ಶಾಶ್ವತ ನಿವಾಸ ಪ್ರಮಾಣಪತ್ರ ರಾಷ್ಟ್ರೀಯ ಭದ್ರತೆಗೆ ಧಕ್ಕೆ: ಪಾಟೇಲ್ ಸಿದ್ದಾರೆಡ್ಡಿ

Upayuktha
0

 



ಬಳ್ಳಾರಿ: ಕರ್ನಾಟಕ ಸರ್ಕಾರ ಹೊರಡಿಸಿರುವ ಕರ್ನಾಟಕ ಶಾಶ್ವತ ನಿವಾಸ ಪ್ರಮಾಣಪತ್ರ (ಪಿಆರ್‌ಸಿ)-2026 ಅಧಿಸೂಚನೆ ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿದ್ದು, ರಾಷ್ಟ್ರೀಯ ಭದ್ರತೆಗೆ ಗಂಭೀರ ಆತಂಕ ಉಂಟುಮಾಡುವ ಸಾಧ್ಯತೆಯಿದೆ ಎಂದು ಬಳ್ಳಾರಿ ನಗರದ ಹಿರಿಯ ವಕೀಲರು ಪಾಟೀಲ್ ಸಿದ್ದಾ ರೆಡ್ಡಿ, ಮಾಜಿ ಶಾಸಕ ಸೋಮಶೇಖರ ರೆಡ್ಡಿ ಆಗ್ರಹಿಸಿದ್ದಾರೆ.

ನಗರದ ವಾಜಪೇಯಿ ಬಡಾವಣೆಯಲ್ಲಿರುವ ಬಳ್ಳಾರಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನವು ದೇಶದ ಎಲ್ಲ ನಾಗರಿಕರಿಗೆ ಒಂದೇ ಪೌರತ್ವವನ್ನು ಕಲ್ಪಿಸಿರುವಾಗ, ರಾಜ್ಯ ಸರ್ಕಾರವು "ಶಾಶ್ವತ ನಿವಾಸಿ” ಎಂಬ ಪ್ರತ್ಯೇಕ ವರ್ಗವನ್ನು ಸೃಷ್ಟಿಸಲು ಮುಂದಾಗಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು.

ಶಾಶ್ವತ ನಿವಾಸ ಪ್ರಮಾಣಪತ್ರ ನೀಡಲು ಯಾವುದೇ ಸಾಂವಿಧಾನಿಕ ಅಥವಾ ಶಾಸನಬದ್ಧ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಈ ರೀತಿಯ ವರ್ಗೀಕರಣವು ಸಂವಿಧಾನದ ಸಮಾನತೆಯ ಹಕ್ಕು ಕಲ್ಪಿಸುವ 14ನೇ ವಿಧಿಯನ್ನು ಉಲ್ಲಂಘಿಸುವಂತಿದ್ದು, ಕಾನೂನುಬದ್ಧ ಉದ್ದೇಶವಿಲ್ಲದ ಕ್ರಮವಾಗಿದೆ ಎಂದು ಟೀಕಿಸಿದರು.

ಪ್ರಮಾಣಪತ್ರ ವಿತರಣೆಗೆ ಕಂದಾಯ ಅಧಿಕಾರಿಗಳ ನಿವಾಸ ಹಾಗೂ ಸ್ಥಳೀಯ ಪರಿಶೀಲನೆಯನ್ನು ಮಾತ್ರ ಆಧಾರವಾಗಿಟ್ಟುಕೊಂಡಿರುವುದು ಆತಂಕಕಾರಿ ಸಂಗತಿಯಾಗಿದೆ. ಭಾರತೀಯ ಪೌರತ್ವವನ್ನು ಸಮರ್ಥ ಕೇಂದ್ರ ಸಂಸ್ಥೆಗಳ ಮೂಲಕ ಕಡ್ಡಾಯವಾಗಿ ಪರಿಶೀಲಿಸುವ ವ್ಯವಸ್ಥೆ ಇಲ್ಲದಿರುವುದರಿಂದ ಅಕ್ರಮ ವಲಸಿಗರು ಅಥವಾ ವಿದೇಶಿ ಪ್ರಜೆಗಳು ಕೂಡ ಸುಳ್ಳು ದಾಖಲೆಗಳ ಮೂಲಕ ಶಾಶ್ವತ ನಿವಾಸ ಪ್ರಮಾಣಪತ್ರ ಪಡೆಯುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು.

