಹೆಗ್ಡೆ ಅಭಿಪ್ರಾಯಪಟ್ಟರು. 


ಇವರು ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ರತ್ನತ್ರಯ ಸಭಾಭವನದಲ್ಲಿ ಆಯೋಜಿಸಿದ್ದ ವಿವಿಧ ವಿಭಾಗಗಳ ಭಿತ್ತಿ ಪತ್ರಿಕೆ ಅನಾವರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ವಿದ್ಯಾರ್ಥಿಗಳು ಬಹುಮುಖ ಪ್ರತಿಭೆಯ ಜೊತೆಗೆ ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ವೇದಿಕೆ ಹಿಂಜರಿಕೆಯನ್ನು ಹೊಗಲಾಡಿಸಬೇಕು. ಸಾರ್ವಜನಿಕ ಸಂಪರ್ಕ ಬೆಳೆಸಿಕೊಳ್ಳಲು ಸಂವಹನ ಕಲೆ ಅಗತ್ಯ . ವಿದ್ಯಾರ್ಥಿಗಳು ಸಮಾಜದ ಜ್ವಲಂತ ಸವಾಲುಗಳನ್ನು ಚರ್ಚಿಸುವ ಜೊತೆಗೆ ಪ್ರಸ್ತುತ ವಿದ್ಯಮಾನಗಳನ್ನು ಮನಗಾಣಬೇಕು. ಇದನ್ನು ಅರಿತುಕೊಳ್ಳಲು ವಾರ್ತಾ ಪತ್ರಿಕೆಗಳು ಅಡಿಪಾಯವಾಗಿದೆ. ಸಹಜ ತಪ್ಪುಗಳು ನಮಗೆ ಹೊಸ ಅನುಭವ ಮತ್ತು ಬದುಕಿನ ಪಾಠವನ್ನು ಕಲಿಸುತ್ತದೆ. ಭಯ, ಉತ್ಸಾಹ ಮತ್ತು ಕಲಿಕೆಯ‌ ಹಂಬಲದ ಹಿಂದೆ ಜಯ ಅಡಗಿದೆ. ವಿದ್ಯಾರ್ಥಿ ಜೀವನದಿಂದಲೇ ನಮ್ಮ ಪ್ರತಿಭೆ ಮತ್ತು ಕೌಶಲ್ಯವನ್ನು ಗಟ್ಟಿ ಮಾಡಿಕೊಳ್ಳುವುದು ಅವಶ್ಯ. ಸಾಧನೆಯ ಕನಸಿನ ಚಿಗುರಿಗೆ ಇಂದಿನಿಂದಲೇ ನೀರೆರೆದು ಪ್ರಯತ್ನದ ಹಾದಿಯಲ್ಲಿ ಸಾಗಿದರೆ ಮಾತ್ರ ಭವಿಷ್ಯದ ಯಶಸ್ಸು ಸಾಧ್ಯ ಎಂದು ಹೇಳಿದರು.


ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಪ್ರಾಥಮಿಕವಾಗಿ ಮನಗಾಣಬೇಕು. ಪ್ರತಿಯೊಬ್ಬನ ಒಳಗು ಒಬ್ಬ ಅತ್ಯುತ್ತಮ ಪ್ರತಿಭಾವಂತ ಕಲಾವಿದ ಅವಿತಿರುತ್ತಾನೆ. ಅವನನ್ನು ಸಾಮಜದ ಮುನ್ನೆಲೆಗೆ ತರುವ ನಿರಂತರ ಪ್ರಯತ್ನ ನಮ್ಮಿಂದಾಗಬೇಕು. ವಿದ್ಯಾರ್ಥಿಗಳ ಕಲಿಕಾ ವಿಷಯಗಳಲ್ಲಿ ಕನಿಷ್ಠ ಗರಿಷ್ಠ ಎಂಬ ಕೀಳರಿಮೆಯ ಮನೋಭಾವ ಮೂಡಬಾರದು. ಪ್ರತಿಯೊಂದು ವಿಷಯದ ಅಭ್ಯಾಸದಲ್ಲೂ ವಿಫುಲವಾದ ಅವಕಾಶಗಳಿವೆ. ಅವಕಾಶಗಳ ಬಳಕೆದಾರರು ನಾವಾದಾಗ ಮಾತ್ರ ಯಶಸ್ಸಿನ ಬುತ್ತಿ ನಮ್ಮದಾಗುತ್ತದೆ. ಸ್ವಂತಿಕೆಯ ಸೃಜನ ಶೀಲತೆ ಮತ್ತು ಸಮಗ್ರ ತೊಡಗಿಕೊಳ್ಳುವಿಕೆ ನಮ್ಮ ಸಾಧನೆಯ ಪಥವನ್ನು ಬೆಳಗಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ ಮಾತನಾಡಿ,  ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗುತ್ತಿದೆ. ಪ್ರತೀ ಶೈಕ್ಷಣಿಕ ವರ್ಷದ ಆರಂಭದಲ್ಲಿ ವಿದ್ಯಾರ್ಥಿಗಳ ಸೃಜನಶೀಲತೆಗೆ ಪೂರಕವಾಗುವ ನಾನಾ ಕಾರ್ಯಚಟುವಟಿಕೆಗಳನ್ನು ಕಾಲೇಜು ಮಾಡಿಕೊಂಡು ಬರುತ್ತಿದೆ ಎಂದರು. 

 

ಕಾರ್ಯಕ್ರಮದಲ್ಲಿ ಕಾಲೇಜಿನ ಸುಮಾರು 15ಕ್ಕೂ ಹೆಚ್ಚಿನ ವಿವಿಧ  ವಿಭಾಗದಿಂದ ವಿದ್ಯಾರ್ಥಿಗಳು ಕ್ರಿಯಾತ್ಮಕವಾಗಿ ರಚಿಸಿದ ಬಿತ್ತಿ ಪತ್ರಿಕೆಗಳನ್ನು ಅನಾವರಣ ಮಾಡಲಾಯಿತು. ವೇದಿಕೆಯಲ್ಲಿ ಉಪ ಪ್ರಾಂಶುಪಾಲ ಡಾ. ರಾಜೇಶ್ ಬಿ ಹಾಗೂ ಕಾರ್ಯಕಾರಿ ಸಮಿತಿ ಮುಖ್ಯಸ್ಥೆ ವೈದೇಹಿ ಎಸ್‌. ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸುಭಾಷ್ ರಾವ್ ಬೋಳೂರು, ಮನೋಹರ್‌ ಶೆಟ್ಟಿ, ಅಶ್ವಿನಿ ಎಚ್ ಆರ್, ಅಂಬಿಕಾ ಕೆ ಹಾಗೂ ಪ್ರಾಧ್ಯಾಪಕ ವೃಂದ ಸೇರಿದಂತೆ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಚಾರಿತ್ರ ಜೈನ್  ನಿರೂಪಿಸಿ, ವಿದ್ಯಾರ್ಥಿನಿ ಭಾಗ್ಯಲಕ್ಷ್ಮಿ ಸ್ವಾಗತಿಸಿದರು. ಕುಮಾರಿ ಸ್ಮೃತಿ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top