ಏ.27ರಿಂದ ಮೇ 3: ತಾಳ ಮದ್ದಳೆ ಸಪ್ತಾಹ 2026- '100% ಮಹಿಳಾ ಮೀಸಲಾತಿ' ಪ್ರಸಂಗಗಳೊಂದಿಗೆ!

Upayuktha
0



ದೇಶಾದ್ಯಂತ ರಾಜಕೀಯವಾಗಿ 33% ಮಹಿಳಾ ಮೀಸಲಾತಿ ವಿಧೇಯಕದ ವಿಚಾರದ ಚರ್ಚೆ ನಡೆಯುತ್ತಿರುವಾಗ, ಸಾಂದರ್ಭಿಕವಾಗಿ ಮತ್ತು ಕಾಕತಾಳೀಯವಾಗಿ, ಸ್ತ್ರೀ ದೇವತೆ ಶಾರದೆಯ ನೆಲೆವೀಡಾದ ಶೃಂಗೇರಿ ಸುತ್ತಮುತ್ತಲಲ್ಲಿ ಏಳು ದಿನಗಳು, ಸ್ತ್ರೀ ಪ್ರಧಾನದ ಪಾತ್ರಗಳ ಪ್ರಸಂಗಗಳನ್ನೇ ಆಯ್ದುಕೊಂಡ ತಾಳಮದ್ದಳೆ ಸಪ್ತಾಹ 2026 ಆಯೋಜನೆಗೊಂಡಿದೆ.


ಏಳಕ್ಕೆ ಏಳೂ ದಿನಗಳಲ್ಲು ಸ್ತ್ರೀ ಪ್ರಧಾನ ಪಾತ್ರಗಳ ಪ್ರಸಂಗವೇ ಇರುವುದರಿಂದ 'ತಾಳ ಮದ್ದಳೆ ಸಪ್ತಾಹ'ವನ್ನು ವಿನೋದವಾಗಿ '100% ಮಹಿಳಾ ಮೀಸಲಾತಿ ತಾಳ ಮದ್ದಳೆ ಸಪ್ತಾಹ' ಎನ್ನಬಹುದು!


ಈ 'ತಾಳ ಮದ್ದಳೆ ಸಪ್ತಾಹ'ಕ್ಕೆ ಶೀರ್ಷಿಕೆಯಾಗಿ "ಸ್ತ್ರೀಣಾಂ ಹಿ ಚಪಲಂ ಮನಃ" ಎಂದು ಇಟ್ಟಿರುವುದು ಕಥಾಭಾಗಗಳ ಬಗ್ಗೆ ಕುತೂಹಲ ಹೆಚ್ಚಿಸಿದೆ. 


ಗಂಡು ಕಲೆ ಎಂದು ಜನಜನಿತವಾಗಿದ್ದ ಯಕ್ಷಗಾನ ಕಲೆಯಲ್ಲಿ, ಈಗೀಗ ಹೆಚ್ಚು ಹೆಚ್ಚು ಸ್ತ್ರೀಯರು ಭಾಗವತರಾಗಿ, ವೇಷಧಾರಿಗಳಾಗಿ, ತಾಳ ಮದ್ದಳೆಯ ಅರ್ಥಧಾರಿಗಳಾಗಿ, ಕಾರ್ಯಕ್ರಮಗಳ ಆಯೋಜಕರಾಗಿ, ಪ್ರೇಕ್ಷಕರಾಗಿ ತೊಡಗಿಸಿಕೊಳ್ಳುತ್ತಿರುವುದು ಯಕ್ಷಗಾನ ಈಗ ಕೇವಲ ಗಂಡು ಕಲೆಯಲ್ಲ, ಅದು ಹೆಣ್ಣು ಕಲೆಯೂ ಹೌದು ಎಂದು ಜನಜನಿತವಾಗುತ್ತಿದೆ. ತಾಳಮದ್ದಳೆಗಳಲ್ಲಿ ಮಹಿಳಾ ಪ್ರೇಕ್ಷಕರು ನಿರಂತರ ನಾಲ್ಕೈದು ಗಂಟೆಗಳ ಕಾಲ ಮುಂದಿನ ಆಸನಗಳಲ್ಲಿ ಚಂಚಲತೆ ಇಲ್ಲದೆ, ಕದಲದೇ ಕುಳಿತು ಕಾರ್ಯಕ್ರಮ ಆಸ್ವಾದಿಸುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ, ತಾಳ ಮದ್ದಳೆಯ ಹಿಮ್ಮೇಳದ ಭಾಗವತಿಕೆಯಲ್ಲಿ ಮಹಿಳೆಯರದ್ದೇ ಪಾರುಪತ್ಯ. ಹಿಮ್ಮೇಳದ ಚಂಡೆ, ಮದ್ದಳೆ, ಭಾಗವತಿಕೆಗಳಲ್ಲಿ... ಭಾಗವತಿಕೆಗೆ ಮಹಿಳಾ ಕಲಾವಿದರೇ ಇರಬೇಕು ಎಂದು ಪ್ರೇಕ್ಷಕರು ಒತ್ತಾಯ ಮಾಡುವಷ್ಟು ಮಹಿಳಾ ಕಲಾವಿದರು ಕಂಠಸಿರಿಯೊಂದಿಗೆ ಮಿಂಚುತ್ತಿದ್ದಾರೆ.  


