ಆಟಿ ಅನಿಷ್ಟವಲ್ಲ, ಆತ್ಮಸ್ಥೈರ್ಯ ತುಂಬುವ ಕಾಲ

Upayuktha
0

ಬಜಪೆ 'ಆಟಿದ ನೆಂಪು' ಕಾರ್ಯಕ್ರಮದಲ್ಲಿ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ 





ಬಜಪೆ, ಮಂಗಳೂರು: 'ತುಳು ಜನರ ವಾರ್ಷಿಕ ಆವರ್ತನದಲ್ಲಿ ಬರುವ ಆಟಿ ತಿಂಗಳು ಕಷ್ಟ ಕಾರ್ಪಣ್ಯಗಳನ್ನು ಹೊತ್ತು ತರುವುದು ಎಂದು ಭಾವಿಸಲಾಗಿತ್ತು. ಆದರೆ ಆಟಿ ಅನಿಷ್ಟವಲ್ಲ; ಅದು ದುಃಖ ದುರಿತಗಳನ್ನು ಎದುರಿಸಿ ಬದುಕು ಕಟ್ಟಲು ಬೇಕಾದ ಆತ್ಮಸ್ಥೈರ್ಯವನ್ನು ತುಂಬುವ ಕಾಲ. ಆಷಾಢ ಮಾಸದಲ್ಲಿ ಪ್ರಕೃತಿ ದತ್ತ ಆಹಾರವೇ ಔಷಧಿಯಾಗಿ ನಮ್ಮ ಆರೋಗ್ಯವನ್ನು ಕಾಪಿಡುತ್ತದೆ' ಎಂದು ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹಾಗೂ ಸಾಹಿತ್ಯ- ಸಂಸ್ಕೃತಿಕ ಚಿಂತಕ ಪ್ರೊ|ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು.


ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ(ರಿ.)ಬಜಪೆ ಘಟಕ ಹಾಗೂ ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ.) ಬಜಪೆ-ಕರಂಬಾರು ಇವರ ಸಹಯೋಗದಲ್ಲಿ 'ಬಜ್ಪೆಯ ಬ್ರಹ್ಮ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಜುಲೈ19ರಂದು ಭಾನುವಾರ ಜರುಗಿದ 'ಆಟಿದ ನೆಂಪು-2026' ಕಾರ್ಯಕ್ರಮದಲ್ಲಿ ಅವರು ಆಟಿಯ ವಿಶೇಷತೆ ಬಗ್ಗೆ ಉಪನ್ಯಾಸ ನೀಡಿದರು. 


'ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಲ್ಲಿ ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರು ಅಧ್ಯಕ್ಷರಾಗಿದ್ದ ತಮ್ಮ ತಂಡವು ಆರಂಭ ಮಾಡಿದ ಬಿಸುಕೂಟ, ಆಟಿ, ಕೆಡ್ಡೆಸ ಮೊದಲಾದ ತುಳುವರ ಆಚರಣೆಗಳು ಈಗ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಬೃಹತ್ ಸ್ವರೂಪ ಪಡೆದಿರುವುದು ಸ್ವಾಗತಾರ್ಹ. ಆದರೆ ಅದನ್ನು ವೈಭವೀಕರಿಸದೆ ಅವುಗಳ ನೈಜ ಚಿತ್ರಣ ಹಾಗೂ ಸಾಂಪ್ರದಾಯಿಕ ಆಚರಣೆಯ ವಿಧಿ- ವಿಧಾನಗಳನ್ನು ಮುಂದಿನ ಜನಾಂಗಕ್ಕೆ ತಿಳಿಸುವ ಕಾರ್ಯ ಇನ್ನಷ್ಟು ಸಹಜ ಸ್ವರೂಪದಲ್ಲಿ ಆಗಬೇಕಾಗಿದೆ' ಎಂದವರು ಕರೆ ನೀಡಿದರು.


ಕಳೆಂಜನಿಗೆ ಪಡಿಯಕ್ಕಿ:

ಊರಿಗೆ ಬಂದ ಮಾರಿ ರೋಗದ ಕಳೆ, ರುಜಿನದ ಕೊಳೆಯನ್ನು  ಕಳೆಯುತ್ತಾ ಮನೆಯಂಗಳಕ್ಕೆ ಆಗಮಿಸಿದ ಆಟಿಕಳೆoಜ ವೇಷಧಾರಿಯ ಜೋಳಿಗೆಯಲ್ಲಿ ಪಡಿಯಕ್ಕಿ ಸುರಿಯುವುದರ ಮೂಲಕ ಮಂಗಳೂರು ಮಹಾನಗರ ಪಾಲಿಕೆ ನಿಕಟ ಪೂರ್ವ ಪ್ರತಿಪಕ್ಷ ನಾಯಕ ಅನಿಲ್ ಕುಮಾರ್ ಆಟಿದ ನೆಂಪು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮಾತನಾಡಿ 'ಯುವವಾಹಿನಿ ಬಜಪೆ ಘಟಕವು ಹಲವು ವಿಧಾಯಕ ಕಾರ್ಯಕ್ರಮಗಳ ಮೂಲಕ ಹಿಂದಿನ ಸಂಪ್ರದಾಯವನ್ನು ಮರುಸ್ಥಾಪಿಸುವ ಶ್ಲಾಘನೀಯ ಕಾರ್ಯ ಮಾಡುತ್ತಿದೆ' ಎಂದು ಹರ್ಷ ವ್ಯಕ್ತಪಡಿಸಿದರು. ಯುವವಾಹಿನಿ ಬಜಪೆ ಘಟಕದ ಅಧ್ಯಕ್ಷ ರೋಹಿತ್ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.



