ಉಜಿರೆಯ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ 3ನೇ ಬ್ರಹ್ಮಕಲಶೋತ್ಸವ; 3 ಲಕ್ಷ ಜನರಿಗೆ ಅನ್ನದಾಸೋಹದ ಅದ್ಭುತ ಸಂಭ್ರಮ

Upayuktha
0


ಉಜಿರೆ: ಭಕ್ತಿ, ಪರಂಪರೆ ಮತ್ತು ದಾನದ ದೀಪ ಒಂದೇ ವೇದಿಕೆಯಲ್ಲಿ ಪ್ರಜ್ವಲಿಸಿದಾಗ ಉಂಟಾಗುವ ವೈಭವಕ್ಕೆ ಉಜಿರೆ ಸಾಕ್ಷಿಯಾಗಿದೆ. ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ಮೂರನೇ ಬ್ರಹ್ಮಕಲಶೋತ್ಸವ ಕೇವಲ ಧಾರ್ಮಿಕ ಆಚರಣೆ ಅಲ್ಲ; ಅದು ಒಂದು ಸಾಮಾಜಿಕ ಚಳವಳಿ, ಸಮೂಹ ಶ್ರದ್ಧೆಯ ಮಹೋತ್ಸವ ಮತ್ತು ಅನ್ನದಾಸೋಹದ ಮಹಾಗಾಥೆ.


2001ರಲ್ಲಿ ನಡೆದ ಮೊದಲ ಬ್ರಹ್ಮಕಲಶೋತ್ಸವದ ನೆನಪುಗಳು ಇನ್ನೂ ಜೀವಂತ. 24 ವರ್ಷಗಳ ನಂತರ ನಡೆಯುತ್ತಿರುವ ಈ ಮೂರನೇ ಮಹೋತ್ಸವ, ಪರಂಪರೆಯ ನಿರಂತರತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. 2023ರಲ್ಲಿ ಅಗಲಿದ ಗೌರವಾಧ್ಯಕ್ಷ ವಿಜಯ ರಾಘವ ಪಡುವೆಟ್ನಾಯ ಅವರ ಸೇವಾ ಪರಂಪರೆಯನ್ನು ಪುತ್ರ ಶರತ್ ಕೃಷ್ಣ ಪಡುವೆಟ್ನಾಯ ಮುಂದುವರಿಸುತ್ತಿದ್ದು, ಉತ್ಸವದ ಪ್ರತಿಯೊಂದು ಹಂತವೂ ಸಮರ್ಪಕ ಯೋಜನೆ ಮತ್ತು ಶ್ರದ್ಧೆಯಿಂದ ಸಾಗುತ್ತಿದೆ.


ಪರಿಸರ ಸ್ನೇಹಿ ಅಲಂಕಾರದಲ್ಲಿ ಸಂಸ್ಕೃತಿಯ ಸೊಬಗು

ಈ ಬಾರಿ ಉತ್ಸವದ ವಿಶೇಷ ಆಕರ್ಷಣೆಯಾಗಿ ಪರಿಸರ ಸ್ನೇಹಿ ಅಲಂಕಾರ ಕಂಗೊಳಿಸುತ್ತಿದೆ. ಬಿದಿರು ಹಾಗೂ ಅಡಿಕೆ ಮರದ ಅಲಂಕಾರಿಕ ವಿನ್ಯಾಸಗಳು ಉತ್ಸವದ ವಾತಾವರಣಕ್ಕೆ ಗ್ರಾಮೀಣ ಸೌಂದರ್ಯವನ್ನು ನೀಡಿವೆ. ಪ್ರಕೃತಿ ಸ್ನೇಹಿ ಅಲಂಕಾರಕ್ಕೆ ಹೆಚ್ಚಿನ ಒತ್ತು ನೀಡಿರುವುದು ಪರಿಸರ ಜಾಗೃತಿಯ ಸ್ಪಷ್ಟ ಸಂದೇಶ. ಯೂಸ್ ಅಂಡ್ ತ್ರೋ ಪ್ಲೇಟ್ ಹಾಗೂ ಲೋಟಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿರುವುದು ಈ ಮಹೋತ್ಸವದ ಮತ್ತೊಂದು ಶ್ಲಾಘನೀಯ ಹೆಜ್ಜೆ.


ಮೂರು ಲಕ್ಷ ಜನರಿಗೆ ಅನ್ನದಾಸೋಹದ ಸಿದ್ಧತೆ

ಮಾರ್ಚ್ 3ರಿಂದ 11ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದಲ್ಲಿ ಎರಡೂವರೆ ರಿಂದ ಮೂರು ಲಕ್ಷ ಭಕ್ತರು ಊಟಕ್ಕೆ ಆಗಮಿಸುವ ನಿರೀಕ್ಷೆ ಇದೆ. ಅದಕ್ಕಾಗಿ ಎಂಟು ಕೌಂಟರ್ ವ್ಯವಸ್ಥೆ ರೂಪಿಸಲಾಗಿದೆ. 30 ಮಂದಿ ಅಡುಗೆಯವರು, 20 ಮಂದಿ ಪಾತ್ರೆ ತೊಳೆಯುವವರು ಮತ್ತು ಸುಮಾರು 300 ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ.


ಒಳಾಂಗಣ ವ್ಯವಸ್ಥೆ ಶಿಸ್ತುಬದ್ಧವಾಗಿದೆ. ಬೆಳಗ್ಗೆ 10.30ಕ್ಕೆ 20 ಮಂದಿಗೆ ಮಾತ್ರ ಒಳ ಪ್ರವೇಶ, ಉಳಿದ ಭಕ್ತರನ್ನು ಸ್ವಯಂಸೇವಕರ ಕೊಠಡಿಯಲ್ಲಿ ವ್ಯವಸ್ಥಿತವಾಗಿ ಕೂರಿಸಲಾಗುತ್ತದೆ. 11.30ರ ಮಲ್ಲಪೂಜೆಯ ನಂತರ ಎಲ್ಲರಿಗೂ ಪ್ರವೇಶ ಕಲ್ಪಿಸಲಾಗುತ್ತದೆ. ದಿನಕ್ಕೆ ಮೂರು ಹೊತ್ತು ಆಹಾರ. ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ ಹಾಗೂ ರಾತ್ರಿ ಊಟ.


ಎರಡನೇ ತಾರೀಕು ಬೆಳಗ್ಗೆ ಸುಮಾರು 1,500 ಮತ್ತು ಮಧ್ಯಾಹ್ನ 3,500 ಭಕ್ತರಿಗೆ ಅನ್ನದಾಸೋಹ ನಡೆದಿದೆ. ರಾತ್ರಿ ಸಹ 3,500 ಜನರಿಗೆ ಸಿದ್ಧತೆ ಮಾಡಲಾಗಿದೆ. ಮಾರ್ಚ್ 3ರಂದು ಚಂದ್ರಗ್ರಹಣ ಇರುವುದರಿಂದ ಮಧ್ಯಾಹ್ನ ಊಟ ನೀಡಲಾಗುತ್ತಿದ್ದು, ರಾತ್ರಿ ಫಲಹಾರದ ವ್ಯವಸ್ಥೆ ಮಾತ್ರ. ಗ್ರಹಣದ ನಿಯಮಗಳನ್ನು ಪಾಲಿಸಿ ಅಡುಗೆ ಪೂರ್ವಸಿದ್ಧತೆ ಕೈಗೊಳ್ಳಲಾಗಿದೆ.


ದಾನದ ಮಹಾಪ್ರವಾಹದಿಂದ ಅನ್ನಸೇವೆಯ ಮಹಾಗಾಥೆ

ಈ ಮಹೋತ್ಸವದ ಅತಿ ದೊಡ್ಡ ಶಕ್ತಿ ದಾನ. ಅಕ್ಕಿ, ಬೆಲ್ಲ, ಸಕ್ಕರೆ, ತೆಂಗಿನಕಾಯಿ, ಧಾನ್ಯಗಳು, ತರಕಾರಿಗಳು ಸೇರಿದಂತೆ ಬಹುತೇಕ ಎಲ್ಲಾ ಸಾಮಗ್ರಿಗಳು ದಾನ ರೂಪದಲ್ಲಿ ಬಂದಿವೆ. ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ತರಕಾರಿಗಳ ಹರಿವು ಕಂಡುಬಂದಿದೆ. ಜೀರಿಗೆ, ಕೊತ್ತಂಬರಿ ಮುಂತಾದ ಸಣ್ಣಪುಟ್ಟ ವಸ್ತುಗಳನ್ನು ಮಾತ್ರ ಖರೀದಿಸಲಾಗಿದೆ. ವಿವಿಧ ಸಮಿತಿಗಳು ನೀಡಿದ ದಾನವೇ ಅನ್ನದಾಸೋಹದ ಆಧಾರಸ್ತಂಭವಾಗಿದೆ.


