ಮಂಗಳೂರು: ಮಂಗಳೂರಿನ ಪದವು ಕುಲಶೇಖರದಲ್ಲಿ ಹಿಂದೂ ಯುವಸೇನೆ ಸಂಚಾಲಿತ ಧಾರ್ಮಿಕ ಶ್ರದ್ಧಾಕೇಂದ್ರವಾದ ಶ್ರೀ ಶನೈಶ್ಚರ ದೇವಸ್ಥಾನದ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ಏಪ್ರಿಲ್ 18ರಿಂದ 24ರ ತನಕ ಬಾಳಂಭಟ್ ಮನೆತನದ ಜ್ಯೋತಿಷ್ಯ ವಿದ್ವಾನ್ ವೇದಮೂರ್ತಿ ಎಂ. ಗಿರಿಧರ ಭಟ್ ಮತ್ತು ವೇದಮೂರ್ತಿ ಡಾ| ಸತ್ಯಕೃಷ್ಣ ಭಟ್ ಅವರ ನೇತೃತ್ವದಲ್ಲಿ ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಹಿಂದೂ ಯುವಸೇನೆ ಪದವು ಶಾಖೆಯ ಧಾರ್ಮಿಕ ವಿಭಾಗವಾಗಿ ಕಳೆದ ಎರಡೂವರೆ ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಶನೈಶ್ಚರ ಪೂಜಾ ಸಮಿತಿ (ರಿ.) ಶ್ರೀ ಸಗ್ರಹ ಮಖ ಶನೈಶ್ಚರ ಮಹಾಯಾಗವನ್ನು ಬಾಳಂಭಟ್ ಮನೆತನದ ವೇದಮೂರ್ತಿ ನಾರಾಯಣ ಭಟ್ ಅವರ ಮಾರ್ಗದರ್ಶನ ದಲ್ಲಿ 2000 ಹಾಗೂ 2018 ನಡೆಸಲಾಗಿತ್ತು. ಶ್ರೀ ಸಗ್ರಹ ಮಖ ಶನೈಶ್ಚರ ಮಹಾಯಾಗವು 7 ದಿನಗಳ ಪರ್ಯಂತ ನಡೆದಿದ್ದು, ಧಾರ್ಮಿಕ ವಲಯದಲ್ಲಿ ಚರಿತ್ರೆ ನಿರ್ಮಿಸಿದ ಕಾರ್ಯಕ್ರಮವಾಗಿ ದಾಖಲಾಗಿದೆ.
ಮಂಗಳೂರಿನ ಕುಲಶೇಖರದ ಪದವು ಮೇಗಿನಮನೆ ಬಳಿ 2010ರಲ್ಲಿ 600 ಚ. ಅಡಿಯಲ್ಲಿ ಶ್ರೀ ಶನೈಶ್ಚರ ಪೂಜಾ ಮಂದಿರವನ್ನು ನಿರ್ಮಿಸಿ ಶ್ರೀ ಶನಿದೇವರ ಆರಾಧನೆ ಯನ್ನು ನಡೆಸಲಾಗುತ್ತಿತ್ತು. 2023ರಲ್ಲಿ ಶ್ರೀ ಶನೈಶ್ಚರ ದೇವಸ್ಥಾನ ನಿರ್ಮಾಣ ಸಮಿತಿಯನ್ನು ರಚಿಸಿ, 10 ಸೆಂಟ್ಸ್ ಸ್ಥಳವನ್ನು ಖರೀದಿಸಿ, ನೂತನ ಶಿಲಾಮಯ ಶ್ರೀ ಶನೈಶ್ಚರ ದೇವಸ್ಥಾನದ ಶಂಕುಸ್ಥಾಪನೆ ನಡೆಸಲಾಗಿತ್ತು
ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಶ್ರೀ ಶನೈಶ್ಚರ ದೇವಸ್ಥಾನದಲ್ಲಿ ನವಗ್ರಹ ಸಹಿತ ಶ್ರೀ ಶನೈಶ್ಚರ, ಮಹಾಗಣಪತಿ ಹಾಗೂ ಶ್ರೀ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಲಾಗುವುದು.
