ಹೊಸ ಸಂವತ್ಸರದ ಆರಂಭದಲ್ಲಿ ಒಂದೆರಡು ದಿನಗಳ ಬಿಡುವು ಮಾಡಿಕೊಂಡು, ನವೋತ್ಸಾಹದೊಂದಿಗೆ,ಆತ್ಮೀಯರ ಜೊತೆಗೂಡಿ ನಮ್ಮ ಪ್ರಯಾಣ ಹೊರಟದ್ದು ‘ಗಿರಿಧಾಮಗಳ ರಾಣಿ’ ಎಂದು ಕರೆಯಲ್ಪಡುವ ಊಟಿ (ಉದಕಮಂಡಲಂ) ಕಡೆಗೆ. ಮಾರ್ಚ್ ತಿಂಗಳ ಈ ಬಿಸಿಲಿಗೆ ಪ್ರವಾಸ ಹೋಗಲು ಪ್ರಶಸ್ತ ಸ್ಥಳಗಳಲ್ಲಿ ತಮಿಳುನಾಡಿನ ನೀಲಗಿರಿ ಬೆಟ್ಟಗಳ ಮಧ್ಯೆ ವಿಶಾಲವಾಗಿರುವ ಊಟಿಯೂ ಒಂದು.
ಮುಂಜಾನೆ ಸರಿಯಾಗಿ 5 ಗಂಟೆಗೆ ಕಾರಿನಲ್ಲಿ ಪ್ರಯಾಣ ಆರಂಭಿಸಿದ ನಾವು ಬೆಳಗಿನ ಉಪಹಾರಕ್ಕೆ ಮಡಿಕೇರಿಗೆ ತಲುಪಿದೆವು. ಅಲ್ಲಿನ ಕುಳಿರ್ಗಾಳಿಯ ಹಿತವನ್ನು ಅನುಭವಿಸುತ್ತಾ, ಬಿಸಿಬಿಸಿ ದೋಸೆ, ಚಹಾ/ಕಾಫಿ ಸೇವಿಸಿ ಮೈಸೂರು – ಊಟಿ ಮಾರ್ಗವಾಗಿ ಪ್ರಯಾಣ ಬೆಳೆಸಿದೆವು. ಉಭಯ ಕುಶಲೋಪರಿಯೊಂದಿಗೆ, ಊಟಿಯಲ್ಲಿ ನಾವು ನೋಡಬೇಕಾದ ಸ್ಥಳಗಳ ಕುರಿತು ಚರ್ಚಿಸುತ್ತಾ ಸಾಗಿ ಮಧ್ಯಾಹ್ನದ ಊಟಕ್ಕೆ ಗುಂಡ್ಲುಪೇಟೆಯಲ್ಲಿ ವಿರಾಮ ಪಡೆದೆವು. ಬಿರುಬಿಸಿಲಿಗೆ ಹಿತ ಮಿತ ಭೋಜನ ಸವಿದು ಮುಂದುವರಿದ ನಮ್ಮ ಪ್ರಯಾಣ ಬಂಡೀಪುರ ಮಾರ್ಗವಾಗಿ ಸಾಗಿತು. ಸುಮಾರು 20-25 ಕಿ. ಮೀ. ಗಳ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ತಮಿಳುನಾಡಿನ ಮದುಮಲೈ ರಾಷ್ಟ್ರೀಯ ಉದ್ಯಾನವನದ ರಸ್ತೆ ಪ್ರಯಾಣವು ನಿಜಕ್ಕೂ ಒಂದು ಅದ್ಭುತ ಅನುಭವ. ಸ್ವಚ್ಛಂದವಾಗಿ ತಿರುಗಾಡುತ್ತಿರುವ ಜಿಂಕೆಗಳ ಹಿಂಡು, ಸರ್ವೇ ಸಾಮಾನ್ಯವಾಗಿ ಕಾಣಸಿಗುವ ಕೋತಿ, ಸಿಂಗಳೀಕ, ಅಲ್ಲಲ್ಲಿ ಕಂಡುಬರುವ ಆನೆಗಳು ಒಂದೆಡೆಯಾದರೆ, ಪ್ರಕೃತಿಯ ಸಹಜ ಸೌಂದರ್ಯವೇ ಇನ್ನೊಂದು ಮಜಲು. ನಡುವೆ ಕಪ್ಪು ಪಟ್ಟಿಯಂತೆ ಕಾಣುವ ಡಾಮರು ರಸ್ತೆ, ರಸ್ತೆಯ ಇಕ್ಕೆಲಗಳಲ್ಲಿ ಕೈಚಾಚಿ ನಿಂತಂತೆ ಕಾಣುವ ಬೃಹದಾಕಾರದ ಮರಗಳು, ತುಂಬ ಹಳೆಯದಾಗಿ ಧರೆಗುರುಳಿದ ದೈತ್ಯ ಮರಗಳು, ಎದುರಿನಲ್ಲಿ ನೀಲಗಿರಿ ಬೆಟ್ಟದ ಸಾಲು, ತಿಳಿನೀಲ ಆಗಸದಿ ಹತ್ತಿಯ ಉಂಡೆಯಂತೆ ಭಾಸವಾಗುವ ಬೆಳ್ಳಿ ಮೋಡಗಳು. ಆಹಾ! ಪ್ರಕೃತಿಯ ಆಸ್ವಾದಕರಿಗೆ ಇನ್ನೇನು ಬೇಕು.
ಹೀಗೆ ಸಾಗುತ್ತಾ ಹೋದಂತೆ ಮದುಮಲೈ ಕಾಡಿನ ನಂತರ ಸಿಗುವುದೇ ಏರುಗುಡ್ಡ ಹಾಗೂ ತೀವ್ರ ತಿರುವುಗಳುಳ್ಳ (hairpin bend) ರಸ್ತೆ. ಒಂದು ಬದಿಯಲ್ಲಿ ಬೆಟ್ಟ ಹಾಗೂ ಇನ್ನೊಂದು ಬದಿಯಲ್ಲಿ ಕಣಿವೆಗಳ ದೃಶ್ಯಗಳು ಅತ್ಯಂತ ನಯನ ಮನೋಹರ. ಸುಮಾರು 36 ತೀವ್ರ ತಿರುವುಗಳಿರುವ ಈ ರಸ್ತೆಯಲ್ಲಿ ಸಾಗುತ್ತಾ, ಏರುತ್ತಾ ಊಟಿ ತಲುಪಿದ ನಮಗೆ ಪ್ರಯಾಣ ನೀಡಿದ ಮುದ ಅಷ್ಟಿಷ್ಟಲ್ಲ.
ಹೀಗೆ ಪ್ರಯಾಣವನ್ನು ಆಸ್ವಾದಿಸುತ್ತಾ ಊಟಿ ತಲುಪಿದ ನಾವು ಮೊದಲಿಗೆ ಭೇಟಿ ನೀಡಿದ ಸ್ಥಳ ಉದ್ಯಾನವನ ಹಾಗೂ ನೀಲಗಿರಿ ಕಾಡಿನಿಂದ ಅಲಂಕೃತವಾದ ಊಟಿ ಸರೋವರ. ಇದು ಸುಮಾರು 64 ಎಕರೆ ವಿಸ್ತೀರ್ಣ ಹೊಂದಿರುವ ಒಂದು ಕೃತಕ ಸರೋವರವಾಗಿದೆ. 