ನಮ್ಮ ಕನ್ನಡ ಸಾಹಿತ್ಯ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೋಕಕ್ಕೆ ದಾಸಸಾಹಿತ್ಯದ ಕೊಡುಗೆ ಅಪರಿಮಿತವಾಗಿದೆ. ದಾಸಸಾಹಿತ್ಯವನ್ನು ಪ್ರತಿ ಕನ್ನಡಿಗರ ಮನ, ಮನೆ ತಲುಪಿಸುವ ಉದ್ದೇಶದಿಂದ ಉತ್ತರಾದಿ ಮಠಾಧೀಶರಾದ ಶ್ರೀ ಶ್ರೀ ಸತ್ಯಾತ್ಮತೀರ್ಥರು ಸೌರಭ ದಾಸಸಾಹಿತ್ಯ ವಿದ್ಯಾಲಯವನ್ನು 2017 ರಲ್ಲಿ ಸ್ಥಾಪಿಸಿ ಅದರ ಅಧ್ಯಕ್ಷರನ್ನಾಗಿ ತಮ್ಮ ಪರಮಪ್ರಿಯ ಶಿಷ್ಯರಾದ ಶ್ರೀ ಪಂ. ಪ್ರಮೋದಾಚಾರ್ಯ ಪೂಜಾರ ರನ್ನು ನಿಯಮಿಸಿದರು. ಶ್ರೀಪಾದಂಗಳಲ್ಲಿ ಶ್ರೀಮನ್ಯಾಯ ಸುಧಾ ಪೂರೈಸಿದ, ಬಹುಮುಖ ಪ್ರತಿಭೆಯ, ಚತುಃಶಾಸ್ತ್ರ ಪಂಡಿತರಾದ ನಮ್ಮ ಪರಮಪೂಜ್ಯ ಗುರುಗಳು ಅತ್ಯಂತ ಸಮರ್ಥ ರೀತಿಯಿಂದ, ನಿಷ್ಠೆಯಿಂದ ಮುನ್ನಡೆಸಿಕೊಂಡು ಬರುತ್ತಿದ್ದು ಇಂದು ವಿಶ್ವದಾದ್ಯಂತ ಸೌರಭದ ಪರಿಮಳ ಹರಡುವಂತೆ ಮಾಡಿ, ಅಪಾರವಾದ ಅಬಾಲವೃದ್ಧ ಶಿಷ್ಯರಿಗೆ (ಅದರಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಗೃಹಿಣಿಯರು) ದಾಸ ಸಾಹಿತ್ಯದ ಅಧ್ಯಯನದ ಮೂಲಕ ಸಾಧನೆಯ ಮಾರ್ಗ ತೋರುವ ಮಹೋನ್ನತ ಕಾರ್ಯ ಮಾಡುತ್ತಿದ್ದಾರೆ.
ನಾನು ಕೂಡ ಸೌರಭದ ಮೊದಲ ಬ್ಯಾಚ್ ನ ವಿದ್ಯಾರ್ಥಿನಿಯಾಗಿದ್ದು,ಕಳೆದ ಒಂಬತ್ತು ವರ್ಷಗಳಿಂದ ಸೌರಭದ ಪರಮಪೂಜ್ಯ ಗುರುಗಳ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡುತ್ತಿರುವ ನಮಗೆ ಅವರನ್ನು ಹತ್ತಿರದಿಂದ ತಿಳಿಯುವ ಭಾಗ್ಯ. ಕಿರಿಯ ವಯಸ್ಸಿನಲ್ಲೇ ಹಿರಿದಾದ ಸಾಧನೆ ನಮ್ಮ ಗುರುಗಳದು. ತಮ್ಮ ಸೌರಭದ ಅತಿ ಒತ್ತಡದ ಕಾರ್ಯಚಟುವಟಿಕೆಗಳಲ್ಲೂ ಪ್ರತಿ ಸದಸ್ಯರನ್ನು ಪ್ರೋತ್ಸಾಹಿಸುವ ಅವರ ಆ ಕಾರ್ಯಕ್ಷಮತೆ ನಿಜಕ್ಕೂ ಅದ್ಭುತ. ಅವರ ಪ್ರೇರಣೆಯಿಂದಲೇ ನಾನು ಸೌರಭದ ಉನ್ನತ ಅಧ್ಯಯನ 'ದಾಸಚಿಂತನಮಣಿ'ಯನ್ನು ಯಶಸ್ವಿಯಾಗಿ ಮುಗಿಸಿದೆ ಎಂಬುದು ನನಗೆ ಹೆಮ್ಮೆಯ ವಿಷಯ.
