ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವ ಸಮಾರೋಪ; ಗುರುವಂದನಾ ಕಾರ್ಯಕ್ರಮ

Upayuktha
0

ಹಿಂದೂ ಧರ್ಮ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು: ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು



ಪುತ್ತೂರು: ಎಲ್ಲ ಮತಗಳಲ್ಲೂ ಒಳ್ಳೆಯವರಿದ್ದಾರೆಂಬುದು ಸತ್ಯ. ಆದರೆ ಒಳ್ಳೆಯವರನ್ನು ಮುಂದೆ ತೋರಿಸಿ, ಇರುವವರೆಲ್ಲರೂ ಒಳ್ಳೆಯವರೆಂಬ ಭಾವ ಮೂಡಿಸಿ, ಹಿಂದಿನಿಂದ ತಮ್ಮ ಕೆಟ್ಟ ಕೆಲಸಗಳನ್ನು ಮಾಡಿಕೊಳ್ಳುವ ಮಂದಿ ಹಲವರಿದ್ದಾರೆ. ಅಂತಹವರ ಬಗೆಗೆ ಎಲ್ಲರೂ ಜಾಗರೂಕರಾಗಿರಬೇಕು. ಅಂತಹವರಿಂದ ನಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಮೂಲಕ ಹಿಂದೂ ಧರ್ಮವನ್ನು ಉಳಿಸಿಕೊಳ್ಳಬೇಕಿದೆ ಎಂದು ಶೃಂಗೇರಿ ಶ್ರೀ ಶಾರದಾಪೀಠದ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವ ಸಂಭ್ರಮದ ಸಮಾರೋಪ ಸಮಾರಂಭ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುವಾರ ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಆಶೀರ್ವಚವನ ನೀಡಿದರು.


ಸಿಂಹದ ಸಾಮರ್ಥ್ಯವನ್ನು ಆನೆಯಲ್ಲಿ ಕೇಳಬೇಕೇ ವಿನಃ ಇಲಿಯಲ್ಲಿ ಕೇಳಬಾರದು. ವಸಂತ ಋತುವಿನ ಶ್ರೇಷ್ಟತೆಯನ್ನು ಕೋಗಿಲೆಯ ಕಂಠದಲ್ಲಿ ಕೇಳಬೇಕು, ಕಾಗೆಯ ಬಾಯಿಯಿಂದಲ್ಲ. ಹಾಗೆಯೇ ಸನಾತನ ಧರ್ಮದ ಉತ್ಕೃಷ್ಟತೆಯನ್ನು ಧರ್ಮದ ತಿರುಳನ್ನರಿತ ಪ್ರಾಜ್ಞರಿಂದ ಅರಿತುಕೊಳ್ಳಬೇಕೇ ವಿನಃ ಅರೆಬರೆ ತಿಳಿದವರಿಂದಲ್ಲ. ನಮ್ಮ ಧರ್ಮ ನಮಗೆ ಅತ್ಯುತ್ತಮ ಸಂಸ್ಕಾರವನ್ನು ಒದಗಿಸಿಕೊಡುತ್ತಿದೆ. ಧಾಮಿಕ ಸಂಸ್ಕಾರವನ್ನು ಮಕ್ಕಳಿಗೆ ಕೊಟ್ಟಾಗ ಅವರು ಸದಾ ಒಳ್ಳೆಯ ಹಾದಿಯಲ್ಲಿರುತ್ತಾರೆ ಮತ್ತು ಎತ್ತರಕ್ಕೆ ಬೆಳೆಯುತ್ತಾರೆ. ಸಂಸ್ಕಾರಹೀನನನ್ನು ಪ್ರಪಂಚ ಒಪ್ಪುವುದಿಲ್ಲ ಎಂದು ಆಶೀರ್ವಚಿಸಿದರು.


