ಕರಾವಳಿಯ ಐತಿಹಾಸಿಕ ಸಾಹಿತ್ಯ ವೇದಿಕೆಗೆ ಮರುಜೀವ: ಜುಲೈ 18 ರಂದು ‘ಮಂಗಳೂರು ಮಿತ್ರ ಮಂಡಳಿ-2.0’ ಉದ್ಘಾಟನೆ

Upayuktha
0


ಮಂಗಳೂರು: ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಕರಾವಳಿಯಲ್ಲಿ ಕನ್ನಡ ಸಾಹಿತ್ಯ ಮತ್ತು ರಾಷ್ಟ್ರೀಯತೆಯ ಜಾಗೃತಿಗೆ ಕಾರಣವಾಗಿದ್ದ ಐತಿಹಾಸಿಕ ‘ಮಂಗಳೂರು ಮಿತ್ರ ಮಂಡಳಿ’ಗೆ ಈಗ ಮರುಜೀವ ನೀಡಲಾಗುತ್ತಿದ್ದು, ಇದರ ‘2.0’ ಆವೃತ್ತಿಯ ಉದ್ಘಾಟನಾ ಕಾರ್ಯಕ್ರಮವು ಜುಲೈ 18 ರಂದು ಜರುಗಲಿದೆ. ಕೆನರಾ ಹೈಸ್ಕೂಲ್ ಅಸೋಸಿಯೇಶನ್‌ನ ಕಲ್ಚರಲ್ ಅಕಾಡೆಮಿ ವತಿಯಿಂದ ಈ ಪುನರುಜ್ಜೀವನದ ಹೆಜ್ಜೆ ಇಡಲಾಗಿದ್ದು, ಅಂದು ಸಂಜೆ 5 ಗಂಟೆಗೆ ಡೊಂಗರಕೇರಿಯ ಭುವನೇಂದ್ರ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹಿರಿಯ ಸಾಹಿತಿ ಶ್ರೀಮತಿ ಚಂದ್ರಕಲಾ ನಂದಾವರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಧಾನ ಭಾಷಣ ಮಾಡಲಿದ್ದಾರೆ.


1920 ರ ದಶಕದಲ್ಲಿ ದೇಶಾದ್ಯಂತ ಸ್ವಾತಂತ್ರ್ಯ ಹೋರಾಟ ತೀವ್ರಗೊಂಡಿದ್ದಾಗ, ಸಾಹಿತ್ಯದ ಮೂಲಕ ರಾಷ್ಟ್ರೀಯತೆಯ ಭಾವವನ್ನು ಬಿತ್ತಲು ಕರಾವಳಿಯ ಕನ್ನಡ ಪಂಡಿತರು ಮುಂದಾಗಿದ್ದರು. ಆಗ ಮಂಗಳೂರಿನ ಕೆನರಾ ಹೈಸ್ಕೂಲಿನ ಮರದಡಿಯಲ್ಲಿ ಸಮಾನ ಮನಸ್ಕ ಸಾಹಿತಿಗಳು ಒಟ್ಟಾಗಿ ನಡೆಸಿದ ಚಿಂತನೆಯ ಫಲವಾಗಿ 1928 ರಲ್ಲಿ ‘ಮಂಗಳೂರು ಮಿತ್ರ ಮಂಡಳಿ’ ಜನ್ಮತಾಳಿತು. 


ಕನ್ನಡ ಸಾಹಿತ್ಯ ಲೋಕದ ಧೀಮಂತರಾದ ಪಂಜೆ ಮಂಗೇಶ್ ರಾವ್, ಎಂ.ಎನ್. ಕಾಮತ್, ಮಂಜೇಶ್ವರ ಗೋವಿಂದ ಪೈ, ಜೋಡುಮಠ ವಾಮನ ಭಟ್, ಪೇಜಾವರ ಸದಾಶಿವ ರಾವ್, ಸೇಡಿಯಾಪು ಕೃಷ್ಣ ಭಟ್, ಕಡೆಂಗೋಡ್ಲು ಶಂಕರ್ ಭಟ್, ಮುಳಿಯ ತಿಮ್ಮಪ್ಪಯ್ಯ, ಕಯ್ಯಾರ ಕಿಞ್ಞಣ್ಣ ರೈ, ಕೆ. ಸೂರ್ಯನಾರಾಯಣ ಅಡಿಗ, ಕಣಂದೂರು ರಾಘವಾಚಾರ್, ಕಣಂದೂರು ತಿಮ್ಮಯಾಚಾರ್, ಅಮ್ಮೆಂಬಳ ನಾರಾಯಣ ಪೈ, ಕೆ.ಕೆ.ರೈ, ಬಾಬುರಾಯ್ ಪ್ರಭು, ಎಸ್.ಪಿ.ಭಟ್ ಹಾಗೂ ಎ. ನಾರಾಯಣ ಪೈ ಮುಂತಾದ ಹಿರಿಯ ಸಾಹಿತಿಗಳು ಈ ವೇದಿಕೆಯ ಮೂಲಕ ಸಾಹಿತ್ಯ ಸೃಷ್ಟಿ ಮತ್ತು ಪ್ರಸಾರದ ಹೊಸ ಇತಿಹಾಸವನ್ನು ಬರೆದಿದ್ದರು.


ಈಗ ಪುನರಾರಂಭಗೊಳ್ಳುತ್ತಿರುವ ಮಂಗಳೂರು ಮಿತ್ರ ಮಂಡಳಿ-2.0 ಮೂಲಕ ಪ್ರಸ್ತುತ ತಲೆಮಾರಿನ ನವಚಿಂತನೆಯ ಸಾಹಿತಿಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು, ವಿವಿಧ ಸಾಹಿತ್ಯ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದು ಹಾಗೂ ಸಾಹಿತ್ಯಾಸಕ್ತರಿಗೆ ನಿರಂತರ ಪ್ರೋತ್ಸಾಹ ನೀಡುವ ಕಾರ್ಯ ನಡೆಯಲಿದೆ. ಕರಾವಳಿಯ ಸಾಹಿತ್ಯಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಈ ಮಹತ್ಕಾರ್ಯದ ಉದ್ಘಾಟನಾ ಸಮಾರಂಭಕ್ಕೆ ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಪ್ರಕಟಣೆಯಲ್ಲಿ ಕೋರಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top