ತುಂಗಭದ್ರಾ ನದಿಯ ತೀರದಲ್ಲಿ ಇಂದಿಗೂ ನಮ್ಮ ಕನ್ನಡ ನಾಡಿನ ಹೆಮ್ಮೆಯ ಚರಿತ್ರೆಯನ್ನು ಹಂಪಿ ವಿಶ್ವಕ್ಕೆ ಹೇಳುತ್ತಾ ನಿಂತಿದೆ. ಬಂಡೆ ಕಲ್ಲುಗಳಿಗೆ ತನ್ನ ಸೌಂದರ್ಯದ ಪರಿಚಯ ಮಾಡಿಕೊಟ್ಟ ಹಿರಿಮೆ ವಿಜಯನಗರದ ಅರಸು ಮನೆತನಕ್ಕೆ ಸೇರುತ್ತದೆ. ಕಲ್ಲಿನಿಂದಲೇ ಕೆತ್ತನೆ ಮಾಡಿದ ದೇವಸ್ಥಾನ,ರಥಗಳನ್ನು ಹಂಪಿಯಲ್ಲಿ ಕಾಣಸಿಗುತ್ತದೆ.
ವಿಜಯನಗರ ಸಾಮ್ರಾಜ್ಯದ ಉದಯ
೧೪ನೇ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ರಾಜಕೀಯ ಅಶಾಂತಿ ಹೆಚ್ಚಾಗಿತ್ತು. ಅದೇ ಕಾಲಘಟ್ಟದಲ್ಲಿ ಸಂಗಮ ವಂಶದ ಸಹೋದರರು ಹರಿಹರ ಮತ್ತು ಬುಕ್ಕರು ೧೩೩೬ರಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಹಂಪಿ ಅವರ ಮೊದಲ ರಾಜಧಾನಿಯಾಗಿತ್ತು. ತುಂಗಭದ್ರೆ ನದಿಯ ತೀರದ ಈ ಬಂಡೆಗಾಡಿನ ನೆಲವು ಕೇವಲ ನೈಸರ್ಗಿಕ ಸೌಂದರ್ಯದಿಂದ ಮತ್ತು ಭೌಗೋಳಿಕ ರಕ್ಷಣಾತ್ಮಕ ಗುಣಗಳಿಂದಲೂ ಆಯ್ಕೆಯಾಯಿತು. ಸುತ್ತಲೂ ಬೆಟ್ಟಗಳಂತೆ ಇರುವ ಬಂಡೆಗಳು ಶತ್ರುಗಳ ಪ್ರವೇಶವನ್ನು ಕಷ್ಟಮಾಡುತ್ತವೆ. ಈ ಕೋಟೆಯೊಳಗೆ ಹುಟ್ಟಿದ ನಗರವು ಮುಂದಿನ ಎರಡು ಶತಮಾನಗಳಲ್ಲಿ ದಕ್ಷಿಣ ಭಾರತದ ಅತಿದೊಡ್ಡ ಮತ್ತು ಶ್ರೀಮಂತ ಸಾಮ್ರಾಜ್ಯವಾಗಿ ಬೆಳೆದಿತ್ತು.
ಕೃಷ್ಣದೇವರಾಯ ಮತ್ತು ಸುವರ್ಣ ಯುಗ ವಿಜಯನಗರ ಸಾಮ್ರಾಜ್ಯದ ಸುವರ್ಣಯುಗದ ಕಾಲವನ್ನು ನೆನಪಿಸಿಕೊಳ್ಳುವಾಗ ಮೊದಲು ಕೇಳಿ ಬರುವ ರಾಜನ ಹೆಸರು ತುಸು ದೇವರಾಯ. ೧೬ನೇ ಶತಮಾನದಲ್ಲಿ ರಾಜಕೃಷ್ಣದೇವರಾಯನ ಆಡಳಿತದ ಅವಧಿಯಲ್ಲಿ ಹಂಪಿ ಅಪಾರ ವೈಭವವನ್ನು ಕಂಡಿತು. ವಿದೇಶಿ ಪ್ರವಾಸಿಗರು ಹಂಪಿಯ ಮಾರುಕಟ್ಟೆಗಳಲ್ಲಿ ವಜ್ರ, ಮುತ್ತು, ರತ್ನಗಳಾದಿಗಳನ್ನು ಮುಕ್ತವಾಗಿ ಮಾರಾಟ ಮಾಡುತ್ತಿದ್ದ ದೃಶ್ಯಗಳನ್ನು ವರ್ಣಿಸಿದ್ದಾರೆ. ಅರಮನೆಗಳಲ್ಲಿ ಸಂಗೀತ, ಸಾಹಿತ್ಯ ಕಲೆಗಳಿಗೆ ಅಪಾರ ಪ್ರೋತ್ಸಾಹ ಸಿಕ್ಕಿತು. ಕನ್ನಡ, ಸಂಸ್ಕೃತ ತೆಲುಗು ಸಾಹಿತ್ಯಗಳು ಉನ್ನತಕ್ಕೇರಿದವು. ಪ್ರಜೆಗಳ ಜೀವನದಲ್ಲಿ ಭದ್ರತೆ ಮತ್ತು ಸಮೃದ್ಧಿ ತುಂಬಿಕೊಂಡಿದ್ದ ಆ ಕಾಲವನ್ನು ಇತಿಹಾಸ ಇಂದು ಸಹ ವಿಜಯನಗರ ಕಾಲದ ಸುವರ್ಣ ಯುಗ ಎಂದು ಹೆಮ್ಮೆಯಿಂದ ನಮ್ಮ ಇತಿಹಾಸ ನೆನಪಿಸುತ್ತದೆ.
