ಒಂದು ಪುಟ್ಟ ಪ್ರವಾಸ ಮಾಡಬೇಕು ಎಂಬುದು ಕಳೆದ ಹಲವಾರು ತಿಂಗಳುಗಳಿಂದ ನಮ್ಮ ಯೋಚನೆ ಆಗಿತ್ತು. ಚಿಕ್ಕಮಗಳೂರಿಗೆ ಹೋಗಬೇಕು ಅಂತ ಮಾತ್ರ ಯೋಚಿಸಿದ್ದ ನಾವುಗಳು ಹುಬ್ಬಳ್ಳಿಗೆ ಹೋಗಿ ಮಗಳನ್ನು ಕರೆದುಕೊಂಡು ಶಿವಮೊಗ್ಗ ಮಾರ್ಗವಾಗಿ ಚಿಕ್ಕಮಗಳೂರಿಗೆ ಹೊರಟು ನಿಂತವು. ಎಲ್ಲಿ ಹೋಗಬೇಕು ಎಂಬುದನ್ನು ಯೋಚಿಸುತ್ತಾ ಮುಂದೆ ಸಾಗಿದಾಗ ಇನ್ನೇನು ಶಿಕಾರಿಪುರ ಕೆಲವೇ ಕಿಲೋಮೀಟರ್ಗಳು ಇದೆ ಎಂಬ ಹೊತ್ತಿಗೆ ನಾವು ಸಾಗುತ್ತಿರುವ ದಾರಿಯಲ್ಲಿಯೇ ಅತ್ಯಂತ ಸುಂದರವಾದ ದೇವಾಲಯವೊಂದು ಕಣ್ಸೆಳೆಯಿತು. ಕೂಡಲೇ ಗಾಡಿಯನ್ನು ನಿಲ್ಲಿಸಲು ಹೇಳಿದ ನಾನು ಕೆಳಗಿಳಿಯುವಷ್ಟರಲ್ಲಿ ನನ್ನ ಮಗಳು ಅದು ಬಳ್ಳಿಗಾವಿ ಎಂದು ಗೂಗಲ ಲೊಕೇಶನ್ ನೋಡಿ ಹೇಳಿದಳು.
ಕೂಡಲೇ ನನ್ನ ಇತಿಹಾಸ ಪ್ರಜ್ಞೆ ಜಾಗೃತವಾಗಿ ನಾವು 9ನೇ ತರಗತಿಯಲ್ಲಿ ಕನ್ನಡ ಭಾಗ 2 ಎಂದು ಓದಿದ ನಾನ್ ಡೀಟೇಲ್ಡ್ ಟೆಕ್ಸ್ಟ್ ಪುಸ್ತಕದ ನಾಟ್ಯ ರಾಣಿ ಶಾಂತಲೆಯ ಪುಟ್ಟ ಕಾದಂಬರಿಯ ನೆನಪಾಯಿತು. ದಂಡನಾಯಕ(ಡಣ್ಣಾಯಕ) ಮಾರಸಿಂಗರ ಮಗಳು ಶಾಂತಲಾದೇವಿ ಗಂಡುಡುಗೆಯನ್ನು ತೊಟ್ಟು ತನ್ನ ಆಪ್ತ ಸ್ನೇಹಿತೆ ಹಾಗೂ ಸಹೋದರಿ ಲಕ್ಷ್ಮಿಯೊಂದಿಗೆ ದೇಗುಲದಲ್ಲಿ ನೃತ್ಯ ಸೇವೆಯನ್ನು ಸಲ್ಲಿಸುತ್ತಿದ್ದಳು. ಆಗ ಕಳೆದ ಹಲವಾರು ದಿನಗಳಿಂದ ನಿದ್ರೆಯನ್ನೇ ಮಾಡಿಲ್ಲ ಎಂಬಂತೆ ತೋರುತ್ತಿದ್ದ, ಯುದ್ಧ (ಬಹುಶಃ ಬನವಾಸಿಯ ಇಲ್ಲವೇ ನೊಳಂಬವಾಡಿಯ)ದಲ್ಲಿ ಗೆದ್ದು ಸೀದಾ ಅಲ್ಲಿಗೆ ಬಂದ ದಣಿದ ಮುಖವನ್ನು ಹೊತ್ತ ಹೊಯ್ಸಳ ಸಾಮ್ರಾಜ್ಯದ ಯುವರಾಜ ರಾಜಕಳೆಯ ಬಿಟ್ಟಿದೇವರು ಅಲ್ಲಿಗೆ ನೀರನ್ನು ಅರಸಿ ಬಂದರು. ದೇವರ ವಿಗ್ರಹದ ಮುಂದೆ ಅತ್ಯಂತ ಮನಮೋಹಕವಾಗಿ ನರ್ತಿಸುತ್ತಿದ್ದ ಶಾಂತಲಾ ದೇವಿ ಹಾಗೂ ಲಕ್ಷ್ಮಿ ಅವರ ನೃತ್ಯವನ್ನು ನೋಡಿ ಆಸ್ವಾದಿಸಿದರು. ಇದೇ ದೇವಸ್ಥಾನದಲ್ಲಿ ಬಹುಶಃ ಅವರ ಮೊದಲ ಭೇಟಿಯಾಗಿತ್ತು ಎಂದು ನಾನು ಪತಿ ಮತ್ತು ಮಗಳಿಗೆ ಆ ಸ್ಥಳ ಪುರಾಣವನ್ನು ಹೇಳುತ್ತಾ ದೇವಸ್ಥಾನದ ಆವರಣದ ಒಳಗೆ ಪ್ರವೇಶಿಸಿದೆವು.