ಎಪ್ರಿಲ್ 18, ಶನಿವಾರದಂದು ಸಾಮೂಹಿಕ ಪ್ರಾರ್ಥನೆಯಿಂದ ಮೊದಲ್ಗೊಂಡು 108 ಕಾಯಿ ಗಣದ ಯಾಗ, ಲಕ್ಷ್ಮೀ ನಾರಾಯಣ ಪ್ರಧಾನ ಹೋಮ ಎಪ್ರಿಲ್ 22ರ ತನಕ ನಡೆಯಲಿದೆ. ಎಪ್ರಿಲ್ 23 ಗುರುವಾರದಂದು ಗಣಪತಿ, ದುರ್ಗಾ, ನವಗ್ರಹ ಸಹಿತ ಶ್ರೀ ಶನೈಶ್ಚರ ದೇವರ ಬಿಂಬ ಪ್ರತಿಷ್ಠೆ, ಶಿಖರ ಕಲಶ ಶ್ರೀ ದೇವರಿಗೆ ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕವು ಜರಗಲಿದೆ. ಎಪ್ರಿಲ್ 24ರಂದು ಚಂಡಿಕಾಯಾಗ, ಸಗ್ರಹ ಶನೈಶ್ಚರ ಮಹಾಯಾಗ ಸಂಪನ್ನಗೊಳ್ಳಲಿದೆ.
ಪ್ರತಿದಿನ ವಿವಿಧ ಮಂಡಳಿಗಳಿಂದ ಭಜನೆ, ಅನ್ನ ಸಂತರ್ಪಣೆ, ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ.
ಶನಿದೇವರ ಮಹಾತ್ಮೆಯ ಪುಣ್ಯಕಥಾನಕವನ್ನು "ಛಾಯಾನಂದನ" ಯಕ್ಷಗಾನ ಬಯಲಾಟದ ಮೂಲಕ ಪಾವಂಜೆ ಮೇಳದವರು, ಎಪ್ರಿಲ್ 21ರಂದು ಹಾಗೂ ಶ್ರೀ ಲಲಿತೆ ಕಲಾವಿದರು ಎಪ್ರಿಲ್ 23ರಂದು 'ಶನಿ ಮಹಾತ್ಮೆ” ತುಳು ಪೌರಾಣಿಕ ನಾಟಕದ ಮೂಲಕ ಪ್ರದರ್ಶಿಸಲಿರುವರು.
ಸೌದಾಮಿನಿ ರಾವ್ ಕಟಪಾಡಿ ಮತ್ತು ಬಳಗದವರಿಂದ 'ನೃತ್ಯ 'ರಂಜಿನಿ, ವಿಧಾತ್ರಿ ಕಲಾವಿದೆರ್ ಕುಡ್ಲ (ರಿ) ಇವರಿಂದ 'ಜೈ ಹನುಮಾನ್" ಸಿನಿ ನಾಟಕ, ಸ್ಥಳೀಯ ಪ್ರತಿಭೆಗಳಿಂದ ಐಸ್ಕೃತಿಕ ವೈವಿಧ್ಯ, ಜಗದೀಶ್ ಕದ್ರಿಯವರ ಸಂಯೋಜನೆಯಲ್ಲಿ ಕದ್ರಿ ಈವೆಂಟ್ಸ್ ಪ್ರಸ್ತುತಿಯ ಭಕ್ತಿಸಂಗೀತ ಲಹರಿ" ಮೊದಲಾದ ಕಲಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಹೊರೆಕಾಣಿಕೆ ಮೆರವಣಿಗೆ: ಎಪ್ರಿಲ್ 19, ಆದಿತ್ಯವಾರ ಬೆಳಿಗ್ಗೆ 9.00 ಗಂಟೆಗೆ ಶರವು ಮಹಾಗಣಪತಿ ದೇವಸ್ಥಾನದಲ್ಲಿ' ಶ್ರೀ ಶರವು ರಾಘವೇಂದ್ರ ಶಾಸ್ತ್ರಿಗಳು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ನೂತನ ಶಿಲಾಬಿಂಬಗಳೊಂದಿಗೆ ದೇವಸ್ಥಾನದ ನಿತ್ಯೋಪಯೋಗಿ ಪರಿಕರಗಳು, ಬ್ರಹ್ಮಕಲಶಕ್ಕೆ ಬೇಕಾದ ಪರಿಕರಗಳು, ಹೊರೆಕಾಣಿಕೆ ಮೆರವಣಿಗೆಯಲ್ಲಿ ಸಾಗಲಿದೆ. ಹಿಂದೂ ಯುವಸೇನೆಯ ವಿವಿಧ ಶಾಖೆಗಳು, ಪರಿಸರದ ಸಂಘ ಸಂಸ್ಥೆಗಳು, ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಿಂದ ಹೊರೆಕಾಣಿಕೆ ವಾಹನಗಳು ಪಾಲ್ಗೊಳ್ಳಲಿವೆ.
