ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯದಲ್ಲಿ ಕೃತಕ ಬುದ್ಧಿಮತ್ತೆ ಸಮ್ಮೇಳನ
ಬೆಂಗಳೂರು: ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯ ಕಲಾ ಮತ್ತು ಮಾನವಿಕ ಶಾಸ್ತ್ರಗಳ ವಿಭಾಗವು, ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಅಂಗಸಂಸ್ಥೆಯಾದ ಸ್ವಾಯತ್ತ ಸಂಸ್ಥೆಯಾಗಿ, “ಸಾಮಾಜಿಕ ವಿಜ್ಞಾನಗಳಲ್ಲಿ ಕೃತಕ ಬುದ್ಧಿಮತ್ತೆ: ಅವಕಾಶಗಳು, ಸವಾಲುಗಳು ಮತ್ತು ಭವಿಷ್ಯದ ಸಾಧ್ಯತೆಗಳು” ಎಂಬ ವಿಷಯದ ಮೇಲೆ ಒಂದು ದಿನದ ರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು 2026ರ ಏಪ್ರಿಲ್ 10ರಂದು ಶುಕ್ರವಾರ, ಬಸವನಗುಡಿಯ ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯದಲ್ಲಿ ಆಯೋಜಿಸಿತು.
ಈ ಸಮ್ಮೇಳನವು ಕೃತಕ ಬುದ್ಧಿಮತ್ತೆ ಮತ್ತು ಸಾಮಾಜಿಕ ವಿಜ್ಞಾನಗಳ ನಡುವಿನ ಬೆಳೆಯುತ್ತಿರುವ ಸಂಬಂಧವನ್ನು ಅನ್ವೇಷಿಸುವುದರ ಜೊತೆಗೆ, ಅದರ ಪರಿವರ್ತನಾ ಸಾಮರ್ಥ್ಯ, ನೈತಿಕ ಪ್ರಶ್ನೆಗಳು ಹಾಗೂ ಭವಿಷ್ಯದ ಪರಿಣಾಮಗಳ ಕುರಿತು ಶೈಕ್ಷಣಿಕ ಚರ್ಚೆಗಳಿಗೆ ವೇದಿಕೆಯನ್ನು ಒದಗಿಸುವುದನ್ನು ಉದ್ದೇಶವಾಗಿಟ್ಟುಕೊಂಡಿತ್ತು.
ಉದ್ಘಾಟನಾ ಭಾಷಣವನ್ನು ಪಿ.ಇ.ಎಸ್. ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ನಾಗೇಗೌಡ ಕೆ. ಎಸ್. ಅವರು ನೀಡಿದರು. ಅವರು ಸಾಮಾಜಿಕ ವಿಜ್ಞಾನಗಳಲ್ಲಿ ಸಂಶೋಧನಾ ವಿಧಾನಗಳು ಮತ್ತು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗಳನ್ನು ಕೃತಕ ಬುದ್ಧಿಮತ್ತೆ ಹೇಗೆ ರೂಪಾಂತರಗೊಳಿಸುತ್ತಿದೆ ಎಂಬುದನ್ನು ವಿವರಿಸಿದರು.
"ಕೃತಕ ಬುದ್ಧಿಮತ್ತೆಯು ಒಂದೇ ದಿನದಲ್ಲಿ ಸೃಷ್ಟಿಯಾದುದಲ್ಲಿ ಇದು ಹಲವು ದಶಕಗಳ ಪರಿಶ್ರಮದ ಫಲ" ಎಂದು ವಿವರಿಸಿದರು. "ಏಳು ಎಂಟು ವರ್ಷಗಳು ನಡೆಸುವ ಸಂಶೋಧನಾ ಸಮಯವನ್ನು ಕೃತಕ ಬುದ್ಧಿಮತ್ತೆಯು ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳಿಸುತ್ತದೆ" ಎಂದು ವ್ಯಾಖ್ಯಾನಿಸಿದರು.