ಹೌದು... ಇದು ಹೊಯ್ಸಳ ರಾಜ ಮನೆತನದ ವಿಷ್ಣುವರ್ಧನ ಮಹಾರಾಜನ ಪತ್ನಿ ಶಾಂತಲೆಯ ತವರೂರು. ಅನುಭವ ಮಂಟಪದ ಶೂನ್ಯ ಸಿಂಹಾಸನ ಏರಿದ ಅಲ್ಲಮ ಪ್ರಭುಗಳ ಜನ್ಮಸ್ಥಳ ಎಂದು ಹೇಳುತ್ತಾ ಮುಂದೆ ಸಾಗಿದೆ.
ನಿಜ... ಬಳ್ಳಿಗಾವಿ ಎಂದು ಇತಿಹಾಸದಲ್ಲಿ ದಾಖಲಾಗಿರುವ ಈ ಊರಿನ ಹೆಸರು ಬೆಳಗಾಮಿ, ಬಳ್ಳಿಗಾಮಿ ಎಂದು ಕೂಡ ಆಗಿತ್ತು. ಜಿಲ್ಲಾ ಕೇಂದ್ರ ಶಿವಮೊಗ್ಗದಿಂದ 72 ಕಿಲೋಮೀಟರ್ ದೂರ ಇರುವ ಬಳ್ಳಿಗಾವಿಯು ಶಿಕಾರಿಪುರಕ್ಕೆ 21 ಕಿ.ಮೀ. ದೂರದಲ್ಲಿದೆ. 11 ಮತ್ತು 12ನೇ ಶತಮಾನದಲ್ಲಿ ಪಶ್ಚಿಮ ಚಾಲುಕ್ಯರು ಹಾಗೂ ಹೊಯ್ಸಳರ ಆಳ್ವಿಕೆಯಲ್ಲಿದ್ದ ಈ ಪ್ರದೇಶವು ಶಿಕ್ಷಣ ಮತ್ತು ಸಾಂಸ್ಕೃತಿಕ ಕೇಂದ್ರವಾಗಿತ್ತು.