1824 ರಲ್ಲಿ ಜಾನ್ ಸುಲ್ಲಿವನ್ ಎಂಬ ಬ್ರಿಟಿಷ್ ಅಧಿಕಾರಿ ಊಟಿಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಒಂದು ಯೋಜನೆಯನ್ನು ಕೈಗೊಂಡರು. ಸುತ್ತಮುತ್ತಲಿನ ಬೆಟ್ಟಗಳಿಂದ ಹರಿದು ಬರುವ ಸಣ್ಣ ಸಣ್ಣ ತೊರೆಗಳನ್ನು ಒಂದೇ ಕಡೆ ಸಂಗ್ರಹವಾಗುವಂತೆ ಯೋಜನೆ ರೂಪಿಸಿ ಅಣೆಕಟ್ಟನ್ನು ನಿರ್ಮಿಸಿದರು. ಆರಂಭದಲ್ಲಿ ಮೀನುಗಾರಿಕೆಯು ಉದ್ದೇಶವಾಗಿದ್ದರೂ ಕಾಲಕ್ರಮೇಣ ಮಾರ್ಪಾಡುಗೊಂಡು 1973ರಲ್ಲಿ ಪ್ರವಾಸಿಗರ ಮನರಂಜನೆಗಾಗಿ ದೋಣಿವಿಹಾರ ಸೌಲಭ್ಯ ಪ್ರಾರಂಭವಾಯಿತು. ಇಂದು ಇದು Ooty Lake ಎಂದೇ ಪ್ರಸಿದ್ಧವಾಗಿ ಊಟಿಯ ಪ್ರಮುಖ ಆಕರ್ಷಣೀಯ ಕೇಂದ್ರವಾಗಿದೆ. ಬೆಳಗ್ಗಿನಿಂದ ಕಾರಿನಲ್ಲಿ ಪ್ರಯಾಣ ಮಾಡಿದ ನಮಗೆ ಜಲವಿಹಾರವು ಸಹಜವಾಗಿ ಮುದವನ್ನು ನೀಡಿತು. ಅದಾಗಲೇ ಸಂಜೆಯಾಗುತ್ತಾ ಬಂದಿತ್ತು. ಊಟಿಯ ಚಳಿಯ ಅನುಭವವೂ ಪ್ರಾರಂಭವಾಗಿತ್ತು. ಮುಂದಿನ ನಮ್ಮ ನಿಲ್ದಾಣ ಊಟಿಯ ಪ್ರಮುಖ ಆಕರ್ಷಣೀಯ ಕೇಂದ್ರಗಳಲ್ಲಿ ಒಂದಾದ 1848ರಲ್ಲಿ ಸ್ಥಾಪಿಸಲ್ಪಟ್ಟ ಸರ್ಕಾರಿ ಸಸ್ಯೋದ್ಯಾನ (Govt. Botanical Garden). ಸುಮಾರು 22 ಹೆಕ್ಟರ್ ವಿಸ್ತೀರ್ಣ ಹೊಂದಿರುವ ಈ ಉದ್ಯಾನವನವು ತಾರಸಿ ವಿನ್ಯಾಸವನ್ನು ಹೊಂದಿದೆ. ವಿವಿಧ ಜಾತಿಯ ಸಸ್ಯಗಳು, ಜರಿ ಗಿಡಗಳು, ಬೋನ್ಸಯಿ ಸಸ್ಯಗಳು, ತಾವರೆ ಕೊಳಗಳನ್ನೂ ಒಳಗೊಂಡಂತೆ ವಿವಿಧ ವಿನ್ಯಾಸಗಳಲ್ಲಿ ರೂಪುಗೊಂಡ ಈ ಸಸ್ಯೋದ್ಯಾನದಲ್ಲಿ ಕೆಲವೊಂದು ಛಾಯಾ ಚಿತ್ರಗಳನ್ನು ಸೆರೆಹಿಡಿದುಕೊಂಡೆವು.