ಒಮ್ಮೆ ಪ್ರಮಾಣಪತ್ರ ಪಡೆದ ಬಳಿಕ ಸರ್ಕಾರಿ ಯೋಜನೆಗಳು, ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆದು ಅಕ್ರಮ ವಾಸವನ್ನೇ ಕಾನೂನುಬದ್ಧಗೊಳಿಸಬಹುದಾದ ಸಾಧ್ಯತೆ ಇದೆ. ಇದು ಅಕ್ರಮ ವಲಸಿಗರನ್ನು ಗುರುತಿಸಿ ಕ್ರಮ ಕೈಗೊಳ್ಳುವ ಕೇಂದ್ರ ಸರ್ಕಾರದ ಪ್ರಯತ್ನಗಳಿಗೆ ಅಡ್ಡಿಯಾಗಬಹುದು ಎಂದು ಹೇಳಿದರು.

ಪೌರತ್ವ, ವಲಸೆ, ವಿದೇಶಿಯರು ಹಾಗೂ ಆಂತರಿಕ ಭದ್ರತೆ ವಿಷಯಗಳು ಕೇಂದ್ರ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಒಳಪಡುವುದರಿಂದ, ರಾಜ್ಯ ಮಟ್ಟದಲ್ಲಿ ಇಂತಹ ಕಾರ್ಯವಿಧಾನ ರೂಪಿಸುವುದು ಕೇಂದ್ರದ ಏಕರೂಪ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಶಾಶ್ವತ ನಿವಾಸ ಪ್ರಮಾಣಪತ್ರ-2026 ಅಧಿಸೂಚನೆಯ ಸಾಂವಿಧಾನಿಕ ಸಿಂಧುತ್ವವನ್ನು ಕೇಂದ್ರ ಗೃಹ ಸಚಿವಾಲಯ ಪರಿಶೀಲಿಸಬೇಕು. ಅಲ್ಲಿಯವರೆಗೆ ಅಧಿಸೂಚನೆಯ ಅನುಷ್ಠಾನವನ್ನು ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಅಧಿಸೂಚನೆ ಹೊರಡಿಸಿರುವ ಸಾಂವಿಧಾನಿಕ ಹಾಗೂ ಕಾನೂನುಬದ್ಧ ಅಧಿಕಾರದ ಕುರಿತು ರಾಜ್ಯ ಸರ್ಕಾರದಿಂದ ಸಮಗ್ರ ವರದಿ ಪಡೆದು, ಭಾರತೀಯ ಪೌರತ್ವದ ಸಮರ್ಪಕ ಪರಿಶೀಲನೆಯಿಲ್ಲದೆ ಯಾವುದೇ ಶಾಶ್ವತ ನಿವಾಸ ಪ್ರಮಾಣಪತ್ರ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಸೋಮಶೇಖರ ರೆಡ್ಡಿ ಆಗ್ರಹಿಸಿದರು. ಇದು ದೊಡ್ಡ ಅಪಾಯಕಾರಿ ಕೆಲಸ ಇದು, ಇದರಿಂದ ನಾಳೆ ರಾಜ್ಯದಲ್ಲಿ, ಕಾನೂನು ಉಲ್ಲಂಘನೆ,ಯಾಗಿ, ಪಾಕಿಸ್ತಾನ, ಬಾಂಗ್ಲಾದೇಶ, ವಾತಾವರಣ ಸೃಷ್ಟಿ ಆಗಲಿದೆ ಎಂದುರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಮುಖಂಡರು ಹಾಗೂ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top