ಹರಿದಾಸ ಸಾಹಿತ್ಯವನ್ನು ತಮ್ಮ ಉಸಿರಾಗಿಸಿ ಹಗಲಿರುಳು ಅವಿರತವಾಗಿ ಶ್ರಮಿಸುತ್ತಿರುವ ಪರಮಪೂಜ್ಯ ಗುರುಗಳಿಗೆ ಅವರ ಕುಟುಂಬದ ಸದಸ್ಯರ ಮತ್ತು ಹಿರಿಯ ಪಂಡಿತರ ವಿಶೇಷವಾದ ಬೆಂಬಲವಿದೆ.ಮಹಾಮೇಧಾವಿ ನಮ್ಮ ಗುರುಗಳ ಪಾಂಡಿತ್ಯಪೂರ್ಣ ಕಾರ್ಯಗಳನ್ನು ಗುರುತಿಸಿ ಹಲವಾರು ಪ್ರಮುಖ ಪ್ರಶಸ್ತಿಗಳು, ಪುರಸ್ಕಾರಗಳು ಅರಸಿ ಬಂದಿವೆ. ನಮ್ಮ ನಾಡಿನ ಹಿರಿಯ ಸಾಹಿತಿಗಳು ಮತ್ತು ಪಂಡಿತರಿಂದ ಮುಕ್ತಕಂಠದಿಂದ ಹೊಗಳಿಕೆಗೆ ಪಾತ್ರರಾಗಿರುವ ನಮ್ಮ ಗುರುಗಳ ಮುಕುಟಕ್ಕೆ ಇದೀಗ ಅಮೇರಿಕ ಫ್ಲೋರಿಡಾ ಯೋಗ ವಿಶ್ವವಿದ್ಯಾಲಯ ನೀಡುವ ಪ್ರತಿಷ್ಠಿತ ಗೌರವ- ಡಾಕ್ಟರೇಟ್ ಪ್ರಶಸ್ತಿ ದೊರೆತದ್ದು ಸೌರಭದ ಅವರ ಶಿಷ್ಯ ವೃಂದದಲ್ಲಿ ಅಪಾರ ಸಂತಸವನ್ನುಂಟು ಮಾಡಿದೆ, ಮೇರು ವ್ಯಕ್ತಿತ್ವದ ನಮ್ಮ ಗುರುಗಳಿಗೆ ಈ ಗೌರವವನ್ನು ನೀಡಿ ತನ್ನ ಗೌರವವನ್ನು ಹೆಚ್ಚಿಸಿಕೊಂಡಿದೆ.
ಸದ್ಯ ಮೈಸೂರಿನಲ್ಲಿ ನಡೆಯುತ್ತಿರುವ ಶ್ರೀಪಾದಂಗಳವರ ಅಧಿಕ ಮಾಸದ ವಿಶೇಷ ಕಾರ್ಯಕ್ರಮದ ಸಮಯದಲ್ಲಿ, ಬರುವ ಶನಿವಾರ ಮತ್ತು ಭಾನುವಾರ (30-31) ಸೌರಭದ 9 ನೆಯ ವಾರ್ಷಿಕೋತ್ಸವ 'ವಿಶ್ವ ಹರಿದಾಸ ಸಮ್ಮೇಳನ' ಸಮಾರಂಭವಿದೆ. ಇಂತಹ ಸುಸಂದರ್ಭದಲ್ಲಿ, ಶನಿವಾರ 30ರಂದು ಸಂಜೆ ಶ್ರೀಪಾದಂಗಳವರ ಉಪಸ್ಥಿತಿಯಲ್ಲಿ ಈ ಪ್ರಶಸ್ತಿಯನ್ನು ಅವರ ಅಡಿದಾವರೆಗಳಿಗೆ ಸಮರ್ಪಿಸಿ, ಸೌರಭದ ಪರಮಪೂಜ್ಯ ಗುರುಗಳಿಗೆ ನೀಡಿ ಗೌರವಿಸುವ ಈ ಅದ್ದೂರಿಯ ಸಮಾರಂಭದಲ್ಲಿ ದಾಸ ಸಾಹಿತ್ಯಾಸಕ್ತರು ಮತ್ತು ವಿಶೇಷವಾಗಿ ಸಾವಿರಾರು ಸಂಖ್ಯೆಯಲ್ಲಿ ಸೌರಭದ ಸದಸ್ಯರು ಸಾಕ್ಷಿಯಾಗಲಿದ್ದಾರೆ. ಅಧಿಕ ಮಾಸದ ಅಧಿಕ ಫಲ, ಪರಮಪೂಜ್ಯ ಗುರುಗಳಿಗೆ ಹರಿವಾಯುಗುರುಗಳ ನಿರಂತರವಾದ ಅನುಗ್ರಹ ದೊರೆತು ಇನ್ನೂ ಸಾಧನೆಯ ಉನ್ನತ ಶಿಖರವನ್ನೇರಲಿ, ನಮಗೆ ಇಂತಹ ಮಹಾನುಭಾವರನ್ನು ಗುರುಗಳಾಗಿ ಕರುಣಿಸಿದ ಶ್ರೀಪಾದಂಗಳವರ ಚರಣಾರವಿಂದಗಳಿಗೆ ಅನಂತಾನಂತ ನಮನಗಳು.
- ಶ್ರೀಮತಿ ವೀಣಾ ಬರಗಿ, ಹುಬ್ಬಳ್ಳಿ
ದಾಸಚಿಂತನಮಣಿ, ಸೌರಭ ದಾಸಸಾಹಿತ್ಯ ವಿದ್ಯಾಲಯ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