ಉಪ್ಪಿನಕಾಯಿ, ಅನ್ನ, ಸಾಂಬಾರು, ಪಾಯಸ, ಮಜ್ಜಿಗೆ, ಸಾರು, ಘಾಸಿ, ಶೀರ ಸೇರಿದಂತೆ ವೈವಿಧ್ಯಮಯ ಪದಾರ್ಥಗಳು ಹತ್ತು ದಿನಗಳಿಗೂ ಸಿದ್ಧ. ನಾಲ್ಕನೇ ತಾರೀಕಿಗೆ ಗೋಪುರ ಉದ್ಘಾಟನೆ, ಎಂಟನೇ ತಾರೀಕಿಗೆ ಬ್ರಹ್ಮ ರಥೋತ್ಸವ, 11ನೇ ತಾರೀಕಿಗೆ ಬ್ರಹ್ಮಕಲಶ ಮಹಾಸಮಾರಂಭ. ಈ ಮೂರು ದಿನಗಳಲ್ಲಿ ಎರಡು ವಿಧದ ಸಿಹಿತಿಂಡಿಗಳ ವಿಶೇಷ ವ್ಯವಸ್ಥೆ.


ಗಣ್ಯರ ಆಗಮನ, ಹೆಚ್ಚುತ್ತಿರುವ ಜನಸಾಗರ

ನಾಲ್ಕನೇ ತಾರೀಕಿಗೆ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಆಗಮಿಸಲಿದ್ದು, ಆ ದಿನ ಮಧ್ಯಾಹ್ನ 7,000 ರಿಂದ 8,000 ಹಾಗೂ ರಾತ್ರಿ 10,000 ಭಕ್ತರಿಗೆ ಊಟದ ಸಿದ್ಧತೆ ಮಾಡಲಾಗಿದೆ. 8, 9 ಮತ್ತು 10ನೇ ತಾರೀಕುಗಳಲ್ಲಿ ಜನಸಂಖ್ಯೆ ಇನ್ನಷ್ಟು ಹೆಚ್ಚುವ ನಿರೀಕ್ಷೆ. 11ನೇ ತಾರೀಕು ಬೆಳಗ್ಗೆ 11 ಗಂಟೆಯಿಂದ ಆರಂಭವಾದ ಕಾರ್ಯಕ್ರಮಗಳು ಮಧ್ಯರಾತ್ರಿವರೆಗೂ ನಿರಂತರವಾಗಿ ಸಾಗಲಿವೆ.


ಅಡುಗೆ ಮತ್ತು ಪಾತ್ರೆ ತೊಳೆಯುವವರಿಗೆ ಸಂಬಳ ನೀಡಲಾಗುತ್ತಿದ್ದರೂ, ತರಕಾರಿ ಕೊಯ್ಯುವುದು ಸೇರಿದಂತೆ ಅನೇಕ ಕೆಲಸಗಳಿಗೆ ವಾಲೆಂಟಿಯರ್‌ಗಳು ಸ್ವಯಂಪ್ರೇರಣೆಯಿAದ ಕೈಜೋಡಿಸುತ್ತಿದ್ದಾರೆ. ಭಗವಂತನಿಗೆ ಸೇವೆ ಸಲ್ಲಿಸಬೇಕು, ದರ್ಶನಕ್ಕೆ ಬಂದ ಭಕ್ತರಿಗೆ ಅನ್ನ ಸಿಗಬೇಕು ಎಂಬ ಮನೋಭಾವವೇ ಇವರ ಪ್ರೇರಣೆ.


ಉಜ್ಜಿರೆಯ ಈ ಬ್ರಹ್ಮಕಲಶೋತ್ಸವವು ಕೇವಲ ಒಂದು ಧಾರ್ಮಿಕ ಉತ್ಸವವಲ್ಲ. ಇದು ಭಕ್ತಿಯ ಭರವಸೆ, ದಾನದ ದೀಪ, ಸಂಘಟನೆಯ ಶಕ್ತಿಯ ಪ್ರಬಲ ಪ್ರತಿರೂಪವಾಗಿ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯವನ್ನು ಸೇರಿಸುತ್ತಿದೆ.


- ಅನನ್ಯ ಭಟ್

ಪ್ರಥಮ ವರ್ಷ

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ

ಉಜಿರೆ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top