ಮರುದಿನ ಬೆಳಗ್ಗೆ ತಮಿಳುನಾಡಿನ ಸಾಂಪ್ರದಾಯಿಕ ಆಹಾರವಾದ ಪೊಂಗಲ್ ನ ರುಚಿ ಸವಿದು ನಮ್ಮ ಪಯಣ ನೀಲಗಿರಿ ಜಿಲ್ಲೆಯ ಕೂನೂರು ಕಡೆಗೆ ಸಾಗಿತು. ಊಟಿಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಇರುವ ಒಂದು ಸುಂದರ ಪ್ರವಾಸಿ ತಾಣ ಕೆಟ್ಟಿ ಕಣಿವೆ( Ketti Valley). ಊಟಿ – ಕೂನೂರು ರಸ್ತೆಯ ಬದಿಯಲ್ಲಿ ಇರುವ ಈ ಕಣಿವೆಯು ಸುಂದರವಾದ ಬೆಟ್ಟ ಗುಡ್ಡಗಳು, ಚಹಾ ತೋಟಗಳು, ಹಳ್ಳಿಗಳು, ಪ್ರಾರ್ಥನ ಮಂದಿರಗಳು, ರಸ್ತೆಗಳು, ರೈಲ್ವೆ ಟ್ರ್ಯಾಕುಗಳನ್ನು ಒಳಗೊಂಡ ವಿಶ್ವದ ಅತಿ ದೊಡ್ಡ ವಾಸಯೋಗ್ಯ ಕಣಿವೆಗಳಲ್ಲಿ ಒಂದಾಗಿದೆ. ಈ ಕಣಿವೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾ ಮುಂದುವರಿದ ನಾವು ಮದ್ರಾಸ್ ರೆಜಿಮೆಂಟಲ್ ಸೆಂಟರ್, ವೆಲ್ಲಿಂಗ್ಟನ್, ಕೂನೂರು (ಟ್ರೈನಿಂಗ್ ಕ್ಯಾಂಪ್) ನ ಮಾರ್ಗದ ಮೂಲಕ ಸಾಗುತ್ತಾ ದೇಶ ರಕ್ಷಣೆಗೆ ಪಣತೊಟ್ಟು ನಿಂತ ವೀರಯೋಧರನ್ನು ನೆನಪಿಸಿಕೊಳ್ಳುತ್ತಾ ಮನಸಾರೆ ಗೌರವ ಸಲ್ಲಿಸಿ ಸಿಮ್ಸ್ ಪಾರ್ಕನ್ನು ತಲುಪಿದೆವು. ಬಣ್ಣ ಬಣ್ಣದ ಅಪರೂಪದ ಹೂವುಗಳು, ವಿವಿಧ ಜಾತಿಯ ಸಸ್ಯಗಳು, ಬೇರೆ ಬೇರೆ ತರಹದ ಮರಗಳು, ಸರೋವರ, ಬೋಟಿಂಗ್ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಈ ಪಾರ್ಕ್ ತುಂಬಾ ವಿಸ್ತಾರವಾಗಿ ಹರಡಿಕೊಂಡಿರುವ ಕಾರಣ ಶಾಂತಿಯುತವಾದ ವಾತಾವರಣವು ಮನಸ್ಸಿಗೆ ಆಹ್ಲಾದವನ್ನು ನೀಡಿದ್ದು ಸುಳ್ಳಲ್ಲ.