ಪ್ರತಿಭಾ ಪುರಸ್ಕಾರ:

ಯುವವಾಹಿನಿಯು ವಿದ್ಯೆಗೆ ಮೊದಲ ಆದ್ಯತೆಯನ್ನು ನೀಡಿದ್ದು ಪ್ರತಿ ವರ್ಷದಂತೆ ಈ ವರುಷವೂ ಅರ್ಹ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ  ಹಾಗೂ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಿ ಸಭೆಯಲ್ಲಿ ಗೌರವಿಸಲಾಯಿತು. ವಿದ್ಯಾನಿಧಿ ನಿರ್ದೇಶಕಿ ಡಾ.ಶಿಲ್ಪಾ ದಿನೇಶ್ ಫಲಾನುಭವಿಗಳ ವಿವರ ನೀಡಿದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಪವರ್ ಲಿಫ್ಟಿಂಗ್ ಕ್ರೀಡಾ ಸಾಧಕಿ  ಅಕ್ಷತಾ ಬೋಳ ಅವರನ್ನು ಸನ್ಮಾನಿಸಲಾಯಿತು. ದಿವ್ಯಾ ಸುನಿಲ್ ಸನ್ಮಾನ ಪತ್ರ ವಾಚಿಸಿದರು. 


ಫುಟ್ಬಾಲ್ ಪಂದ್ಯಾಟದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯುತ್ತಿರುವ ಕು| ಸಾನ್ವಿ ಎಸ್. ಪೂಜಾರಿ ಬಜಪೆ ಮತ್ತು ಯುವವಾಹಿನಿ ಬಜಪೆ ಘಟಕದ ನಿ.ಪೂ. ಅಧ್ಯಕ್ಷರಾದ ರೇಣುಕಾ ಶೇಖರ್ ಇವರನ್ನು ಗೌರವಿಸಲಾಯಿತು. ಯುವವಾಹಿನಿ ಕೇಂದ್ರ ಸಮಿತಿಯ ಕೋಶಾಧಿಕಾರಿ ಸತೀಶ್ ಕಿಲ್ಪಾಡಿ, ಕೃಷಿಕರಾದ ಮೋಹನ್ ಪೂಜಾರಿ ಕಬೆತ್ತಿಗುತ್ತು ಮತ್ತು ಬಜಪೆ ಬಿಲ್ಲವ ಸಂಘದ ಅಧ್ಯಕ್ಷ ಶಿವರಾಮ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು.


ಯುವವಾಹಿನಿಯ ಸಾನ್ವಿ ರಾಜೇಶ್, ಸಂಧ್ಯಾ ಸುನಿಲ್, ಶರ್ಮಿಳಾ ಚಂದ್ರಶೇಖರ ಅವರ ಪ್ರಾರ್ಥನೆಯೊಂದಿಗೆ ವಿಜಯಾ ಗೋಪಾಲ್ ಸ್ವಾಗತಿಸಿದರು. ದೇವರಾಜ್ ಅಮೀನ್ ನಿರೂಪಿಸಿ, ಕಾರ್ಯದರ್ಶಿ ಸುಚಿತ ದೇವರಾಜ್ ವಂದಿಸಿದರು.


ಸಾಂಸ್ಕೃತಿಕ ರಂಜನೆ:

ಸಭೆಯ ಬಳಿಕ ಯುವವಾಹಿನಿ ಬಜಪೆ ಘಟಕದ ಸದಸ್ಯರಿಂದ 'ಬೀಡಿದ ಪೊಂಜೊವು' ನೀತಿ ಪ್ರಧಾನ ಕಿರು ನಾಟಕ ಮತ್ತು ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಭಾಗವಹಿಸಿದ ಎಲ್ಲರಿಗೂ ಆಟಿ ವಿಶೇಷತೆಯ ಬಗೆ ಬಗೆಯ ತಿಂಡಿ ತಿನಿಸುಗಳಿಂದ ಕೂಡಿದ ಸವಿ ಭೋಜನವನ್ನು ಏರ್ಪಡಿಸಲಾಗಿತ್ತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top