ಉಡುಪಿ: ಉಡುಪಿಯಲ್ಲಿ ಹೆಚ್ಚುತ್ತಿರುವ ಜಲಮಾಲಿನ್ಯ ಮತ್ತು ಭೂಗತ ಚರಂಡಿ ವ್ಯವಸ್ಥೆಯ ಅವ್ಯವಸ್ಥೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ “ಶುದ್ಧನೀರು ನಮ್ಮ ಮೂಲಭೂತ ಹಕ್ಕು – ಉಡುಪಿಯ ಭೂಗತ ಚರಂಡಿ ಅವ್ಯವಸ್ಥೆಯ ಸಮಸ್ಯೆಗೆ ನಾವೇನು ಮಾಡಬಹುದು?” ಎಂಬ ವಿಷಯದ ಕುರಿತು ಜನಜಾಗೃತಿ ಕಾರ್ಯಕ್ರಮವು ಶನಿವಾರ (ಮಾ.14) ಉಡುಪಿಯ IYC ಸಭಾಂಗಣದಲ್ಲಿ ನಡೆಯಿತು.
ಯಕ್ಷಗಾನ ಕಲಾರಂಗ (ರಿ) ಉಡುಪಿ ಇವರ ಸಹಕಾರದಲ್ಲಿ ಜನಧ್ವನಿ– ಸಿಟಿಜನ್ಸ್ ವೆಲ್ಫೇರ್ ಅಸೋಸಿಯೇಶನ್ ಉಡುಪಿ ಇವರ ಸಂಯೋಜನೆಯಲ್ಲಿ ನಡೆದ “ಬಹುಜನ ಹಿತಾಯ – ಬಹುಜನ ಸುಖಾಯ” ಉಪನ್ಯಾಸ ಮಾಲಿಕೆಯ ನಾಲ್ಕನೇ ಕಾರ್ಯಕ್ರಮದಲ್ಲಿ ಮಾನವ ಹಕ್ಕು ಪ್ರತಿಷ್ಠಾನ ಉಡುಪಿ ಅಧ್ಯಕ್ಷರಾದ ಡಾ. ರವೀಂದ್ರನಾಥ ಶಾನುಭಾಗ್ ಮುಖ್ಯ ಉಪನ್ಯಾಸ ನೀಡಿದರು.
ಉಪನ್ಯಾಸದಲ್ಲಿ ಅವರು ಉಡುಪಿಯ ಪರಿಸರ ಮತ್ತು ಜಲವ್ಯವಸ್ಥೆಯ ಹಳೆಯ ಸ್ಥಿತಿ ಹಾಗೂ ಇಂದಿನ ಪರಿಸ್ಥಿತಿಯನ್ನು ದಾಖಲಾತಿ ಆಧಾರಗಳೊಂದಿಗೆ ವಿವರಿಸಿದರು. ಇಂದ್ರಾಳಿಯಲ್ಲಿ ಆರಂಭವಾಗಿ ಮಣಿಪಾಲದ ಮಣ್ಣಪಳ್ಳ ಕೆರೆಯಿಂದ ಹರಿಯುವ ಇಂದ್ರಾಣಿ ನದಿ ಹಿಂದೆ ನೂರುರಿಂದ ನೂರ ಇಪ್ಪತ್ತು ಅಡಿ ಅಗಲ ಹೊಂದಿದ್ದರೆ, ಇಂದು ಕೆಲವೆಡೆ ಕೇವಲ ಇಪ್ಪತ್ತು ಅಥವಾ ಮೂವತ್ತು ಅಡಿಗಳಷ್ಟೇ ಉಳಿದಿರುವುದು ಪರಿಸರ ಹಾನಿಯ ಗಂಭೀರತೆಯನ್ನು ಸೂಚಿಸುತ್ತದೆ ಎಂದು ಹೇಳಿದರು.