ಹಿಂದೂ ಯುವಸೇನೆಯ ಸಮಾವೇಶ :
ಶಿವಾಜಿ ಮಂಟಪದಲ್ಲಿ ಪ್ರತಿದಿನ ಸಂಜೆ ಧರ್ಮಸಭೆ ನಡೆಯಲಿದ್ದು, ಎಪ್ರಿಲ್ 19 ಆದಿತ್ಯವಾರ ಹಿಂದೂ ಯುವಸೇನೆಯ ಸಮಾವೇಶವು ಜರಗಲಿದೆ. ಹಿಂದೂ ಯುವಸೇನೆಯ ಹಿರಿಯ ನಾಯಕರು, ವಿವಿಧ ಶಾಖೆಗಳ ಸ್ವಯಂಸೇವಕರು, ಧಾರ್ಮಿಕ ನೇತಾರರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮುಂದೆ ಶ್ರೀ ಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ - 20 ಸೆಂಟ್ಸ್ ಜಮೀನಿನ ಅವಶ್ಯಕತೆಯಿದ್ದು, ಭೂ ದಾನ ಯೋಜನೆಯ ಮೂಲಕ ನಿಧಿ ಸಂಗ್ರಹ ಅಭಿಯಾನ ಆರಂಭವಾಗಿದ್ದು, ಮಂಗಳೂರು ನಗರದಲ್ಲಿ 13 ವಲಯ ಸಮಿತಿಗಳನ್ನು ಹಾಗೂ ಶ್ರೀ ಮಹೇಶ್ ಶೆಟ್ಟಿ ತೆಳ್ಳಾರ್ ಅವರ ಅಧ್ಯಕ್ಷ ತೆಯಲ್ಲಿ ಮುಂಬೈ ಸಮಿತಿಯನ್ನು ರಚಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ನಳಿನ್ ಕುಮಾರ್ ಕಟೀಲು ಅಧ್ಯಕ್ಷರು ಬ್ರಹ್ಮಕಲಶೋತ್ಸವ ಸಮಿತಿ, ಡಿ. ವೇದವ್ಯಾಸ ಕಾಮತ್ ಕಾರ್ಯಾಧ್ಯಕ್ಷರು ಬ್ರಹ್ಮಕಲಶೋತ್ಸವ ಸಮಿತಿ, ಭಾಸ್ಕರಚಂದ್ರ ಶೆಟ್ಟಿ ಪ್ರಧಾನ ಕಾರ್ಯದರ್ಶಿ ಬ್ರಹ್ಮಕಲಶೋತ್ಸವ ಸಮಿತಿ, ನವನೀತ ಶೆಟ್ಟಿ ಅಧ್ಯಕ್ಷರು ನಿರ್ಮಾಣ ಸಮಿತಿ, ರಾಮಚಂದ್ರ ಚೌಟ ಅಧ್ಯಕ್ಷರು ಶ್ರೀ ಶನೈಶ್ಚರ ಪೂಜಾ ಸಮಿತಿ, ವಿಜಯ ಅರುಣ್ ಅಧ್ಯಕ್ಷರು ಮಾತೃ ಮಂಡಳಿ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