ದಕ್ಷಿಣದ ಕೇದಾರನಾಥ ಎಂದು ಕರೆಯಲ್ಪಡುತ್ತಿದ್ದ ಈ ಕ್ಷೇತ್ರದಲ್ಲಿ ತನ್ನ ಶಿಲ್ಪಕಲಾ ವೈಭವದಿಂದ ಕಂಗೊಳಿಸುವ ಕೇದಾರನಾಥೇಶ್ವರ ದೇಗುಲವಿದೆ. ಧಾರ್ಮಿಕ ಸಾಮರಸ್ಯ, ಪುರಾತನ ಕಲಾಕೃತಿಗಳು ಹಾಗೂ ಸಂಕೀರ್ಣ ವಾಸ್ತುಶಿಲ್ಪದ ಬಯಲು ಸಂಗ್ರಹಾಲಯ ಇದಾಗಿದೆ. ತ್ರಿಕೂಟ ಶೈಲಿಯ ಮೂರು ಗೋಪುರಗಳನ್ನು ಒಳಗೊಂಡ ಕೇದಾರನಾಥೇಶ್ವರ ದೇಗುಲವು ಕ್ರಿಸ್ತಶಕ 11ನೇ ಶತಮಾನದಲ್ಲಿ ಚಾಲುಕ್ಯ ಮತ್ತು ಹೊಯ್ಸಳರ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು ಅತ್ಯಂತ ನುಣುಪಾಗಿ ದುಂಡನೆಯ ಆಕಾರದಲ್ಲಿ ಕೆತ್ತಲ್ಪಟ್ಟ ಕಂಬಗಳಿಂದ ಪ್ರಸಿದ್ಧವಾಗಿದೆ. ತ್ರಿಪುರಾಂತಕೇಶ್ವರ ದೇವಾಲಯದಲ್ಲಿ ಶಿವನ ವಿಗ್ರಹವಿದ್ದು ಪಶ್ಚಿಮ ಚಾಲುಕ್ಯರು ನಿರ್ಮಿಸಿದ ಈ ದೇಗುಲವು ಊರ ಮಧ್ಯ ಭಾಗದಲ್ಲಿದೆ. ಗಂಡಭೇರುಂಡದ ಕೆತ್ತನೆಯನ್ನು ಹೊಂದಿರುವ ಸ್ತೂಪವನ್ನು ಕಾಣಬಹುದಾಗಿದೆ. ಇದೇ ಗಂಡಭೇರುಂಡ ಪಕ್ಷಿಯ ಲಾಂಛನವನ್ನು ಮುಂದೆ ಮೈಸೂರಿನ ಅರಸರು ತಮ್ಮ ರಾಜ್ಯ ಲಾಂಛನವಾಗಿ ಬಳಸಿದರು.
ಪೌರಾಣಿಕವಾಗಿ ಈ ಪ್ರದೇಶವನ್ನು ಬಲಿಪುರ ಎಂದು ಗುರುತಿಸಲಾಗಿದ್ದು ವಿಷ್ಣುವಿನಿಂದ ಶಿಕ್ಷಿಸಲ್ಪಟ್ಟ ಬಲಿಯ ಸಾಮ್ರಾಜ್ಯದ ಭಾಗ ಇದಾಗಿತ್ತು ಎಂದು ಪೌರಾಣಿಕವಾಗಿ ಗುರುತಿಸಿದರೆ ಐತಿಹಾಸಿಕವಾಗಿ ಇದು ಶಾತವಾಹನರು, ಬನವಾಸಿಯ ಕದಂಬರು, ಕಳಚೂರ್ಯರು, ಕಲ್ಯಾಣಿ ಚಾಲುಕ್ಯರು, ದೇವಗಿರಿ ಯಾದವರು ಮತ್ತು ಅಂತಿಮವಾಗಿ ಹೊಯ್ಸಳ ರಾಜರ ಆಳ್ವಿಕೆಯನ್ನು ಹೊಂದಿತ್ತು.
ಪುರಾತತ್ವ ಇಲಾಖೆಯ ಸಂರಕ್ಷಣೆಯಲ್ಲಿ ಇರುವ ಈ ದೇಗುಲದಲ್ಲಿ ಗರ್ಭಗುಡಿಯಲ್ಲಿ ಕೇದಾರೇಶ್ವರನು ಶಿವಲಿಂಗದ ರೂಪದಲ್ಲಿ ಇದ್ದು ಪಾಣಿಪೀಠದ ಮೇಲೆ ಲಿಂಗವು ಸ್ಥಾಪಿತಗೊಂಡಿದ್ದು ಇಂದಿಗೂ ಪೂಜಿಸಲ್ಪಡುತ್ತದೆ. ಇದರ ಪಕ್ಕದಲ್ಲಿಯೇ ಇನ್ನೊಂದು ಕಡೆ ವಿಷ್ಣುವಿನ ವಿಗ್ರಹವು ಇದ್ದು ಅದಕ್ಕೂ ದೈನಂದಿನ ಪೂಜೆ ಸಲ್ಲಿಕೆಯಾಗುತ್ತದೆ. ಅಂತರಾಳ ಹಾಗೂ ಸಭಾ ಮಂಟಪಗಳನ್ನು ದಾಟಿ ಶಿವಲಿಂಗಕ್ಕೆ ನೇರವಾಗಿ ಐದಾರು ಅಡಿಗಿಂತಲೂ ಎತ್ತರವಾದ ನಂದಿಯ ಸುಂದರವಾದ ವಿಗ್ರಹದ ಕೆತ್ತನೆಯಿದೆ. ಗರ್ಭಗುಡಿಯ ಮುಂಭಾಗದ ಬಾಗಿಲುವಾಡದಲ್ಲಿ ಆಕರ್ಷಕ ಬಳ್ಳಿಗಳು ಹಾಗೂ ತೋರಣಗಳ ಕೆತ್ತನೆ ಇದೆ. ಅಂತರಾಳದಲ್ಲಿ ಕಮಲದ ಹೂವಿನ ಆಕಾರದಲ್ಲಿ ಕೆತ್ತಲಾಗಿರುವ ಛಾವಣಿ ಇದೆ. ನುಣುಪಾದ ದುಂಡನೆಯ ದೊಡ್ಡ ಗಾತ್ರದ ಕಂಬಗಳು ಕಣ್ಣೆಳೆಯುವಂತಿದ್ದು ದೇಗುಲಕ್ಕೆ ವಿಶೇಷ ಆಕರ್ಷಣೆಯನ್ನು, ಆಧಾರವನ್ನು ನೀಡಿದೆ. ದೇಗುಲದ ಮೇಲ್ಭಾಗದಲ್ಲಿ ಹೊಯ್ಸಳರ ಲಾಂಛನವಾದ ಸಿಂಹವನ್ನು ಬಾಲಕನೊಬ್ಬ ಖಡ್ಗದಿಂದ ಚಂಡಾಡುತ್ತಿರುವ ಕೆತ್ತನೆ ಇದೆ.
