ಹಾಸನ : ಮೊಬೈಲ್ ಬಿಡಿ ಪುಸ್ತಕ ಹಿಡಿ ಕಾರ್ಯಕ್ರಮವು ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವತ್ತ ತರುವಂತಹ ಕಾರ್ಯಕ್ರಮವಾಗಿದೆ. ಚಿಕ್ಕ ಮಕ್ಕಳ ಬದುಕಿನಲ್ಲಿ ಮೊಬೈಲ್ ಬಳಕೆ ಹೆಚ್ಚು ದುರಂತವನ್ನು ಉಂಟುಮಾಡುತ್ತದೆ. ವಿದ್ಯಾರ್ಥಿಗಳು ಮೊಬೈಲ್ ನ್ನು ಕೈಬಿಟ್ಟು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಲು ಮುಂದಾಗಬೇಕು ಎಂದು ಉಪಪ್ರಾಂಶುಪಾಲರಾದ ಮಂಜುನಾಥ್ ರವರು ಹೇಳಿದರು.
ನಗರದ ಆರ್. ಸಿ. ರಸ್ತೆಯಲ್ಲಿರುವ ಜಿಜಿಜೆಸಿ ಪ್ರಧಾನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆಯ ದುಷ್ಟರಿಣಾಮಗಳನ್ನು ವಿವರಿಸಿದರು. ಎಲ್ಲಾ ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಹೆಚ್ಚು ಹೆಚ್ಚು ಓದುವತ್ತ ಗಮನ ಹರಿಸಬೇಕು. ಮೊಬೈಲ್ ಬಿಡಿ ಪುಸ್ತಕ ಹಿಡಿ ಎಂಬ ಸಂದೇಶವು ವಿದ್ಯಾರ್ಥಿ ಜೀವನದಲ್ಲಿ ಸಂಕಲ್ಪವಾಗಬೇಕು ಎಂದರು.
ಶಾಲೆಯ ಸಹ ಶಿಕ್ಷಕರಾದ ಮಧು ಪಿ. ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಮೊಬೈಲ್ ಬಳಕೆಯಿಂದಾಗಿ ವಿದ್ಯಾರ್ಥಿಗಳು ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಾರೆ. ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಮೊಬೈಲ್ ಆನ್ ಲೈನ್ ಗೇಮ್ ಗಳಿಂದಾಗಿ ಎಷ್ಟೋ ಮಕ್ಕಳು ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದಾರೆ. ತಮ್ಮ ವ್ಯಾಸಂಗದಲ್ಲಿ ಹಿನ್ನಡೆಗೆ ಕಾರಣವಾಗಿದೆ. ಬೆಳವಣಿಗೆ ಕುಂಠಿತವಾಗುತ್ತಿದೆ. ಬಾಲ್ಯದಲ್ಲಿಯೇ ಅಂಧತ್ವ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳ ಬದುಕಿನಲ್ಲಿ ಮೊಬೈಲ್ ಬಿಡಿ ಪುಸ್ತಕ ಹಿಡಿ ಎಂಬುದು ಧ್ಯೇಯವಾಕ್ಯವಾಗಬೇಕು ಎಂದು ಹೇಳಿದರು.
ಸಹಶಿಕ್ಷಕರಾದ ಕೆ.ಎನ್. ಚಿದಾನಂದರವರು ಮಾತನಾಡಿ " ಮೊಬೈಲ್ ಬಿಡಿ ಪುಸ್ತಕ ಹಿಡಿ " ಕಾರ್ಯಕ್ರಮಕ್ಕೆ ಪೂರಕವಾಗಿ ಘೋಷಣೆಗಳನ್ನು ಸಿದ್ಧಪಡಿಸಿಲಾಗಿದೆ. ಆ ಘೋಷಣೆಗಳು ಪುಸ್ತಕಗಳನ್ನು ನಾವೇಕೆ ಓದಬೇಕು? ಅವುಗಳಿಂದಾಗುವ ಪ್ರಯೋಜನಗಳೇನು? ವಿದ್ಯಾರ್ಥಿ ಜೀವನದಲ್ಲಿ ಪುಸ್ತಕಗಳು ವಹಿಸುವ ಮಹತ್ವವನ್ನು ಸಾರುತ್ತವೆ.