ಹಿಂದೆ ಕಲ್ಸಂಕದಲ್ಲಿ ಅವಭೃತ ಸ್ನಾನ ನಡೆಯುತ್ತಿತ್ತು, ಬುಡ್ನಾರಿನಲ್ಲಿ ಜಲಪಾತವಿದ್ದು ಜೂನ್ ತಿಂಗಳಿನಿಂದ ಫೆಬ್ರವರಿವರೆಗೆ ನೀರು ಹರಿಯುತ್ತಿತ್ತು. ಕಲ್ಮಾಡಿ ಭಾಗದಲ್ಲಿ ಜನರು ಮೀನುಗಾರಿಕೆಯಲ್ಲಿ ತೊಡಗಿದ್ದರು. ಇಂತಹ ನದಿ ಮತ್ತು ಶುದ್ಧ ಜಲ ಸಂಪತ್ತು ಇಂದು ಮಾಲಿನ್ಯದಿಂದ ಹಾನಿಗೊಳಗಾಗಿರುವುದು ವಿಷಾದನೀಯ ಎಂದು ಅವರು ಹೇಳಿದರು.
1940ರ ದಶಕದಲ್ಲಿಯೇ ಪರಿಸರದ ಕುರಿತು ಜನರಲ್ಲಿ ಇದ್ದ ಕಾಳಜಿಯನ್ನು ಅವರು ಉದಾಹರಿಸಿದರು. ಆ ಕಾಲದಲ್ಲಿ ಮಡಿವಾಳರು ಬಟ್ಟೆ ತೊಳೆಯುವಾಗ ಬಳಸುವ ಸಾಬೂನು ಬೆಳೆಗಳಿಗೆ ಹಾನಿಯಾಗಬಹುದು ಎಂದು ಕೃಷಿಕರು ಬ್ರಿಟಿಷ್ ಆಡಳಿತಕ್ಕೆ ದೂರು ನೀಡಿದ ಪರಿಣಾಮ ಮಡಿವಾಳರಿಗಾಗಿ ಪ್ರತ್ಯೇಕ ತೋಡು ನಿರ್ಮಿಸಿ ಆ ನೀರು ನದಿಗೆ ಸೇರುವುದನ್ನು ತಡೆಯಲಾಗಿತ್ತು. ಇಂದಿನ ಪರಿಸ್ಥಿತಿಯಲ್ಲಿ ಪರಿಸರದ ಬಗ್ಗೆ ಅಷ್ಟೊಂದು ಕಾಳಜಿ ಕಾಣಿಸದಿರುವುದು ಆತಂಕಕಾರಿ ಎಂದು ಅವರು ಹೇಳಿದರು.
ಉಡುಪಿನಗರದಲ್ಲಿ ಕೇವಲ ಸುಮಾರು 25 ಶೇಕಡಾ ಜನರಿಗೆ ಮಾತ್ರ ಭೂಗತ ಚರಂಡಿ ವ್ಯವಸ್ಥೆ ಲಭ್ಯವಿದ್ದು, ಉಳಿದ ಪ್ರದೇಶಗಳಲ್ಲಿ ಒಳಚರಂಡಿ ನೀರು ಭೂಗರ್ಭ ಜಲವನ್ನು ಮಾಲಿನ್ಯಗೊಳಿಸುತ್ತಿದೆ. ಇದರ ಪರಿಣಾಮವಾಗಿ ಅನೇಕ ಬಾವಿಗಳ ನೀರು ಬಳಸಲಾಗದ ಸ್ಥಿತಿಗೆ ತಲುಪಿದೆ ಎಂದು ಅವರು ತಿಳಿಸಿದರು. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅತಿಯಾದ ವಿಸ್ತರಣೆ ಪರಿಸರದ ಧಾರಣಾ ಸಾಮರ್ಥ್ಯವನ್ನು ಮೀರಿದರೆ ಅದು ಅಭಿವೃದ್ಧಿಯಲ್ಲ, ವಿನಾಶವಾಗುತ್ತದೆ ಎಂದು ಎಚ್ಚರಿಸಿದರು.