ಭಕ್ತಿಯ ಜ್ಯೋತಿ ವಿರೂಪಾಕ್ಷ ದೇವಾಲಯ
ಹಂಪಿಯ ಹೃದಯದಲ್ಲಿ ಇಂದಿಗೂ ನಿಂತಿರುವ ವಿರೂಪಾಕ್ಷ ದೇವಸ್ಥಾನವು ಈ ನಗರದ ಆಧ್ಯಾತ್ಮಿಕ ಕ್ಷೇತ್ರ. ವಿಜಯನಗರದ ಕಾಲಕ್ಕಿಂತಲೂ ಹಳೆಯದಾದ ಈ ದೇವಸ್ಥಾನವು ಇವರ ಕಾಲದಲ್ಲಿ ವಿಶಾಲವಾಗಿ ವಿಸ್ತರಿಸಲ್ಪಟ್ಟಿತು. ದೇವಸ್ಥಾನದ ಗೋಪುರವು ಆಕಾಶದಷ್ಟು ಎತ್ತರವಾಗಿ ನಿಂತಿದೆ. ದೇವಾಲಯದೊಳಗೆ ಕಾಲಿಟ್ಟಾಗ ಶತಮಾನಗಳ ಭಕ್ತಿಯ ಶಕ್ತಿ ಮನಸ್ಸನ್ನು ಆವರಿಸುತ್ತದೆ. ಇಂದಿಗೂ ಪೂಜೆ ನಡೆಯುತ್ತಿರುವುದು ಹಂಪಿಯ ನಿರಂತರತೆಯ ಜೀವಂತಿಕೆಯ ಸಂಕೇತ. ಕಾಲ ಬದಲಾಗಿದ್ದರೂ ಭಕ್ತಿ ಬದಲಾಗಿಲ್ಲ ಎಂಬುದಕ್ಕೆ ಇದು ಜೀವಂತ ಸಾಕ್ಷಿ.
ಸಂಗೀತದ ಸ್ತಂಭಗಳು ಮತ್ತು ಕಲ್ಲಿನ ರಥ
ಹಂಪಿಯ ಅತ್ಯಂತ ಆಕರ್ಷಕ ಕಟ್ಟಡಗಳಲ್ಲಿ ವಿಠ್ಠಲ ದೇವಸ್ಥಾನ ಪ್ರಮುಖ. ಇಲ್ಲಿ ಕಾಣ ಸಿಗುವ ಕಲ್ಲಿನ ರಥ ವಿಜಯನಗರದ ಶಿಲ್ಪಕಲೆಯ ಪ್ರತೀಕವಾಗಿದೆ. ಕಲ್ಲಿನಲ್ಲಿ ರೂಪುಗೊಂಡ ರಥ ಜೀವಂತವಾಗಿ ಕಾಣುತ್ತದೆ. ಅದರ ಚಕ್ರಗಳು, ಅಕ್ಷ, ಅಲಂಕಾರಗಳು ಶಿಲ್ಪಿಗಳ ಅದ್ಭುತ ಕಲ್ಪನೆಯ ಸಾಕ್ಷಿ. ದೇವಸ್ಥಾನದ ರಂಗಮಂಟಪದ ಸಂಗೀತ ಸ್ತಂಭಗಳನ್ನು ಮೃದುವಾಗಿ ತಟ್ಟಿದರೆ ವಿವಿಧ ಧ್ವನಿಗಳು ಹೊರಹೊಮ್ಮುತ್ತದೆ. ಕಲ್ಲಿನೊಳಗೆ ಸಂಗೀತವನ್ನು ಬಂಧಿಸಿದ ಆ ಕಲಾವಿದರ ಕೌಶಲ್ಯ ವಿಸ್ಮಯಗೊಳಿಸುತ್ತದೆ.