ಮೊಬೈಲ್ ಪರದೆಯ ಮೋಹವ ತೊರೆಯಿರಿ, ಪುಸ್ತಕದ ಜ್ಞಾನದ ಜ್ಯೋತಿಯ ಬೆಳಗಿರಿ. ತಂತ್ರಜ್ಞಾನದ ದಾಸರಾಗುವುದು ಬೇಡ, ಪುಸ್ತಕ ಓದಿ ಬೆಳಗಿರಿ ನಮ್ಮ ನಾಡ. ಮೊಬೈಲ್ ನೀಡುವ ಸುಖವು ಕ್ಷಣಿಕ , ಪುಸ್ತಕ ನೀಡುವ ಜ್ಞಾನವೇ ಮಾಣಿಕ್ಯ. ಡಿಜಿಟಲ್ ಪ್ರಪಂಚದ ಮಾಯೆಯಿಂದ ಹೊರಬನ್ನಿ, ಪುಸ್ತಕದ ಓದಿನಿಂದ ಹೊಸ ಭವಿಷ್ಯವನ್ನೇ ತನ್ನಿ.
ಕಣ್ಣು ಕೆಡಿಸುವ ಮೊಬೈಲ್ ಸಾಕು, ಬುದ್ಧಿ ಬೆಳೆಸುವ ಪುಸ್ತಕವೇ ಬೇಕು. ಮೊಬೈಲ್ ಪರದೆಯನ್ನು ಕೊಂಚ ಮುಚ್ಚಿಡಿ, ಜ್ಞಾನದ ಭಂಡಾರವಾದ ಪುಸ್ತಕವನ್ನು ಹಿಡಿ. ರೀಲ್ಸ್ ನೋಡಿ ಕಳೆಯಬೇಡಿ ಅಮೂಲ್ಯ ಸಮಯ, ಪುಸ್ತಕ ಓದಿದರೆ ದೂರಾಗುವುದು ಅಜ್ಞಾನದ ಭಯ. ಮೊಬೈಲ್ ಫೋನಿಗೆ ಕೊಡಿ ಕೊಂಚ ವಿರಾಮ, ಪುಸ್ತಕ ಓದುವುದೇ ಜ್ಞಾನದ ನಿಜವಾದ ಧಾಮ.
ಸ್ಕ್ರಾಲ್ ಮಾಡುವುದನ್ನು ಇಂದೇ ನಿಲ್ಲಿಸಿ, ಪುಸ್ತಕದ ಪುಟಗಳನ್ನು ತಿರುವಿ ಜ್ಞಾನ ಗಳಿಸಿ. ಮಕ್ಕಳ ಕೈಗೆ ಮೊಬೈಲ್ ಕೊಡಬೇಡಿ, ಪುಸ್ತಕ ನೀಡಿ ಅವರ ಭವಿಷ್ಯವನ್ನು ರೂಪಿಸಿ. ನೆಟ್‌ವರ್ಕ್ ಇಲ್ಲದಿದ್ದರೆ ಮೊಬೈಲ್ ವ್ಯರ್ಥ, ಪುಸ್ತಕ ಓದಿದರೆ ಮಾತ್ರ ಜೀವನಕ್ಕೆ ಅರ್ಥ. ಮೊಬೈಲ್ ಗೀಳಿನಿಂದ ಮನಸ್ಸು ಚಂಚಲ, ಪುಸ್ತಕದ ಓದಿನಿಂದ ಬುದ್ಧಿ ಉಜ್ವಲ. ಆನ್‌ಲೈನ್ ಲೋಕದ ಮಾಯೆಗೆ ಬೀಳದಿರಿ, ಅಕ್ಷರ ಲೋಕದ ಅರಸರಾಗಿ ಬಾಳಿರಿ.
ಮೊಬೈಲ್ ಬಿಡಿ, ಪುಸ್ತಕ ಹಿಡಿ, ಜ್ಞಾನದ ಶಿಖರದಿ ಸಾಧನೆಯ ಮಾಡಿ ಎಂಬಂತಹ ಘೋಷಣೆಯ ಸಂದೇಶಗಳು ವಿದ್ಯಾರ್ಥಿ ಬದುಕಿಗೆ ದಾರಿದೀಪವಾಗುತ್ತವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಹೆಚ್. ಪಿ. ಮಂಜಳ, ಎ ವಿ ಗೀತಾರಾಣಿ, ರುದ್ರೇಶ್, ಎಂ.ಆರ್ ರಂಗಾಮಣಿ, ಸತ್ಯನಾರಾಯಣ ಮುರಳಿ, ತೈಬಾಕೌಸರ್, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