ಊಟಿ ಪ್ರವಾಸದ ಪ್ರಮುಖ ಆಕರ್ಷಣೆ ಎಂದರೆ ಚಹಾ ತೋಟ. ವಿಶಾಲವಾದ ಇಳಿಜಾರು ಪ್ರದೇಶಗಳಲ್ಲಿ ಸಾವಿರಾರು ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಟೀ ಎಸ್ಟೇಟ್ ನ ಹಸಿರಾದ ಗಿಡಗಳ ಮಧ್ಯೆ ವಿವಿಧ ಭಂಗಿಗಳಲ್ಲಿ ನಿಂತು ಫೋಟೋ ತೆಗೆದುಕೊಂಡು ನಂತರ ಅಲ್ಲಿಯೇ ಸಮೀಪದಲ್ಲಿ ಇರುವ ಅಂಗಡಿಯಿಂದ ವಿವಿಧ ಬಗೆಯ ಚಹಾ ಹುಡಿಗಳನ್ನು ಖರೀದಿಸಿದರೆ ಮಾತ್ರವೇ ಊಟಿ ಪ್ರವಾಸ ಪೂರ್ಣಗೊಂಡ ಅನುಭವವಾಗುವುದು. ಚಹಾ ಭಾರತದ ಒಂದು ಮುಖ್ಯ ವಾಣಿಜ್ಯ ಬೆಳೆಯಾಗಿದ್ದು ಜಾಗತಿಕ ಮಟ್ಟದಲ್ಲಿ ಚಹಾ ಉತ್ಪಾದನೆಯಲ್ಲಿ ಭಾರತವು ಮುಂಚೂಣಿಯಲ್ಲಿದೆ. ಪ್ರವಾಸವು ಮನರಂಜನೆ ಮಾತ್ರ ನೀಡುವುದಲ್ಲದೆ ಪ್ರವಾಸೋದ್ಯಮವು ಆರ್ಥಿಕತೆಗೆ ಹೇಗೆ ಕೊಡುಗೆಯನ್ನು ನೀಡುತ್ತದೆ ಎಂಬುದನ್ನು ಸಹ ನಮಗೆ ಮನವರಿಕೆ ಮಾಡುತ್ತದೆ.
ಮುಂದೆ ನಮ್ಮ ಪಯಣ ಸಾಗಿದ್ದು ಲ್ಯಾಂಬ್ಸ್ ರಾಕ್ ಮತ್ತು ಡಾಲ್ಫಿನ್ ನೋಸ್ ವ್ಯೂ ಪಾಯಿಂಟ್ ಕಡೆಗೆ. ಈ ವ್ಯೂ ಪಾಯಿಂಟ್ ಗಳಿಂದ ಕಾಣುವ ದೃಶ್ಯ, ಪ್ರಕೃತಿಯ ಸೊಬಗು ಕೊಡುವ ಅನುಭವವು ಅನೂಹ್ಯವಾದುದು.
ಈ ದಿನ ನಾವು ಕೊನೆಗೆ ಭೇಟಿ ನೀಡಿದ ಸ್ಥಳ ಅತ್ಯಂತ ಆಕರ್ಷಣೀಯ ಹಾಗೂ ಪ್ರಶಾಂತವಾಗಿದ್ದು ಪ್ರವಾಸಿಗರನ್ನು ಕೈಬೀಸಿ ಕರೆದಂತೆ ಭಾಸವಾಗುವ ಕರ್ನಾಟಕ ಸಿರಿ ತೋಟಗಾರಿಕೆ ಉದ್ಯಾನವನ (Karnataka Siri Horticulture Garden). ಊಟಿ ಪಟ್ಟಣಕ್ಕೆ ಸನಿಹದಲ್ಲಿ ಇರುವ ಈ ಸ್ಥಳವನ್ನು ನಗರದಿಂದ ಸುಲಭವಾಗಿ ತಲುಪಬಹುದು. ಕರ್ನಾಟಕ ತೋಟಗಾರಿಕೆ ಇಲಾಖೆಯು 2018ರಲ್ಲಿ ಇದನ್ನು ಅಭಿವೃದ್ಧಿಪಡಿಸಿತು. ಸುಮಾರು 38 ಎಕರೆ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಉದ್ಯಾನವನವು ಚಹಾ ತೋಟಗಳು, ಸಾವಿರಾರು ಹೂಕುಂಡಗಳಲ್ಲಿ ಬಣ್ಣ ಬಣ್ಣದ ಹೂವಿನ ಗಿಡಗಳು, ವಿವಿಧ ಆಕಾರಗಳಲ್ಲಿ ಕತ್ತರಿಸಿ ಉದ್ಯಾನವನದ ಆಕರ್ಷಣೆಯನ್ನು ಇಮ್ಮಡಿಗೊಳಿಸಿದ ಹಸಿರು ಗಿಡಗಳು, ತೂಗು ಸೇತುವೆ ಮುಂತಾದವುಗಳನ್ನು ಒಳಗೊಂಡಿದ್ದು ಪ್ರಕೃತಿ ಪ್ರಿಯರನ್ನು ಒಂದು ಕ್ಷಣ ಮಂತ್ರ ಮುಗ್ಧರನ್ನಾಗಿಸುತ್ತದೆ. ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ಕರ್ನಾಟಕ ರಾಜ್ಯವು ತಮಿಳುನಾಡಿನಲ್ಲಿ ಕೈಗೊಂಡ ಯೋಜನೆಯು ಇದಾಗಿದ್ದು, ಊಟಿ ಪ್ರವಾಸ ಕೈಗೊಳ್ಳುವ ಪ್ರತಿಯೊಬ್ಬರೂ ಭೇಟಿ ನೀಡಬೇಕಾದ ಸ್ಥಳಗಳ ಪಟ್ಟಿಯಲ್ಲಿ ಖಂಡಿತವಾಗಿಯೂ ಈ ಉದ್ಯಾನವನವನ್ನು ಸೇರಿಸಿಕೊಳ್ಳಬಹುದು. ಸಂಜೆಯ ತಂಪಾದ ವಾತಾವರಣ, ಸಮೃದ್ಧಿಯ ಸಂಕೇತವಾದ ಹಸಿರು ಬಣ್ಣದ ಆಕರ್ಷಣೆ ಇಡೀ ದಿನದ ಪ್ರವಾಸದ ಆಯಾಸವನ್ನು ಮರೆಸುತ್ತದೆ ಎಂದು ನಿಸ್ಸಂಶಯವಾಗಿ ಹೇಳಬಹುದು.
ಮರುದಿನ ಬೆಳಗಿನ ಉಪಹಾರವನ್ನು ಊಟಿಯಲ್ಲಿ ಸವಿದು ಮರಳಿ ಗೂಡಿನತ್ತ ಹೊರಟೆವು. ರಸ್ತೆಯ ಇಕ್ಕೆಲಗಳಲ್ಲಿನ ನೀಲಗಿರಿ ಮರದ ಕಾಡು, ಮರಗಳ ಮಧ್ಯೆ ಇಣುಕುವ ಸೂರ್ಯನ ಹೊಂಗಿರಣ ಆಕರ್ಷಣೀಯವಾಗಿತ್ತು. ಪೈಕಾರ ಸರೋವರದ ಸಮೀಪ ಹಳದಿ ಹೂವಿನ ಪೊದೆಗಳಿಂದ ಕಂಗೊಳಿಸುವ ವಿಶಾಲ ಪ್ರದೇಶ, ಪೈಕಾರ ಅಣೆಕಟ್ಟು, ಜಲ ವಿದ್ಯುತ್ ಘಟಕ ಮುಂತಾದ ಸುಂದರ ದೃಶ್ಯಗಳು ನಮ್ಮ ನೆನಪಿನ ಬುತ್ತಿ ಸೇರಿಕೊಂಡವು. ಊಟಿಯ ಇನ್ನೊಂದು ಪ್ರಮುಖ ವಾಣಿಜ್ಯ ಬೆಳೆಯಾದ ಕ್ಯಾರೆಟ್ ನ ರುಚಿಯನ್ನು ಆಸ್ವಾದಿಸುತ್ತ ಹಿಂತಿರುಗಿದೆವು. ಊಟಿಯ ತಂಪಾದ ವಾತಾವರಣದ ಹಿತಾನುಭವವೂ, ಹಚ್ಚಹಸುರಿನಿಂದ ಕಂಗೊಳಿಸುವ ಪ್ರಾಕೃತಿಕ ಸೌಂದರ್ಯವೂ ನಮ್ಮ ಸ್ಮೃತಿ ಪಟಲದಲ್ಲಿ ಬೆಚ್ಚಗೆ ಕುಳಿತಿತ್ತು.
- ಅಮೃತಾ ದಿನೇಶ್
ತೆಕ್ಕೇಕರೆ, ಕಾಸರಗೋಡು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