ಹಂಪಿಯ ಜನ ಜೀವನ ಮತ್ತು ಮಾರುಕಟ್ಟೆ
ಹಂಪಿ ಕೇವಲ ರಾಜರು ಅಥವಾ ದೇವಸ್ಥಾನಗಳ ನಗರವಲ್ಲ; ಅದು ಜನರ ನಗರವೂ ಹೌದು. ಉದ್ದವಾದ ಬಜಾರ್, ಬೀದಿಗಳ ಎರಡೂ ಕಡೆಯಲ್ಲಿ ಅಂಗಡಿಗಳು, ಹೂವು-ಹಣ್ಣುಗಳ ಮಾರಾಟಗಾರರು, ರತ್ನದ ವ್ಯಾಪಾರಿಗಳ ಸಂಚಲನ ಇತ್ತು. ವಿದೇಶಗಳಿಂದ ಬಂದ ವ್ಯಾಪಾರಿಗಳು ಇಲ್ಲಿ ಅಮೂಲ್ಯ ವಸ್ತುಗಳನ್ನು,ಕುದುರೆಗಳನ್ನು ಮಾರಾಟ ಮಾಡುತ್ತಿದ್ದರು. ಹಂಪಿ ಜನರ ದೈನಂದಿನ ಜೀವನವು ವೈವಿಧ್ಯಮಯ ಸಂಸ್ಕೃತಿಗಳ ಸಂಗಮವಾಗಿತ್ತು.
ಮಹಾನವಮಿ ದಿಬ್ಬ ಮತ್ತು ರಾಜಮಹಲಗಳು
ಈಗ ಅವಶೇಷವಾಗಿ ಉಳಿದಿರುವ ಮಹಾನವಮಿ ದಿಬ್ಬವು ಒಮ್ಮೆ ರಾಜಕೀಯದ ಕೇಂದ್ರವಾಗಿತ್ತು. ನಾಡ ಹಬ್ಬ ದಸರಾದ ಸಂದರ್ಭದಲ್ಲಿ ಇಲ್ಲಿ ಭವ್ಯವಾದ ಸಮಾರಂಭಗಳು ನಡೆಯುತ್ತಿದ್ದವು. ರಾಜರುಗಳು ಸಾರ್ವಜನಿಕವಾಗಿ ಕಾಣಿಸಿಕೊಂಡು ಸೇನೆಯ ಪ್ರದರ್ಶನಗಳನ್ನು ವೀಕ್ಷಿಸುತ್ತಿದ್ದರು. ಅಲ್ಲೇ ಹತ್ತಿರದಲ್ಲಿ ಅರಮನೆಗಳ ಸಮುಚ್ಚಯ, ರಾಣಿಯರ ಸ್ನಾನಗೃಹ, ಕಮಲ ಮಹಲ್ ಕಟ್ಟಡಗಳು ರಾಜವೈಭವದ ಕಥೆಗಳನ್ನು ಹೇಳುತ್ತವೆ. ಈಗ ಅವುಗಳ ಗೋಡೆಗಳು ಕುಸಿದಿದ್ದರೂ, ಅವುಗಳ ನೆರಳಿನಲ್ಲಿ ನಿಂತಾಗ ಭೂತಕಾಲದ ಅದ್ಭುತ ದೃಶ್ಯಗಳು ಮನಸ್ಸಿನಲ್ಲಿ ಜೀವಂತವಾಗುತ್ತವೆ.
