ರೈಲ್ವೆ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುಕೂಲವಾಗಲು ಲಿಫ್ಟ್ ವ್ಯವಸ್ಥೆ ಜಾರಿ : ಕೋಟ ಶ್ರೀನಿವಾಸ ಪೂಜಾರಿ

Upayuktha
0

 


     ಉಡುಪಿ: ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ನಿಲ್ದಾಣಗಳಲ್ಲಿ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಮುಂದಾಗಿದೆ. ವೃದ್ಧರು, ವಿಶೇಷ ಚೇತನರು, ಗರ್ಭಿಣಿಯರು, ಅಶಕ್ತರು ಒಂದು ಫ್ಲಾಟ್ ಫಾರಂನಿಂದ ಮತ್ತೊಂದು ಫ್ಲಾಟ್ ಫಾರಂ ಗೆ ಸುಲಭವಾಗಿ ಸಂಚರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಕೊಂಕಣ ರೈಲ್ವೆ ವತಿಯಿಂದ ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಸುಮಾರು 2.26 ಕೋಟಿ ರೂ.ವೆಚ್ಚದಲ್ಲಿ ಲಿಫ್ಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಉಡುಪಿ - ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. 


ಅವರು ಇಂದು ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣದ 1 ಮತ್ತು 2 ನೇ ಫ್ಲಾಟ್ ಫಾರಂ ನಲ್ಲಿ ಹೊಸದಾಗಿ ಅಳವಡಿಸಲಾದ ಲಿಫ್ಟ್ ಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

   

ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದಿರುವ ಉಡುಪಿಗೆ ಹೊರರಾಜ್ಯ, ಜಿಲ್ಲೆಗಳಿಂದ ಶಿಕ್ಷಣ, ವೈದ್ಯಕೀಯ ಸೌಲಭ್ಯ, ಪ್ರವಾಸ ಸೇರಿದಂತೆ ಮತ್ತಿತರ ಕಾರ್ಯಗಳಿಗಾಗಿ ಜನರು ಆಗಮಿಸುತ್ತಾರೆ ಹಾಗೂ ಅನ್ಯಕಾರ್ಯಗಳ ನಿಮಿತ್ತ ಬೇರೆಡೆಗೆ ತೆರಳಲು ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ರೈಲು ಸೇವೆಯನ್ನು ಬಳಸುತ್ತಿದ್ದಾರೆ. ನಿಲ್ದಾಣದಲ್ಲಿ ಪ್ಲಾಟ್ ಫಾರ್ಮ್ಗಳಿಗೆ ಹೋಗಲು ಇರುವ ಓವರ್ ಬ್ರಿಜ್‌ಗಳಿಗೆ ಲಿಫ್ಟ್ ಅಳವಡಿಸುವ ಮೂಲಕ ಪ್ರಯಾಣಿಕರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸಲು ರೈಲ್ವೆ ಇಲಾಖೆ ಮುಂದಾಗಿದೆ ಎಂದರು.

   

ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನ ಮಾಡಬೇಕು ಎಂದು ಕರಾವಳಿ ಭಾಗದ ಜನಪ್ರತಿನಿಧಿಗಳು ಪ್ರಯತ್ನಿಸುತ್ತಿದ್ದು, ಒಂದೊಮ್ಮೆ ವಿಲೀನವಾದಲ್ಲಿ ಕೇಂದ್ರದಿಂದ ಹೆಚ್ಚಿನ ಅನುದಾನ ದೊರೆತು ಕೊಂಕಣ ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಸಿಗಲಿದೆ. ಆದಷ್ಟು ಶೀಘ್ರವಾಗಿ ವಿಲೀನ ಮಾಡಲು ಪ್ರಯತ್ನಿಸಲಾಗುವುದು ಎಂದರು. 

   

ವಂದೇ ಭಾರತ್ ರೈಲು ಪ್ರಾಯೋಗಿಕವಾಗಿ ಸಂಚಸುತ್ತಿದ್ದು, ಇದು ಬೆಂಗಳೂರಿನಿಂದ ಹೊರಟು ಮಂಗಳೂರು, ಉಡುಪಿ ಹಾಗೂ ಕರಾವಳಿಯ ಕೊನೆಯ ಹಂತವಾದ ಕಾರವಾರದವರೆಗೆ ಸಂಚರಿಸುವಂತಾಗಬೇಕು ಎಂಬ ನಿಟ್ಟಿನಲ್ಲಿ ಪ್ರಾಯೋಗಿಕವಾದ ಸರ್ವೇ ಕಾರ್ಯಗಳು ನಡೆಯುತ್ತಿವೆ ಎಂದ ಅವರು, ಮುಂದಿನ ದಿನಗಳಲ್ಲಿ ಬಾರ್ಕೂರು ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಸುಮಾರು 14 ಕೋಟಿ ರೂ. ವೆಚ್ಚದ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಮಂಜೂರಾದಲ್ಲಿ ಶೆಲ್ಟರ್ ಸೇರಿದಂತೆ ಮತ್ತಿತರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು. 