ಶಂಖನಾದ ಹಾಗೂ ವೇದಘೋಷವನ್ನು ನಡೆಸಿಕೊಡಲಾಯಿತು. ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ನಡೆಯಿತು. ಗುರುವಂದನಾ ಸಮಿತಿ ಅಧ್ಯಕ್ಷ ಚಿದಾನಂದ ಬೈಲಾಡಿ ಸ್ವಾಗತಿಸಿ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಪ್ರಸ್ತಾವನೆಗೈದರು. ವಿದ್ವಾನ್ ಉಮಾಕಾಂತ ಭಟ್ಟ ಕೆರೆಕೈ ಅಭಿವಂದನಾ ನುಡಿಗಳನ್ನಾಡಿದರು. ತಾಲೂಕು ಧರ್ಮ ಶಿಕ್ಷಣ - ಧರ್ಮಾಭ್ಯುದಯದ ವಿದ್ಯಾರ್ಥಿಗಳಿಂದ ಸಮರ್ಪಣಮ್ ಕಾರ್ಯಕ್ರಮ ನಡೆಯಿತು.




ಬಪ್ಪಳಿಗೆ ಅಂಬಿಕಾ ಆವರಣದಲ್ಲಿ ರೂಪಿಸಲಾದ ಭಾರತಮಾತೆಯ ಉಬ್ಬುಶಿಲ್ಪವನ್ನು ಜಗದ್ಗುರುಗಳು ಅನಾವರಣಗೊಳಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವ ಸ್ಮರಣ ಸಂಚಿಕೆ ಹಾಗೂ ಶೃಂಗೇರಿಯ ಬಗೆಗೆ ಮಾಹಿತಿಯುಳ್ಳ ಶೃಂಗೇರಿಯ ಹಿರಿಮೆ ಕೃತಿಯನ್ನು ಜಗದ್ಗುರುಗಳು ಅನಾವರಣಗೊಳಿಸಿದರು. ಅಂಬಿಕಾ ನಡೆದು ಬಂದ ಹಾದಿಯ ಬಗೆಗಿನ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಅಂಬಿಕಾ ವತಿಯಿಂದ ರೂಪಿಸಲಾದ ನಾವಿಕ - ಹಿಂದೂ ಸಂಪರ್ಕ ಸಾರಿಗೆ ಎಂಬ ಮೊಬೈಲ್ ಆಪ್ ಅನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು.


ಗುರುವಂದನಾ ಸಮಿತಿ ಹಾಗೂ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಅಭಿವಂದನಾ ಪತ್ರ, ಸ್ಮರಣಿಕೆಗಳನ್ನು ಜಗದ್ಗುರುಗಳಿಗೆ ಸಮರ್ಪಿಸಲಾಯಿತು. ಸುಬ್ರಮಣ್ಯ ನಟ್ಟೋಜ ಹಾಗೂ ಕುಟುಂಬಸ್ಥರು ಶಾರದಾಮಾತೆಯ ಪುತ್ಥಳಿಯನ್ನು ಗುರುಚರಣಗಳಿಗೆ ಅರ್ಪಿಸಿದರು.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯ ಬಾಲಕೃಷ್ಣ ಬೋರ್ಕರ್, ಡಾ.ಎಂ.ಎಸ್.ಶೆಣೈ, ಇನ್ನಿತರ ಸದಸ್ಯರು, ಗುರುವಂದನಾ ಸಮಿತಿಯ ಗೌರವಾಧ್ಯಕ್ಷ ಮೊಗೆರೋಡಿ ಬಾಲಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ಆರ್.ಸಿ.ನಾರಾಯಣ, ಖಜಾಂಜಿ ಕಾವು ಹೇಮನಾಥ ಶೆಟ್ಟಿ, ಕಾರ್ಯಾಧ್ಯಕ್ಷ ಶಿವರಾಮ ಆಳ್ವ, ಸಂಚಾಲಕ ಡಾ.ಸುರೇಶ್ ಪುತ್ತೂರಾಯ, ಕಾರ್ಯದರ್ಶಿ ಸಾಜ ರಾಧಾಕೃಷ್ಣ ಆಳ್ವ, ಸಂಘಟನಾ ಕಾರ್ಯದರ್ಶಿ ದಿನೇಶ್ ಜೈನ್, ಸಂಯೋಜಕ ಮಾಧವ ಸ್ವಾಮಿ, ಜತೆ ಕಾರ್ಯದರ್ಶಿಗಳಾದ ಸುರೇಶ್ ಕೆಮ್ಮಿಂಜೆ ಹಾಗೂ ನವೀನ್ ಕುಲಾಲ್, ಸಹಸಂಚಾಲಕ ಗಿರಿಶಂಕರ ಸುಲಾಯ,  ಗೌರವ ಸಲಹೆಗಾರ ಎನ್.ಕೆಜಗನ್ನಿವಾಸ ರಾವ್, ಪದಾಧಿಕಾರಿಗಳು, ಸದಸ್ಯರು ಮತ್ತು ಧರ್ಮಾಭ್ಯುದಯದ ಅಧ್ಯಕ್ಷ ದಂಬೆಕಾನ ಸದಾಶಿವ ರೈ, ಇತರ ಪದಾಧಿಕಾರಿಗಳು, ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಮಾಜಿ ಶಾಸಕರಾದ ಶಕುಂತಲಾ ಶೆಟ್ಟಿ ಹಾಗೂ ಸಂಜೀವ ಮಠಂದೂರು ಮತ್ತಿತರರು ಉಪಸ್ಥಿತರಿದ್ದರು.