ಹಿಮ್ಮೇಳದ ಚಂಡೆ, ಮದ್ದಳೆ, ಭಾಗವತಿಕೆ ಈ ಮೂರರಲ್ಲಿ, ಭಾಗವತಿಕೆಗೆ ಮಹಿಳೆಯರೇ ಬೇಕು ಅನ್ನುವ ಒತ್ತಾಯ ಹೆಚ್ಚಿ, ಮಹಿಳಾ ಭಾಗವತರು ಕೈಯಲ್ಲಿ' ತಾಳ ಹಿಡಿದು "ಇಂದಿರೆಗೆ ತಲೆ ಬಾಗಿ...." ಅಂತ ಪ್ರಸಂಗ ಶುರು ಮಾಡಿ, ವೇಷಧಾರಿಗಳನ್ನು ಕುಣಿಸುತ್ತ, ಅರ್ಥಧಾರಿಗಳ ಸ್ವಗತದ ಮಾತಿಗೆ ಹೂಂಗುಡತ್ತ, ಹಿಮ್ಮೇಳದಲ್ಲಿ 33% ಮೀಸಲಾತಿ ಪಡೆದಿದ್ದಾರೆ!! 


***


ಏಪ್ರಿಲ್ 27 ರಿಂದ ಮೇ 3 ರ ವರೆಗೆ ನೆಡೆಯುವ ಶೃಂಗೇರಿ ಸುತ್ತಮುತ್ತ ನೆಡೆಯುವ 'ತಾಳ ಮದ್ದಳೆ ಸಪ್ತಾಹ 2026' ಕಾರ್ಯಕ್ರಮದ ಏಳು ಪ್ರಸಂಗಗಳು, ದಿನಾಂಕ ಮತ್ತು ಸ್ಥಳಗಳು ಹೀಗಿವೆ :


೧) ಅಂಬೆ - 27.04.26 - ಮಾನಗಾರು, ಶೃಂಗೇರಿ

೨) ದ್ರೌಪದಿ - 28.04.26 - ವೈಕುಂಠಪುರ, ಶೃಂಗೇರಿ

೩) ಕೈಕೇಯಿ - 29.04.26 - ಕಲ್ಲುಗುಡ್ಡೆ 

೪) ಜ್ವಾಲೆ - 30.04.26 - ಕೊಪ್ಪ

೫) ದಾಕ್ಷಾಯಿಣಿ - 01.05.26 - ನೆಮ್ಮಾರು

೬) ಸೀತೆ -  02.05.26 - ಸೂರ್ಳಿ

೭) ದೇವಯಾನಿ - 03.05.26 - ಬೆಳಂದೂರು


(ಸಮಯ: ಮೊದಲ ಮತ್ತು ಕೊನೇಯ ದಿನ 3.00 ಗಂಟೆಗೆ, ಉಳಿದೆಲ್ಲ ದಿನಗಳು 3.30 ರಿಂದ)


**


"ಸ್ತ್ರೀಣಾಂ ಹಿ ಚಪಲಂ ಮನಃ" ಎನ್ನುವುದು ಸಂಸ್ಕೃತದ ಒಂದು ಪ್ರಸಿದ್ಧ ಸೂಕ್ತಿ. ಇದರ ಅರ್ಥ ಸ್ತ್ರೀಯರ ಮನಸ್ಸು ಚಂಚಲವಾದುದು ಎಂದು. ಈ ಸೂಕ್ತಿಯು ಮುಖ್ಯವಾಗಿ ಪುರಾಣಗಳು ಮತ್ತು ನೀತಿ ಕಾವ್ಯಗಳಲ್ಲಿ ಕಂಡು ಬರುತ್ತದೆ. ಸ್ತ್ರೀಯರ ಮನಸ್ಸಿನ ಚಂಚಲತೆ ಅಥವಾ ಬದಲಾಗುವ ಮನೋ ಸ್ವಭಾವವನ್ನು ವರ್ಣಿಸಲು ಬಳಸಲಾಗುತ್ತದೆ. ಸ್ತ್ರೀಯರು ಬೇಗನೆ ನಿರ್ಧಾರಗಳನ್ನು ಬದಲಾಯಿಸುತ್ತಾರೆ, ಭಾವನಾತ್ಮಕವಾಗಿ ಅಸ್ಥಿರರಾಗಿರುತ್ತಾರೆ ಎಂಬ ಸಂದರ್ಭದಲ್ಲಿ ಬಳಸಲಾಗುವ ಒಂದು ಸಾಂಪ್ರದಾಯಿಕ ಹೇಳಿಕೆಯಾಗಿದೆ.


