ಸೌಮ್ಯ ಸ್ವಭಾವದ ಸಿರಿನುಡಿಗಳು - ಕೃತಿ ಲೋಕಾರ್ಪಣೆ

Upayuktha
0



ಹಾಸನ : ಸೌಮ್ಯ ಸ್ವಭಾವದ ಸಿರಿನುಡಿಗಳು - ಈ ಕೃತಿಯು ಮಾನವೀಯ ಮೌಲ್ಯಗಳನ್ನು ಹೇಳುವಂತಹದ್ದಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಕಿರಿಯರಿಂದ ಹಿಡಿದು ಹಿರಿಯರ ವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಮೋಸ ಹೋಗುವವರಿದ್ದಾರೆ ಮತ್ತು ಮೋಸ ಮಾಡುವವರಿದ್ದಾರೆ. ನೈತಿಕ ಮೌಲ್ಯಗಳು ಅಧಃಪತನಗೊಂಡಿವೆ. ಇವುಗಳನ್ನು ಇಂದಿನ ಮಕ್ಕಳಿಗೆ ಮತ್ತು ಜನಾಂಗಕ್ಕೆ ತಿಳಿಸಿ ಹೇಳಬೇಕಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಘಟಕದ ಖಜಾಂಚಿಗಳಾದ ಕೆ.ಬಿ. ಮಹದೇವಪ್ಪ ಹೇಳಿದರು.


ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರದಂದು ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ  ಸಾಹಿತಿಗಳು ಮತ್ತು ಲೇಖಕರನ್ನು ಉದ್ದೇಶಿಸಿ ಪುಸ್ತಕ ಪರಿಚಯ ಮಾಡುತ್ತಾ ಮಾತನಾಡಿದ ಅವರು ಸಾಹಿತಿಗಳಾದ ಕೆ.ಎನ್. ಚಿದಾನಂದ ರವರು ಬರೆದ ಸೌಮ್ಯ ಸ್ವಭಾವದ ಸಿರಿನುಡಿಗಳು ಕೃತಿಯಲ್ಲಿ ನಾವು ಮಾನವರಾಗಿ ಬದುಕಲು ಅಗತ್ಯ ಮೌಲ್ಯಗಳನ್ನು ತಿಳಿಸಿದ್ದಾರೆ. ಹೃದಯ ಶ್ರೀಮಂತಿಕೆ, ದೃಢ ನಿರ್ಧಾರ, ನಂಬಿಕೆ, ಸೌಜನ್ಯತೆ, ಏಕಾಗ್ರತೆ, ಗುರು, ಸದ್ಗುಣ, ಕಲಿಕೆ ಮುಂತಾದವುಗಳ ಬಗ್ಗೆ ವಿಸ್ತೃತವಾಗಿ ತಿಳಿಸಿದ್ದಾರೆ. 


ಮಾನವರಾದ ನಾವು ಸರಳ ಜೀವನ ಮತ್ತು ಉದಾತ್ತ ವಿಚಾರಗಳನ್ನು ರೂಪಿಸಿಕೊಳ್ಳಬೇಕು ಎಂದರು. ಈ ಕೃತಿಗೆ ನಿವೃತ್ತ ಉಪನ್ಯಾಸಕರಾದ ಜಿ ಎಸ್ . ರುದ್ರಮುನಿಯವರು ಮುನ್ನುಡಿಯನ್ನು ಬಹಳ ಅರ್ಥಗರ್ಭಿತವಾಗಿ ಬರೆದಿದ್ದಾರೆ. 