೧೫೬೫ರ ತಾಳಿಕೋಟೆ ಯುದ್ಧ
ಪ್ರತಿಯೊಂದು ಸುವರ್ಣಯುಗಕ್ಕೂ ಒಂದು ಅಂತ್ಯ ಇರುತ್ತದೆ. ೧೫೬೪ರಲ್ಲಿ ತಾಳಿಕೋಟೆ ಯುದ್ಧದಲ್ಲಿ ವಿಜಯನಗರ ಸೇನೆ ಸೋತಿತು. ಡಕ್ಕನ್ ಸುಲ್ತಾನರ ಸಂಯುಕ್ತ ಸೇನೆ ಹಂಪಿಯ ಮೇಲೆ ದಾಳಿ ನಡೆಸಿತು. ಯುದ್ಧದ ನಂತರ ನಗರವನ್ನು ದೋಚಿ, ದೇವಾಲಯಗಳನ್ನು ಧ್ವಂಸಗೊಳಿಸಲಾಯಿತು. ಹಲವು ದಿನಗಳ ಕಾಲ ಬೆಂಕಿ ಹೊತ್ತಿ ಉರಿಯುತ್ತಿತ್ತು ಎಂದು ಇತಿಹಾಸ ಹೇಳುತ್ತದೆ. ಸುಖ-ಸಮೃದ್ಧಿಯಿಂದ ಕಂಗೊಳಿಸುತ್ತಿದ್ದ ರಾಜಧಾನಿ ಕ್ಷಣಾರ್ಧದಲ್ಲಿ ಅವಶೇಷಗಳ ನಗರವಾಯಿತು. ಈ ದುರಂತದ ನೋವು ಇಂದಿಗೂ ಹಂಪಿಯ ಕಲ್ಲುಗಳಲ್ಲಿ ಮೌನವಾಗಿ ನೆಲಸಿದೆ.
ವಿಶ್ವ ಪಾರಂಪರ್ಯ ಸ್ಥಾನಮಾನ
ಭಾರತದಲ್ಲಿ ಪ್ರಸ್ತುತ ೪೦ಕ್ಕೂ ಹೆಚ್ಚು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಿವೆ. ಇವು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸುತ್ತವೆ. ಹಂಪಿಯು ಯುನೆಸ್ಕೋ ವಿಶ್ವ ಪಾರಂಪರ್ಯ ತಾಣವಾಗಿ ಗುರುತಿಸಿಕೊಂಡಿದೆ. ಜಗತ್ತಿನ ವಿವಿಧ ಭಾಗಗಳಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ಸೂರ್ಯಾಸ್ತಮಾನದ ವೇಳೆಯಲ್ಲಿ ಬಂಡೆಗಳ ಮೇಲೆ ಕುಳಿತು ತುಂಗಭದ್ರೆಯ ಹರಿವನ್ನು ನೋಡುವುದು ರಮಣೀಯ.
ಹಂಪಿ – ನಮ್ಮ ಹೆಮ್ಮೆ
ಹಂಪಿ ಕೇವಲ ಪ್ರವಾಸಿ ತಾಣವಲ್ಲ; ಅದು ನಮ್ಮ ಇತಿಹಾಸದ ಕೈಗನ್ನಡಿ. ಅಲ್ಲಿ ನಡೆದು ಹೋಗುವಾಗ ನಾವು ಕೇವಲ ಅವಶೇಷಗಳನ್ನು ನೋಡುವುದಿಲ್ಲ; ನಾವು ನಮ್ಮ ಸಂಸ್ಕೃತಿಯ ಶಕ್ತಿ, ಕಲೆಯ ವೈಭವವನ್ನು ಅರಿಯುತ್ತೇವೆ. ಈ ಪಾರಂಪರ್ಯವನ್ನು ಸಂರಕ್ಷಿಸುವುದು ನಮ್ಮ ಹೊಣೆಗಾರಿಕೆ. ಕಲ್ಲುಗಳು ಮಾತಾಡುವುದಿಲ್ಲ; ಆದರೆ ನಾವು ಗಮನವಿಟ್ಟರೆ ಅವು ಅನೇಕ ಪಾಠಗಳನ್ನು ಕಲಿಸುತ್ತವೆ.
ತುಂಗಭದ್ರೆಯ ಗಾಳಿಯಲ್ಲಿ ಇನ್ನೂ ವಿಜಯನಗರದ ನಾದ ಮೊಳಗುತ್ತದೆ. ಬೆಳಗಿನ ಕಿರಣಗಳಲ್ಲಿ ಹೊಳೆಯುವ ಹಂಪಿಯ ಬಂಡೆಗಳು ಸಂಸ್ಕೃತಿಯ ಶಾಶ್ವತತೆಯನ್ನು ಎತ್ತಿ ತೋರಿಸುತ್ತದೆ.
- ವಿಂಧ್ಯಾ ಜಿ ಕೆ
ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ
ಎಸ್ ಡಿ ಎಂ ಕಾಲೇಜು ಉಜಿರೆ


.jpg)