   

ಶಾಸಕ ಯಶ್‌ಪಾಲ್ ಎ ಸುವರ್ಣ ಮಾತನಾಡಿ, ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ಪ್ರಯಾಣಿಕರ ಬಹುದಿನದ ಬೇಡಿಕೆಯಾಗಿದ್ದ ಲಿಫ್ಟ್ಗೆ ಇಂದು ಚಾಲನೆ ನೀಡಲಾಗಿದೆ. ರೈಲ್ವೆ ಇಲಾಖೆಯ ಮೂಲಕ ಕಳೆದ ಎರಡು ವರ್ಷಗಳಲ್ಲಿ ಬಹಳಷ್ಟು ಬದಲಾವಣೆಗಳನ್ನು ನಾವು ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಕಾಣುತ್ತಿದ್ದೇವೆ. ಪ್ರಯಾಣಿಕರು ರಾತ್ರಿ ವೇಳೆ ಆಶ್ರಯ ಪಡೆಯಲು ಅನುಕೂಲವಾಗುವಂತೆ ಈಗಾಗಲೇ ಶೆಲ್ಟರ್ ನಿರ್ಮಿಸಲಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಯವರು ಅಮೃತ್ ಯೋಜನೆಯಡಿ ದೇಶದಾದ್ಯಂತ ಸುಮಾರು 75 ರೈಲ್ವೆ ಸ್ಟೇಷನ್‌ಗಳಲ್ಲಿ ಮೇಲ್ದರ್ಜೆ ಕಾಮಗಾರಿಗಳಿಗೆ ಲೋಕಾರ್ಪಣೆ ಮಾಡಲಿದ್ದಾರೆ ಜೊತೆಗೆ ಹೈಡ್ರೋಜನ್ ಪವರ‍್ಡ್ ಟ್ರೈನ್ ಗೂ ಚಾಲನೆ ನೀಡಲಿದ್ದಾರೆ ಎಂದರು.

  

ಮುಂದಿನ ದಿನಗಳಲ್ಲಿ ಇಂದ್ರಾಳಿ ರೈಲ್ವೆ ನಿಲ್ದಾಣದ ಸುತ್ತಮುತ್ತಲಿನ ಪರಿಸರವನ್ನು ಸುಂದರವಾಗಿಸುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯ, ಪಾರ್ಕಿಂಗ್, ಸಂಪರ್ಕ ವ್ಯವಸ್ಥೆ ಸೇರಿದಂತೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕು ಎಂದ ಅವರು, ಇಂದ್ರಾಳಿ ಬಸ್‌ಸ್ಟ್ಯಾಂಡ್ ನಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಬಹಳ ಕಿರಿದಾಗಿದ್ದು, ಅದನ್ನು ಮಾಸ್ಟರ್ ಪ್ಲಾನ್‌ಗೆ ಅಳವಡಿಸುವ ಮೂಲಕ ರಸ್ತೆ ವಿಸ್ತರಣೆ ಕಾಮಗಾರಿ ಕೈಗೊಳ್ಳಬೇಕು ಇದರಿಂದ ಪ್ರಯಾಣಿಕರ, ಪ್ರವಾಸಿಗರ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.

   

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿದರು.

   

ಇದೇ ಸಂದರ್ಭದಲ್ಲಿ ರೈಲ್ವೆ ಯಾತ್ರಿಕರ ಸಂಘದ ವತಿಯಿಂದ ಉಡುಪಿ ರೈಲ್ವೆ ನಿಲ್ದಾಣದ ಸಮಸ್ಯೆಗಳು ಹಾಗೂ ಅಭಿವೃದ್ಧಿಯ ಬಗ್ಗೆ ಸಂಸದರಿಗೆ ಮನವಿ ನೀಡಿದರು. 

  

ಕಾರ್ಯಕ್ರಮದಲ್ಲಿ ಡೆಪ್ಯುಟಿ ಚೀಫ್ ಇಂಜಿನಿಯರ್ ವಿಜಯ್ ಕುಮಾರ್, ಮಂಗಳೂರು ಕೊಂಕಣ ರೈಲ್ವೆ ಪಿ.ಆರ್.ಓ ಸುಧಾ ಕೃಷ್ಣಮೂರ್ತಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು. 

   

ಕಾರವಾರ ರೀಜನಲ್ ರೈಲ್ವೆ ಮ್ಯಾನೆಜರ್ ಆಶಾ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಅವಿನಾಶ್ ಕಾಮತ್ ನಿರೂಪಿಸಿ, ಕೊಂಕಣ ರೈಲ್ವೆಯ ಸೀನಿಯರ್ ಡಿವಿಜನಲ್ ಮ್ಯಾನೆಜರ್ ದಿಲೀಪ್ ಭಟ್ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top