ಕಳೆದ ಐವತ್ತು ವರ್ಷಗಳಿಂದ ಆರಂಭಗೊಂಡ ಒಳಚರಂಡಿ ಯೋಜನೆಯ ಅನುಷ್ಠಾನದಲ್ಲಿ ನಡೆದ ಅವ್ಯವಸ್ಥೆಗಳು ಪರಿಸರ ಹಾಗೂ ಜಲಮಾಲಿನ್ಯದ ಸಮಸ್ಯೆಗಳನ್ನು ಮತ್ತಷ್ಟು ಗಂಭೀರಗೊಳಿಸಿವೆ ಎಂದು ಅವರು ಹೇಳಿದರು. ಈ ಕುರಿತು ಸಾರ್ವಜನಿಕರು ತಮ್ಮ ಹಕ್ಕಿಗಾಗಿ ಧ್ವನಿ ಎತ್ತಿ ಕಾನೂನುಬದ್ಧ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಮನೆಯ ಬಾವಿಗಳ ನೀರಿನ ಪರೀಕ್ಷೆಯನ್ನು ನಗರಸಭೆಯವರು ಮನೆಗೆ ಬಂದು ಸಂಗ್ರಹಿಸಿ ಉಚಿತವಾಗಿ ವರದಿ ನೀಡಬೇಕೆಂಬ ಕಾನೂನು ಇದ್ದರೂ ಅದು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ಅವರು ಹೇಳಿದರು. ಈ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗಳಿಗೆ ಸಹ ಅಧಿಕಾರಿಗಳಿಂದ ಸಮರ್ಪಕ ಉತ್ತರ ದೊರಕಿಲ್ಲ ಎಂದು ಅವರು ಆರೋಪಿಸಿದರು.
ಕಾರ್ಯಕ್ರಮದಲ್ಲಿ ಜನಧ್ವನಿ ಸಂಯೋಜಕರಾದ ನಟೇಶ್ ಉಡುಪಿ ಮಾತನಾಡಿ, ಡ್ರೈನೇಜ್ ಸಮಸ್ಯೆಗೆ ಪರ್ಯಾಯವಾಗಿ ಹೊಸ ತಂತ್ರಜ್ಞಾನದ ಸೇಫ್ಟಿ ಟ್ಯಾಂಕ್ ವ್ಯವಸ್ಥೆಯನ್ನು ಮನೆಗಳಲ್ಲಿ ಅಳವಡಿಸಬಹುದಾಗಿದೆ ಎಂದು ತಿಳಿಸಿದರು. ಐದು ಜನರಿಂದ ಮೂರು ನೂರು ಜನರ ವಸತಿ ನಿಲಯಗಳವರೆಗೆ ಕಡಿಮೆ ವೆಚ್ಚದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಬಹುದಾಗಿದೆ. ಈ ತಂತ್ರಜ್ಞಾನದಲ್ಲಿ ಘನತ್ಯಾಜ್ಯವು 72 ಗಂಟೆಗಳಲ್ಲಿ ವಾಸನೆರಹಿತ ನೈಟ್ರೋಜನ್ ಗಾಳಿಯಾಗಿ ವಾತಾವರಣದಲ್ಲಿ ಲೀನವಾಗುತ್ತಿದ್ದು ಹೊರಬರುವ ನೀರು ಕೂಡಾ ಶುದ್ಧವಾಗಿರುತ್ತದೆ ಎಂದು ವಿವರಿಸಿದರು. ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈ ವ್ಯವಸ್ಥೆಯನ್ನು ಹೊಸ ಕಟ್ಟಡಗಳಿಗೆ ಕಡ್ಡಾಯಗೊಳಿಸಿದ್ದರೂ ಕರ್ನಾಟಕದಲ್ಲಿ ಇನ್ನೂ ಅನುಷ್ಠಾನಗೊಂಡಿಲ್ಲ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾರಂಗದ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್ ಡಾ. ರವೀಂದ್ರನಾಥ ಶಾನುಭಾಗ್ ಅವರ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮವನ್ನು ನಟೇಶ್ ಉಡುಪಿ ನಿರ್ವಹಿಸಿದರು. ಸಮಾಜದ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಕೆಲ ನಾಗರಿಕರು ತಮ್ಮ ಅನುಭವಗಳು ಹಾಗೂ ಸಮಸ್ಯೆಗಳನ್ನು ಹಂಚಿಕೊಂಡರು.
ಜನಜಾಗೃತಿ, ಕಾನೂನು ಹೋರಾಟ ಮತ್ತು ಸ್ವಪ್ರಯತ್ನ – ಈ ಮೂರರ ಸಮನ್ವಯದಿಂದ ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