ದೇಗುಲದ ಪ್ರಾಕಾರದ ಸುತ್ತಲೂ ಭಗ್ನಗೊಂಡ ಶಿಲ್ಪಗಳನ್ನು ಸಾಲಾಗಿ ಜೋಡಿಸಲಾಗಿದೆ. ಕೃತಕವಾಗಿ ಬೆಳೆಸಿದ ಹಸಿರು ಹುಲ್ಲಿನ ರಾಶಿಯ ಮಧ್ಯ ಭಾಗದಲ್ಲಿ ದೇಗುಲವು ಅತ್ಯಂತ ಸುಂದರವಾಗಿ ಕಣ್ಮನವನ್ನು ಸೆಳೆಯುತ್ತದೆ.
ಅಲ್ಲಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ರಸ್ತೆಯ ಬದಿಯಲ್ಲಿಯೇ ಉಡುಗಣಿ / ಉಡುತಡಿ ಗ್ರಾಮವಿದ್ದು ಕನ್ನಡದ ಮೊದಲ ಕವಯತ್ರಿ, ವಚನಕಾರ್ತಿ, ವೀರವಿರಾಗಿಣಿ ಅಕ್ಕಮಹಾದೇವಿಯ ಬೃಹತ್ ವಿಗ್ರಹವನ್ನು ಅಲ್ಲಿ ನಿರ್ಮಿಸಲಾಗಿದೆ.
ಈ ಹಿಂದೆ ಅಲ್ಲಿ ಮಹಾದೇವಿ ತಾಯಿಯನ್ನು ಮದುವೆಯಾದ ಜೈನ ಸಮುದಾಯದ ಕೌಶಿಕ ಮಹಾರಾಜನ ಅರಮನೆ ಇದ್ದು ಇಲ್ಲಿಯೇ ಕೌಶಿಕ ಮಹಾರಾಜ ತನ್ನ ಪತ್ನಿಗೆ ನೀಡಿದ ಮಾತುಗಳನ್ನು ಉಲ್ಲಂಘಿಸಿದ ಶರಣ ತನ್ನ ದಾಂಪತ್ಯವನ್ನು ತೊರೆದ ಆಕೆ ವೀರ ವಿರಾಗಿಣಿಯಾಗಿ ಸಂಸಾರವನ್ನು ತೊರೆದು ಕಲ್ಯಾಣದತ್ತ ಮುಖ ಮಾಡಿದ್ದು.
ಒಂದು ಪುಟ್ಟ ಪ್ರವಾಸ ನಮ್ಮ ಮನವನ್ನು ಅರಳಿಸುತ್ತದೆ, ಜ್ಞಾನವನ್ನು ಹೆಚ್ಚಿಸುತ್ತದೆ, ಉಲ್ಲಸಿತಗೊಳಿಸುತ್ತದೆ ಹೊಸ ಹೊಸ ವಿಷಯಗಳ ಕುರಿತ ಅರಿವನ್ನು ಮೂಡಿಸುತ್ತದೆ... ಆ ನಿಟ್ಟಿನಲ್ಲಿ ನನ್ನ ಒಂದು ಪುಟ್ಟ ಪ್ರವಾಸದ ಅನುಭವ ನಿಮ್ಮ ಮುಂದಿದೆ.
ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ ಗದಗ್