ಜಿ.ಎಫ್.ಜಿ.ಸಿ. ಬಂಗಾರು ತಿರುಪತಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುಳಾ ವಿ ಅವರು “AI as Mirror” ಎಂಬ ವಿಷಯದ ಮೇಲೆ ಚಿಂತನೆಗೆ ಉತ್ತೇಜನ ನೀಡುವ ಉಪನ್ಯಾಸವನ್ನು ನೀಡಿದರು. ಮಾನವ ಬುದ್ಧಿಮತ್ತೆಯನ್ನೇ ಈಗ ಕೃತಕ ಬುದ್ಧಿಮತ್ತೆ ಪರೀಕ್ಷಿಸುತ್ತಿರುವುದು ಆಶ್ಚರ್ಯಕರ ಮತ್ತು ಗಮನಾರ್ಹ ವಿಷಯವೆಂದು ಅವರು ಅಭಿಪ್ರಾಯಪಟ್ಟರು.
ಕೃತಕ ಬುದ್ದಿಮತ್ತೆಯು ವಾಸ್ತವತೆಯನ್ನು ಪ್ರತಿಬಿಂಬಿಸುವುದರ ಜೊತೆಗೆ ಅದನ್ನು ವಕ್ರಗೊಳಿಸುವ ಸಾಧ್ಯತೆಯೂ ಹೊಂದಿದೆ. ದೊಡ್ಡ ಪ್ರಮಾಣದ ಮಾಹಿತಿಯನ್ನು ಬಳಸಿಕೊಂಡು ಮಾದರಿಗಳನ್ನು ಗುರುತಿಸುವುದು, ಭವಿಷ್ಯವಾಣಿ ಮಾಡುವುದು ಮತ್ತು ಮಾಹಿತಿಯನ್ನು ಅನುವಾದಿಸುವ ಸಾಮರ್ಥ್ಯ ಹೊಂದಿದ್ದರೂ, ಅದು ಮಾನವ ಅನುಭವವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಇದು ತರಬೇತಿ ಪಡೆದ ಮಾಹಿತಿಯ ಆಧಾರದ ಮೇಲೆ ನಿರ್ಮಿತ ವಾಸ್ತವಿಕತೆಯನ್ನು ಮಾತ್ರ ಪ್ರದರ್ಶಿಸುತ್ತದೆ.
ಇಂದಿನ ಸಂದರ್ಭದಲ್ಲಿ ಜನರು ತಂತ್ರಜ್ಞಾನವನ್ನು ಕೇವಲ ನಿಷ್ಕ್ರಿಯವಾಗಿ ಉಪಯೋಗಿಸುವವರಲ್ಲ; ಅವರು ಡಿಜಿಟಲ್ ವಾಸ್ತವಿಕತೆಗಳನ್ನು ಮತ್ತು ನೆನಪುಗಳನ್ನು ಪುನಃರ್ರಚಿಸಿ ಸಕ್ರಿಯ ಪಾತ್ರವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ರಘುಕುಮಾರ ಎನ್. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕೃತಕ ಬುದ್ದಿಮತ್ತೆಯ ಪ್ರಸ್ತುತತೆಯೊಂದಿಗೆ ಆಶಯನುಡಿಗಳನ್ನಾಡಿದರು.
ಡಾ.ಲಕ್ಷ್ಮೀಪತಿ ಸಿ.ಜಿ, ಪ್ರಾಧ್ಯಾಪಕರು, ಸಮಾಜಶಾಸ್ತ್ರ ವಿಭಾಗ, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಇವರು ಕೃತಕ ಬುದ್ಧಿಮತ್ತೆಯ ಪ್ರಸ್ತುತತೆಯ ಬಗ್ಗೆ ವಿಷಯ ಮಂಡಿಸಿದರು.
ವಿವಿಧ ಗೋಷ್ಠಿಯಲ್ಲಿ ಹಲವು ಕಾಲೇಜುಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪ್ರಬಂಧಗಳನ್ನು ಮಂಡಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