ನಿವೃತ್ತ ಶಿಕ್ಷಣಾಧಿಕಾರಿಗಳಾದ ಡಾ. ಜೆ.ಬಿ. ತಮ್ಮಣ್ಣಗೌಡರು ಬೆನ್ನುಡಿಯನ್ನು ಸಂಕ್ಷಿಪ್ತವಾಗಿ ಮನಮುಟ್ಟುವಂತೆ ಬರೆದಿರುತ್ತಾರೆ. ಈ ಕೃತಿಯಲ್ಲಿ ಕೆ.ಎನ್. ಚಿದಾನಂದರವರ ಭಾಷಾ ಕೌಶಲ, ಆಳವಾದ ಅಧ್ಯಯನ, ವಿಷಯ ವಿಸ್ತೃತತೆ, ಪದ ಸಂಯೋಜನೆ, ವಾಕ್ಯ ಸಂಯೋಜನೆಗಳನ್ನು ಉತ್ತಮವಾಗಿ ನಿರ್ವಹಿಸಿದ್ದಾರೆಂದರು. ಎಲ್ಲರೂ ಈ ಕೃತಿಯನ್ನು ಕೊಂಡು ಓದಲು ಪ್ರೇರೇಪಿಸಿದರು.


ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆ ರವರು ಇಂದು ಬಿಡುಗಡೆಯಾಗುತ್ತಿರುವ ಕೃತಿಗಳು ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವದ ಮೌಲ್ಯಗಳಿಂದ ಕೂಡಿವೆ. ಇಂದಿನ ಜನರಲ್ಲಿ  ಮೂಢನಂಬಿಕೆ, ಅಜ್ಞಾನ ತೊಲಗಬೇಕು. ಪ್ರಶ್ನಿಸುವ ಮತ್ತು ಚಿಂತನ - ಮಂಥನಗಳನ್ನು ಮಾಡುವ ಪ್ರಬುದ್ಧತೆ ಬೆಳೆಯಬೇಕು. ಸ್ಥಳೀಯ ಮತ್ತು ಜಾನಪದ ವಿಚಾರಗಳು ನಮ್ಮ ಕಣ್ಣಿಗೆ ಕಾಣುವಂತಿವೆ. ಅವುಗಳನ್ನು ಅವಲೋಕಿಸಿ ಅಳವಡಿಸಿಕೊಳ್ಳಬೇಕು ಎಂದರು.


 ಕೆ.ಎನ್. ಚಿದಾನಂದರವರ ಕೃತಿ ಉತ್ತಮವಾಗಿ ಮತ್ತು ಆಕರ್ಷಕವಾಗಿ ಮುದ್ರಣಗೊಂಡಿದ್ದು ಮಾನವರ ಬದುಕಿನ ಉನ್ನತಿಗಾಗಿ ಉತ್ತಮ ಮೌಲ್ಯಗಳನ್ನು ಸಂದೇಶಗಳಾಗಿ ನೀಡುವಂತೆ ಬರೆದಿದ್ದಾರೆ ಎಂದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಮತ್ತು ಪ್ರಖ್ಯಾತ ಮನಃಶಾಸ್ತ್ರಜ್ಞರು ಮತ್ತು ಕೆ.ಜೆ.ವಿ.ಎಸ್. ನ ರಾಜ್ಯಾಧ್ಯಕ್ಷರಾದ ಡಾ. ಸಿ.ಆರ್. ಚಂದ್ರಶೇಖರ್ ರವರು ಮಾತನಾಡಿ ಇಂದಿನ ಒತ್ತಡದ ಬದುಕಿನಲ್ಲಿ ಮನುಷ್ಯನು ಮನಸ್ಸನ್ನು ಏಕಾಗ್ರತೆಯಿದ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂತಹ ಮನಸ್ಸಿಗೆ ಕೆಲವೊಂದಿಷ್ಟು ಮೌಲ್ಯಯುತ ಪುಸ್ತಕಗಳು ಮಾನಸಿಕ ನೆಮ್ಮದಿ ನೀಡುತ್ತವೆ. ಸಮಾಜಕ್ಕೆ ಮಾನವೀಯ ಮೌಲ್ಯಗಳನ್ನು ನೀಡುವ ನಿಟ್ಟಿನಲ್ಲಿ ಕೆ.ಎನ್. ಚಿದಾನಂದ ರವರ ಕೃತಿಯು ಒಳ್ಳೆಯ ಪಾತ್ರವನ್ನ ನಿರ್ವಹಿಸುತ್ತದೆ ಎಂದು ಹೇಳಿದರು.