ಆದರೆ, ಈ ಸೂಕ್ತಿಯನ್ನು ಸಂದರ್ಭಕ್ಕೆ ತಕ್ಕಂತೆ ಅರ್ಥೈಸಿಕೊಳ್ಳಬೇಕು. ಹೇಗೆ ಪುರುಷ ಋಷಿ ಮುನಿಗಳ ಸಿಟ್ಟು, ಶಾಪಗಳು ಪರೋಕ್ಷವಾಗಿ ಲೋಕ ಕಲ್ಯಾಣಕ್ಕೆ ಅನುಗ್ರಹವಾಗಿ ಒದಗಿ ಬರುತ್ತದೋ ಅದೇ ರೀತಿ ಸ್ತ್ರೀಯರ ಮನಸ್ಸಿನ ಚಂಚಲತೆ ಪರೋಕ್ಷವಾಗಿ ಧನಾತ್ಮಕವಾಗಿ ಸಾರ್ವಕಾಲಿಕವಾಗಿ ಸಮಾಜಕ್ಕೆ ಪಠ್ಯ ಪ್ರಸಂಗವಾಗಿ ಸ್ಥಿರವಾಗಿ ನಿಲ್ಲುತ್ತದೆ. ಹಾಗಾಗಿ ಸ್ತ್ರೀಯರ ಮನೋ ಚಂಚಲತೆ ಎನ್ನುವುದು ಅಂತಿಮ ಸತ್ಯವೆಂದು ಪರಿಗಣಿಸಬಾರದು.  ಇದು ಹೇಗೆ ಎಂಬುದನ್ನು ಸಪ್ತಾಹ ತಾಳಮದ್ದಳೆಯ ಅರ್ಥಗಾರಿಕೆಯ ಸಂವಾದದಲ್ಲಿ, ಕ್ಲೈಮ್ಯಾಕ್ಸ್‌ನಲ್ಲಿ ಮನವರಿಕೆ ಆಗುತ್ತದೆ. ಪುರಾಣಗಳ ಸ್ತ್ರೀ ಪಾತ್ರಗಳ ಬಗ್ಗೆ ಮತ್ತೊಂದು ಆಯಾಮದ ಚಿಂತನೆಗಳು ಪ್ರೇಕ್ಷಕರ ಮನಸ್ಸಿನ ಉದರದಲ್ಲಿ ಗರ್ಭ ಧರಿಸುತ್ತವೆ!! 


ಸ್ತ್ರೀ ಪಾತ್ರವನ್ನು, ಸ್ತ್ರೀ ಮನೋ ಸಂವೇದನೆಯನ್ನು ಅದ್ಭುತವಾಗಿ ಪ್ರಸ್ತುತಪಡಿಸುವ, ಪ್ರಖರ ವಾಗ್ಮಿ ಆಗಿರುವ, ಮುಖ್ಯವಾಗಿ ಮಹಿಳಾ ಪ್ರೇಕ್ಷಕರನ್ನು ತಾಳಮದ್ದಳೆಯ ಆಡಿಟೋರಿಯಂಗೆ ಬರುವಂತೆ ಮಾಡಿ ಮುಂದಿನ ಆಸನಗಳಲ್ಲಿ ಕೂರುವಂತೆ ಮಾಡುವ, ಮಾತಿನ ಮಾಂತ್ರಿಕ ಮಲ್ಲ ಪವನ್ ಕಿರಣ್‌ಕೆರೆ ಸಪ್ತಾಹದ ಅಷ್ಟೂ ದಿನಗಳಲ್ಲಿನ ಪ್ರಮುಖ ಸ್ತ್ರೀ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.


ಏಳು ದಿನಗಳ ಕಾರ್ಯಕ್ರಮಕ್ಕೆ ಎಲ್ಲರೂ ಬನ್ನಿ. ಪುರುಷರು, ಮಹಿಳೆಯರು ಎಲ್ಲರೂ ಬನ್ನಿ. ಬರುವಾಗ ಮಕ್ಕಳನ್ನು ಕರ್ಕೊಂಬನ್ನಿ.


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top