ಶ್ರೀ ಶಂಕರ ಜಯಂತಿ ಪ್ರಯುಕ್ತ ಪುತ್ತೂರು ಹಾಗೂ ಸುತ್ತಮುತ್ತಲಿನ ಆರು ತಾಲೂಕುಗಳ ವಿದ್ಯಾರ್ಥಿಗಳಿಗಾಗಿ ಶೃಂಗೇರಿ ಪೀಠದಿಂದ ಇತ್ತೀಚೆಗೆ ಆಯೋಜಿಸಲಾದ ಶಂಕರ ವಿಜಯ ಸ್ಪರ್ಧೆಗಳಲ್ಲಿ ಗೆಲುವು ಪಡೆದವರಿಗೆ, ಅಂಬಿಕಾ ವತಿಯಿಂದ ಆಯೋಜಿಸಲಾಗಿದ್ದ ಶ್ಲೋಕಭಾರತೀ ಸ್ಪರ್ಧೆಯ ವಿಜೇತರಿಗೆ ಬಾಲಭಾರತಿ ಪ್ರಶಸ್ತಿ ವಿತರಿಸಲಾಯಿತು. ಉಪನ್ಯಾಸಕ ಆದರ್ಶ ಗೋಖಲೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಶೃಂಗೇರಿ ಮಠದ ಶಾಂಕರ ತತ್ವ ಪ್ರಸಾರ ಅಭಿಯಾನದ ರಾಜ್ಯ ಸಂಚಾಲಕ ವಿದ್ವಾನ್ ತೇಜಶಂಕರ ಸೋಮಯಾಜಿ ಅಭಿವಂದನಾ ಪತ್ರ ವಾಚಿಸಿದರು.


ತೊಟ್ಟಿಲಕಯದಲ್ಲಿ ಚಂಡಿಕಾಹೋಮ: ಇದಕ್ಕೂ ಪೂರ್ವದಲ್ಲಿ ಗುರುವಾರ ಬೆಳಗ್ಗೆ ಎಂಟು ಗಂಟೆಯ ಸುಮಾರಿಗೆ ಬಲ್ನಾಡು ಶ್ರೀ ಉಳ್ಳಾಲ್ತಿಯ ಮೂಲಸ್ಥಾನವಾದ ತೊಟ್ಟಿಲಕಯದ ಶ್ರೀ ಉಳ್ಳಾಲ್ತಿ ಅಮ್ಮನವರ ಸ್ಥಾನದಲ್ಲಿ ಚಂಡಿಕಾಹೋಮ ಸಂಪನ್ನಗೊಂಡಿತು. ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಪೂರ್ಣಾಹುತಿಯನ್ನು ನಡೆಸಿಕೊಟ್ಟರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top