ಲೇಖಕರಾದ ಕೆ.ಎನ್. ಚಿದಾನಂದರವರು ಮಾತನಾಡಿ, ಸೌಮ್ಯ ಸ್ವಭಾವದ ಸಿರಿನುಡಿಗಳು ಕೃತಿಯು ಎರಡನೇ ಕೃತಿಯಾಗಿ ಇಂದು ಲೋಕಾರ್ಪಣೆಗೊಂಡಿರುವುದು ಅತೀವ ಸಂತಸ ತಂದಿದೆ. ಕೃತಿಯನ್ನು ಎಲ್ಲರೂ ಓದುವ ಮೂಲಕ ಒಳ್ಳೆಯ ನೈತಿಕ ಮೌಲ್ಯಗಳನ್ನು ಇಂದಿನ ಮಕ್ಕಳಲ್ಲಿ ಬಿತ್ತಬೇಕು. ತಂದೆ ತಾಯಿ ಗುರುಹಿರಿಯರಿಗೆ ಮಕ್ಕಳು ಗೌರವ ಕೊಡುವುದನ್ನು ಹೇಳಿಕೊಡಬೇಕು. ಆ ಮೂಲಕ ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಈ ಕೃತಿಯು ಸಹಕಾರಿಯಾಗಿದೆ ಎಂದರು.


ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಘಟಕಕ್ಕೆ ಧನ್ಯವಾದಗಳನ್ನು ಸಮರ್ಪಿಸಿದರು. ರಾಜ್ಯ ಘಟಕದ ಕಾರ್ಯದರ್ಶಿ ಈ. ಬಸವರಾಜು ರವರು ಪ್ರಾಸ್ತವಿಕವಾಗಿ ಮಾತನಾಡುತ್ತಾ ಕೆ.ಜೆ.ವಿ.ಎಸ್. ಸಂಘಟನೆಯು ವಾರ್ಷಿಕವಾಗಿ ವಿವಿಧ ರೀತಿಯ ಜ್ಞಾನ ವಿಜ್ಞಾನದ ಚಟುವಟಿಕೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಉಂಟುಮಾಡುವುದಲ್ಲದೇ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ ಎಂದು ಹೇಳಿದರು. 


ಕಾರ್ಯಕ್ರಮದಲ್ಲಿ ಕೆ.ಜೆ.ವಿ.ಎಸ್ ನ ರಾಜ್ಯ ಘಟಕದ ಗೌರವ ಕಾರ್ಯದರ್ಶಿ ಡಾ. ಆರ್.ಎನ್. ರಾಜಾನಾಯಕ್, ನ್ಯಾಷನಲ್ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲರಾದ ಡಾ. ವೈ.ಸಿ. ಕಮಲ, ಲೇಖಕರಾದ ಎಂ. ಅಬ್ದುಲ್ ರೆಹಮಾನ್ ಪಾಷಾ ರವರು, ಲೇಖಕರಾದ ಹೆಚ್.ಕೆ. ವಿವೇಕಾನಂದರವರು, ಕೆಜೆವಿಎಸ್ ನ ಹಾಸನ ಜಿಲ್ಲಾ ಘಟಕದ ಅಧ್ಯಕ್ಷರಾದ ನಿಂಬೇಹಳ್ಳಿ ಚಂದ್ರಶೇಖರ್, ಕಾರ್ಯದರ್ಶಿ ಡಿ. ವಿಶ್ವನಾಥ್ ಮುಂತಾದವರು ಹಾಜರಿದ್ದು ಮಾತನಾಡಿದರು. 


ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾಹಿತಿಗಳು, ಕೆ.ಜೆ.ವಿ.ಎಸ್ ನ ಕಾರ್ಯಕರ್ತರು ಪಾಲ್ಗೊಂಡು ಪುಸ್ತಕ ಲೋಕಾರ್ಪಣೆ ಸಮಾರಂಭವನ್ನು ಯಶಸ್ವಿಗೊಳಿಸಿದರು.





Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top